ರಾಜ್ಯದಲ್ಲಿ ಕಳೆದ ವರ್ಷದ ಜುಲೈ-ಆಗಸ್ಟ್ ತಿಂಗಳಲ್ಲಿ ಕಂಡು ಕೇಳರಿಯದ ಪ್ರವಾಹದಿಂದ ತತ್ತರಿಸಿದ್ದ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಇದುವರೆಗೆ ಬಿಡುಗಡೆಯಾಗಿರುವ ಅನುದಾನ 1869.85 ಕೋಟಿ ರೂಪಾಯಿಯೇ ಅಥವಾ ಬರೇ 669.85 ಕೋಟಿ ರೂಪಾಯಿಯೇ ಹೀಗೊಂದು ಗೊಂದಲ ರಾಜ್ಯದಲ್ಲಿ ಮುಂದುವರಿದಿದೆ. ಇದರ ಮಧ್ಯೆಯೇ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಪರಿಹಾರದ ಮೊತ್ತ ತೀರಾ ಕಡಿಮೆಯಾಯಿತು ಎಂಬ ಕೂಗೂ ಜೋರಾಗುತ್ತಿದೆ.
ಕೇಂದ್ರದಿಂದ ನೆರೆ ಪರಿಹಾರ ಬರುವುದು ತಡವಾಯಿತು. ಆದರೂ ಈ ಹಿಂದೆಂದಿಗಿಂತಲೂ ಹೆಚ್ಚಿನ ಹಣ ಕೊಟ್ಟಿದ್ದಾರೆ. ಇದು ಸಾಲದು. ಇನ್ನಷ್ಟು ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಸರ್ಕಾರವೇ ರಾಜ್ಯದಲ್ಲೂ ಇದ್ದು, ಅದರ ಮುಖ್ಯಮಂತ್ರಿ ಈ ರೀತಿ ಪರಿಹಾರ ಸಾಕಾಗದು ಎಂದು ಹೇಳುತ್ತಾರೆ ಎಂದಾದರೆ ಪ್ರಕೃತಿ ವಿಕೋಪ ಪರಿಹಾರ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಎಷ್ಟರ ಮಟ್ಟಿಗೆ ಅನ್ಯಾಯ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಏನೇ ಆಗಲಿ, ಪ್ರಕೃತಿ ವಿಕೋಪ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರ ನೀಡುವ ನೆರವು ಮಾತ್ರ ಏತಕ್ಕೂ ಸಾಲದು. ತೀರಾ ಹಸಿದವನಿಗೆ ಹೊಟ್ಟೆ ತುಂಬಾ ಅನ್ನ ಒತ್ತಟ್ಟಿಗಿರಲಿ, ತುತ್ತು ಅನ್ನವೂ ಆಗುವುದಿಲ್ಲ. ಬದಲಾಗಿ ಒಂದು ಅಗಳು ಅನ್ನ ಸಿಕ್ಕಿದಂತಾಗುತ್ತದೆ. ಹಸಿದವನಿಗೆ ಅನ್ನ ಕೊಟ್ಟಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಬಹುದೇ ಹೊರತು ಹೊಟ್ಟೆ ತುಂಬುವುದಂತೂ ದೂರದ ಮಾತು ಎನ್ನುವಂತಾಗಿದೆ.
ರಾಜ್ಯದಲ್ಲಿ ಕಳೆದ ವರ್ಷದ ಜುಲೈ-ಆಗಸ್ಟ್ ತಿಂಗಳಲ್ಲಿ ಭೀಕರ ಪ್ರವಾಹ ತಲೆದೋರಿ ಉತ್ತರ ಕರ್ನಾಟಕ ಮುಳುಗೆದ್ದಿತ್ತು. ಸಾವಿರಾರು ಮನೆಗಳು ಕುಸಿದು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದರು. ಈ ಪ್ರವಾಹದಿಂದ 38,451 ಕೋಟಿ ರೂ ನಷ್ಟವಾಗಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾನ ದಂಡಗಳನ್ವಯ ರಾಜ್ಯಕ್ಕೆ 3800 ಕೋಟಿ ರೂ. ಪರಿಹಾರ ಕೊಡಿ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಈ ಪ್ರಸ್ತಾವನೆ ಒಪ್ಪದ ಕೇಂದ್ರ ಸರ್ಕಾರ ನಷ್ಟದ ಪ್ರಮಾಣ ಅಂದಾಜು ಮಾಡಿರುವುದು ಹೆಚ್ಚಾಗಿದೆ. ಆದ್ದರಿಂದ ಅದನ್ನು ಕಡಿಮೆ ಮಾಡಿ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚಿಸಿತ್ತು. ಅದರಂತೆ ಮತ್ತೊಂದು ಪ್ರಸ್ತಾವನೆ ಸಿದ್ಧಪಡಿಸಿ ಕಳುಹಿಸಿದ್ದ ರಾಜ್ಯ ಸರ್ಕಾರ ನಷ್ಟದ ಪ್ರಮಾಣವನ್ನು 35 ಸಾವಿರ ಕೋಟಿ ರೂ. ಗೆ ಇಳಿಸಿ 3500 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಕೋರಿತ್ತು.
ಅದರಂತೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರವಾಗಿ 1200 ಕೋಟಿ ರೂ. ಒದಗಿಸಿತ್ತು. ಇನ್ನಷ್ಟು ಪರಿಹಾರಕ್ಕಾಗಿ ಸ್ವತಃ ಮುಖ್ಯಮಂತ್ರಿಗಳೇ ಮೂರ್ನಾಲ್ಕು ಬಾರಿ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರೂ ಹಣ ಬಂದಿರಲಿಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಬಹಿರಂಗವಾಗಿಯೇ ಈ ವಿಚಾರ ಪ್ರಸ್ತಾಪಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರದ ಧೋರಣೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿ ಹೆಚ್ಚಿನ ಪರಿಹಾರ ನೀಡುವಂತೆ ಕೈಜೋಡಿಸಿ ಪ್ರಾರ್ಥಿಸಿದ್ದರು. ಈ ಪ್ರಾರ್ಥನೆ ಫಲಿಸಿತೋ ಎಂಬಂತೆ ಒಂದೆರಡು ದಿನಗಳಲ್ಲಿ ಕೇಂದ್ರ ಸರ್ಕಾರ 1869.85 ಕೋಟಿ ರೂ. ಪರಿಹಾರ ಘೋಷಿಸಿತ್ತು.
ಅಧಿಕೃತ ಆದೇಶ ಬರುವವರೆಗೆ ಗೊಂದಲ ಬಗೆಹರಿಯುವುದಿಲ್ಲ
ಆದರೆ, ಈ ಪರಿಹಾರದ ಮೊತ್ತವೇ ಗೊಂದಲಕ್ಕೆ ಕಾರಣವಾಗಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ 1200 ಕೋಟಿ ರೂ. ಮಧ್ಯಂತರ ಪರಿಹಾರ ನೀಡಿ ಈಗ ಪ್ರವಾಹ ಪರಿಹಾರ ಎಂದು 1869.85 ಕೋಟಿ ರೂ. ನೀಡಿರುವುದು ಇದಕ್ಕೆ ಕಾರಣ. 1200 ಕೋಟಿ ರೂ. ಮಧ್ಯಂತರ ಪರಿಹಾರ ಘೋಷಿಸಿದ್ದ ಕೇಂದ್ರ ಸರ್ಕಾರ ಇದೀಗ ಪರಿಹಾರದ ಮೊತ್ತ ನಿಗದಿಪಡಿಸಿ 1869.85 ಕೋಟಿ ರೂ. ನೀಡಿದೆ. ಹೀಗಾಗಿ ಈ ಹಿಂದೆ ನೀಡಿರುವ 1200 ಕೋಟಿ ರೂ. ಪರಿಹಾರ ಕಳೆದು ಈಗ ಬರುವ ಪರಿಹಾರ 669.85 ಕೋಟಿ ರೂ. ಮಾತ್ರ. ಒಟ್ಟಾರೆ ಪರಿಹಾರ 1869.85 ಕೋಟಿ ರೂ. ಮಾತ್ರ ಎನ್ನುವ ವಾದ ಕೇಳಿಬರುತ್ತಿದೆ. ರಾಜಕಾರಣಿಗಳು ಒತ್ತಟ್ಟಿಗಿರಲಿ, ಕಂದಾಯ ಇಲಾಖೆ ಅಧಿಕಾರಿಗಳಿಗೇ ಈ ಬಗ್ಗೆ ಸ್ಪಷ್ಟನೆ ಇಲ್ಲ.
ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಅಕ್ಟೋಬರ್ ತಿಂಗಳಲ್ಲಿ ಘೋಷಣೆ ಮಾಡಿದ 1200 ಕೋಟಿ ರೂ. ಮೊತ್ತವನ್ನು ಮುಂಗಡ ಪರಿಹಾರ ಎಂದು ಪರಿಗಣಿಸಲಾಗಿತ್ತು. ಇದೀಗ ಪರಿಹಾರ 1869.85 ಕೋಟಿ ರೂ. ಎಂದು ಹೇಳಿರುವುದರಿಂದ ಮುಂಗಡ ಕಳೆದು ಬಾಕಿ 669.85 ಕೋಟಿ ರೂ. ಮಾತ್ರ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಅಂದರೆ, ವಿಕೋಪ ಪರಿಹಾರ ನಿಧಿ ಮಾನದಂಡಗಳ ಅನ್ವಯ 3,500 ಕೋಟಿ ರೂ. ಹೃಪರಿಹಾರ ನೀಡಬೇಕಾದ ಕಡೆ ಆ ಮಾನದಂಡವನ್ನು ಗಣನೆಗೆ ತೆಗೆದುಕೊಳ್ಳದೆ ಕೇವಲ 1869.85 ಕೋಟಿ ರೂ. ಮಾತ್ರ ಒದಗಿಸಲಾಗಿದೆ ಎಂಬುದು ಪ್ರತಿಪಕ್ಷಗಳ ಕಡೆಯಿಂದ ಕೇಳಿಬರುತ್ತಿರುವ ಆರೋಪ.
ಆದರೆ, ಈ ವಾದವನ್ನು ಆಡಳಿತ ಪಕ್ಷದ ಸದಸ್ಯರು ಅಲ್ಲಗಳೆಯುತ್ತಿದ್ದಾರೆ. ಅಕ್ಟೋಬರ್ ಮತ್ತು ಇತ್ತೀಚೆಗೆ ಬಂದಿರುವ 1869.85 ಕೋಟಿ ರೂ. ಸೇರಿ ಒಟ್ಟಾರೆ 3089.85 ಕೋಟಿ ರೂ. ಪರಿಹಾರ ಬಂದಂತಾಗಿದೆ ಎಂದು ಅವರು ಹೇಳುತ್ತಾರೆ. ಇದಕ್ಕೆ ಅವರು ನೀಡುವ ಸ್ಪಷ್ಟನೆ ಏನೆಂದರೆ, ಕಳೆದ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ನಾಲ್ಕು ರಾಜ್ಯಗಳಿಗೆ 1813.75 ಕೋಟಿ ರೂ. ಒದಗಿಸಿತ್ತು. ಈ ಬಾರಿ ಏಳು ರಾಜ್ಯಗಳಿಗೆ ಒಟ್ಟು 5908.56 ಕೋಟಿ ರೂ. ಬಿಡುಗಡೆ ಮಾಡಿದೆ. ಅದರಲ್ಲಿ ಯಾವ್ಯಾವ ರಾಜ್ಯಗಳಿಗೆ ಎಷ್ಟೆಷ್ಟು ಅನುದಾನ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮಧ್ಯಂತರ ಪರಿಹಾರ ಕಳೆದು ಕರ್ನಾಟಕಕ್ಕೆ 669.85 ಕೋಟಿ ರೂ. ಮಾತ್ರ ಒದಗಿಸಿದರೆ 5908.56 ಕೋಟಿ ರೂ. ಲೆಕ್ಕಾಚಾರ ಸರಿಹೊಂದುವುದಿಲ್ಲ. ಹೀಗಾಗಿ ಎರಡನೇ ಕಂತಿನಲ್ಲಿ ಬಿಡುಗಡೆ ಮಾಡಿದ ಪರಿಹಾರ 1869.85 ಕೋಟಿ ರೂ. ಆಗಿದ್ದು, ಪ್ರತಿಪಕ್ಷಗಳು ಸುಳ್ಳು ಹೇಳುತ್ತಿವೆ ಎಂದು ಬಿಜೆಪಿ ನಾಯಕರು ಮತ್ತು ಸಚಿವರು ಹೇಳುತ್ತಾರೆ.
ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಕೇಳಿದಾಗ ಅವರಿಂದಲೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಕೇಂದ್ರದಿಂದ ಈ ಕುರಿತು ಅಧಿಕೃತ ಆದೇಶ ಪ್ರತಿ ದೊರೆತ ಬಳಿಕವೇ ಒಟ್ಟಾರೆ ಎಷ್ಟು ಹಣ ಬಂದಿದೆ ಎಂಬುದನ್ನು ಹೇಳಬಹುದು. ಮುಂದಿನ ವಾರ ಈ ಕುರಿತು ಸ್ಪಷ್ಟತೆ ಸಿಗಬಹುದು ಎನ್ನುತ್ತಾರೆ.
ಕಳೆದ ಆರು ವರ್ಷದಲ್ಲೇ ಹೆಚ್ಚು ಪರಿಹಾರ
ಪ್ರಕೃತಿ ವಿಕೋಪಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಗದಿಪಡಿಸಿರುವ ಮಾನದಂಡಗಳು ಸರಿಯಿಲ್ಲದ ಕಾರಣ ಈ ರೀತಿ ಕಡಿಮೆ ಮೊತ್ತದ ಪರಿಹಾರ ಸಿಗಲು ಕಾರಣ. ಹಾಗೆ ನೋಡಿದರೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಕೃತಿ ವಿಕೋಪಗಳಿಗೆ ಬಿಡುಗಡೆ ಮಾಡಿದ ಪರಿಹಾರದ ಮೊತ್ತ ಹೆಚ್ಚಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2004ರಿಂದ 2014ರ ಒಂದು ದಶಕದ ಅವಧಿಯಲ್ಲಿ ರಾಜ್ಯಕ್ಕೆ ಪ್ರವಾಹ ಪರಿಹಾರಕ್ಕಾಗಿ ಬಿಡುಗಡೆ ಮಾಡಿದ ಒಟ್ಟು ಅನುದಾನ 3580 ಕೋಟಿ ರೂ. ಆಗಿದ್ದರೆ, ಅದಕ್ಕಿಂತ ಹಿಂದಿನ ಅವಧಿಯಲ್ಲಿ ಇನ್ನೂ ಕಡಿಮೆ ಇತ್ತು.
ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ 2014ರಿಂದ 2019ರ ಅವಧಿಯಲ್ಲಿ 6082 ಕೋಟಿ ರೂ. ಬಿಡುಗಡೆ ಮಾಡಿದೆ. ಮೊನ್ನೆ ಬಿಡುಗಡೆ ಮಾಡಿದ ಮೊತ್ತ 1869.85 ಕೋಟಿ ರೂಪಾಯಿಯೇ ಆಗಿದ್ದರೆ ಆ ಮೊತ್ತ 7951.85 ಕೋಟಿ ರೂಪಾಯಿಗೆ ಏರುತ್ತದೆ. ಅಷ್ಟೇ ಅಲ್ಲ, 2018ರ ಬರ ಪರಿಸ್ಥಿತಿಗೆ ನೀಡಿದ ಪರಿಹಾರ ಸೇರಿದಂತೆ 2019-20ನೇ ಸಾಲಿನಲ್ಲಿ ಕೇಂದ್ರದಿಂದ ಒಟ್ಟು 4099.24 ಕೋಟಿ ರೂ. ಪ್ರಕೃತಿ ವಿಕೋಪ ಪರಿಹಾರ ಬಿಡುಗಡೆಯಾದಂತಾಗುತ್ತದೆ. ಎಲ್ಲಾದರೂ ಮೊನ್ನೆ ಬಿಡುಗಡೆ ಮಾಡಿದ ಪರಿಹಾರ 669.85 ಕೋಟಿ ಆಗಿದ್ದರೆ ಈ ಒಟ್ಟು ಮೊತ್ತ 1200 ಕೋಟಿ ರೂ.ನಷ್ಟು ಕಮ್ಮಿಯಾಗುತ್ತದೆ.