ಡ್ರಗ್ಸ್ ಹಗರಣದ ತನಿಖೆಯ ಹಾದಿ ನೋಡಿದರೆ ಬಿಜೆಪಿ ಸರ್ಕಾರಕ್ಕೆ ಅಪರಾಧಿಗಳನ್ನು ಶಿಕ್ಷಿಸುವ ಉದ್ದೇಶಕ್ಕಿಂತಲೂ ಕರೋನಾ ಹಾವಳಿ ಮತ್ತು ಅತಿವೃಷ್ಟಿ ಪರಿಹಾರದ ತನ್ನ ವೈಫಲ್ಯಗಳಿಂದ ಜನಮನವನ್ನು ಬೇರೆ ಕಡೆ ಸೆಳೆಯುವ ದುರುದ್ದೇಶ ಮುಖ್ಯವಾಗಿರುವಂತೆ ಕಾಣುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಡ್ರಗ್ಸ್ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ತಮ್ಮ ಪಕ್ಷದವರನ್ನು ರಕ್ಷಿಸುವ ಮತ್ತು ಈ ಹಗರಣವನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರ ಚಾರಿತ್ರ್ಯಹರಣ ಮಾಡುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ.ಮಾದಕ ವಸ್ತುಗಳ ಹಾವಳಿಯ ನಿರ್ಮೂಲನೆಯ ಪ್ರಾಮಾಣಿಕ ಉದ್ದೇಶ ಮುಖ್ಯಮಂತ್ರಿ ಅವರಿಗೆ ಇರುವುದಾದರೆ, ಬೀದಿಯಲ್ಲಿ ನಿಂತು ವಿರೋಧ ಪಕ್ಷದ ನಾಯಕರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿ ತನಿಖೆಯ ಹಾದಿ ತಪ್ಪಿಸುತ್ತಿರುವ ಸಂಪುಟದ ಸಚಿವರು ಮತ್ತು ಪಕ್ಷದ ನಾಯಕರ ಬಾಯಿ ಮುಚ್ಚಿಸಿ ಪೊಲೀಸರಿಗೆ ಮುಕ್ತ ಹಸ್ತ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಡಿಜೆಹಳ್ಳಿ ಗಲಭೆ ಬಗ್ಗೆ ನಿಮ್ಮದೇ ತನಿಖೆಯ ಪ್ರಹಸನ ಮಾಡಿ ಪೊಲೀಸ್ ತನಿಖೆಯ ಮೇಲೆ ಪ್ರಭಾವ ಬೀರಿದ್ದೀರಿ, ಈಗ ಡ್ರಗ್ಸ್ ಹಗರಣದ ತನಿಖೆಯ ವಿವರಗಳನ್ನು ಸೋರಿ ಬಿಟ್ಟು ಪೊಲೀಸ್ ತನಿಖೆಯ ಹಾದಿ ತಪ್ಪಿಸುತ್ತಿದ್ದೀರಿ. ನಿಮಗೆ ವಿಶ್ವಾಸ ಇಲ್ಲದಿರುವುದು ಪೊಲೀಸರ ಮೇಲೋ? ಗೃಹ ಸಚಿವರ ಮೇಲೋ? ಎಂದು ಪ್ರಶ್ನಿಸಿದ್ದಾರೆ.
ಪ್ರತಿಬಾರಿ ನಿಮ್ಮ ಆಡಳಿತದ ವೈಫಲ್ಯವನ್ನು ಮುಚ್ಚಿ ಹಾಕಲು ವಿರೋಧ ಪಕ್ಷಗಳ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವ ಕುತಂತ್ರ ಮಾಡುತ್ತಾ ಬಂದಿದ್ದೀರಿ. ಡ್ರಗ್ಸ್ ಹಗರಣದಲ್ಲಿ ಕೂಡಾ ಅದನ್ನೇ ಮಾಡುತ್ತಾ ಇದ್ದೀರಿ. ಸತ್ಯವನ್ನು ಮುಚ್ಚಿಡಬಹುದು, ನಾಶ ಮಾಡಲು ಆಗುವುದಿಲ್ಲ, ನೆನಪಿರಲಿ ಎಂದು ಎಚ್ಚರಿಸಿದ್ದಾರೆ.
ಆರೋಪಿಗಳ ಜೊತೆಗಿನ ರಾಜಕಾರಣಿಗಳ ಪೋಟೊ ಹಾಕಿ ಅವರ ಹೆಸರನ್ನು ಹಗರಣದ ಜೊತೆ ಜೋಡಿಸುವುದು ಕೆಟ್ಟ ಚಾಳಿ. ಸಭೆ-ಸಮಾರಂಭಗಳಲ್ಲಿ ಜೊತೆಗೆ ನಿಂತವರೆಲ್ಲರ ಜಾತಕ ಬಿಡಿಸಿ ನೋಡಲಾಗುವುದಿಲ್ಲ. ಆದರೆ ಅಧಿಕೃತ ಸಮಾರಂಭಗಳಿಗೆ ಅಂತಹವರನ್ನು ಆಹ್ಹಾನಿಸುವಾಗ, ಚುನಾವಣಾ ಪ್ರಚಾರಗಳಲ್ಲಿ ಬಳಸುವಾಗ ಎಚ್ಚರದಿಂದ ಇರಬೇಕಾಗುತ್ತದೆ ಎಂದು ಬಿಜೆಪಿಯನ್ನು ಕುಟುಕಿದ್ದಾರೆ. ರಾಗಿಣಿ ಬಂಧನವಾದಾಗ, ಬಿಜೆಪಿ ಚುನಾವಣಾ ಪ್ರಚಾರದಲ್ಲಿ, ಪಕ್ಷದ ಕಾರ್ಯಕ್ರಮಗಳಲ್ಲಿ ರಾಗಿಣಿ ಪಾಲ್ಗೊಂಡಿರುವ ಚಿತ್ರಗಳು ವೈರಲ್ ಆಗಿದ್ದವು. ಇದನ್ನೇ ಗುರಿ ಮಾಡಿ ಸಿದ್ಧರಾಮಯ್ಯ ಈ ಮಾತು ಹೇಳಿದ್ದಾರೆಂದು ಅಂದಾಜಿಸಲಾಗಿದೆ.