ಡಿ.ಕೆ. ಶಿವಕುಮಾರ್ ಬಗ್ಗೆ ಆಕ್ರಮಣಾಶೀಲ ನಾಯಕ, ಸಂಘಟನಾ ಚತುರ, ಸಂಪನ್ಮೂಲಭರಿತ ವ್ಯಕ್ತಿ ಎಂಬ ಮಾತುಗಳಿವೆ. ಇದೇ ಕಾರಣಗಳಿಂದ ತೀವ್ರವಾಗಿ ವಿರೋಧಿಸುವ ಅವರ ಪಕ್ಷದ ನಾಯಕರು ಕೂಡ ‘ಸದ್ಯದ ಪರಿಸ್ಥಿತಿಯಲ್ಲಿ ಡಿ.ಕೆ. ಶಿವಕುಮಾರ್ ಅವರೇ ಅಧ್ಯಕ್ಷರಾಗುವುದು ಸೂಕ್ತ’ ಎಂದು ಹೇಳುತ್ತಿದ್ದರು. ಈಗ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ.
ಆಕ್ರಮಣಾಶೀಲ ನಾಯಕ, ಸಂಘಟನಾ ಚತುರ, ಸಂಪನ್ಮೂಲಭರಿತ ವ್ಯಕ್ತಿ ಎಂಬ ವಿಶೇಷಣಗಳು ಡಿ.ಕೆ. ಶಿವಕುಮಾರ್ ಹೆಸರಿನ ಜೊತೆ ಬೆಸೆದುಕೊಳ್ಳಲು ಇರುವ ಹಿನ್ನೆಲೆಯಾದರೂ ಏನು? ಕನಕಪುರದ ದೊಡ್ಡ ಆಲದಹಳ್ಳಿಯ ಸಾಮಾನ್ಯ ರೈತ ಕುಟುಂಬವೊಂದರಿಂದ ಬೆಂಗಳೂರಿಗೆ ಬಂದ ಡಿ.ಕೆ. ಶಿವಕುಮಾರ್ ರಾಜಕಾರಣ ಪ್ರವೇಶ ಮಾಡಿದ್ದು ಭೂಗತ ಜಗತ್ತಿನ ಮೂಲಕ. ಭೂಗತ ಜಗತ್ತಿಗೆ ಬೇಡುವ ಡ್ಯಾಷಿಂಗ್ (ಮುನ್ನುಗ್ಗುವ) ನೆಟ್ ವರ್ಕಿಂಗ್ (ಸಂಪರ್ಕ ಜಾಲ ಸೃಷ್ಟಿಸುವ) ಮತ್ತು ಫೀಲ್ಡಿಂಗ್ (ರಕ್ಷಣೆ ಮಾಡಿಕೊಳ್ಳುವ) ಎಂಬ ಅಂಶಗಳನ್ನೂ ಮೈಗೂಡಿಸಿಕೊಂಡಿದ್ದ ಡಿ.ಕೆ. ಶಿವಕುಮಾರ್ ಅದೇ ಮಾದರಿಯನ್ನು ರಾಜಕಾರಣದಲ್ಲೂ ಅಳವಡಿಸಿಕೊಂಡರು. ಎಬಿವಿಪಿ ಪ್ರಬಲವಾಗಿಲ್ಲದ ಮತ್ತು ಬೆಂಗಳೂರಿನ ಭೂಗತ ಜಗತ್ತು ಹೆಚ್ಚು ಸಕ್ರೀಯವಾಗಿದ್ದ ಆ ಕಾಲಘಟ್ಟದ ಎನ್ ಎಸ್ ಯು ಐ ಮತ್ತು ಯುವ ಕಾಂಗ್ರೆಸ್ ಚುನಾವಣೆಗಳಲ್ಲಿ ಡಿ.ಕೆ. ಶಿವಕುಮಾರ್ ತೋರಿದ ಚಾಣಾಕ್ಷತನವೆಂದರೇ ತಮ್ಮ ಪೂರ್ವಾಶ್ರಮದ ಇದೇ ಪ್ರತಾಪವನ್ನು.
ಇಷ್ಟಾಗಿ ಅವರಾಗಿದ್ದು ಶಾಸಕ ಮಾತ್ರ. ಬಳಿಕ ಬಂಗಾರಪ್ಪ ಸಂಪುಟದಲ್ಲಿ ಬಂಧೀಖಾನೆ ಸಚಿವರಾದರು. ಇದರಿಂದಾಗಿ ಡಿ.ಕೆ. ಶಿವಕುಮಾರ್ ಬಿಡಬೇಕು ಎಂದುಕೊಂಡಿದ್ದರೂ ಅವರ ಪೂರ್ವಾಶ್ರಮದ ಸಂಬಂಧ, ಸಂಪರ್ಕಗಳು ಕಡಿದುಕೊಳ್ಳಲಿಲ್ಲ. ಆದರೂ ಅವರಿಗೆ ಆಕ್ರಮಣಶೀಲ ಯುವ ನಾಯಕನ ಪಟ್ಟ ತಂದುಕೊಟ್ಟಿರಲಿಲ್ಲ. ಅದು ಸಾಧ್ಯವಾಗಿದ್ದು ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ. ಇದು ಕೂಡ ಸಾಧ್ಯವಾಗಿದ್ದು ಡಿ.ಕೆ. ಶಿವಕುಮಾರ್ ಹಾಗೂ ಸಿದ್ದಾರ್ಥ (ಎಸ್.ಎಂ. ಕೃಷ್ಣ ಅಳಿಯ) ಬ್ಯುಸಿನೆಸ್ ಪಾರ್ಟನರ್ ಆಗಿದ್ದ ಕಾರಣಕ್ಕೆ ಮತ್ತು ಕೃಷ್ಣ ಅವರ ಸ್ವಜಾತಿ ಪ್ರೇಮದಿಂದ. ಎಸ್.ಎಂ. ಕೃಷ್ಣ ಮತ್ತು ಸಿದ್ದಾರ್ಥ ಇಬ್ಬರೂ ಕೂಡ ತಮ್ಮ ವರ್ಚಸ್ಸಿಗೆ ಧಕ್ಕೆ ಬರಬಾರದು ಆದರೂ ‘ಕೆಲ ಕೆಲಸಗಳು’ ಆಗಬೇಕು ಎಂದಾಗ ಬಳಸಿಕೊಂಡಿದ್ದು ಮತ್ತು ಆ ಕಾರಣಕ್ಕೆ ಹತ್ತಿರ ಇಟ್ಟುಕೊಂಡಿದ್ದು ಇದೇ ಡಿ.ಕೆ. ಶಿವಕುಮಾರ್ ಅವರನ್ನು.
ಕೃಷ್ಣ ಸರ್ಕಾರದಲ್ಲಿ ಪ್ರಭಾವಿಯಾಗಿ ರೂಪುಗೊಂಡ ಡಿ.ಕೆ. ಶಿವಕುಮಾರ್ ಅದೇ ವೇಳೆ ಮತ್ತೆರಡು ಕೆಲಸ ಮಾಡಿದರು. ಒಂದು ಹೆಚ್.ಡಿ. ದೇವೇಗೌಡರ ವಿರುದ್ಧ ತೊಡೆ ತಟ್ಟಿದ್ದು, ಇನ್ನೊಂದು ಹೈಕಮಾಂಡ್ ನಾಯಕರ ಸಂಪರ್ಕ ಸಾಧಿಸಿದ್ದು. ಈ ಎರಡರ ಹಿಂದ್ದಿದ್ದು ಕೂಡ ಕೃಷ್ಣ ಕೃಪೆಯೇ. ಒಕ್ಕಲಿಗರ ಪರ್ಯಾಯ ನಾಯಕರಾಗಲು ಹಂಬಲಿಸುತ್ತಿದ್ದ ಎಸ್.ಎಂ. ಕೃಷ್ಣ, ಡಿ.ಕೆ. ಶಿವಕುಮಾರ್ ಅವರನ್ನು ಅಖಾಡಕ್ಕಿಳಿಸಿದರು; ಡಿ.ಕೆ. ಶಿವಕುಮಾರ್ ಸ್ವತಃ ಪರ್ಯಾಯ ನಾಯಕನಾಗುವ ಪ್ರಯತ್ನ ನಡೆಸಿದರು. ಇದೇ ರೀತಿ ಕೃಷ್ಣ ಮೂಲಕ ದೆಹಲಿ ನಾಯಕರನ್ನು ಎಡತಾಕಿದ್ದ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಮಟ್ಟದಲ್ಲೂ ಸಂಪರ್ಕ ಸಾಧಿಸಿದರು. ಕೃಷ್ಣ ಸಹಾಯದಿಂದಲೇ ಎಲ್ಲಾ ನಡೆದಿದ್ದರಿಂದ ಅವರ ಅನುಪಸ್ಥಿತಿ ಡಿ.ಕೆ. ಶಿವಕುಮಾರ್ ಅವರಿಗೆ ಕಷ್ಟವಾಯಿತು. ಸಿದ್ದರಾಮಯ್ಯ ಸರ್ಕಾರದಲ್ಲಿ ಕಾಡಿ ಬೇಡಿ ಮಂತ್ರಿ ಆಗಬೇಕಾಯಿತು. ತನ್ನ ಇಲಾಖೆ ಬಿಟ್ಟು ಬೇರೆಡೆ ಮೂಗುತೂರಿಸಲು ಸಿದ್ದರಾಮಯ್ಯ ಬಿಟ್ಟಿರಲಿಲ್ಲ.

ಇಂಥ ಆಕ್ರಮಣಶೀಲ ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ಸಂಘಟನಾ ಚತುರ ಎಂಬ ಬಿರುದು ತಂದುಕೊಟ್ಟಿದ್ದು ಕೆಲ ಉಪ ಚುನಾವಣೆಗಳು. ಇನ್ನು ಸಂಪನ್ಮೂಲಭರಿತ ವ್ಯಕ್ತಿ ಎಂಬ ಬಗ್ಗೆ ಎಳ್ಳಷ್ಟು ಅನುಮಾನಗಳಿಲ್ಲ. ಅನುಮಾನಗಳಿರುವುದು ಭವಿಷ್ಯದ ಬಗ್ಗೆ.
ಎಸ್.ಎಂ. ಕೃಷ್ಣ ಕಾಲವಧಿಯಲ್ಲಿ ಮುನ್ನುಗ್ಗುತ್ತಿದ್ದ ಡಿ.ಕೆ. ಶಿವಕುಮಾರ್ ನಂತರದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಮತ್ತು ಸಿದ್ದರಾಮಯ್ಯ ಸರ್ಕಾರದ ಸಮಯದಲ್ಲಿ ಮೆತ್ತಗಿದ್ದರು ಎನ್ನುವುದನ್ನು ‘ಡಿ.ಕೆ. ಶಿವಕುಮಾರ್ ತನ್ನ ಪರವಾಗಿದ್ದ ಸನ್ನಿವೇಶದಲ್ಲಿ ಮಾತ್ರ ವೀರಾವೇಶದಿಂದ ಹೋರಾಡಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಪಲಾಯನ ಮಾಡುವರು’ ಎಂಬುದಾಗಿಯೂ ವ್ಯಾಖ್ಯಾನಿಸಬಹುದು. ಅದೇ ರೀತಿ ಸರ್ಕಾರ ಇದ್ದಾಗ ಉಪ ಚುನಾವಣೆ ಗೆಲ್ಲುವುದು ಸಲುಭ; ಡಿ.ಕೆ. ಶಿವಕುಮಾರ್ ದಿಗ್ವಿಜಯ ಸಾಧಿಸಿದ್ದೆಲ್ಲವೂ ಇಂಥದೇ ಪೂರಕ ವಾತಾವರಣದಲ್ಲಿ.
ಡಿ.ಕೆ. ಶಿವಕುಮಾರ್ ಕೆಪಿಸಿಸಿಯ ಕಾರ್ಯಾಧ್ಯಕ್ಷರಾಗಿ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೂಡ ಕೆಲಸ ಮಾಡಿದ್ದಾರೆ. ಎರಡೂ ಹುದ್ದೆಗಳನ್ನು ಅವರು ನಿಭಾಯಿಸಿದ್ದು ಒಲ್ಲದ ಮನಸ್ಸಿನಿಂದ. ಎರಡೂ ಹುದ್ದೆಯ ಮುಖಾಂತರ ಕಾಂಗ್ರೆಸ್ ಪಕ್ಷಕ್ಕೆ ಏನಾದರೂ ತಂದುಕೊಟ್ಟೆ ಎಂದು ಹೇಳುವ ಧೈರ್ಯ ಅವರಿಗೇ ಇಲ್ಲ. ಎರಡೂ ಸಂದರ್ಭಗಳಲ್ಲಿ ಕಾಂಗ್ರೆಸ್ ಸೋತಿರುವುದು ಗೊತ್ತಿರುವ ಇತಿಹಾಸ.
ಇನ್ನೂ ಡಿ.ಕೆ. ಶಿವಕುಮಾರ್ ಬಗ್ಗೆ ‘ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ’ ಎಂಬ ಆರೋಪ ಇದೆ. ಈ ಆರೋಪವನ್ನು ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಸಚಿವರಾಗಿದ್ದಾಗ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾಗ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾಗ ಅವರೇ ಸ್ವತಃ ನಿಜವಾಗಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷಗಾದಿಗೆ ಡಿ.ಕೆ. ಶಿವಕುಮಾರ್ ಹೆಸರನ್ನು ಅಖೈರುಗೊಳಿಸಿದ ಬಳಿಕ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಲೋಕಭಿರಾಮವಾಗಿ ಮಾತನಾಡುತ್ತಿದ್ದ ಅವರ ಸಹೋದರ ಮತ್ತು ಸಂಸದ ಡಿ.ಕೆ. ಸುರೇಶ್ ಕೂಡ ‘ಎಲ್ಲಾ ಹಿರಿಯರನ್ನು ಜೊತೆಯಲ್ಲಿ ಕೊಂಡೊಯ್ಯುವುದೇ ದೊಡ್ಡ ಸವಾಲು’ ಎಂದು ಹೇಳುವ ಮೂಲಕ ಆರೋಪಗಳನ್ನು ಅನುಮೋದಿಸಿದರು.
ಸಂಪನ್ಮೂಲದ ಬಗ್ಗೆ ಹೇಳುವುದಾದರೆ ಡಿ.ಕೆ. ಶಿವಕುಮಾರ್ ಬಳಿ ಅಪಾರ ಪ್ರಮಾಣದ ಹಣ ಇದೆ. ಆದರೆ ಅವರು ತಮ್ಮ ಸ್ವತಃ ಹಣವನ್ನು ಮುಖ್ಯಮಂತ್ರಿ ಹುದ್ದೆ ಪಡೆಯುವ ವಿಷಯವೊಂದಕ್ಕೆ ಹೊರತುಪಡಿಸಿ ಪಕ್ಷ ಸಂಘಟನೆಗೆ ಬಳಸುತ್ತಾರಾ ಎಂಬ ಬಗ್ಗೆ ಬಹಳಷ್ಟು ಕಾಂಗ್ರೆಸ್ ನಾಯಕರಿಗೆ ಅನುಮಾನಗಳಿವೆ. ಸರ್ಕಾರ ಇದ್ದಾಗ, ಚುನಾವಣೆ ಇದ್ದಾಗ 10 ರೂ. ಸಂಗ್ರಹಿಸಿ, 5 ರೂ. ಖರ್ಚು ಮಾಡಿ, ಆ 5 ರೂ.ಗಳನ್ನೂ ತಾನು ಖರ್ಚು ಮಾಡಿದ್ದೇನೆ ಎಂದು ಹೈಕಮಾಂಡ್ ನಾಯಕರಿಂದ ಹಿಡಿದು, ರಾಜ್ಯ ನಾಯಕರು, ಮಾಧ್ಯಮದವರು, ಕಾರ್ಯಕರ್ತರಿಗೆಲ್ಲಾ ತಿಳಿಯುವಂತೆ ಮಾಡುವ ಛಾತಿಯುಳ್ಳವರು ಡಿ.ಕೆ. ಶಿವಕುಮಾರ್ ಎಂಬ ಅಭಿಪ್ರಾಯವೂ ಇದೆ. ಹಾಗಿದ್ದರೆ ಸಂಪನ್ಮೂಲಭರಿತ ಅಥವಾ ರಹಿತ ಏನಾದರೇನೂ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾಗ ಹೀಗೆ ನಡೆದುಕೊಂಡಿದ್ದರು ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ತಮಗೆ ಬಹಳ ಒಳ್ಳೆಯ ಸಂಬಂಧ ಇದೆ ಎಂಬುದನ್ನು ಡಿ.ಕೆ. ಶಿವಕುಮಾರ್ ಪದೇ ಪದೇ ಹೇಳಿದ್ದಾರೆ. ಬೆನ್ನಿಗಾನಹಳ್ಳಿ ಡಿನೊಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿಗೆ ದಾಖಲಾಗಿರುವ ದೂರಿನಲ್ಲಿ ಯಡಿಯೂರಪ್ಪ ಮತ್ತು ಡಿ.ಕೆ. ಶಿವಕುಮಾರ್ ಸಹ ಆರೋಪಿಗಳು. ಹೀಗೆ ಸಹ ಆರೋಪಿ ಮತ್ತು ಸ್ನೇಹಿತರಾಗಿರುವ ಯಡಿಯೂರಪ್ಪ ಸರ್ಕಾರದ ವಿರುದ್ದ ಡಿ.ಕೆ. ಶಿವಕುಮಾರ್ ಹೋರಾಡಬೇಕಾಗಿದೆ. ಇನ್ನೊಂದೆಡೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಜೊತೆ ಸೆಣಸಬೇಕಿದೆ. ಆದರೆ ಕುಮಾರಸ್ವಾಮಿಗೆ ಒಳ್ಳೆಯ ಗೆಣೆಕಾರ ಎಂಬುದಾಗಿ ಕೂಡ ಬಿಂಬಿಸಿಕೊಂಡಿದ್ದಾರೆ. ಇಬ್ಬರ ವಿಷಯದಲ್ಲೂ ಮೇಲುನೋಟಕ್ಕೆ ಚೆನ್ನಾಗಿದ್ದುಕೊಂಡು ಚುನಾವಣಾ ಅಖಾಡದಲ್ಲಿ ಪಕ್ಷ ಸಂಘಟನೆ ಮಾಡಿ ಹೆಚ್ಚು ಸ್ಥಾನವನ್ನು ಗೆಲ್ಲಬೇಕಿರುವುದು ಡಿ.ಕೆ. ಶಿವಕುಮಾರ್ ಅವರಿಗಿರುವ ಇನ್ನೊಂದು ಸವಾಲು.
ಡಿ.ಕೆ. ಶಿವಕುಮಾರ್ ಈವರೆಗೆ ಒಕ್ಕಲಿಗ ನಾಯಕ. ಚುನಾವಣೆ ತಂತ್ರಗಾರಿಕೆಯಲ್ಲಿ ಬಹಳ ಮುಖ್ಯ ಸಂಗತಿಯಾದ ಸೋಷಿಯಲ್ ಇಂಜನಿಯರಿಂಗ್ ಬಗ್ಗೆ ಅವರ ಕಲ್ಪನೆ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಅದರಲ್ಲೂ ಮೈಕ್ರೋ ಸೋಷಿಯಲ್ ಇಂಜನಿಯರಿಂಗ್ ಮಾಡಬೇಕಾದ ಕಾಲಘಟ್ಟದಲ್ಲಿ ಡಿ.ಕೆ. ಶಿವಕುಮಾರ್ ಎಷ್ಟು ಪರಿಣಾಮಕಾರಿ ತಂತ್ರವನ್ನು ಹೆಣೆಯುತ್ತಾರೆ. ಅದಕ್ಕಾಗಿ ಎಲ್ಲಾ ಸಮುದಾಯಗಳ ನಾಯಕರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ತಮ್ಮ ಮೂಗಿನ ನೇರಕ್ಕೆ ಮಾತ್ರವೇ ಯೋಚಿಸುವ ಕಾಂಗ್ರೆಸ್ ನಾಯಕರೆಲ್ಲರನ್ನು ಸಮಾಧಾನಪಡಿಸುತ್ತಾರೆ ಎಂಬುದರ ಮೇಲೆ ಅವರ ಮತ್ತು ಪಕ್ಷದ ಭವಿಷ್ಯ ನಿರ್ಧಾರವಾಗಲಿದೆ.
ಉಳಿದಂತೆ ಡಿ.ಕೆ. ಶಿವಕುಮಾರ್ ಅವರ ಮೇಲಿರುವ ಅಕ್ರಮ ಹಣ, ಆಸ್ತಿ ಸಂಪಾದನೆ ಪ್ರಕರಣ ಇತ್ಯರ್ಥವಾಗಿಲ್ಲ. ಕಾನೂನು ಹೋರಾಟದ ಹಾದಿ ಬಹಳ ದೂರ ಇದೆ. ಬಿಜೆಪಿಯ ಕೇಂದ್ರ ನಾಯಕರು ತಮ್ಮ ವಿರುದ್ಧ ರಾಜಕೀಯ ಕಾರಣಕ್ಕೆ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗಳನ್ನು ಛೂಬಿಟ್ಟಿದ್ದಾರೆ ಎಂದು ಸ್ವತಃ ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದಾರೆ. ಇದು ಮುಂದೂ ನಡೆದರೆ ಅದು ವೈಯಕ್ತಿಕವಾಗಿ ಡಿ.ಕೆ. ಶಿವಕುಮಾರ್ ಅವರ ಏಳಿಗೆಗೆ ಮಾತ್ರ ಪೆಟ್ಟಾಗದು. ಪಕ್ಷವೂ ಭಾರೀ ಬೆಲೆ ತೆತ್ತಬೇಕಾಗುತ್ತದೆ. ಇಂಥ ಒತ್ತಡದ ನಡುವೆಯೇ ಡಿ.ಕೆ. ಶಿವಕುಮಾರ್ ಕೆಲಸ ಮಾಡಬೇಕಿದೆ. ಹಿಂದೆ ಏನೇನೋ ಕಾರಣಗಳಿಗೆ ಬಂದಿದ್ದ ವಿಶೇಷಣಗಳನ್ನು ಸಕಾರಣಕ್ಕೆ ಬಳಸಬೇಕಿದೆ.