ದೆಹಲಿಯಲ್ಲಿ ರೈತರು ಕೊರೆಯುವ ಚಳಿಯಲ್ಲಿ ಹತ್ತು ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರು, ಕೇಂದ್ರ ಸರ್ಕಾರ ಚಳುವಳಿಯನ್ನು ಹತ್ತಿಕ್ಕುವ ಕುತಂತ್ರದ ಮಾರ್ಗವನ್ನ ಹುಡುಕುತ್ತಿದೆ, ಚಳವಳಿ ನಿರತ ರೈತರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸುತ್ತಿದೆ ದೇಶಕ್ಕೆ ಅನ್ನ ನೀಡುವ ರೈತನ ಬದುಕನ್ನು ನಾಶಮಾಡುವ ಕಾನೂನುಗಳನ್ನು ಜಾರಿಗೆ ತಂದಿದೆ.
ಈ ಹೋರಾಟ ರೈತರ ಅಳಿವು-ಉಳಿವಿನ ಪ್ರಶ್ನೆ ಯಾಗಿದೆ,ಅದಕ್ಕಾಗಿ ಭಾರತ ಬಂದ್ ಗೆ ಕರ್ನಾಟಕದ ರೈತರು ಸಂಪೂರ್ಣ ಬೆಂಬಲ ನೀಡಲು ತೀರ್ಮಾನಿಸಲಾಗಿದೆ, ನಾಳೆಯಿಂದ ಏಳರಂದು ಬೆಂಗಳೂರಿನ ಮೌರ್ಯ ವೃತ್ತದ ಬಳಿಯಿರುವ ಗಾಂಧಿ ಪ್ರತಿಮೆ ಮುಂದೆ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದ ವತಿಯಿಂದ ಬೃಹತ್ ಪ್ರತಿಭಟನೆ ಧರಣಿ ಹಮ್ಮಿಕೊಳ್ಳಲಾಗಿದೆ, ಎಂದು ಐಕ್ಯ ಹೋರಾಟದ ಸಂಚಾಲನಾ ಸಮಿತಿ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿರುವುದು, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ, ಕಾರ್ಮಿಕರ ಕಾಯ್ದೆ ತಿದ್ದುಪಡಿ ಮಾಡಿ ಕಂಪನಿಗಳ ಮರ್ಜಿಗೆ ಒಳಗಾಗಿ ಖಾಸಗೀಕರಣ ಮಾಡುತ್ತಿದ್ದಾರೆ, ಇದನ್ನು ವಿರೋಧಿಸಿ ದೇಶಾದ್ಯಂತ ರೈತರು ಬೀದಿಗಿಳಿದಿದ್ದಾರೆ, ಪ್ರಧಾನಿ ಮೋದಿಯವರು ಜನತಂತ್ರ ವ್ಯವಸ್ಥೆ ನಾಶ ಮಾಡುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.
ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದ ಡಾಕ್ಟರ್ ಸ್ವಾಮಿನಾಥನ್ ವರದಿ ಜಾರಿ ಮಾಡುವಲ್ಲಿ ನಿರ್ಲಕ್ಷತನ ತೂರಿ ರೈತರಿಗೆ ದ್ರೋಹ ಬಗೆದಿದ್ದಾರೆ, ರಾಜ್ಯಾದ್ಯಂತ ರೈತರು ಎಂಟರಂದು ಹಳ್ಳಿಹಳ್ಳಿಗಳಲ್ಲಿ ಚಳುವಳಿ ಮಾಡುವ ಮೂಲಕ ಭಾರತ್ ಬಂದ್ ಯಶಸ್ವಿಗೊಳಿಸಿ ರೈತರ ಶಕ್ತಿಯನ್ನು ತೋರಿಸಬೇಕು ಎಂದು ಮನವಿ ಮಾಡುತ್ತೇನೆ, ಎಂದವರು ಹೇಳಿದ್ದಾರೆ.