ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಆರೋಗ್ಯಾಧಿಕಾರಿ ಡಾ ನಾಗೇಂದ್ರ ಸಾವಿನ ಬಗ್ಗೆ ಮೈಸೂರು ಜಿಲ್ಲಾ ವೈದ್ಯರು ಕಳೆದ ಮೂರು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರು. ಗುರುವಾರ ಶುರುವಾದ ಬಳಿಕ ಶುಕ್ರವಾರ, ಶನಿವಾರ ಹೆಲ್ತ್ ಬುಲೆಟಿನ್ನಲ್ಲೂ ಶೂನ್ಯ ಎಂದು ದಾಖಲು ಮಾಡಲಾಗಿತ್ತು. ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪ ಹೊತ್ತಿರುವ ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಒ ವರ್ಗಾವಣೆ ಬಳಿಕವೂ ಹೋರಾಟ ಮುಂದುವರಿದಿತ್ತು. ದೇಶಾದ್ಯಂತ ಪ್ರತಿಭಟನೆ ಮಾಡಲು ಯೋಜನೆ ಮಾಡಿದ್ದ ವೈದ್ಯರು ಇಂದು ಏಕಾಏಕಿ ಹೋರಾಟ ಅಂತ್ಯ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ.
ಸರ್ಕಾರಿ ವೈದ್ಯರ ಮನವಿಗಳು ಏನು..!?
ಕರೋನಾ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿರುವ ಈ ಸಮಯದಲ್ಲಿ ವೈದ್ಯರಿಗೆ ಯಾವುದೇ ಟಾರ್ಗೆಟ್ ನೀಡಬಾರದು.. ಮೊದಲು ಹೇಗೆ ಕೆಲಸ ಮಾಡುತ್ತಿದ್ದರು ಹಾಗೆ ಕೆಲಸ ಮಾಡಲು ಅವಕಾಶ ಕೊಡಬೇಕು ಎನ್ನುವ ಆಗ್ರಹ ಮಾಡಿದ್ದಾರೆ. ಇನ್ನೂ ನೋಡೆಲ್ ಅಧಿಕಾರಿಗಳಾಗಿ ಕೆಎಎಸ್, ಐಎಎಸ್ ಅಧಿಕಾರಿಗಳನ್ನು ನೇಮಿಸಬಾರದು. ನಮ್ಮ ಇಲಾಖೆಯಲ್ಲೇ ಇರುವ ಹಿರಿಯ ಅಧಿಕಾರಿಗಳನ್ನು ನೇಮಿಸಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಗಣೇಶ ಪಂಡಾಲ್ ರೀತಿ ಕೋವಿಡ್ Rapid antigen test ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಇವುಗಳನ್ನು ರಾಜ್ಯ ಸರ್ಕಾರ ಪೂರೈಸುವ ಭರವಸೆ ಇದೆ ಎಂದಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹಾಗೂ ವ್ಯವಸ್ಥೆ ಹೇಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ನೋಡೆಲ್ ಅಧಿಕಾರಿಗಳು ಕರೋನಾ ಸೋಂಕಿನ ಮೇಲುಸ್ತುವಾರಿ ಆಗಿ ಬಂದಿರುವ ಕಾರಣಕ್ಕೆ ವೈದ್ಯರ ಬಣ್ಣ ಬಯಲಾಗುತ್ತಿದೆ ಎನ್ನಲಾಗ್ತಿದೆ. ನೋಡೆಲ್ಅಧಿಕಾರಿ ವೈದ್ಯರ ಕೆಲಸ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡುವುದರಿಂದ ಕಳ್ಳಾಟ ಆಡುವುದಕ್ಕೆ ಸಾಧ್ಯವಾಗುವುದಿಲ್ಲ, ಇದೇ ಕಾರಣದಿಂದ ನೋಡೆಲ್ಅಧಿಕಾರಿಯನ್ನು ವಿರೋಧಿಸುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ನೇಮಿಸಿದರೂ ತಮ್ಮದೇ ಇಲಾಖೆ ಆಗಿರುವ ಕಾರಣ ಅವರನ್ನು ಓಲೈಸುವುದು ಸುಲಭ ಎಂಬ ಉದ್ದೇಶದಿಂದ ಒತ್ತಡ ಹೇರಲಾಗ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಏಕಾಏಕಿ ಮುಷ್ಕರ ಕೈ ಬಿಟ್ಟದ್ದು ಯಾಕೆ..?
ನಂಜನಗೂಡು ತಾಲೂಕು ವೈದ್ಯಾಧಿಕಾರಿ ಆಗಿದ್ದ ಡಾ ನಾಗೇಂದ್ರ ಸಾವಿನ ಬಳಿಕ ಸರ್ಕಾರ ಕುಟುಂಬಸ್ಥರಿಗೆ 50 ಲಕ್ಷ ಪರಿಹಾರ ಹಾಗೂ ಡಾ ನಾಗೇಂದ್ರ ಪತ್ನಿಯನ್ನು ಸಬ್ರಿಜಿಸ್ಟ್ರಾರ್ಆಗಿ ನೇಮಕ ಮಾಡುವುದಾಗಿ ಘೋಷಣೆ ಮಾಡಿದೆ. ಡಾ ನಾಗೇಂದ್ರ ಅವರ ಕುಟುಂಬಸ್ಥರು ಪ್ರತಿಭಟನೆಗೆ ಸಾಥ್ ಕೊಡ್ತಿಲ್ಲ. ಆದರೂ ಪ್ರತಿಭಟನೆ ಮಾಡ್ತೇವೆ ಎಂದು ನಿನ್ನೆಯಷ್ಟೇ ಹೇಳಿದ್ದವರು ಇವತ್ತು ಮುಷ್ಕರ ವಾಪಸ್ ಪಡೆದಿದ್ದು ತನಿಖಾ ವರದಿ ಬರುವ ತನಕ ಕಪ್ಪುಪಟ್ಟಿ ಧರಿಸಿ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಇದಕ್ಕೆ ಕಾರಣ ಏನು ಎನ್ನುವುದನ್ನು ಪತ್ತೆ ಮಾಡಲು ಹೊರಟಾಗ ಸಿಕ್ಕಿದ್ದು ಪಿಡಿಒಗಳು.
ನಂಜನಗೂಡು Taluk Health Offier ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಬೆಂಬಲಕ್ಕೆ ಪಿಡಿಒಗಳು ದೌಡಾಯಿಸಿದ್ದಾರೆ. ಡಾ.ನಾಗೇಂದ್ರ ಆತ್ಮಹತ್ಯೆ ವಿಚಾರವಾಗಿ ಹಲವು ಅಂಶಗಳನ್ನು ಲಿಖಿತ ರೂಪದಲ್ಲಿ ನೀಡಿದ್ದಾರೆ. ಈ ಅಂಶಗಳನ್ನು ತನಿಖೆಯಲ್ಲಿ ಪರಿಗಣಿಸುವಂತೆ ಒತ್ತಾಯ ಮಾಡಿದ್ದಾರೆ. ನಾಗೇಂದ್ರ ಯಾವುದಾದರೂ ವೈಯಕ್ತಿಕ ಸಮಸ್ಯೆ ಎದುರಿಸುತ್ತಿದ್ದರೆ..? ಸರ್ಕಾರದ ನಿಯಮದ ಪ್ರಕಾರ ಡಾ.ನಾಗೇಂದ್ರ ಕೇಂದ್ರ ಸ್ಥಾನದಲ್ಲಿ ಇರಬೇಕಾಗಿತ್ತು. ಆದರೆ ನಂಜನಗೂಡು ಬಿಟ್ಟು ಮೈಸೂರಿನಲ್ಲಿ ಇದ್ದಿದ್ದು ಏಕೆ..? ಎಷ್ಟು ಸಮಯ ಅವರು ನಂಜನಗೂಡಿನಲ್ಲಿ ಇರುತ್ತಿದ್ದರು. ಡಾ.ನಾಗೇಂದ್ರ ಕೆಲಸ ಒತ್ತಡದ ಬಗ್ಗೆ ವೈದ್ಯರ ಸಂಘಕ್ಕೆ ಏಕೆ ದೂರು ನೀಡಿಲ್ಲ..? ಡಾ. ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಾಗ ಅವರ ಪತ್ನಿ ಎಲ್ಲಿದ್ದರು..? ನಾಗೇಂದ್ರ ಹೊರತುಪಡಿಸಿ ಬೇರೆ ತಾಲೂಕು ಆರೋಗ್ಯಾಧಿಕಾರಿಗಳು ಒತ್ತಡ, ಟಾರ್ಗೆಟ್ ಬಗ್ಗೆ ಏಕೆ ಮಾತನಾಡಿಲ್ಲ..? ಡಾ ನಾಗೇಂದ್ರಗೆ ಟಾರ್ಗೆಟ್ ಮುಗಿಸಲು ಏಕೆ ಸಾಧ್ಯವಾಗಿರಲಿಲ್ಲ..? ಒಂದು ವೇಳೆ ಸೌಲಭ್ಯಗಳನ್ನು ನೀಡಿಲ್ಲವಾದರೆ ಏಕೆ ಈ ವಿಚಾರ ಅವರು ತಿಳಿಸಿಲ್ಲ..? ಎಂದು 17 ಅಂಶಗಳನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.
ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ವರ್ಗಾವಣೆ ರದ್ದು ಮಾಡುವಂತೆ ಪಿಡಿಒಗಳ ಸಂಘ ಆಗ್ರಹ ಮಾಡಿದೆ. ಈ ಬಗ್ಗೆ ಮಾತನಾಡಿರುವ ಸಂಘದ ಅಧ್ಯಕ್ಷ ಮಾಯಣ್ಣ, ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನ ಮೈಸೂರು ಸಿಇಒ ಆಗಿಯೇ ಮುಂದುವರಿಸಬೇಕು ಎಂದು ಒತ್ತಾಯ ಮಾಡಿದ್ದು, ನಾಳೆ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿಯಿಂದ ಮೌನ ಪ್ರತಿಭಟನೆ ಮಾಡುತ್ತೇವೆ. ಇದಕ್ಕಾಗಿ ಇಂದು ಪೊಲೀಸ್ ಆಯುಕ್ತರ ಬಳಿ ಅನುಮತಿ ಪಡೆಯುತ್ತಿದ್ದೇವೆ ಎಂದಿದ್ದಾರೆ. ಮೊದಲು ಸಮಗ್ರವಾದ ತನಿಖೆಯಾಗಲಿ., ನಂತರ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಿ. ಏಕಾಏಕಿ ಸಿಇಒ ಮೇಲೆ ಕ್ರಮ ಸರಿಯಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’ ಆದರೆ ಆರೋಪ ಸಾಬೀತಿಗೂ ಮುನ್ನವೇ ಕ್ರಮ ಸರಿಯಲ್ಲ ಎಂದಿದ್ದಾರೆ ಪಿಡಿಓ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಾಯಪ್ಪ. ಒಟ್ಟಾರೆ ಪ್ರಕರಣದ ದಿಕ್ಕು ಬದಲಾಗುತ್ತಿದ್ದ ಹಾಗೆ ವೈದ್ಯರು ಮುಷ್ಕರದ ನಿರ್ಧಾರ ಕೈ ಬಿಟ್ಟಿದ್ದಾರೆ ಎನ್ನಲಾಗ್ತಿದೆ. ತನಿಖಾ ವರದಿಯಲ್ಲಿ ಏನು ಬರಲಿದೆ ಎನ್ನುವುದರ ಮೇಲೆ ಕುತೂಹಲ ಹೆಚ್ಚಾಗುತ್ತಿದೆ.