ಅಮೆರಿಕೆಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ದೋಷಾರೋಪ ಮಾಡಿ ವಿಚಾರಣೆ ನಡೆಸಿ, ರುಜುವಾತುಪಡಿಸಿ ಅಧಿಕಾರದಿಂದ ಅವರನ್ನು ಕೆಳಗಿಳಿಸುವ ಪ್ರಕ್ರಿಯೆಗೆ (ಇಂಪೀಚ್ಮೆಂಟ್) ಚಾಲನೆ ದೊರೆತಿದೆ. ಮುಂಬರುವ ಅಧ್ಯಕ್ಷೀಯ ಚುನಾವಣೆಗಳಲ್ಲಿ ತಮ್ಮ ಎದುರಾಳಿಯಾಗಲಿರುವ ಜೋ ಬೈಡನ್ ಅವರ ವಿರುದ್ಧ ತನಿಖೆ ನಡೆಸುವಂತೆ ಉಕ್ರೇನ್ ಮೇಲೆ ಒತ್ತಡ ಹೇರಿರುವ ಟ್ರಂಪ್ ನಡವಳಿಕೆ ವಿರುದ್ಧ ಇಂಪೀಚ್ಮೆಂಟ್ ವಿಚಾರಣೆ ನಡೆಸಲಾಗುವುದು ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಸಾರಿದ್ದಾರೆ. ಟ್ರಂಪ್ ಅಧ್ಯಕ್ಷಾವಧಿ ತೀರಿ ಹೊಸ ಚುನಾವಣೆ ನಡೆಯಲು 14 ತಿಂಗಳುಗಳು ಬಾಕಿ ಉಳಿದಿವೆ.

ಟ್ರಂಪ್ ಅವರು ಕಳೆದ ಜುಲೈ 25ರಂದು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕೀ (Volodymyr Zelensky) ಅವರಿಗೆ ಮಾಡಿದ ದೂರವಾಣಿ ಕರೆಯೇ ಅವರ ಪದಚ್ಯುತಿ ಸಂಬಂಧದ ವಿಚಾರಣೆ ಗೊತ್ತುವಳಿಯ ಮೂಲ ಕಾರಣ. 2020ರಲ್ಲಿ ನಡೆಯಲಿರುವ ಅಮೆರಿಕೆ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಅವರು ಡೆಮಾಕ್ರಟಿಕ್ ಪಕ್ಷದ ಹುರಿಯಾಳು. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಟ್ರಂಪ್ ಪುನಃ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಹೀಗಾದಲ್ಲಿ ಟ್ರಂಪ್ ಅವರ ಎದುರಾಳಿ ಜೋ ಬೈಡನ್.
ಜೋ ಬೈಡನ್ ಅವರ ಮಗ ಹಂಟರ್ ಬೈಡನ್ ಉಕ್ರೇನಿನಲ್ಲಿ ವ್ಯಾಪಾರ ನಡೆಸುತ್ತಿದ್ದರು. ತಂದೆ ಮಗನ ವಿರುದ್ಧ ಉಕ್ರೇನಿನಲ್ಲಿ ಭ್ರಷ್ಟಾಚಾರದ ಆರೋಪಗಳ ಕುರಿತು ತನಿಖೆ ನಡೆಸಿ ಸಿಕ್ಕಿಹಾಕಿಸಿ ತಮಗೆ ಉಪಕಾರ ಮಾಡುವಂತೆ ಟ್ರಂಪ್ ಅವರು ಝೆಲೆನ್ಸ್ಕಿ ಅವರನ್ನು ಕೋರಿದ್ದರು. ವಿದೇಶದಲ್ಲೂ ಭ್ರಷ್ಟಾಚಾರದ ಆರೋಪಗಳು-ಮೊಕದ್ದಮೆಗಳನ್ನು ಹೂಡಿ ಬೈಡನ್ ಹೆಸರಿಗೆ ಮಸಿ ಬಳಿದರೆ ಚುನಾವಣೆಯಲ್ಲಿ ತಮ್ಮ ಗೆಲುವು ಸಲೀಸು ಎಂಬುದು ಟ್ರಂಪ್ ಲೆಕ್ಕಾಚಾರ. ಈ ಸಂಗತಿಯನ್ನು ಸಾಕ್ಷ್ಯಾಧಾರಗಳ ಸಹಿತ ಹೊರಹಾಕಿದ ಅಜ್ಞಾತನೊಬ್ಬನ ದೂರನ್ನು ಟ್ರಂಪ್ ವಿರುದ್ಧ ವಿಚಾರಣೆಯ ಅಸ್ತ್ರವನ್ನಾಗಿ ಡೆಮಕ್ರಾಟಿಕ್ ಪಕ್ಷ ಬಳಸಿಕೊಂಡಿದೆ.

ಇಂಪೀಚ್ಮೆಂಟ್’ ಪ್ರಕ್ರಿಯೆ ಹೇಗೆ?
ಅಮೆರಿಕೆಯ ಅಧ್ಯಕ್ಷರ ‘ಇಂಪೀಚ್ಮೆಂಟ್’ ಮತ್ತು ಆನಂತರದ ಪದಚ್ಯುತಿಯು ಎರಡು ಹಂತದ ಸಂಕೀರ್ಣ ಪ್ರಕ್ರಿಯೆ. ಅಧ್ಯಕ್ಷರ ವಿರುದ್ಧ ಆಪಾದನೆಗಳನ್ನು ಪ್ರಸ್ತಾಪಿಸುವ ಗೊತ್ತುವಳಿಯೊಂದನ್ನು ಸಂಸತ್ತಿನ ಕೆಳಮನೆಯಲ್ಲಿ ಸದಸ್ಯನೊಬ್ಬ ಮಂಡಿಸಬೇಕು. ಈ ಗೊತ್ತುವಳಿಯ ಕುರಿತು ಸಂಸದರು ಚರ್ಚೆ ನಡೆಸಬೇಕು. ಗೊತ್ತುವಳಿ ಬಹುಮತದಿಂದ ಅಂಗೀಕಾರ ಆದರೆ ಅಧ್ಯಕ್ಷರು ‘ಇಂಪೀಚ್’ ಆದಂತೆ. ಆಗ ಆತ ಸೆನೆಟ್ ಸಭೆಯಲ್ಲಿ ವಿಚಾರಣೆ ಎದುರಿಸಬೇಕು.
ಒಂದು ವೇಳೆ ಟ್ರಂಪ್ ವಿರುದ್ಧದ ಕೇಸು ವಿಚಾರಣೆಯ ಹಂತ ತಲುಪಿದರೆ, ವಿಚಾರಣೆಯ ಅಧ್ಯಕ್ಷತೆಯನ್ನು ಅಮೆರಿಕೆಯ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ವಹಿಸುವರು. ಸೆನೇಟರ್ ಗಳು ವಿಚಾರಣೆಯ ತೀರ್ಪುಗಾರ ಮಂಡಳಿ ಸದಸ್ಯರ ಪಾತ್ರ ವಹಿಸುವರು. ಸೆನೆಟ್ ಮುಂದೆ ತಮ್ಮ ಪರ ವಾದ ಮಂಡಿಸಲು ನ್ಯಾಯವಾದಿಯೊಬ್ಬರನ್ನು ನೇಮಕ ಮಾಡಿಕೊಳ್ಳುವ ಅವಕಾಶವನ್ನು ಟ್ರಂಪ್ ಹೊಂದಿರುತ್ತಾರೆ. ವಿಚಾರಣೆಯ ಕಟ್ಟಕಡೆಯ ಹಂತದಲ್ಲಿ ಸೆನೆಟ್ ಸಭೆ ಮತ ಚಲಾಯಿಸುತ್ತದೆ. ಟ್ರಂಪ್ ಅವರಿಗೆ ಶಿಕ್ಷೆಯ ಪರವಾಗಿ ಸೆನೆಟ್ ನ ಮೂರನೆಯ ಎರಡರಷ್ಟು ಸದಸ್ಯರು ಮತ ಚಲಾಯಿಸಿದರೆ, ಟ್ರಂಪ್ ಅವರನ್ನು ಅಧ್ಯಕ್ಷ ಪದವಿಯಿಂದ ಕೆಳಗಿಳಿಸಲಾಗುವುದು. ಉಳಿದ ಅವಧಿಗೆ ಅಮೆರಿಕೆಯ ಉಪಾಧ್ಯಕ್ಷರೇ ಅಧ್ಯಕ್ಷರ ಪಾತ್ರವನ್ನು ವಹಿಸುವರು.
ಅಮೆರಿಕೆಯ ಅಧ್ಯಕ್ಷನ ವಿರುದ್ಧ ಆರೋಪಗಳನ್ನು ಪಟ್ಟಿ ಮಾಡಿ ಅವುಗಳ ತನಿಖೆಗೆ ಸದನ ಸಮಿತಿ ಅಥವಾ ಸಮಿತಿಗಳನ್ನು ರಚಿಸಲು ಗೊತ್ತುವಳಿಯೊಂದನ್ನು ಕೆಳಮನೆಯಲ್ಲಿ (ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್) ಅಂಗೀಕರಿಸಿದರೆ ಟ್ರಂಪ್ ಅವರನ್ನು ಕೆಳಗಿಳಿಸುವ ಪ್ರಕ್ರಿಯೆಗೆ ಚಾಲನೆ ದೊರೆತಂತೆಯೇ. ಆದರೆ ಅದು ಕೇವಲ ಆರಂಭ ಮಾತ್ರ. ಈ ಸಮಿತಿ ಅಥವಾ ಸಮಿತಿಗಳು ಆರೋಪಗಳನ್ನು ಪರಿಶೀಲಿಸಿ ಅವುಗಳಲ್ಲಿ ಹುರುಳಿದೆಯೆಂದು ಕಂಡು ಬಂದರೆ ಮುಂದಿನ ನಡೆಯನ್ನು ಪೂರ್ಣ ಸದನಕ್ಕೆ ವಹಿಸಿಕೊಡಲಾಗುವುದು. ಟ್ರಂಪ್ ಅವರಿಗೆ ಸಂಬಂಧಿಸಿದಂತೆ ಆರು ಸದನ ಸಮಿತಿಗಳು ಪರಿಶೀಲನೆಯಲ್ಲಿ ತೊಡಗಿವೆ.

ಅಮೆರಿಕೆಯ ಸಂಸತ್ತಿನ ಕೆಳಮನೆಗೆ ಇಂಪೀಚ್ಮೆಂಟ್ ಅಧಿಕಾರವಿದ್ದರೆ, ಎಲ್ಲ ಇಂಪೀಚ್ಮೆಂಟ್ ಗಳ ವಿಚಾರಣೆ ನಡೆಸುವ ಅಧಿಕಾರವನ್ನು ಸೆನೆಟ್ (ಮೇಲ್ಮನೆ) ಹೊಂದಿರುತ್ತದೆ. ಸನೆಟ್ ನಲ್ಲಿ ಜರುಗುವ ಇಂಪೀಚ್ಮೆಂಟ್ ವಿಚಾರಣೆಗಳ ಅಧ್ಯಕ್ಷತೆಯನ್ನು ಅಮೆರಿಕೆಯ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ವಹಿಸುತ್ತಾರೆ. ದೇಶದ್ರೋಹ, ಭ್ರಷ್ಟಾಚಾರ, ಇತರೆ ಉನ್ನತ ಹಂತದ ಅಪರಾಧಗಳು ಇಲ್ಲವೇ ದುರ್ವರ್ತನೆಗಳಿಗಾಗಿ ಶಿಕ್ಷೆಯಾದರೆ ಅಮೆರಿಕೆಯ ಅಧ್ಯಕ್ಷರನ್ನು ಇಂಪೀಚ್ಮೆಂಟ್ ಮೇರೆಗೆ ಹುದ್ದೆಯಿಂದ ಕೆಳಗಿಳಿಸಬಹುದು ಎಂದು ಅಮೆರಿಕೆಯ ಸಂವಿಧಾನ ಸಾರುತ್ತದೆ. ಅಧ್ಯಕ್ಷರ ವಿರುದ್ಧದ ದೂರು ಅಮೆರಿಕೆಯ ಸಂಸತ್ತಿನಲ್ಲಿ ಇಂಪೀಚ್ಮೆಂಟ್ ನ ಹಂತ ತಲುಪುವ ಮುನ್ನ ತೊಡಕಿನ ಸುದೀರ್ಘ ಪ್ರಕ್ರಿಯೆಯನ್ನು ಹಾದು ಬರಬೇಕಿದೆ.
ಆದರೆ ಡೊನಾಲ್ಡ್ ಟ್ರಂಪ್ ಅವರ ಇಂಪೀಚ್ಮೆಂಟ್ ಪ್ರಕ್ರಿಯೆ ವಿಚಾರಣೆಯ ಹಂತವನ್ನು ಮುಟ್ಟುವ ಅವಕಾಶ ವಿರಳ ಎನ್ನಲಾಗಿದೆ. ಸೆನೆಟ್ ನಿಂದ ಶಿಕ್ಷೆಗೊಳಗಾಗುವ ಅವಕಾಶ ಇನ್ನಷ್ಟೂ ವಿರಳ. ಕೆಳಮನೆಯಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಬಹುಮತ ಇಲ್ಲ. ಡೆಮಾಕ್ರಟಿಕ್ ಪಕ್ಷ 235 ಸದಸ್ಯರನ್ನೂ, ರಿಪಬ್ಲಿಕನ್ ಪಕ್ಷ 199 ಸದಸ್ಯರನ್ನೂ ಹೊಂದಿದೆ. ಒಬ್ಬ ಪಕ್ಷೇತರ. ಮೇಲ್ಮನೆಯಲ್ಲಿ ಬಹುಮತ ರಿಪಬ್ಲಿಕನ್ ಪಕ್ಷದ್ದು. 53 ಮಂದಿ ರಿಪಬ್ಲಿಕನ್ ಪಕ್ಷದ ಸದಸ್ಯರಿದ್ದರೆ, ಡೆಮಕ್ರಾಟ್ ಗಳ ಸಂಖ್ಯೆ 45. ಅಧ್ಯಕ್ಷನಿಗೆ ಶಿಕ್ಷೆ ವಿಧಿಸಲು ಅಗತ್ಯವಿರುವ ಮತಗಳ ಸಂಖ್ಯೆ 67.
ಈವರೆಗೆ ಅಮೆರಿಕೆಯ ಯಾವುದೇ ಅಧ್ಯಕ್ಷರನ್ನು ಇಂಪೀಚ್ಮೆಂಟಿನ ಪರಿಣಾಮವಾಗಿ ಪದಚ್ಯುತಗೊಳಿಸಲಾಗಿಲ್ಲ. 1968ರಲ್ಲಿ ಆ್ಯಂಡ್ರೂ ಜಾನ್ಸನ್ ಮತ್ತು 1998ರಲ್ಲಿ ಬಿಲ್ ಕ್ಲಿಂಟನ್ ಅವರು ಇಂಪೀಚ್ಮೆಂಟ್ ಎದುರಿಸಿದರು. ಆದರೆ ಸೆನೆಟ್ ಅವರಿಗೆ ಶಿಕ್ಷೆ ವಿಧಿಸಲಿಲ್ಲ. 1974ರಲ್ಲಿ ಕುಖ್ಯಾತ ವಾಟರ್ ಗೇಟ್ ಹಗರಣದ ಆಪಾದನೆ ಎದುರಿಸಿದ ರಿಚರ್ಡ್ ನಿಕ್ಸನ್ ತಮ್ಮ ಪದಚ್ಯುತಿಗೆ ಮುನ್ನವೇ ರಾಜೀನಾಮೆ ನೀಡಿದರು. ಈ ಹಿಂದೆ ಅಮೆರಿಕೆಯ ಸಂಸತ್ತಿನ ಕೆಳಮನೆಯು, ಅಧ್ಯಕ್ಷ ಆ್ಯಂಡ್ರೂ ಜಾನ್ಸನ್ ಅವರ ವಿರುದ್ಧದ ಆಪಾದನೆಗಳ ಕುರಿತು ನಿರ್ಣಯ ಮಂಡಿಸಿ ಬಹುಮತದಿಂದ ಅಂಗೀಕರಿಸಿತ್ತು. ಸೆನೆಟ್ ಮುಂದೆ ನಡೆದ ವಿಚಾರಣೆಯ ನಂತರ ಜರುಗಿದ ಮತದಾನದಲ್ಲಿ ಜಾನ್ಸನ್ ಒಂದು ಮತದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಅವರು ಕೂಡ ಟ್ರಂಪ್ ಅವರಂತೆ ರಿಪಬ್ಲಿಕನ್ ಪಾರ್ಟಿಗೆ ಸೇರಿದವರಾಗಿದ್ದರು.