ಟಿ.ಸಿ ಪಾಳ್ಯ ಮುಖ್ಯರಸ್ತೆ ಮತ್ತು ಹೊರಮಾವು ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ಕೌದೇನಹಳ್ಳಿ ಗ್ರಾಮದ ಸರ್ವೆ ನಂ. 132ರಲ್ಲಿನ ಜಾಗವು ಸೇರಿದಂತೆ ಇನ್ನೂ ಕೆಲವು ಸ್ವತ್ತುಗಳನ್ನು ಭಟ್ಟರಹಳ್ಳಿ ರಸ್ತೆ ಟಿ.ಸಿ ಪಾಳ್ಯ ಜಂಕ್ಷನ್ ವರೆಗೆ ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ 29.07.2009ರಲ್ಲಿ ನೋಟಿಫೈ ಮಾಡಿರುತ್ತದೆ. ಆದರೆ 1989ರಲ್ಲಿ ಈ ಸರ್ವೆ ನಂ.132ರಲ್ಲಿನ ಬಡಾವಣೆ ನಿರ್ಮಿಸಿ, ಅಲ್ಲಿನ ಸೈಟ್‌ಗಳನ್ನು ಭೂ ಮಾಲೀಕರಾದ ಮುನಿರಾಜಪ್ಪ ಬಿನ್ ಲೇಟ್ ರೇವಣ್ಣ ಹಾಗೂ ಇತರರಿಂದ ಜಿ.ಪಿ.ಎ ಪಡೆದ ಆರೋಪಿತ ಟಿ.ಡಿ.ಆರ್ ಬ್ರೋಕರ್‌ಗಳಾದ ಬಿ.ಎಸ್ ಸುರೇಂದ್ರನಾಥ್, ಕೆ ಗೌತಮ್, ಸುರೇಶ.ಕೆ ಹಾಗೂ ಮೆ|| ವಾರ್ಲ್ಮಾಕ್ ರಿಯಾಲ್ಟಿ ಹೋಲ್ಡಿಂಗ್ ಪ್ರೈ.ಲಿ ಕಂಪನಿಯವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಅಕ್ರಮ ಒಡಂಬಡಿಕೆಯನ್ನು ಮಾಡಿಕೊಂಡಿದ್ದರು.
ಅಲ್ಲದೆ, ಸರ್ವೆ ನಂ.132ರಲ್ಲಿ ಹಲವಾರು ಸಾರ್ವಜನಿಕರು ಸೈಟ್‌ಗಳನ್ನು ಖರೀದಿಸಿ, ಅಲ್ಲಿ ಮನೆಗಳನ್ನು ಕಟ್ಟಿಕೊಂಡು, ಬಿಬಿಎಂಪಿಯಲ್ಲಿ ಖಾತೆಮಾಡಿಸಿ, ಕಂದಾಯವನ್ನು ಪಾವತಿಸುತ್ತಿದ್ದಾರೆ. ಆದರೆ ಈ ಟಿ.ಡಿ.ಆರ್ ಬ್ರೋಕರ್‌ಗಳು, ಇದನೆಲ್ಲಾ ಮರೆಮಾಚಿ, ಬಿಬಿಎಂಪಿ ಸುತ್ತೋಲೆಗಳಿಗೆ ವ್ಯತಿರಿಕ್ತವಾಗಿ ಕಟ್ಟಡಗಳ ಮೌಲ್ಯ ಮಾಪನ ವರದಿಗಳನ್ನು ತಯಾರಿಸಿ, ರಸ್ತೆ ಅಗಲೀಕರಣಕ್ಕೆ ಒಳಪಡದ ಹಲವು ಕಟ್ಟಡಗಳನ್ನು ರಸ್ತೆ ಅಗಲೀಕರಣಕ್ಕೆ ಒಳಪಡುವುದಾಗಿ ಹಾಗೂ ನೆಲ+1 ಮಹಡಿ ಇರುವ ಕಟ್ಟಡಗಳನ್ನು ನೆಲ+3 ಮಹಡಿಯ ಕಟ್ಟಡಗಳೆಂದು ಸುಳ್ಳು ವರದಿಗಳನ್ನು ತಯಾರಿಸಿದ್ದಾರೆ. ಅಲ್ಲದೆ, ಈ ಕಟ್ಟಡಗಳಿಗೆ 5,95,86,925/- ರೂಪಾಯಿಗಳ ಬೆಲೆ ನಿಗಧಿಪಡಿಸಿ, ಕಾನೂನು ಬಾಹಿರವಾಗಿ ಡಿ.ಆರ್.ಸಿ ನಂ.002924 ಮತ್ತು 002958 ಗಳನ್ನು 2014ನೇ ಸಾಲಿನಲ್ಲಿ ಬಿಬಿಎಂಪಿಯಿಂದ ಪಡೆದು ಅವುಗಳನ್ನು 8 ರಿಯಲ್ ಎಸ್ಟೇಟ್ ಕಂಪನಿಗಳಿಗೆ 27 ಕೋಟಿಗೂ ಅಧಿಕ ಬೆಲೆಗೆ ಮಾರಾಟ ಮಾಡಿಕೊಂಡು ಬಿಬಿಎಂಪಿಗೆ ವಂಚಿಸಿದ್ದಾರೆ.
ಈ ರೀತಿ ಟಿ.ಡಿ.ಆರ್ ಪಡೆದಿರುವ ಜಾಗವನ್ನು ಬಿಬಿಎಂಪಿರವರು ಸುಮಾರು 6 ವರ್ಷಗಳು ಕಳೆದರೂ ಸ್ವಾಧೀನ ಪಡೆದು ರಸ್ತೆ ಅಗಲೀಕರಣ ಮಾಡಿಲ್ಲ. ಉದ್ದೇಶಿತ ಅಗಲೀಕರಣವಾಗದೇ ಯಥಾಸ್ಥಿತಿ ಮುಂದುವರೆದಿದೆ. ಹಾಗೂ ಟಿಡಿಆರ್‌ಗೆ ಅರ್ಜಿ ಹಾಕುವ ಹಂತದಿಂದಲೇ ಟಿಡಿಆರ್ ಬ್ರೋಕರ್‌ಗಳು ಹಾಗೂ ವಾಲ್‌ಮಾರ್ಕ್ ಕಂಪನಿಯವರು, ಟಿಡಿಆರ್ ಪಡೆಯುವ ಸಲುವಾಗಿ ಹಳೆಯ ಜಮೀನು ಮಾಲೀಕರಿಂದ ನೋಂದಾಯಿತ ಜಿಪಿಎ ಹಾಗೂ ಸೇಲ್ ಅಗ್ರೀಮೆಂಟ್ ಪಡೆದುಕೊಂಡು ಅಕ್ರಮಗಳನ್ನು ಎಸಗಿದ್ದಾರೆ. ಇದು ಭ್ರಷ್ಟಾಚಾರ ನಿಗ್ರಹದಳದಿಂದ ಧೃಡಪಟ್ಟಿದೆ.
Also Read: ಟಿಡಿಆರ್: ತನಿಖೆ ಆಗಲಿರುವ 20 ಪ್ರಕರಣಗಳ ಅವ್ಯವಹಾರ ಬರೋಬ್ಬರಿ 700 ಕೋಟಿ ರೂ.
ಅಲ್ಲದೆ, ಈ ಪ್ರಕರಣದಲ್ಲಿ ಟಿ.ಡಿ.ಆರ್ ವಿತರಣೆ ಮಾಡುವಾಗ ಬಿಬಿಎಂಪಿ ಅಧಿಕಾರಿಗಳು ತಯಾರಿಸಿ ಸಹಿ ಮಾಡಿದ್ದ ಕೆಲವು ದಾಖಲೆಗಳ ಪ್ರತಿಗಳನ್ನು ಆರೋಪಿತ ಬಿಬಿಎಂಪಿ ಅಧಿಕಾರಿಗಳಾದ ಕೃಷ್ಣಲಾಲ್, ಕೆ.ಎನ್.ರಮೇಶ್, ಕಂದಾಯ ಅಧಿಕಾರಿ ಈಶ್ವರ ಪ್ರಸನ್ನಯ್ಯ, ರಾಜಸ್ವ ನಿರೀಕ್ಷಕರಾದ ಜಗನ್ನಾಥ ರೆಡ್ಡಿ, ಗ್ರಾಮ ಲೆಕ್ಕಿಗ ಚಂದ್ರಶೇಖರ್ ಹಾಗೂ ಇತರ ಬಿಬಿಎಂಪಿ ಅಧಿಕಾರಿಗಳು ಆರೋಪಿತ ಟಿ.ಡಿ.ಆರ್ ಬ್ರೋಕರ್‌ಗಳೊಂದಿಗೆ ಅಕ್ರಮ ಒಡಂಬಡಿಕೆಯನ್ನು ಮಾಡಿಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಹಾಗೂ ಹಲವು ಅಸ್ತಿತ್ವದಲ್ಲಿಯೇ ಇಲ್ಲದೇ ಕಟ್ಟಡಗಳ ಹೆಸರನಲ್ಲಿ ಹಾಗೂ ರಸ್ತೆ ಅಗಲೀಕರಣಕ್ಕೆ ಒಳಪಡದ ಕಟ್ಟಡಗಳ ಹೆಸರಿನಲ್ಲಿ 5 ಕೋಟಿಗೂ ಅಧಿಕ ಮೌಲ್ಯವನ್ನು ಕಾನೂನು ಬಾಹಿರವಾಗಿ ನಿಗಧಿಪಡಿಸಿ ಅಕ್ರಮವಾಗಿ ಒಟ್ಟು 5,64,592 ಚದರ ಅಡಿ ವಿಸ್ತೀರ್ಣದ ಟಿ.ಡಿ.ಆರ್ ಅನ್ನು ವಿತರಣೆ ಮಾಡಿದ್ದಾರೆ.
ಹೀಗಾಗಿ ಆರೋಪಿತ ಸರ್ಕಾರಿ ಅಧಿಕಾರಿಗಳನ್ನು ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸುವುದಕ್ಕೆ ಎಸಿಬಿ ಆದೇಶ ಕೋರಿದೆ. ಅಲ್ಲದೆ, ಈ ಆರೋಪಿಗಳಿಗೆ 30.12.2019ರಂದು ತನಿಖಾ ವರದಿಯನ್ನು ಸಹ ಕಳಿಸಿದೆ. ನ್ಯಾಯಾಲಯದಲ್ಲಿ ಅಭಿಯೋಜನಾ ಮಂಜೂರಾತಿ ಆದೇಶವನ್ನು ಪಡೆದ ನಂತರ ನ್ಯಾಯಾಲಯಕ್ಕೆ ಎಸಿಬಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಿದೆ.