ವಿಧಾನ ಪರಿಷತ್ ಮಾಜಿ ಸದಸ್ಯರಾದ ರಮೇಶ್ ಬಾಬು ಅವರು ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸಂಧರ್ಭ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ರಮೇಶ್ ಬಾಬು ಅವರನ್ನು ಕೆಪಿಸಿಸಿ ಕಛೇರಿಯಲ್ಲಿ ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ.
ಬಳಿಕ ಮಾತನಾಡಿದ ಸಿದ್ದರಾಮಯ್ಯ, ಜಾತ್ಯಾತೀತ ಜನತಾದಳ ಒಂದು ಅವಕಾಶವಾದಿ ಪಕ್ಷ, ಪ್ರಜಾಪ್ರಭುತ್ವ, ಜಾತ್ಯಾತೀತತೆ ಎಂದು ಜೆಡಿಎಸ್ ಭಾಷಣ ಮಾಡಿದರೂ, ಅವರ ಲಾಭಕ್ಕೋಸ್ಕರ ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಅವರ ಪಕ್ಷಕ್ಕೆ ಯಾವುದೇ ಸಿದ್ಧಾಂತವಿಲ್ಲ, ಗೌಡರ ಮನೆಯ ಸಿದ್ದಾಂತವೇ ಅವರ ಪಕ್ಷದ ಸಿದ್ದಾಂತ ಎಂದು ಜೆಡಿಎಸ್ ಪಕ್ಷವನ್ನು ಟೀಕಿಸಿದ್ದಾರೆ. ನಾವಾಗಿಯೇ ಯಾರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕೈಹಿಡಿದು ಎಳೆದುಕೊಂಡು ಬರೋದಿಲ್ಲ. ನಮ್ಮ ಪಕ್ಷದ ಸಿದ್ಧಾಂತಗಳನ್ನು, ಪಕ್ಷದ ನಾಯಕತ್ವವನ್ನು ಒಪ್ಪಿ ಬರುವವರಿಗೆ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಸೈದ್ಧಾಂತಿಕ ಬದ್ಧತೆಯಿಲ್ಲದ ಅಧಿಕಾರದಾಹಿಗಳ ಅಗತ್ಯ ನಮ್ಮ ಪಕ್ಷಕ್ಕಿಲ್ಲ. ಅಂಥವರಿಂದ ಕಾಂಗ್ರೆಸ್ ದೂರವಿರಲಿದೆ ಎಂದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾಂಗ್ರೆಸ್ ಪಕ್ಷ ರಾಜಕೀಯಕ್ಕಷ್ಟೇ ಸೀಮಿತವಲ್ಲ, ಇದೊಂದು ಚಳವಳಿ. ದೇಶದ ಸ್ವಾತಂತ್ರ್ಯಕ್ಕಾಗಿ ಆರಂಭಗೊಂಡ ಕಾಂಗ್ರೆಸ್ ಎಂಬ ಚಳವಳಿ ಇಂದು ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯಾತೀತತೆಯ ಸ್ಥಾಪನೆಗಾಗಿ ನಿರಂತರವಾಗಿದೆ. ಈ ಸಿದ್ಧಾಂತಗಳನ್ನು ಬೆಂಬಲಿಸುವ ಎಲ್ಲಾ ಮನಸ್ಸುಗಳು ಈ ವೇಳೆ ಒಂದಾಗಬೇಕು. ದೇಶದ ಇತರ ಎಲ್ಲಾ ರಾಜಕೀಯ ಪಕ್ಷಗಳಿಗೂ ಕಾಂಗ್ರೆಸ್ ಮಾತೃಪಕ್ಷ. ಅದು ರಾಷ್ಟ್ರೀಯ ಪಕ್ಷವೇ ಆಗಿರಲಿ ಅಥವಾ ಪ್ರಾದೇಶಿಕ ಪಕ್ಷಗಳೇ ಆಗಿರಲಿ. ಅವು ಒಂದಲ್ಲಾ ಒಂದು ರೀತಿ ಕಾಂಗ್ರೆಸ್ ಪಕ್ಷದ ಮೂಲದಿಂದಲೇ ಅಸ್ತಿತ್ವಕ್ಕೆ ಬಂದಿವೆ. ಹಾಗಾಗಿಯೇ ದೇಶದ ಉದ್ದಗಲಕ್ಕೂ ಕಾರ್ಯಕರ್ತರನ್ನು ಹೊಂದಿರುವ ಏಕೈಕ ಪಕ್ಷವೆಂಬ ಹೆಗ್ಗಳಿಕೆ ನಮಗಿದೆ ಎಂದಿದ್ದಾರೆ.
ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಟೀಕಿಸಿದ ಸಿದ್ದರಾಮಯ್ಯ, ಬಿಜೆಪಿ ಹಿಂದುತ್ವ ಅಫೀಮನ್ನು ಯುವಕರಿಗೆ ಕೊಟ್ಟು ಆ ಮೂಲಕ ಅಧಿಕಾರಕ್ಕೆ ಬಂದಿದೆ. ಆದರೂ ಮತ ನೀಡಿ ಗೆಲ್ಲಿಸಿದ ಮತದಾರರೇ ನೊಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಣೆ ಮಾಡಿದ್ದಾರೆ ಎಂದರೆ ರಾಷ್ಟ್ರದಲ್ಲಿ ಬಿಜೆಪಿ ಆಡಳಿತದ ಕೊನೆ ದಿನಗಳು ಸಮೀಪಿಸುತ್ತಿದೆ ಎಂದೇ ಅರ್ಥ. ಇಂಥಾ ಸಂದರ್ಭದಲ್ಲಿ ಗೌರವಯುತವಾಗಿ ಅವರೇ ರಾಜೀನಾಮೆ ನೀಡುವುದು ಉತ್ತಮ ಎಂದಿದ್ದಾರೆ.
ಮೋದಿಯ ಆಡಳಿತದಲ್ಲಿ ಅರ್ಥ ವ್ಯವಸ್ಥೆ ಕುಸಿದಿದೆ, ಜಿಡಿಪಿ ಕುಸಿದಿದೆ, ನಿರುದ್ಯೋಗ ತಾಂಡವವಾಡುತ್ತಿದೆ. ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕತೆಗೆ ನರೇಂದ್ರ ಮೋದಿಯವರೇ ಹೊಣೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ನೆರೆಪರಿಹಾರ, ಜಿಎಸ್ಟಿ ಪರಿಹಾರ ಸೇರಿ ಹೆಚ್ಚಿನ ಅನುದಾನ ಕೇಳಿ ತರುತ್ತಾರೆಂಬ ನಿರೀಕ್ಷೆಯಿತ್ತು, ಆದರೆ ಅನುದಾನ ನೀಡುವ ಬಗ್ಗೆ ಕೇಂದ್ರದ ಯಾವೊಬ್ಬ ಮಂತ್ರಿಯೂ ಈ ವರೆಗೆ ಮಾತನಾಡಿಲ್ಲ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರ ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡುವುದು ನಿಶ್ಚಿತ ಎಂದು ಹೇಳಿದ್ದಾರೆ.
ಮಾರ್ಚ್ 9ರಂದು ರಾಜ್ಯದಲ್ಲಿ ಒಂದೇ ಒಂದು ಕರೊನಾ ಪ್ರಕರಣವಿತ್ತು, ಇಂದು 5 ಲಕ್ಷಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ. ಆದರೂ ನಮ್ಮ ರಾಜ್ಯದ ಆರೋಗ್ಯ ಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವರು ಕರ್ನಾಟಕ ಬೇರೆಲ್ಲಾ ರಾಜ್ಯಗಳಿಗಿಂತ ಬೆಟರ್ ಅಂತಿದಾರೆ. ಅಂದ್ರೆ ಅವರು ಇದಕ್ಕಿಂತ ಕೆಟ್ಟ ಪರಿಸ್ಥಿತಿ ನಿರೀಕ್ಷಿಸಿದ್ದರು ಅಂತನಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.