Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಜೆಎನ್‌ಯು ಘಟನೆ ನಾಝಿವಾದದ ಆರಂಭಿಕ ಲಕ್ಷಣ!

ಜೆಎನ್‌ಯು ಘಟನೆ ನಾಝಿವಾದದ ಆರಂಭಿಕ ಲಕ್ಷಣ!
ಜೆಎನ್‌ಯು ಘಟನೆ ನಾಝಿವಾದದ ಆರಂಭಿಕ ಲಕ್ಷಣ!

January 9, 2020
Share on FacebookShare on Twitter

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ದಲ್ಲಿ ಸಂಘಪರಿವಾರದ ಮುಸುಕುಧಾರಿ ಗೂಂಡಾಗಳು ನಡೆಸಿದ ಹಿಂಸಾಕೃತ್ಯಗಳು ಕೇವಲ ಒಂದು ಬಿಡಿ ಘಟನೆ ಎಂದು ಭಾವಿಸಬೇಕಾಗಿಲ್ಲ. ಅದು ಇಡೀ ದೇಶವೇ ನಾಝಿವಾದದ ಕಡೆಗೆ ಸಾಗುತ್ತಿರುವುದರ ಪ್ರಮುಖ ಲಕ್ಷಣವೆಂದೇ ಭಾವಿಸಬೇಕಾಗುತ್ತದೆ. ಯಾಕೆಂದರೆ, ಇತಿಹಾಸದಲ್ಲಿ ಇದಕ್ಕೆ ಸಮಾನಾಂತರವಾದ ಘಟನೆಗಳನ್ನು ನಾವು ಸಾಕಷ್ಟು ನೋಡಬಹುದು. ದಿಲ್ಲಿಯಲ್ಲಿ ನಡೆದ ಘಟನೆಯ ವಿವರಗಳು ಎಲ್ಲರಿಗೂ ಗೊತ್ತಿರುವುದರಿಂದ ಆ ಘಟನೆ ಏನನ್ನು ಸೂಚಿಸುತ್ತದೆ ಎಂಬುದನ್ನು ಮಾತ್ರ ಇಲ್ಲಿ ಪರಿಶೀಲಿಸಲು ಯತ್ನಿಸಲಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?

ಯಾರಾದರೂ ಒಳಗೆ ಬಂದರೆ ಅಟ್ಟಾಡಿಸಿ ಹೊಡಿರಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ’ : ಸಚಿವ ಮುನಿರತ್ನ ವಿವಾದಾತ್ಮಕ ಹೇಳಿಕೆ

ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!

ಮೊದಲಿಗೆ ಜೆಎನ್‌ಯು ಕುರಿತು ಸ್ವಲ್ಪ ತಿಳಿದುಕೊಳ್ಳಬೇಕು. ದೇಶದಲ್ಲಿಯೇ ಅತ್ಯುತ್ಕೃಷ್ಟವಾದ ಶಿಕ್ಷಣ ಒದಗಿಸುವ ಸಂಸ್ಥೆಯಾದ ಜೆಡಿಯು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸಹಿತ ಲೆಕ್ಕವಿಲ್ಲದಷ್ಟು ಪರಿಣಿತರು, ಕಲಾವಿದರು, ಸಾಹಿತಿಗಳು, ಪತ್ರಕರ್ತರು, ರಾಜತಾಂತ್ರಿಕರು, ಲಿಬಿಯಾ, ನೇಪಾಳ ಸಹಿತ ಕೆಲವು ದೇಶಗಳ ಪ್ರಧಾನಿಗಳು, ರಾಜಕೀಯ ನಾಯಕರು, ಐಎಎಸ್, ಐಪಿಎಸ್ ಅಧಿಕಾರಿಗಳು…ಅಷ್ಟೇ ಏಕೆ; ಪ್ರಸ್ತುತ ಹಣಕಾಸು ಮಂತ್ರಿಯಾಗಿರುವ ನಿರ್ಮಲಾ ಸೀತಾರಾಮನ್ ಅವರಂತವರನ್ನೂ ನೀಡಿದೆ. ಇಲ್ಲಿ ಕಲಿತವರು ವಿಶ್ವದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಕಲಿಸುತ್ತಿದ್ದಾರೆ.

ಜೆಎನ್‌ಯು ಭಾರತವೇ ಯಾಕೆ; ಇಡೀ ವಿಶ್ವದ ಪ್ರತಿಫಲನವಾಗಿರುವುದಕ್ಕಾಗಿಯೇ ತನ್ನ ಖ್ಯಾತಿಯನ್ನು ಪಡೆದುಕೊಂಡಿದೆ. ಇಲ್ಲಿರುವಷ್ಟು ವಿದ್ಯಾರ್ಥಿ ವೈವಿಧ್ಯ ಬೇರೆ ಯಾವುದೇ ವಿಶ್ವವಿದ್ಯಾಲಯದಲ್ಲಿ ಕಂಡುಬರಲಾರದು. ಭಾರತದ ಮೂಲೆ ಮೂಲೆಗಳ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಬಡವರು-ಶ್ರೀಮಂತ ಕುಟುಂಬದಿಂದ ಬಂದವರು, ನಗರ ಮತ್ತು ಗ್ರಾಮೀಣ ಹಿನ್ನೆಲೆಯವರು, ಜಾತಿ-ಧರ್ಮ ಭೇದದ ರೋಗದಿಂದ ಬಳಲುತ್ತಿರುವ ಈ ದೇಶದ ಪ್ರತಿಯೊಂದು ಜಾತಿ-ಧರ್ಮ-ಬುಡಕಟ್ಟುಗಳಿಂದ ಬಂದವರು ಇಲ್ಲಿ ಜೊತೆಯಾಗಿ ಬದುಕುತ್ತಿದ್ದಾರೆ ಮತ್ತು ಕಲಿಯುತ್ತಿದ್ದಾರೆ. ಆದುದರಿಂದಲೇ ಇದೊಂದು ಮಿನಿ ಭಾರತ ಎನಿಸಿಕೊಂಡಿದೆ. ಆ ಕಾರಣಕ್ಕಾಗಿಯೇ ಈ ವಿಶ್ವವಿದ್ಯಾಲಯ ಎಲ್ಲರ ಗಮನ ಸೆಳೆಯುತ್ತಿದೆ-ಗೂಂಡಾ ರಾಜಕಾರಣಿಗಳ ಸಹಿತ! ಈ ವಿಶ್ವವಿದ್ಯಾಲಯವು ದಲಿತ, ಅಲ್ಪಸಂಖ್ಯಾತಾದಿ ಶೋಷಿತರ ಮಕ್ಕಳಿಗೆ ಅವಕಾಶ ನೀಡುತ್ತಾ ಬಂದಿರುವುದರಿಂದಲೇ ಸ್ಥಾಪಿತ ಹಿತಾಸಕ್ತಿಗಳ ಕೆಂಗಣ್ಣಿಗೆ ಗುರಿಯಾಗುತ್ತಾ ಬಂದಿದೆ.

ಈಗ ಇರುವ ಒಂದೇ ಪ್ರಶ್ನೆ ಎಂದರೆ, ಮೋದಿ ಸರಕಾರವು ಯಾಕೆ ಈ ಮಕ್ಕಳನ್ನು ಗುರಿ ಮಾಡಿದೆ? ಯಾಕೆ ಏನೂ ಗೊತ್ತಿಲ್ಲದವರಂತೆ ಆಡಳಿತಗಾರರು ವರ್ತಿಸುತ್ತಿದ್ದಾರೆ? ಕಾರಣ ಸರಳವಾಗಿದೆ. ಅವರು ಜೆಎನ್‌ಯುವನ್ನು ಗುರಿ ಮಾಡುತ್ತಿಲ್ಲ; ಹಲವಾರು ಚಿಂತನೆಗಳನ್ನು ಹುಟ್ಟುಹಾಕಿದ ಒಂದು ಮಹಾ ಅಕ್ಷರಶಾಲೆಯನ್ನು ಕಸಾಯಿಖಾನೆ ಮಾಡುತ್ತಿಲ್ಲ! ಇಡೀ ದೇಶವನ್ನೇ ಖಸಾಯಿಖಾನೆ ಮಾಡಲು ಹೊರಟವರು ಇವರು.

ನಿಜವಾಗಿಯೂ ನೋಡಿದರೆ, ಯುವಜನರು ಕಲಿಯುವ ಪ್ರತಿಯೊಂದು ವಿದ್ಯಾಲಯದಲ್ಲಿ, ವಿಷ ಬೀಜ ಬಿತ್ತುವ ಯೋಜಿತ ವಿದ್ಯಾಲಯಗಳಲ್ಲಿ ಇವರು ಮಾಡುತ್ತಿರುವ ವ್ಯವಹಾರವಿದು! ಇವರು ಚಿಕ್ಕ ಶಾಲೆಗಳನ್ನೂ ಬಿಟ್ಟಿಲ್ಲ! ಮಕ್ಕಳ ಕೈಗೆ ಲಾಠಿ ಕೊಟ್ಟು ತಮ್ಮ ಗೋವು ಮೇಯಿಸಿ, ಹಾಲು, ಮೊಸರು, ತುಪ್ಪ ತಿನ್ನುವವರ ವ್ಯವಹಾರವಿದು. ಒಂದು ಪೂಜಾಸ್ಥಳದ ಕೇಸು ಹಲವಾರು ವರ್ಷಗಳ ಕಾಲ ಕೋರ್ಟಿನಲ್ಲಿದ್ದು, ಏನೂ ತೀರ್ಮಾನವಿಲ್ಲದೇ ಕೊನೆಗೆ ಪರವಾದ ತೀರ್ಪು ಬಂದರೂ, ತಾವು ನಡೆಸುವ ಶಾಲೆಯಲ್ಲಿ ಮಕ್ಕಳಿಂದ ಆ ಪೂಜಾಸ್ಥಳವನ್ನೇ ಕೆಡವಿಸುವ ನಾಟಕವನ್ನು ಪೊಲೀಸ್ ಅಧಿಕಾರಿಗಳ ಎದುರೇ ಮಾಡಿದ ವಿಷಜೀವಿಗಳು ನಾಝೀವಾದದ ಗುರುತುಗಳು!

ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಗಳನ್ನು ಈ ಹಿನ್ನೆಲೆಯಲ್ಲಿಯೇ ನೋಡಬೇಕು. ಒಂದು ಧರ್ಮದ ಹೆಸರಿನಲ್ಲಿ ಅಧಿಕಾರ ಹಿಡಿದಿರುವ ಕೆಲವೇ ವರ್ಗಗಳು ಒಬ್ಬರನ್ನೊಬ್ಬರು ಹೊಡೆದಾಡಿಸಿ, ತಮ್ಮ ಆಡಳಿತವನ್ನು ಖಾಯಂಗೊಳಿಸುವ ತಂತ್ರವನ್ನು ಗಮನಿಸಬೇಕು. ಒಂದು ನಾಯಕತ್ವ ದ್ವೇಷದ ಬೀಜಗಳನ್ನು ಬಿತ್ತುತ್ತಿರುವಾಗ, ಹಿಂಬಾಲಕರಿಗೆ ಯಾವ ಸಂದೇಶ ಕೊಟ್ಟಂತಾಗುತ್ತದೆ?

ಸರಿ, ಜೆಎನ್‌ಯುವನ್ನು ನೋಡಿದಾಗ ಯಾವ ಚಿತ್ರಗಳು ಕಣ್ಣಮುಂದೆ ಬರುತ್ತವೆ ನೋಡೋಣ. ಭಾರತದಲ್ಲಿ ಸರ್ವಾಧಿಕಾರ ಎಂದಾಗ ನೆನಪಾಗುವುದು ಇಂದಿರಾಗಾಂಧಿಯವರು ತಂದ ತುರ್ತುಪರಿಸ್ಥಿತಿ ಅಥವಾ ಎಮರ್ಜೆನ್ಸಿ. ಪ್ರಧಾನಿಯಾಗಿದ್ದ ಅವರನ್ನೇ ಎದುರು ನಿಲ್ಲಿಸಿ, ವಿದ್ಯಾರ್ಥಿಗಳು ತಮ್ಮ ಅಹವಾಲನ್ನು ಸಲ್ಲಿಸಿದ್ದರು. ಅವರು ಒಂದೂ ಮಾತನಾಡದೆ ಅದನ್ನು ಆಲಿಸಿದ್ದರು. ಲಾಠಿ ಚಾರ್ಜ್ ಮಾಡಿಸಿರಲಿಲ್ಲ! ಗೂಂಡಾಗಿರಿ ನಡೆಸಿರಲಿಲ್ಲ. ಆಗ ವಿದ್ಯಾರ್ಥಿ ನಾಯಕರಾಗಿದ್ದವರು ಇಂದಿರಾಗಾಂಧಿಯವರ ಮೇಲೆ ಪ್ರಭಾವ ಬೀರಿದ್ದರು. ಆಶ್ಚರ್ಯ ಎನಿಸಬಹುದು- ಆಗ ವಿದ್ಯಾರ್ಥಿ ನಾಯಕರಾಗಿದ್ದವರು ಇಂದು ಎಡಪಕ್ಷಗಳ ನಾಯಕ ಸೀತಾರಾಮ ಯೆಚೂರಿಯವರು. ಇಂದಿರಾಗಾಂಧಿಯವರು 45 ದಿನಗಳ ಕಾಲ ಈ ವಿಶ್ವವಿದ್ಯಾಲಯವನ್ನು ಮುಚ್ಚಿಸಿದ್ದರು. ಆದರೆ, ಕೊನೆಗೂ ಅವರು ತುರ್ತುಪರಿಸ್ಥಿತಿ ಹಿಂತೆಗೆದುಕೊಂಡದ್ದು ಈ ವಿದ್ಯಾರ್ಥಿಗಳ ಒತ್ತಡದಿಂದಲೇ! ಅಂದು ಬಿಜೆಪಿಯ ಮಾತೃಪಕ್ಷ ಜನಸಂಘ ಮತ್ತು ಇದೇ ಎಡಪಂಥೀಯ ವಿದ್ಯಾರ್ಥಿಗಳು ಜೊತೆಗೆಯೇ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸಿದ್ದರು. ಜೆಎನ್‌ಯು ಹಿಂದಿನಿಂದಲೂ ಎಡ ಮತ್ತು ಮಧ್ಯಮ ಪಂಥೀಯರ ಪ್ರಭಾವದಲ್ಲಿದುದು ನಿಜ.

ಇಂದು ಎಡಪಂಥೀಯರಿಂದ ಮುಕ್ತಿ ಎಂಬ ಹೆಸರಿನಲ್ಲಿ ಜೆಎನ್‌ಯು ಮೇಲೆ ಬಲಪಂಥೀಯ ಎಬಿವಿಪಿ ಜೆಎನ್‌ಯು ಕ್ಯಾಂಪಸ್ ಒಳಗೆ ಮುಸುಕುಹಾಕಿ, ಮುಖ ಮುಚ್ಚಿಕೊಂಡು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆಯೇ ಹಲ್ಲೆ ನಡೆಸಿದೆ. ಇಂದು ಆ ಚಿತ್ರ ವಿದ್ಯಾರ್ಥಿ ನಾಯಕಿ ಐಶಿ ಘೋಷ್ ತಲೆ ಒಡೆಸಿಕೊಂಡು ರಕ್ತ ಇಳಿಸುತ್ತಿರುವ ಚಿತ್ರ ಕಣ್ಣಮುಂದೆ ಬರುತ್ತದೆ. ಲಾಠಿ, ಕಬ್ಬಿಣದ ರಾಡ್ ಇತ್ಯಾದಿ ಹಿಡಿದುಕೊಂಡು ಯಾವ ಭಯವೇ ಇಲ್ಲದೆ, ಒಂದು ಸ್ವಾಯತ್ತ ಕ್ಯಾಂಪಸಿನ ಒಳಗೆ ಯೋಜಿತ ರೀತಿಯಲ್ಲಿ ನುಗ್ಗಿ ಓಡಾಡುತ್ತಾ, ಕಂಡಕಂಡವರ ಮೇಲೆ ಹಲ್ಲೆ ನಡೆಸುತ್ತಿರುವ ಚಿತ್ರಗಳು ಕಾಣುತ್ತಿವೆ. ರಕ್ಷಣೆ ಒದಗಿಸಬೇಕಾದ ಪೊಲೀಸರೇ ದಾಳಿಕೋರರನ್ನು ಬೆಂಬಲಿಸುವ, ಸ್ವತಃ ದಾಳಿಕೋರರಾಗುವ ಚಿತ್ರಗಳೂ ಕಾಣುತ್ತಿವೆ. 40ಕ್ಕೂ ಹೆಚ್ಚು ಮಕ್ಕಳು, ಶಿಕ್ಷಕರು ಆಸ್ಪತ್ರೆ ಸೇರಿದರಲ್ಲ? ಯಾಕೆ ಹೀಗಾಗುತ್ತಿದೆ?

ಇದೊಂದು ಯೋಜಿತ ಕೃತ್ಯ ಎಂಬುದು ಎಬಿವಿಪಿಯ ಒಂದು ಗುಂಪು ತಾತ್ಕಾಲಿಕವಾಗಿ ಕಟ್ಟಿ ಘಟನೆ ನಡೆದ ಕೂಡಲೇ ಮುಗಿಸಿಬಿಟ್ಟ ವಾಟ್ಸಾಪ್ ಗ್ರೂಪ್‌ನಲ್ಲಿ ನಡೆದ ಪ್ರಚೋದನಕಾರಿ ಸಂಭಾಷಣೆಗಳಿಂದಲೇ ಸಾಬೀತಾಗುತ್ತದೆ. ಆದರೂ, ಪೊಲೀಸರು, ಒಬ್ಬರೇ ಒಬ್ಬರು ದಾಳಿಕೋರರನ್ನು ಬಂಧಿಸಿಲ್ಲ. ಆದರೆ, ಗಾಯಗೊಂಡ ವಿದ್ಯಾರ್ಥಿಗಳ ಮೇಲೆಯೇ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಯಾಕೆ ಹೀಗೆ? ಇದೊಂದು ಸರಕಾರಿ ಪ್ರಾಯೋಜಿತ ಕೃತ್ಯ ಎಂಬುದು ಇದರಿಂದಲೇ ಸಾಬೀತಾಗುವುದಿಲ್ಲವೆ?

ಏನೇ ಇರಲಿ. ಮಕ್ಕಳು ತಪ್ಪು ಮಾಡಿದ್ದಾರೆ ಎಂದೇ ಹೇಳೋಣ. ಅವರನ್ನು ಕರೆಸಿ ಮಾತನಾಡಿ ಬುದ್ಧಿ ಹೇಳುವ ವಿವೇಕವಾದರೂ ಸರಕಾರಕ್ಕೆ ಇದೆಯೇ? “ದನಕ್ಕೆ ಹೊಡೆದಂತೆ” ಜನಕ್ಕೆ ಹೊಡೆಯುವ ಪೊಲೀಸರು ಮತ್ತು ಗೂಂಡಾಗಳ ಕೃತ್ಯದಿಂದಲೇ ಇದು ಸಾಬೀತಾಗಿದೆ. ಪೋಲೀಸರ ಕರ್ತವ್ಯ ಏನು? ಹಿಂಸಾನಿರತರನ್ನು ವಿವೇಕದಿಂದ ಚದರಿಸುವುದು. ಮಾನವೀಯತೆ ಮರೆತಂತೆ ಹೊಡೆಯಬೇಕು, ಗುಂಡು ಹಾರಿಸಬೇಕು, ಆಕ್ರಮಣಕಾರಿ ಬ್ರಿಟಿಷರಂತೆ ದಮನಿಸಬೇಕು ಎಂದು ಯಾವ ಕಾನೂನು ಹೇಳಿದೆ? ಯಾವ ಸಂವಿಧಾನ ಹೇಳಿದೆ? ಮುಖ್ಯ ಪ್ರಶ್ನೆಗಳು ಇವೇ ಆಗಿವೆ. ಉತ್ತರ ಒಂದೇ ಎಂದರೆ, ಸಂವಿಧಾನ, ಕಾನೂನುಗಳ ಮೇಲೆ ಗೌರವ ಇಲ್ಲದ, ಅದನ್ನು ಬದಲಿಸಹೊರಟವರ ಯೋಚಿತ ಕೃತ್ಯವಿದು. ಇದು ಮುಂದೆ ಸರಕಾರವನ್ನು ವಿರೋಧಿಸುವ ಎಲ್ಲಾ ಪ್ರಜೆಗಳನ್ನು ಆವರಿಸಬಹುದು. ನಮ್ಮದೇ ಭಾರತೀಯ ಪೊಲೀಸ್, ಸೇನೆ ಇತ್ಯಾದಿಗಳು ನಮ್ಮದೇ ದೇಶದ ಜನರನ್ನು, ಅದರಲ್ಲೂ ಮಕ್ಕಳನ್ನು ದಮನಿಸುವಂತೆ ನಾವೇ ಆರಿಸಿದ ಪ್ರಭುತ್ವವು ಒತ್ತಡ ಹೇರಬಹುದು.

ಇದು ಜೆಎನ್‌ಯು ಘಟನೆ ಮಾತ್ರವಲ್ಲ; ಕ್ರಿಮಿನಲ್‌ಗಳನ್ನು ಪ್ರಚೋದಿಸಿ, ಬೆಂಬಲಿಸಿ, ರಕ್ಷಿಸಿ, ಸನ್ಮಾನಿಸುವ ಕೆಲಸವನ್ನು ಪ್ರಭುತ್ವವು ಹಲವಾರು ಪ್ರಕರಣಗಳಲ್ಲಿ ಮಾಡಿರುವುದನ್ನು ನಾವು ನೋಡಬಹುದು. ಅವು ಲಿಂಚಿಂಗ್, ರೇಪ್, ಗೋಲಿಬಾರ್, ಪೊಲೀಸ್ ವೇಷದ ದಾಳಿ ಇತ್ಯಾದಿಗಳಾಗಿ ನಮ್ಮ ಕಣ್ಣಮುಂದೆಯೇ ನಡೆದಿವೆ. ವಿರೋಧಿಗಳ ಬಾಯಿಮುಚ್ಚಿಸುವ ಹಲವಾರು ತಂತ್ರಗಳನ್ನು ನಾಝಿಸಂ ಮತ್ತು ಫ್ಯಾಸಿಸಂ ಬಳಸಿದೆ. ಇಟಲಿಯ ಸರ್ವಾಧಿಕಾರಿ ಮುಸ್ಸೋಲಿನಿಯ ಬ್ಲ್ಯಾಕ್ ಶರ್ಟ್ಸ್ ಮತ್ತು ಜರ್ಮನಿಯ ಸರ್ವಾಧಿಕಾರಿ ಹಿಟ್ಲರನ ಬ್ರೌನ್ ಶರ್ಟ್ಸ್ ಎಂಬ ತರಬೇತಿ ಹೊಂದಿದ, ತಲೆ ತೊಳೆಯಲಾದ ಯುವಜನರ ಗೂಂಡಾ ಪಡೆಗಳ ಕೃತ್ಯಗಳಿಗೂ, ವಿದ್ಯಾರ್ಥಿಗಳ ಮೇಲೆ ಮುಸುಕುಧಾರಿಗಳ ಕೃತ್ಯಗಳಿಗೂ ಯಾವ ವ್ಯತ್ಯಾಸವೂ ಇಲ್ಲ! ಸಂಶಯ ಇದ್ದವರು ಇನ್ನೊಮ್ಮೆ ಇತಿಹಾಸ ಓದಿನೋಡಬಹುದು.

ಆದರೆ, ತಿರುಚಿದ ಇತಿಹಾಸವನ್ನಲ್ಲ. ಇತಿಹಾಸ ತಿರುಚುವುದು ಕೂಡಾ ಸರ್ವಾಧಿಕಾರಿ ಲಕ್ಷಣಗಳಲ್ಲಿ ಒಂದು! ಆದರೆ, ಇತಿಹಾಸ ಇನ್ನೊಂದು ವಿಷಯವನ್ನು ಕಲಿಸಿಕೊಟ್ಟಿದೆ. ಅದೆಂದರೆ, ವಿದ್ಯಾರ್ಥಿಗಳನ್ನು ಕೆಣಕಿದ ಯಾವ ಪ್ರಭುತ್ವವೂ ಬಹುಕಾಲ ಬದುಕಿ ಉಳಿದಿಲ್ಲ. ಒಂದು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನೊಳಗೆ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಲಾರದ ಗೃಹಮಂತ್ರಿ, ದೇಶದ ಪ್ರಜೆಗಳಿಗೆ ಹೇಗೆ ರಕ್ಷಣೆ ನೀಡಬಲ್ಲ? ಇದು ದೇಶದ ಮುಂದಿರುವ ಪ್ರಶ್ನೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಅಪ್ಪ ಧ್ರುವನಾರಾಯಣ್ ಫೋಟೋ ಮುಂದೆ ದರ್ಶನ್ ಕಣ್ಣೀರು | DHRUVA NARAYAN | SIDDARAMAIAH | DARSHAN |
ಇದೀಗ

ಅಪ್ಪ ಧ್ರುವನಾರಾಯಣ್ ಫೋಟೋ ಮುಂದೆ ದರ್ಶನ್ ಕಣ್ಣೀರು | DHRUVA NARAYAN | SIDDARAMAIAH | DARSHAN |

by ಪ್ರತಿಧ್ವನಿ
March 29, 2023
ದೊಡ್ಡಬಳ್ಳಾಪುರದ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಒಲಿಯುತ್ತದೆ ವಿಜಯಲಕ್ಷ್ಮಿ | PART 5 | #PRATIDHVANI
ಇದೀಗ

ದೊಡ್ಡಬಳ್ಳಾಪುರದ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಒಲಿಯುತ್ತದೆ ವಿಜಯಲಕ್ಷ್ಮಿ | PART 5 | #PRATIDHVANI

by ಪ್ರತಿಧ್ವನಿ
March 27, 2023
ಯಾರೇ ಹಣ ಕೊಟ್ರು ತಗೋರಿ ಆದ್ರೆ.. ವೋಟ್‌ ಮಾತ್ರ ಎಎಪಿ ಹಾಕಿ : ನಟ ಟೆನ್ನಿಸ್‌ ಕೃಷ್ಣ
Top Story

ಯಾರೇ ಹಣ ಕೊಟ್ರು ತಗೋರಿ ಆದ್ರೆ.. ವೋಟ್‌ ಮಾತ್ರ ಎಎಪಿ ಹಾಕಿ : ನಟ ಟೆನ್ನಿಸ್‌ ಕೃಷ್ಣ

by ಪ್ರತಿಧ್ವನಿ
March 28, 2023
ಭಾಗ-2: ಭಾರತದ ಬಹುತ್ವವನ್ನು ಗೌರವಿಸದ ಕೈಗಳಲ್ಲಿ ದೇಶದ ಆಡಳಿತ
ಅಂಕಣ

ಭಾಗ-2: ಭಾರತದ ಬಹುತ್ವವನ್ನು ಗೌರವಿಸದ ಕೈಗಳಲ್ಲಿ ದೇಶದ ಆಡಳಿತ

by ಡಾ | ಜೆ.ಎಸ್ ಪಾಟೀಲ
March 27, 2023
ವಿಧಾನಸಭಾ ಚುನಾವಣೆ ಹಿನ್ನೆಲೆ : ಮೂವರ ವಿರುದ್ಧ ಗೂಂಡಾ ಕಾಯ್ದೆ , 11 ಜನರ ಗಡಿಪಾರಿಗೆ ಶಿಫಾರಸ್ಸು
Top Story

ವಿಧಾನಸಭಾ ಚುನಾವಣೆ ಹಿನ್ನೆಲೆ : ಮೂವರ ವಿರುದ್ಧ ಗೂಂಡಾ ಕಾಯ್ದೆ , 11 ಜನರ ಗಡಿಪಾರಿಗೆ ಶಿಫಾರಸ್ಸು

by ಪ್ರತಿಧ್ವನಿ
March 31, 2023
Next Post
ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಂಡ ದೆಹಲಿ ಪೊಲೀಸರು!

ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಂಡ ದೆಹಲಿ ಪೊಲೀಸರು!

ತೀರಾ ಹಸಿದವನಿಗೆ ಒಂದಗಳು ಅನ್ನವಾಗುತ್ತಿದೆ ಪ್ರಕೃತಿ ವಿಕೋಪ ಪರಿಹಾರ

ತೀರಾ ಹಸಿದವನಿಗೆ ಒಂದಗಳು ಅನ್ನವಾಗುತ್ತಿದೆ ಪ್ರಕೃತಿ ವಿಕೋಪ ಪರಿಹಾರ

ಸಿಎಎ ವಿರೋಧಿಸಿದ ವಿಜ್ಞಾನಿಗಳ ಮೇಲೆ ಸರ್ಕಾರದ ಹದ್ದಿನ ಕಣ್ಣು!

ಸಿಎಎ ವಿರೋಧಿಸಿದ ವಿಜ್ಞಾನಿಗಳ ಮೇಲೆ ಸರ್ಕಾರದ ಹದ್ದಿನ ಕಣ್ಣು!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist