ಈಗಾಗಲೇ ಬೇಸಿಗೆ ಆರಂಭವಾಗಿದ್ದು ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿಯ ನಡುವೆ ಈಗ ಬಂದಿರೋ ಬೇಸಿಗೆ ಜನರನ್ನ ಹೈರಾಣಾಗಿಸಿಬಿಟ್ಟಿದೆ. ಕುಡಿಯುವ ನೀರಿಗೂ ರಾಜ್ಯದಲ್ಲಿ ತತ್ವಾರ ಎದುರಾಗಿದೆ. ಇದು ಕೇವಲ ಕುಗ್ರಾಮಗಳಿಗೆ ಸೀಮಿತವಾಗಿಲ್ಲ. ರಾಜಧಾನಿ ಬೆಂಗಳೂರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಳೆದ ಎರಡು ತಿಂಗಳಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದು ಈಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಇದೀಗ ಕೇವಲ ಕುಡಿಯುವ ನೀರಷ್ಟೇ ಅಲ್ಲ .. ಗೃಹಬಳಕೆಗೂ ನೀರಿಲ್ಲದೆ ಅಕ್ಷರಶಃ ಬೆಂಗಳೂರಿನ ಹಲವು ಭಾಗದ ಜನ ಹೈರಾಣಾಗಿದ್ದಾರೆ. ನಿತ್ಯಕರ್ಮ , ಸ್ನಾನ, ಇತರೆ ಯಾವುದೇ ಸೌಕರ್ಯಕ್ಕೂ ನೀರಿಲ್ಲಿದೆ ಪರಿತಪಿಸುವಂತಾಗಿದೆ. ಹೀಗಾಗಿ ಜನ ಈಗ ಮಾಲ್ ಮತ್ತು ಜಿಮ್ ಗೆ ಲಗ್ಗೆ ಇಡ್ತಿದ್ದಾರೆ.
ಹೌದು , ಜಿಮ್ ಮತ್ತು ಮಾಲ್ ಮಾಲೀಕರಿಗೆ ಈಗ ಹೊಸ ತಲೆಬಿಸಿ ಶುರುವಾಗಿದೆ. ಜಿಮ್ ಗಳಿಗೆ ಬರುವ ಜನ ಟವೆಲ್ ಗಳ ಸಮೇತ ಬರುತ್ತಿದ್ದರಂತೆ. ವರ್ಕೌಟ್ ಮುಗಿಸಿ ಅಲ್ಲೇ ಸ್ನಾನ ಮಾಡಿಕೊಂಡು ಮನೆ ಸೇರಿಕೊಳ್ತಿದಾರೆ , ಯಾಕಂದ್ರೆ ಮನೆಯಲ್ಲಿ ಸ್ನಾನ ಮಾಡೋದಕ್ಕೆ ನೀರಿಲ್ಲ ಅಂತ . ಮತ್ತೊಂದ್ಕಡೆ ಅಪಾರ್ಟ್ಮೆಂಟ್ ನಿವಾಸಿಗಳು ವಾಶ್ ರೂಮ್ ಬಳಸಲು ಮಾಲ್ ಗಳ ಮೊರೆ ಹೋಗ್ತಿದ್ದಾರೆ ಅನ್ನೋದನ್ನ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಬೆಂಗಳೂರಿಗೆ ಹಿಂದೆಂದೂ ಇಂಥ ಹೀನ ಪರಿಸ್ಥಿತಿ ಬಂದಿರಲಿಲ್ವೇನೋ ! ಬೇಸಿಗೆ ಆರಂಭದಲ್ಲೇ ಹೀಗಾದ್ರೆ ಇನ್ನು 3 ತಿಂಗಳು ನೀರಿಲ್ಲದೆ ಬಿರು ಬೇಸಿಗೆಯನ್ನು ನಿಭಾಯಿಸೋದಾದ್ರೂ ಹೇಗೆ ಅನ್ನೋದೆ ಜನರ ಚಿಂತೆಯಾಗಿದೆ.