ಶಿಕ್ಷಣದಲ್ಲಿ ಯಾವಾಗ ರಾಜಕೀಯ ಲೇಪ ಹಚ್ಚಲಾಗುತ್ತದೋ, ಪ್ರತಿಷ್ಠೆ ಮೇಳೈಸುತ್ತದೋ ಅಲ್ಲಿನ ಶಿಕ್ಷಣ ವ್ಯವಸ್ಥೆಯೇ ಅವಸಾನದ ಅಂಚಿಗೆ ಬಂದು ನಿಲ್ಲುತ್ತದೆ. ವಿದ್ಯಾರ್ಥಿಗಳ ಹಿತವನ್ನು ಕಾಪಾಡದ ಶಿಕ್ಷಣ ಸಂಸ್ಥೆ ಅದು ಶಿಕ್ಷಣ ಸಂಸ್ಥೆಯೇ ಆಗಿರುವುದಿಲ್ಲ. ಬದಲಿಗೆ ವ್ಯವಹಾರದ ತಾಣವಾಗಿರುತ್ತದೆ. ಇಂತಹದ್ದೊಂದು ಪರಿಸ್ಥಿತಿ ಇದೀಗ ದೇಶದ ಅತ್ಯಂತ ಹಳೆಯ ಮತ್ತು ಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಬಂದೊದಗಿದೆ.
ಇಲ್ಲಿ ರಾಜಕೀಯ ಎಂಬುದು ಹಾಸು ಹೊಕ್ಕಾಗಿ ತಾಂಡವವಾಡುತ್ತಿದೆ. ಆಡಳಿತ ಮಂಡಳಿ ದೇಶವನ್ನಾಳುವ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದೆ. ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ಬಿಜೆಪಿಯೇತರ ಪಕ್ಷಗಳ ಬೆಂಬಲಿತ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆಂಬ ಏಕೈಕ ಕಾರಣದಿಂದ ವಿದ್ಯಾರ್ಥಿಗಳನ್ನು ಶೋಷಣೆ ಮಾಡಲಾಗುತ್ತಿದೆ.
ಇಷ್ಟೇ ಅಲ್ಲ. ಪರೀಕ್ಷೆಗಳನ್ನು ಬರೆಯದಿದ್ದರೆ ವಿದ್ಯಾರ್ಥಿ ಸದಸ್ಯತ್ವವನ್ನೇ ರದ್ದು ಮಾಡುವುದಾಗಿ ಆಡಳಿತ ಮಂಡಳಿ ವಿದ್ಯಾರ್ಥಿ ಸಮೂಹಕ್ಕೆ ಬೆದರಿಕೆ ಹಾಕಿದೆ.
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವೆಂದರೆ (ಜೆಎನ್ ಯು) ಅಲ್ಲಿ ಹಿಂದುಳಿದವರು, ತುಳಿತಕ್ಕೆ ಒಳಗಾದವರು, ಆರ್ಥಿಕವಾಗಿ ದುರ್ಬಲರಾದ ಕುಟುಂಬಗಳ ಮಕ್ಕಳು ಅತ್ಯಂತ ಕಡಿಮೆ ಖರ್ಚಿನಲ್ಲಿ ಉನ್ನತ ವ್ಯಾಸಂಗ ಮಾಡುವ ವಿವಿ ಎಂದೇ ಖ್ಯಾತವಾಗಿತ್ತು.
ಆದರೆ, ಇದ್ದಕ್ಕಿದ್ದಂತೆ ಹಾಸ್ಟೆಲ್ ಶುಲ್ಕವನ್ನು ಹೆಚ್ಚಳ ಮಾಡಿ ಈ ಬಡ ವಿದ್ಯಾರ್ಥಿಗಳ ಮೇಲೆ ಬರೆ ಎಳೆಯಲಾಗುತ್ತಿದೆ. ಈ ಉದ್ದೇಶಿತ ಶುಲ್ಕ ಹೆಚ್ಚಳ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಸಾವಿರಾರು ವಿದ್ಯಾರ್ಥಿಗಳು ವಿವಿ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಕಳೆದ ಒಂದು ತಿಂಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರೂ ಆಡಳಿತ ಮಂಡಳಿ ಇದಕ್ಕೆ ಸೊಪ್ಪು ಹಾಕುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ವಿದ್ಯಾರ್ಥಿ ಸಂಘವು ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಬೆಂಬಲಿತವಾಗಿಲ್ಲ. ಒಂದು ವೇಳೆ ಬಿಜೆಪಿಯ ಪಕಳೆಯಾಗಿರುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿಗೆ ಸೇರಿದ ವಿದ್ಯಾರ್ಥಿಗಳು ಪದಾಧಿಕಾರಿಗಳಾಗಿದ್ದರೆ, ಶುಲ್ಕ ಹೆಚ್ಚಳದ ನಿರ್ಧಾರವನ್ನೇ ತೆಗೆದುಕೊಳ್ಳದೇ ಇರುತ್ತಿತ್ತು,
ಶುಲ್ಕವನ್ನು ಹೆಚ್ಚಳ ಮಾಡಿರುವ ವಿವಿಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಸಂಘವು ಡಿಸೆಂಬರ್ 12 ರಿಂದ ಆರಂಭವಾಗುವ ಸೆಮಿಸ್ಟರ್ ಪರೀಕ್ಷೆಯನ್ನೇ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಆದರೆ, ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಆಡಳಿತ ಮಂಡಳಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಬಗ್ಗುವುದಿಲ್ಲ ಎಂಬ ನಿಲುವು ತಳೆದಿದೆ. ಇದಲ್ಲದೇ, ವಿದ್ಯಾರ್ಥಿ ಸಂಘ ಪರೀಕ್ಷೆಗಳ ಬಹಿಷ್ಕಾರಕ್ಕೆ ಕರೆ ನೀಡಿರುವುದನ್ನೂ ವಿವಿ ಆಡಳಿತ ಮಂಡಳಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.
ವಿದ್ಯಾರ್ಥಿ ಸಂಘದೊಂದಿಗೆ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ವಿದ್ಯಾರ್ಥಿ ಸಮುದಾಯಕ್ಕೆ ಬೆದರಿಕೆ ಹಾಕಲು ಆರಂಭಿಸಿದೆ. ಈ ವರ್ಷದ ಶೈಕ್ಷಣಿಕ ಪಠ್ಯ ಚಟುವಟಿಕೆಗಳು ನಿಗದಿಯಂತೆ ಪೂರ್ಣಗೊಳ್ಳಬೇಕು ಮತ್ತು ಪರೀಕ್ಷೆಗಳೂ ನಿಗದಿಯಂತೆ ನಡೆಸಬೇಕೆಂದು ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮುಷ್ಕರವನ್ನು ಕೈಬಿಟ್ಟು ವ್ಯಾಸಂಗದ ಕಡೆಗೆ ಗಮನಹರಿಸಬೇಕೆಂದು ಸುತ್ತೋಲೆಯನ್ನು ಹೊರಡಿಸಿದೆ ಆಡಳಿತ ಮಂಡಳಿ.
ಸುತ್ತೋಲೆ ಇಷ್ಟಕ್ಕೇ ಸೀಮಿತವಾಗಿದ್ದರೆ ಯಾವುದೇ ತೊಂದರೆ ಇರುತ್ತಿರಲಿಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿದಂತಿದೆ. ಇನ್ನೂ ಮುಂದುವರಿದು ಡಿಸೆಂಬರ್ 12 ರಂದು ಆರಂಭವಾಗಲಿರುವ ಸೆಮಿಸ್ಟರ್ ಪರೀಕ್ಷೆಗಳಿಗೆ ಹಾಜರಾಗದಿದ್ದರೆ ಸ್ಟೂಡೆಂಟ್ ಶಿಪ್ ಅನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂಬ ಬೆದರಿಕೆಯನ್ನೂ ಹಾಕಿದೆ.
ಈ ಪರೀಕ್ಷೆಗಳಿಗೆ ಹಾಜರಾಗದ ವಿದ್ಯಾರ್ಥಿಗಳು ಮುಂದಿನ ಸೆಮಿಸ್ಟರ್ ಗೆ ಪ್ರವೇಶ ಪಡೆಯಲು ಅನರ್ಹರಾಗಲಿದ್ದಾರೆ. ಇಷ್ಟೇ ಅಲ್ಲ, ವ್ಯಾಸಂಗ ಪ್ರಮಾಣ ಪತ್ರವನ್ನೂ ಪಡೆಯಲು ಅನರ್ಹರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿರುವುದು ಈಗ ವಿದ್ಯಾರ್ಥಿ ಸಮುದಾಯವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಒಂದು ಕಡೆ ಹಾಸ್ಟೆಲ್ ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಉದ್ದೇಶಿತ ದುಬಾರಿ ಶುಲ್ಕದ ವಿರುದ್ಧ ಹೋರಾಟವನ್ನು ಮುಂದುವರಿಸಬೇಕೇ ಅಥವಾ ಮುಂದಿನ ಶೈಕ್ಷಣಿಕ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕೇ ಎಂಬ ಗೊಂದಲದಲ್ಲಿ ಬಿದ್ದಿದ್ದಾರೆ.
ಆದರೆ, ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿ ಸಂಘ ಜಿದ್ದಾಜಿದ್ದಿಗೆ ಬಿದ್ದು ಈ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.