ಹದಿನೈದು ವರ್ಷಗಳ ಹಿಂದೆ, ಕಾಡು ಇಷ್ಟೊಂದು ಒತ್ತುವರಿಯಾಗಿರಲಿಲ್ಲ. ಸಾಗರದ ಅಂಬ್ಲಿಗೋಳ ಜಲಾಶಯದ ಅಂಚಿನ ರಿಸರ್ವ್ ಫಾರೆಸ್ಟ್ ಖ್ಯಾತ ಲೇಖಕ ತೇಜಸ್ವಿ ಬರೆದ ಬೆಳ್ಳಂದೂರು ನರಭಕ್ಷಕ ಹುಲಿ ಸರಹದ್ದನ್ನೂ ಹೊಂದಿಕೊಂಡಿತ್ತು. ಈ ಕಾಡಿನ ಮಧ್ಯೆ ಕಲ್ಲು ಮಣ್ಣುಗಳ ರಸ್ತೆಯಲ್ಲಿ ನಾನು ಶಾಲೆಗೆ ಹೋಗುತ್ತಿದ್ದೆ. ಅಂದು ಶನಿವಾರ ಮುಂಜಾನೆ ನಸುಕಿನಲ್ಲೇ ಸೈಕಲ್ ತುಳಿಯುತ್ತಿದ್ದ ನನಗೆ ವಿಚಿತ್ರ ಶಬ್ದ ಕೇಳಿತು. ಚಳಿಗಾಲವಾದ್ದರಿಂದ ಮಂಜು ಮುಸುಕಿಕೊಂಡಿತ್ತು. ಸ್ವಲ್ಪ ದೂರದಲ್ಲಿ ಜಿಂಕೆಗಳ ಹಿಂಡು ಕುರುಚಲು ಪೊದೆಗಳ ನಡುವಿನ ಮರಗಳಿಗೆ ಕೊಂಬನ್ನ ತೀಡುತ್ತಿದ್ದವು. ಸೈಕಲ್ ಸಪ್ಪಳ ಜೋರಾದಂತೆ ಚಂಗನೇ ಜಿಗಿದು ಮಾಯವಾದವು. ನಾನು ಓಡಾಡುವಾಗಲೆಲ್ಲಾ ಆ ಸ್ಥಳವನ್ನ ಹಾಗೂ ತೊಗಟೆ ಹರಿದ ಮರವನ್ನ ನೋಡಿಕೊಂಡು ಹೋಗುತ್ತಿದ್ದೆ. ಕೆಲವು ದಿನಗಳಲ್ಲಿ ಮರದ ಮೇಲಿನ ಗಾಯವೂ ಮಾಯವಾಗಿತ್ತು.
ಕಳೆದ ವಾರ ಶಿವಮೊಗ್ಗದ ಹುಲಿ ಹಾಗೂ ಸಿಂಹಧಾಮಕ್ಕೆ ಹೋಗಿದ್ದೆ. ಅಲ್ಲಿನ ನಿರ್ದೇಶಕರು ಮುಕುಂದ್ ಚಂದ್ರ ಅವರು ಜಿಂಕೆ, ಸಾರಂಗದಂತಹ ಕೊಂಬಿರುವ ಪ್ರಾಣಿಗಳಿಂದ ಮರಗಳು ನಾಶವಾಗುವುದರ ಬಗ್ಗೆ ಹೇಳಿದಾಗ ಆಶ್ಚರ್ಯ ಎನಿಸಿತು. ಅವರು ಇದರ ಬಗ್ಗೆ ಮಾಹಿತಿ ನೀಡಲೆಂದು ಸಿಂಹಧಾಮದೊಳಗಿನ ಜಿಂಕೆಗಳ ಮೀಸಲು ಪ್ರದೇಶಕ್ಕೆ ಕರೆದುಕೊಂಡು ಹೋದರು. ಅಲ್ಲಿನ ಸಾಕಷ್ಟು ಮರಗಳಿಗೆ ಮೆಶ್ (ಸುತ್ತಲೂ ತಂತಿಯ ಹೊದಿಕೆಯ ಜಾಲರಿ) ಹಾಕಲಾಗಿತ್ತು. ಕೆಲವು ಮರಗಳಿಗೆ ಒಣ ಕಟ್ಟಿಗೆಯನ್ನ ಚಾಚಲಾಗಿತ್ತು. ಈ ವಿಧಾನದಿಂದ ಮರಗಳ ರಕ್ಷಣೆಯ ಜೊತೆ, ಜಿಂಕೆಗಳಿಗೂ ಅಹ್ಲಾದಕಾರಿ ವಾತಾವರಣವನ್ನೇ ಸೃಷ್ಟಿಸುವುದಾಗಿತ್ತು.
ಮೊದಲನೆಯದಾಗಿ ಸಫಾರಿಯಲ್ಲಿನ ಸಾಕಷ್ಟು ಮರಗಳು ಕಡಿಮೆಯಾಗಲು ಕಾರಣ ವನ್ಯಜೀವಿಗಳೇ, ಅದಕ್ಕೆ ಕುರುಹುಗಳಂತೆ ಮರದ ತೊಗಟೆಗಳು ನಾರಿನಂತೆ ಸೀಳಿಕೊಂಡಿದ್ದವು. ಸುತ್ತಲೂ ತೊಗಟೆ ಬಿಡಿಸಿದರೆ ಮರಗಳು ಒಣಗಿ ನಿಲ್ಲುತ್ತವೆ. ಈ ಸೂಕ್ಷ್ಮ ಹಲವು ಅಧಿಕಾರಿಗಳಿಗೆ ಗೊತ್ತಿರುವುದಿಲ್ಲ. ವೈಲ್ಡ್‌ಲೈಫ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಒಣ ಕಟ್ಟಿಗೆಯನ್ನೂ ಹೊರಗೆ ತೆಗೆದುಕೊಂಡು ಹೋಗುವಂತಿಲ್ಲ. ಈ ಕಟ್ಟಿಗೆಗಳನ್ನೇ ಬಳಸಿ ಮರಗಳ ಸುತ್ತ ಚಾಚಿ ಅದನ್ನ ಹಗ್ಗದಿಂದ ಕಟ್ಟಲಾಗಿದೆ. ಈಗ ಜಿಂಕೆಗಳು ಕೊಂಬುಗಳನ್ನ ತೀಡಲೂ ಬಹುದು.
ತಂತಿ ಜಾಲರಿಗಿಂತ ಶಿವಮೊಗ್ಗ ಸಫಾರಿಯಲ್ಲಿ ಅಳವಡಿಸಿಕೊಂಡ ವಿಧಾನ ಉತ್ತಮ. ಜಪಾನ್‌ನಲ್ಲಿ ಸಿಕಾ ಜಿಂಕೆಗಳ ಸಂತತಿ (ಚಿಕ್ಕ ಗಾತ್ರದ ಜಿಂಕೆಗಳು) ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಇದರಿಂದ ಮೃಗಾಲಯದಲ್ಲಿ ಸಾಕಷ್ಟು ಮರಗಳೂ ನಾಶವಾಗಿದ್ದವು. ವೈರ್ ಮೆಶ್ (ತಂತಿ ಜಾಲರಿ) ಗಳನ್ನ ಅಳವಡಿಸಿ ಮರಗಳನ್ನ ರಕ್ಷಣೆ ಮಾಡಲು ಆರಂಭಿಸಿದರು. ಕೆಲವು ವರ್ಷಗಳಲ್ಲಿ ಈ ಮರಗಳು ಅದೇ ಮೆಶ್‌ನ ತುಕ್ಕಿನಿಂದ ಸಣಕಲಾಗಿದ್ದವು. ಹಾಗೂ ಜಾಲರಿಗಳನ್ನ ಅಳವಡಿಸುವುದರಿಂದ ಜಿಂಕೆಗಳ ಸ್ವಾಭಾವಿಕ ಪ್ರಕ್ರಿಯೆಗಳನ್ನ ಹತ್ತಿಕ್ಕಿದ್ದಂತಾಯ್ತು. ಇದೆಲ್ಲಾ ನೋಡಿದರೆ ಶಿವಮೊಗ್ಗ ಸಫಾರಿಯಲ್ಲಿನಂತೆ ಮರದ ಕಟ್ಟಿಗೆಗಳನ್ನ ಮರಗಳ ಸುತ್ತ ಚಾಚಿಡುವುದು ಉತ್ತಮ ವಿಧಾನ ಅನಿಸದೇ ಇರಲಾರದು.
ಸಾಮಾನ್ಯವಾಗಿ ಜಿಂಕೆಗಳಲ್ಲಿ ಕೊಂಬಿನ ಬುಡದಲ್ಲಿನ ಒಣ ಚರ್ಮದಿಂದ ತುರಿಕೆ ಉಂಟಾಗುತ್ತದೆ. ಇದನ್ನ ಉಜ್ಜಿ ತೆಗೆಯುತ್ತವೆ, ಕೆಲವು ಕೋಡುಗಳನ್ನೇ ಉದುರಿಸಿಕೊಳ್ಳುತ್ತವೆಂದು ಹೇಳುತ್ತಾರೆ. ಆದರೆ ವನ್ಯಜೀವಿ ತಜ್ಞರ ಪ್ರಕಾರ ಕೊಂಬನ್ನ ಉಜ್ಜುವುದಕ್ಕೆ ಹಲವು ಕಾರಣಗಳಿವೆ. ಪ್ರಾಣಿಗಳಲ್ಲಿಯೂ ತನ್ನ ಜಾಗವನ್ನ ಹಾಗೂ ಸರಹದ್ದನ್ನ ಘೋಷಿಸಿಕೊಳ್ಳುವ ಗುಣ ಇರುತ್ತದೆ. ಜಿಂಕೆಯೂ ಸಹ ಮರದ ತೊಗಟೆಯನ್ನತೆಗೆದು ಉಳಿದ ಜಿಂಕೆಗಳಿಗೆ ಸವಾಲು ಹಾಕುತ್ತೆ. ಕೆಲವೊಮ್ಮೆ ಕಾಲುಕೆದರಿ ಜಗಳ ಕಾಯುವಂತೆ ಕೋಡು ಉಜ್ಜಿ ಜಗಳಕ್ಕೆ ನಿಲ್ಲುತ್ತವೆ. ಬಹಳ ಸೂಕ್ಷ್ಮವಾಗಿ ಚಲನವಲನಗಳನ್ನ ಗಮನಿಸಿದರೆ ಅವುಗಳ ಸ್ನಾಯುಗಳಿಗೆ ವ್ಯಾಯಾಮವೂ ಕೆಲವೊಮ್ಮೆ ಆಗುತ್ತೆ.
ಹೀಗೆ ನಾನಾ ಕಾರಣದಿಂದ ತೊಗಟೆಯನ್ನ ಎತ್ತಿದ ಮೇಲೆ ಆ ಮರಗಳಿಗೆ ಬೇರುಗಳಿಂದ ಬರುವ ಪೋಷಕಾಂಶಗಳ ಪೂರೈಕೆ ಕಡಿತಗೊಳ್ಳುತ್ತದೆ. ಹೀಗೆ ಮರಗಳು ಕೆಲವೇ ದಿನಗಳಲ್ಲಿ ಬಾಡಿ ಬೀಳುತ್ತವೆ. ಮನುಷ್ಯ ಕೂಡ ಈ ವಿಧಾನ ಬಳಸಿ ಎಷ್ಟೋ ಅರಣ್ಯ ಪ್ರದೇಶವನ್ನ ಒತ್ತುವರಿ ಮಾಡಿಕೊಂಡಿದ್ದಾನೆ. ಶಿವಮೊಗ್ಗ ಸಫಾರಿ ತರಹ ಎಲ್ಲಾ ಕಡೆ ಕಟ್ಟಿಗೆಯ ಹೊದಿಕೆ ಹೊರಿಸಲಾಗದು ಆದರೆ ಕಾಯ್ದಿರಿಸಿದ ಸೀಮಿತ ಪ್ರದೇಶದಲ್ಲಿಯಾದರೂ ಅಳವಡಿಸಿಕೊಳ್ಳಬಹುದು.