ಕೇಂದ್ರ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಬಿರುಸಾಗತೊಡಗಿವೆ. ಹಲವು ವಿಶ್ವವಿದ್ಯಾಲಯಗಳ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ತೊಡಗಿದ್ದು, ಅಲ್ಲಲ್ಲಿ ಪ್ರತಿಭಟನೆ ಹಿಂಸಾರೂಪ ಪಡೆದಿದೆ.
ದೆಹಲಿಯಲ್ಲಿ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಭಾನುವಾರ ನಡೆದ ಪ್ರತಿಭಟನೆ ವೇಳೆ ಪೊಲೀಸರು ಅಶ್ರುವಾಯು ಸಿಡಿಸಿದ ಪರಿಣಾಮ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಪೊಲೀಸರ ಈ ಕ್ರಮವನ್ನು ಖಂಡಿಸಿರುವ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಇಷ್ಟೇ ಅಲ್ಲದೇ, ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಅಲ್ಪಸಂಖ್ಯಾತ ವಿರೋಧಿ, ವಿದ್ಯಾರ್ಥಿಗಳ ವಿರೋಧಿ ಮತ್ತು ಬಡವರ ವಿರೋಧಿಯಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಇನ್ನು ನಾವು ಮೌನವಾಗಿ ಕೂರಲು ಆಗುವುದಿಲ್ಲ ಎಂದು ಇಂದೂ ಸಹ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ವಿಶ್ವವಿದ್ಯಾಲಯದೊಳಗೆ ನುಗ್ಗಿ ಕಂಡ ಕಂಡ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿರುವ ಪೊಲೀಸರು ಅಶ್ರುವಾಯುವನ್ನೂ ಸಿಡಿಸಿದ್ದಾರೆ. ಇದರಿಂದ ಮತ್ತಷ್ಟು ಕೋಪೋದ್ರಿಕ್ತರಾಗಿರುವ ವಿದ್ಯಾರ್ಥಿ ಸಮೂಹ ಪೊಲೀಸರಿಗೆ ಎದೆಯೊಡ್ಡಿ ನಿಂತಿದೆ.
ಬಹುದೂರ ಹೋಗುತ್ತಿದ್ದೇವೆ. ಮೋದಿ ಮತ್ತು ಬಿಜೆಪಿ ಸರ್ಕಾರ ನಮ್ಮ ಭವಿಷ್ಯಕ್ಕೆ ಕಲ್ಲು ಹಾಕಿದೆ. ನಾನು ಕಾನೂನು ಪದವಿ ವಿದ್ಯಾರ್ಥಿನಿ. ಇವೊತ್ತು ಸಂವಿಧಾನ ವಿಷಯದ ಪರೀಕ್ಷೆ ಇತ್ತು. ನನ್ನ ಭವಿಷ್ಯವನ್ನು ನುಚ್ಚು ನೂರು ಮಾಡಿದೆ ಈ ಸರ್ಕಾರ. ದಿಲ್ಲಿಯ ಜಾಮಿಯಾ ವಿಶ್ವ ವಿದ್ಯಾಲಯ ಅತ್ಯಂತ ಸುರಕ್ಷಿತ ಎಂದು ನಮ್ಮನ್ನು ನಮ್ಮ ಪೋಷಕರು ಇಲ್ಲಿಗೆ ಕಳುಹಿಸಿದ್ದರು. ಆದರೆ, ಈ ನರೇಂದ್ರ ಮೋದಿ ಮತ್ತು ಬಿಜೆಪಿಯಿಂದ ಈ ವಿಶ್ವವಿದ್ಯಾಲಯವೂ ಸೇಫ್ ಅಲ್ಲ ಎಂಬುದು ಈಗ ಗೊತ್ತಾಗುತ್ತಿದೆ. ಆದ್ದರಿಂದ ನಾವು ಬಹುದೂರ ಹೋಗುತ್ತಿದ್ದೇವೆ. ನಮ್ಮ ಪೋಷಕರ ಬಳಿಗೆ ಹೋಗುತ್ತಿದ್ದೇವೆ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸುತ್ತಾ ಮನೆ ಕಡೆ ದಾರಿ ಹಿಡಿದಿದ್ದಾರೆ.
ಭಾನುವಾರ ಪ್ರತಿಭಟನಾಕಾರರನ್ನು ಹತ್ತಿಕ್ಕುವ ನೆಪದಲ್ಲಿ ಪೊಲೀಸರು ಹೇಗೆ ರೌದ್ರಾವತಾರ ಪ್ರದರ್ಶಿಸಿದ್ದಾರೆಂದರೆ ವಿವಿ ಆವರಣದಲ್ಲಿರುವ ಎರಡು ಮಸೀದಿಗಳನ್ನು ಹಾನಿಗೊಳಿಸಿದ್ದಾರಂತೆ. ವಿವಿ ಆವರಣದೊಳಗೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಏನೂ ತಿಳಿಯದ ಅರ್ಸಲಾನ್ ಎಂಬ ಅಂಧ ವಿದ್ಯಾರ್ಥಿ ಲೈಬ್ರರಿಯಲ್ಲಿ ತನ್ನ ಪಾಡಿಗೆ ತಾನು ಓದುತ್ತಾ ಕುಳಿತ್ತಿದ್ದರು. ಅವರ ಮೇಲೆಯೂ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪೊಲೀಸರು ಇಷ್ಟಕ್ಕೇ ಬಿಟ್ಟಿಲ್ಲ. ಬಾತ್ ರೂಂನಲ್ಲಿದ್ದ, ಲೈಬ್ರರಿಯಲ್ಲಿದ್ದ ಹೆಣ್ಣು ಮಕ್ಕಳನ್ನು ಹೊರ ಎಳೆದು ಹಲ್ಲೆ ಮಾಡಿದ್ದಾರೆ. ನಾವು ಈಗ ದೆಹಲಿ ಪೊಲೀಸರ ಗೂಂಡಾವರ್ತನೆ ವಿರುದ್ಧ ಪ್ರತಿಭಟನೆಗಿಳಿದಿದ್ದೇವೆ. ಈ ಪೊಲೀಸ್ ದೌರ್ಜನ್ಯ ಪ್ರಕರಣವನ್ನು ಸಿಬಿಐನಿಂದ ತನಿಖೆ ನಡೆಸಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಇನ್ನು ಪ್ರತಿಭಟನೆ ನಡೆಸಿದ್ದ ಆರೋಪದಲ್ಲಿ ಬಂಧನಕ್ಕೊಳಗಾದ ವಿದ್ಯಾರ್ಥಿಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವ ವಿಡೀಯೋಗಳು ವೈರಲ್ ಆಗಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಶಾಂತ ರೀತಿಯಿಂದ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.