ಚುನಾವಣಾ ರ‍್ಯಾಲಿಗಳಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಾ ಪ್ರಚೋದನಾಕಾರಿ ಭಾಷಣ ಮಾಡಿದ್ದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್‌ಗೆ ಮೂರು ದಿನಗಳವರೆಗೆ ಮತ್ತು ಬಿಜೆಪಿ ಸಂಸದ ಪರ್ವೇಶ್ ವರ್ಮಾರಿಗೆ ನಾಲ್ಕು ದಿನಗಳು ಪ್ರಚಾರ ಕೈಗೊಳ್ಳದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ. ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಬಗ್ಗೆ ಆಕ್ರೊಷ ವ್ಯಕ್ತಪಡಿಸಿರುವ ಅನುರಾಗ್ ಠಾಕೂರ್, ತಮ್ಮ ಭಾಷಣದಲ್ಲಿ ದೇಶದ್ರೋಹಿಗಳನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದ ಅನುರಾಗ್ ಠಾಕೂರ್‌ಗೆ ಉತ್ತರವಾಗಿ ಅಂಥಹ ವ್ಯಕ್ತಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ನೆರೆದಿದ್ದ ಕಾರ್ಯಕರ್ತರು ಹೇಳಿದ್ದಾರೆ. ಇಲ್ಲಿ ಸಿಎಎ ಕಾಯ್ದೆಯನ್ನು ವಿರೋಧಿಸುತ್ತಿರುವ ಪ್ರತಿಯೊಬ್ಬರೂ ದೇಶದ್ರೋಹಿಗಳು ಎಂಬ ರೀತಿಯಲ್ಲಿ ಬಿಜೆಪಿಯ ನಾಯಕರು ಬಿಂಬಿಸಲು ಪ್ರಯತ್ನ ಪಡುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಯಾರೂ ಪ್ರಶ್ನಿಸಲೇಬಾರದು ಎಂಬ ರೀತಿಯಲ್ಲಿ ಬಿಜೆಪಿ ನಾಯಕರ ಭಾಷಣಗಳು ಮೂಡಿಬರುತ್ತಿರುವುದು ಆತಂಕದ ಸಂಗತಿ.
ರಾಜಕೀಯ ನಾಯಕರ ಹೇಳಿಕೆಗಳಿಂದ ಪ್ರಚೋದಿತರಾಗುವ ಯುವಕರು ಯಾವ ರೀತಿಯ ಸಂದಿಗ್ದ ಪರಿಸ್ಥಿತಿಯಲ್ಲಿ ಸಿಲುಕುತ್ತಾರೆ ಎಂಬುದಕ್ಕೆ ಈಗ ಪೊಲೀಸರ ಅತಿಥಿಯಾಗಿರುವ ರಾಮ್‌ಭಕ್ತ್ ಗೋಪಾಲ್ ಸಾಕ್ಷಿ. ತನ್ನ ನಾಯಕರ ಮಾತುಗಳನ್ನು ಚಾಚೂ ತಪ್ಪದೇ ಪಾಲಿಸಿ, ಜೀವನವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಇಂದು ಭಾರತದಲ್ಲಿ ನಿರ್ಮಾಣವಾಗಿರುವುದು ನಿಜಕ್ಕೂ ಆತಂಕಕಾರಿಯಾದ ವಿಷಯ. ಪ್ರತಿಭಟನಾಕಾರರ ನಡುವೆಯೇ ʼಯೇ ಲೋ ಆಜಾದಿʼ (ತೆಗೆದುಕೊಳ್ಳಿ ಸ್ವಾತಂತ್ರ‍್ಯ) ಎನ್ನುತ್ತಾ ವಿದ್ಯಾರ್ಥಿ ಸಮೂಹದತ್ತ ಗುಂಡು ಹಾರಿಸಿದ್ದಾನೆ. ಈವೇಳೆ ಕಾಶ್ಮೀರ ಮೂಲದ ಪತ್ರಿಕೋದ್ಯಮ ವಿದ್ಯಾರ್ಥಿ ಶದಾಬ್ ಫಾಕೂರ್ ಕೈಗೆ ಗುಂಡು ತಗುಲಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೊದಲು ಈತ ತನ್ನ ಫೇಸ್ ಬುಕ್ ನಲ್ಲಿ ಶಾಹೀನ್ ಬಾಗ್ ಆಟ ಮುಗಿಯಿತು (ಶಾಹೀನ್ ಭಾಗ್ ಕಾ ಖೇಲ್ ಖತ್ಮ್) ಎಂದು ಪೋಸ್ಟ್ ಮಾಡಿದ್ದಾನೆ. ಇಂತಹ ಕೆಲ ವಿಚಾರಗಳು ಪೋಸ್ಟ್ ಆಗುತ್ತಿದ್ದಂತೆ, ಇದಕ್ಕೆ ಪ್ರತಿಯಾಗಿ ಟೀಕೆಗಳೂ ವ್ಯಕ್ತವಾಗತೊಡಗಿದವು.
ಈ ಕುರಿತಾಗಿ ಘಟನೆ ಬಗ್ಗೆ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದು, ನಾನು ದೆಹಲಿ ಪೊಲೀಸ್ ಕಮಿಷನರ್ ಅಮೂಲ್ಯ ಪಟ್ನಾಯಕ್ ಬಳಿ ಮಾತನಾಡಿದ್ದೇನೆ. ಗುಂಡಿನ ದಾಳಿ ನಡೆಸಿದವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಇಂತಹ ಕೃತ್ಯಗಳನ್ನು ಕೇಂದ್ರ ಸರ್ಕಾರ ಸಹಿಸಿಕೊಳ್ಳುವುದಿಲ್ಲ. ಗಂಭೀರವಾಗಿ ಪರಿಗಣಿಸಲಾಗುವುದು ಹಾಗೂ ಆರೋಪಿ ಯಾವ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಯಾವ ಪಕ್ಷದ ರಾಜಕೀಯ ನಾಯಕರ ಭಾಷಣಗಳನ್ನು ಕೇಳಿ ಪ್ರಚೋದಿತನಾಗಿ ಗುಂಡಿನ ದಾಳಿ ನಡೆಸಿದ್ದನೋ, ಅದೇ ಪಕ್ಷ ಈಗ ರಾಮ್‌ಭಕ್ತ್‌ಗೆ ಶಿಕ್ಷೆ ನೀಡಲು ಹೊರಟಿದೆ.
ಕೇಂದ್ರ ಸಚಿವರ ಪ್ರಚೋದನಾಕಾರಿ ಭಾಷಣದ ಬೆನ್ನಲ್ಲೇ ಈ ದುಷ್ಕೃತ್ಯ ನಡೆದಿದೆ. ಕೇಂದ್ರ ಗೃಹ ಸಚಿವರು ಆರೋಪಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಇದು ತೊಟ್ಟಿಲಲ್ಲಿರುವ ಮಗುವನ್ನು ಚಿವುಟಿ ತಾವೇ ಸಮಾಧಾನ ಪಡಿಸಿದಂತಾಗಿದೆ. ಪ್ರಚೋದನಾಕಾರಿ ಭಾಷಣ ಮಾಡಿದ ಸಂಸದರ ವಿರುದ್ದ ಬಿಜೆಪಿ ಹೈಕಮಾಂಡ್ ಯಾವುದೇ ರೀತಿಯ ಶಿಸ್ತು ಕ್ರಮ ಕೈಗೊಂಡಿಲ್ಲ. ಚುನಾವಣಾ ಪ್ರಚಾರಕರ ಸ್ಥಾನದಿಂದ ಕಿತ್ತು ಹಾಕಿದ ತಕ್ಷಣ ಎಲ್ಲಾ ಗೊಂದಲ ಪರಿಹಾರವಾಗುವುದಿಲ್ಲ. ಪಕ್ಷದ ನಿಯಮದಂತೆ ಅನುರಾಗ್ ಠಾಕೂರ್ ಹಾಗೂ ಪರ್ವೇಶ್ ವರ್ಮಾ ಅವರ ವಿರುದ್ದ ಶಿಸ್ತು ಕ್ರಮ ಜರುಗಿಸುವ ಧೈರ್ಯ ಬಿಜೆಪಿ ನಾಯಕರುಉ ಇನ್ನೂ ತೋರಿಸಲಿಲ್ಲ. ಇದು, ಬಿಜೆಪಿ ನಾಯಕರಿಗೆ ಮತ್ತಷ್ಟು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಲು ಕುಮ್ಮಕ್ಕು ನೀಡಿದಂತಾಗುವುದಿಲ್ಲವೇ? ತಾವು ಏನೇ ಮಾತನಾಡಿದರೂ ರಾಷ್ಟ್ರ ನಾಯಕರು ತಮ್ಮ ಬೆನ್ನಿಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂದು ಸಂದೇಶ ರವಾನಿಸಿದ ಹಾಗೆ ಆಗುವುದಿಲ್ಲವೇ?
ಈ ಎಲ್ಲಾ ಅಂಶಗಳು ಜನರನ್ನು ದಾರಿ ತಪ್ಪಿಸುವ ಸಲುವಾಗಿ ರಚಿಸಿದ ಷಡ್ಯಂತ್ರದಂತೆ ಕಾಣುತ್ತವೆ. ಯುವಕರು ತಮ್ಮ ಜೀವನದ ಕುರಿತಾದ ನಿರ್ಧಾರಗಳನ್ನು ವಿವೇಚನೆಯಿಂದ ತೆಗೆದುಕೊಳ್ಳುವತ್ತ ಗಮನ ಹರಿಸಲಿ. ರಾಜಕೀಯ ನಾಯಕರು ಪ್ರಚೋದನಾಕಾರಿ ಭಾಷಣಗಳ ಮೂಲಕ ಓಟುಗಳತ್ತ ಗಮನ ಹರಿಸುತ್ತಾರೆಯೇ ಹೊರತು, ಬೇರೆ ಯಾವ ಸದುದ್ದೇಶವೂ ಅವರ ಭಾಷಣದಲ್ಲಿ ಇರುವುದಿಲ್ಲ. ಇಂತಹ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದವರಿಗೆ ಕಠಿಣ ಶಿಕ್ಷೆ ಜಾರಿ ಮಾಡದಿದ್ದಲ್ಲಿ, ಇನ್ನಷ್ಟು ರಾಜಕೀಯ ನಾಯಕರು ತಮ್ಮ ನಾಲಗೆಯನ್ನು ಹರಿ ಬಿಡುವ ಸಾಧ್ಯತೆಗಳು ದಟ್ಟವಾಗುತ್ತವೆ. ಹೀಗಾಗಿ, ಚುನಾವಣಾ ಆಯೋಗವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಇದೆ. ಯುವಕರು ದೇಶವನ್ನು ಮುನ್ನಡೆಸುವತ್ತ ಸಾಧನೆ ಮಾಡಬೇಕೇ ಹೊರತು, ಕ್ರಿಮಿನಲ್ ಆರೋಪಗಳನ್ನು ಹೊತ್ತುಕೊಂಡು ಕೋರ್ಟ್ ಕಚೇರಿಗಳಿಗೆ ಅಲೆಯಬಾರದು. ಇನ್ನೊಮ್ಮೆ ದೇಶದಲ್ಲೆಂದೂ ಜಾಮಿಯಾದಲ್ಲಿ ಕೇಳಿದ ಗುಂಡಿನ ಸದ್ದು ಕೇಳದಿರಲಿ.