ಕರೋನಾ ವೈರಸ್ ಸಾಂಕ್ರಾಮಿಕ ಸಂಧರ್ಭದಲ್ಲಿ ಮಧ್ಯಪ್ರದೇಶ ಸರ್ಕಾರವು ಬುಡಕಟ್ಟು ಜನಾಂಗ ಪ್ರಾಬಲ್ಯವಿರುವ ಜಿಲ್ಲೆಗಳಾದ ಬಾಲಘಾಟ್ ಮತ್ತು ಮಾಂಡ್ಲಾದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಕುದುರೆಗಳು ಮತ್ತು ದನಕರುಗಳಿಗೆ ಯೋಗ್ಯವಾಗಿರುವ ಅಕ್ಕಿಯನ್ನು ಮಾನವ ಬಳಕೆಗೆ ಸರಬರಾಜು ಮಾಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಆಹಾರ ಮತ್ತು ಸಾರ್ವಜನಿಕ ವಿತರಣಾ ವಿಭಾಗದ ಸಂಗ್ರಹ ಮತ್ತು ಸಂಶೋಧನಾ ವಿಭಾಗವು ಮಧ್ಯ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಜುಲೈ 30 ಮತ್ತು ಆಗಸ್ಟ್ 2, 2020 ರ ನಡುವೆ ಬುಲಘಾಟ್ ಮತ್ತು ಮಾಂಡ್ಲಾದ ಬುಡಕಟ್ಟು ಜಿಲ್ಲೆಗಳಲ್ಲಿ ನಾಲ್ಕು ಗೋದಾಮು ಮತ್ತು ಒಂದು ನ್ಯಾಯಬೆಲೆ ಅಂಗಡಿಯಿಂದ 32 ಮಾದರಿ ಅಕ್ಕಿಗಳನ್ನು ತೆಗೆದುಕೊಂಡು ಅವುಗಳನ್ನು NABL ಕೇಂದ್ರ ಧಾನ್ಯಗಳ ವಿಶ್ಲೇಷಣಾ ಪ್ರಯೋಗಾಲಯದಲ್ಲಿ ಪರಿಶೀಲಿಸಿತ್ತು.
ಮಧ್ಯಪ್ರದೇಶದ ಎರಡು ಬುಡಕಟ್ಟು ಜಿಲ್ಲೆಗಳಿಂದ ಸಂಗ್ರಹಿಸಿದ ಅಕ್ಕಿ ಮಾದರಿಗಳ ಸಂಶೋಧನೆಯು ಅವು ಮಾನವನ ಬಳಕೆಗೆ ಯೋಗ್ಯವಲ್ಲ ಎಂದು ತೋರಿಸಿಕೊಟ್ಟಿವೆ. ಹಾಗೂ ಆ ಅಕ್ಕಿ ಮಾದರಿ ಜಾನುವಾರುಗಳ ಬಳಕೆಗೆ ಸೂಕ್ತವಾದ ಧಾನ್ಯಗಳೆಂದು ವ್ಯಾಖ್ಯಾನಿಸುವ ವರ್ಗ 1-ಎ ಯಲ್ಲಿ ಸೇರಿದವಾಗಿತ್ತು ಎಂದು ಇಂಡಿಯ ಟುಡೇ ವರದಿ ಮಾಡಿದೆ.

ಪರಿಶೀಲನೆಗೊಳಪಡಿಸಿದ 32 ಮಾದರಿ ಅಕ್ಕಿಗಳು ಸಚಿವಾಲಯದ ಮಾನದಂಡ ಹಾಗೂ PFA ಮಾನದಂಡಗಳನ್ನು ಮೀರಿದೆ. ಪರಿಶೀಲನೆಯಲ್ಲಿ ಆ ಧಾನ್ಯಗಳು ಮಾನವನಿಗೆ ಸೇವಿಸಲು ಯೋಗ್ಯವಲ್ಲ ಎಂದು ಕಂಡುಬಂದಿದೆ. ಆಡು, ಕುರಿ, ದನ-ಕರುಗಳಿಗೆ ಮಾತ್ರ ಸೇವಿಸಲು ಯೋಗ್ಯ ಎಂದು ಕೇಂದ್ರ ಮಧ್ಯ ಪ್ರದೇಶ ರಾಜ್ಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ.
ಅದಾಗ್ಯೂ ಮಧ್ಯ ಪ್ರದೇಶ ಈ ವರದಿಯನ್ನು ತಳ್ಳಿ ಹಾಕಿದೆ. ಆ ರೀತಿಯ ಪತ್ರ ಬಂದಿರುವುದು ತನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಪ್ರಮಾದವಾಗಿದ್ದಾರೆ, ತಪ್ಪಿತಸ್ಥ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಮಧ್ಯ ಪ್ರದೇಶ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿಸಾಹು ಲಾಲ್ ಸಾಹು ಹೇಳಿದ್ದಾರೆ.