ಕರೋನಾ ವೈರಾಣು ಸೋಂಕು ತಡೆಯ ನಿಟ್ಟಿನಲ್ಲಿ ಭಾನುವಾರದ ಜನತಾ ಕರ್ಫ್ಯೂ ಬಳಿಕ ಇನ್ನಷ್ಟು ನಿರ್ಬಂಧ, ನಿಷೇಧಗಳನ್ನು ಜಾರಿಗೆ ತರಲಾಗಿದೆ. ಕರೋನಾ ವಿರುದ್ಧ ಹೋರಾಡುತ್ತಿರುವ ದೇಶದ ವೈದ್ಯಕೀಯ ಮತ್ತಿತರ ರಂಗದ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಲು ಜನತಾ ಕರ್ಫ್ಯೂ ದಿನ ಸಂಜೆ ಚಪ್ಪಾಳೆ ತಟ್ಟಿ ಎಂಬ ಪ್ರಧಾನಿಯವರ ಕರೆಗೆ ಜನ ಶಂಖ-ಜಾಗಟೆ, ತಟ್ಟೆ-ಲೋಟ ಬಡಿದು ಪ್ರತಿಕ್ರಿಯಿಸಿದ್ಧಾರೆ.
ಈ ನಡುವೆ ಬಹಳಷ್ಟು ಕಡೆ ಬೀದಿಗಿಳಿದು, ನೂರಾರು ಮಂದಿ ಜಾತ್ರೆಯೋಪಾದಿಯಲ್ಲಿ ಕುಣಿದು ಕುಪ್ಪಳಿಸಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜನತಾ ಕರ್ಫ್ಯೂ ಉದ್ದೇಶವನ್ನೇ ಮಣ್ಣುಪಾಲು ಮಾಡಿದೆ ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ. ಜೊತೆಗೆ, ಮುಖ್ಯವಾಗಿ ಕೇವಲ ಚಪ್ಪಾಳೆ ತಟ್ಟುವುದರಿಂದ, ಶಂಖ-ಜಾಗಟೆ ಬಾರಿಸುವುದರಿಂದ ಪ್ರಯೋಜನವಿಲ್ಲ. ಬದಲಾಗಿ ಜೀವಪಣಕ್ಕಿಟ್ಟು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಿರುವ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕಾಗಿದೆ. ಮಾಸ್ಕ್, ಗೌನ್, ಗ್ಲೋವ್ಸ್, ಕವರಾಲ್ಸ್ ಗಳ ತೀವ್ರ ಕೊರತೆ ಇದೆ. ಹಾಗಾಗಿ ವೈದ್ಯಕೀಯ ಸಿಬ್ಬಂದಿಯ ಪ್ರಾಣಕ್ಕೂ ಅಪಾಯವಿದೆ. ಹಾಗಾಗಿ ಸರ್ಕಾರ ಅಂತಹ ಅಗತ್ಯ ವಸ್ತುಗಳ ಸರಬರಾಜಿಗೆ ಮತ್ತು ದಾಸ್ತಾನಿಗೆ ಮೊದಲು ಗಮನ ಹರಿಸಲಿ ಎಂಬ ಮಾತುಗಳೂ ಸ್ವತಃ ವೈದ್ಯರುಗಳಿಂದಲೇ ಕೇಳಿಬಂದಿವೆ.
ಅದರಲ್ಲೂ ಮುಖ್ಯವಾಗಿ ದೇಶದಲ್ಲಿ ಸದ್ಯದ ಸ್ಥಿತಿಯಲ್ಲಿ ಮುಖಗವಸು, ಕೈಗವಸು, ಕವರಾಲ್ಸ್ ಮುಂತಾದ ಪಿಪಿಇ(ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್ ಮೆಂಟ್ಸ್)ಗಳ ಪ್ರಮಾಣವೆಷ್ಟು? ಸದ್ಯದ ಬೇಡಿಕೆಗೆ ಅನುಗುಣವಾಗಿ ಪಿಪಿಇಗಳ ಸರಬರಾಜು ಆಗುತ್ತಿದೆಯೇ? ಕೋವಿಡ್-19 ತಡೆ ನಿಟ್ಟಿನಲ್ಲಿ ಬಹಳ ನಿರ್ಣಾಯಕವಾಗಿರುವ ಈ ಸುರಕ್ಷಾ ಸಾಧನಗಳ ಉತ್ಪಾದನೆ, ಪೂರೈಕೆ ಮತ್ತು ಬೇಡಿಕೆಯ ಮೇಲೆ ಸರ್ಕಾರ ಕಣ್ಣಿಟ್ಟಿದೆಯೇ? ಆ ವ್ಯವಸ್ಥೆಯಲ್ಲಿ ವ್ಯತ್ಯಯವಾಗದಂತೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಎಂಬ ಬಗ್ಗೆ ಸಾಕಷ್ಟು ಚರ್ಚೆಗೂ ಜನತಾ ಕರ್ಫ್ಯೂ ಕರೆ ಚಾಲನೆ ನೀಡಿದೆ.
ಮುಖ್ಯವಾಹಿನಿ ಮಾಧ್ಯಮಗಳು ಸಾಮಾನ್ಯವಾಗಿ ಜನತಾ ಕರ್ಫ್ಯೂ ಯಶಸ್ಸು, ಶಂಖ-ಜಾಗಟೆಯ ಸಂಭ್ರಮದ ಬಗ್ಗೆ ವಿರೋಚಿತ ವರದಿಗಳನ್ನು ನೀಡುತ್ತಿರುವ ಹೊತ್ತಲ್ಲಿ, ವೈದ್ಯಕೀಯ ವಲಯ ಕರೋನಾ ಎದುರಿಸಲು ಸಜ್ಜಾಗಿರುವ ಬಗೆ ಹೇಗೆ, ಅಲ್ಲಿನ ಸಿಬ್ಬಂದಿಗೆ ಇರುವ ಸವಾಲು ಏನು? ಅವರ ಜೀವ ರಕ್ಷಣೆಗೆ ಸರ್ಕಾರ ತೆಗೆದುಕೊಂಡಿರುವ ಕ್ರಮವೇನು? ಎಂಬ ಬಗ್ಗೆ ಜನಸಾಮಾನ್ಯರಿಗೆ ಈಗ ಅಂತರ್ಜಾಲ ಸುದ್ದಿ ತಾಣಗಳೇ ಮಾಹಿತಿ ಮೂಲಗಳಾಗಿವೆ. ಅಂತಹ ಜವಾಬ್ದಾರಿಯುತ ವರದಿಗಾರಿಕೆಗೆ ಹೆಸರಾಗಿರುವ ‘ದ ಕ್ಯಾರವಾನ್’ ಸುದ್ದಿ ಜಾಲತಾಣ ಇಂತಹ ಮೂಲಭೂತ ವಿಷಯಗಳ ಕುರಿತ ಕಳೆದ ಎರಡು ದಿನಗಳಿಂದ ಸರಣಿ ವರದಿಗಳನ್ನು ನೀಡಿದೆ.
ಆ ಪೈಕಿ ಮುಖ್ಯವಾದದ್ದು; ದೇಶಾದ್ಯಂತ ತೀವ್ರ ಕೊರತೆಯಾಗಿರುವ ಮುಖಗವಸು, ಕೈಗವಸು ಮತ್ತಿತರ ಸುರಕ್ಷಾ ಸಾಧನಗಳ ಬೇಡಿಕೆ ಮತ್ತು ಪೂರೈಕೆಯಲ್ಲಿ ಆಗಿರುವ ವ್ಯತ್ಯಯ ಮತ್ತು ಮುಂಜಾಗ್ರತೆ ವಹಿಸಿ ದಾಸ್ತಾನು ಮಾಡುವಲ್ಲಿಆಗಿರುವ ಲೋಪಗಳ ಮೇಲೆ ಬೆಳಕು ಚೆಲ್ಲುವ ಒಂದು ವರದಿ.
ದೇಶದಲ್ಲಿ ಕರೋನಾ ಸೋಂಕು ಧೃಡಪಟ್ಟ ಜನವರಿ 30ರಿಂದ ಈವರೆಗೆ ಸುಮಾರು ಎರಡು ತಿಂಗಳಲ್ಲಿ ದೇಶದಲ್ಲೇ ತೀವ್ರ ಕೊರತೆ ಬಿದ್ದಿರುವ ಹೊತ್ತಲ್ಲೂ ಕೇಂದ್ರ ಸರ್ಕಾರ ಸುರಕ್ಷತಾ ಸಾಧನಗಳ ರಫ್ತು ತಡೆಯುವ ಪ್ರಯತ್ನ ಮಾಡಿಲ್ಲ. ಅದಕ್ಕೆ ಬದಲಾಗಿ, ಆಗಲೇ ಇದ್ದ ರಪ್ತು ನಿರ್ಬಂಧಗಳನ್ನು ಸಡಿಲಿಸಿ ಇನ್ನಷ್ಟು ಮುಕ್ತ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ. ಜೊತೆಗೆ ಈ ಸಾಧನಗಳನ್ನು ದೇಶೀಯವಾಗಿ ಖರೀದಿಸಿ, ಸರಬರಾಜು ಮಾಡುವ ಏಕಸ್ವಾಮ್ಯ ಹೊಂದಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಬೆಲೆ ಏರಿಕೆಯ ಲಾಭಕೋರತನಕ್ಕೂ ಕಡಿವಾಣ ಹಾಕುವತ್ತ ಸರ್ಕಾರ ನಿರಾಸಕ್ತಿ ವಹಿಸಿದೆ ಎಂಬ ಸಂಗತಿಯನ್ನು ಈ ವರದಿ ಬಹಿರಂಗಪಡಿಸಿದೆ.
ರೋಗ ಜಾಗತಿಕ ಸೋಂಕು ಎಂದು ಘೋಷಿಸುವ ಮುನ್ನವೇ ಫೆ.27ರಂದು ವಿಶ್ವ ಆರೋಗ್ಯ ಸಂಸ್ಥೆ ಭಾರತವೂ ಸೇರಿದಂತೆ ಸೋಂಕು ಕಾಣಿಸಿಕೊಂಡಿರುವ ದೇಶಗಳಲ್ಲಿ ಪಿಪಿಇಗಳ ಲಭ್ಯತೆ ಮತ್ತು ಸಂಭವನೀಯ ಬೇಡಿಕೆಯ ಬಗ್ಗೆ ಎಚ್ಚರಿಕೆ ನೀಡಿತ್ತು. ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಸಿಬ್ಬಂದಿ ಬಳಕೆಯ ಮಾಸ್ಕ್ ಮತ್ತು ಆಮ್ಲಜನಕ ಮಾಸ್ಕ್ ಗಳು, ಗೌನ್, ಗಾಗಲ್ಸ್ ಗಳ ಕೊರತೆ ತೀವ್ರವಾಗುವ ಸಾಧ್ಯತೆ ಹೆಚ್ಚಿದೆ. ಸೋಂಕಿತರ ಸಂಖ್ಯೆಯೊಂದೇ ಅಲ್ಲದೆ, ತಪ್ಪುಗ್ರಹಿಕೆ, ಭಯಭೀತರಾಗಿ ಕೊಳ್ಳುವ ಮನೋಭಾವ ಮತ್ತು ಹೆಚ್ಚುಹೆಚ್ಚು ಸಂಗ್ರಹಿಸಿಟ್ಟುಕೊಳ್ಳುವ ನಡವಳಿಕೆಗಳು ಜಾಗತಿಕ ಮಟ್ಟದಲ್ಲಿ ಈ ಸಾಧನಗಳ ದೊಡ್ಡ ಹಾಹಾಕಾರಕ್ಕೆ ಕಾರಣವಾಗಬಹುದು ಎಂದೂ ಎಚ್ಚರಿಸಿತ್ತು.
ಆದಾಗ್ಯೂ ಭಾರತ ಸರ್ಕಾರ, ಇಂತಹ ಅಗತ್ಯ ವೈದ್ಯಕೀಯ ಸುರಕ್ಷಾ ಸಾಧನಗಳ ರಫ್ತು ನಿರ್ಬಂಧಿಸಲು ಮಾ.19ರವರೆಗೆ ಸಮಯ ತೆಗೆದುಕೊಂಡಿದೆ. ಈ ನಡುವೆ ಜನವರಿ 31ರಂದು ವಿದೇಶಿ ವ್ಯಾಪಾರ-ವಹಿವಾಟು ನಿರ್ದೇಶನಾಲಯ ಪಿಪಿಇಗಳ ರಫ್ತು ನಿರ್ಬಂಧಿಸಿ ಆದೇಶ ಹೊರಡಿಸಿದ್ದರೂ, ಕೇವಲ ಒಂದೇ ವಾರದಲ್ಲಿ ಸರ್ಕಾರ ಆ ಆದೇಶವನ್ನು ವಾಪಸು ಪಡೆದು, ಸರ್ಜಿಕಲ್ ಮಾಸ್ಕ್ ಮತ್ತು ಗ್ಲೋವ್ ರಫ್ತು ಪರವಾನಗಿ ನೀಡಿತು. ಬಳಿಕ ಫೆ.25ರ ಹೊತ್ತಿಗೆ ಇಟಲಿಯಲ್ಲಿ 11 ಸಾವುಗಳ ಸಂಭಿಸಿದ ಬೆನ್ನಲ್ಲೇ ಭಾರತ ಸರ್ಕಾರ ಪಿಪಿಇ ರಫ್ತು ಸಂಬಂಧ ಇನ್ನಷ್ಟು ನಿಯಮ ಸಡಿಲಿಸಿ ಮತ್ತಷ್ಟು ಮುಕ್ತ ವಹಿವಾಟಿಗೆ ಅವಕಾಶ ನೀಡಿತು. ಅದರೆ ವಿಶ್ವಸಂಸ್ಥೆಯ ಎಚ್ಚರಿಕೆ, ಮಾರ್ಗಸೂಚಿಯ ಹೊರತಾಗಿಯೂ ಸುರಕ್ಷಾ ಸಾಧನಗಳ ಅಗತ್ಯ, ಬೇಡಿಕೆ ಮತ್ತು ಭವಿಷ್ಯದ ಅಂದಾಜು ಮಾಡಿ ದಾಸ್ತಾನು ಮಾಡುವ ನಿಟ್ಟಿನಲ್ಲಿ ಭಾರತ ಸರ್ಕಾರ ಗಮನ ಹರಿಸದೇ, ಅದಕ್ಕೆ ತದ್ವಿರುದ್ಧವಾಗಿ ಅಂತಹ ಜೀವರಕ್ಷಕ ಸಾಧನಗಳ ರಫ್ತಿಗೆ ಉತ್ತೇಜನ ನೀಡುವ ಮೂಲಕ ಪ್ರಮಾದ ಎಸಗಿತು. ಪರಿಣಾಮವಾಗಿ ಕರೋನಾದಂತಹ ಅಪಾಯಕಾರಿ ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಜೀವ ಅಪಾಯಕ್ಕೆ ಸಿಲುಕಿದೆ ಎಂದು ವರದಿ ಹೇಳಿದೆ.
ಸುರಕ್ಷಾ ಸಾಧನಗಳ ವಿಷಯದಲ್ಲಿ ಆರೋಗ್ಯ ಮತ್ತು ಜವಳಿ ಸಚಿವಾಲಯ ಹಾಗೂ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್ ಎಲ್ ಎಲ್ ಲೈಫ್ ಕೇರ್ ಕಂಪನಿಗಳು ಕಳೆದ ಎರಡು ತಿಂಗಳಲ್ಲಿ ನಡೆದುಕೊಂಡ ರೀತಿ ನಿಜಕ್ಕೂ ಆಘಾತಕಾರಿ. ಅದರಲ್ಲೂ ದೇಶದ ಆರೋಗ್ಯ ವಲಯದ ಸಿಬ್ಬಂದಿಯ ಜೀವಕ್ಕೇ ಅಪಾಯ ತಂದೊಡ್ಡುವ ನಿರ್ಲಕ್ಷ್ಯ ಮತ್ತು ತದ್ವಿರುದ್ಧ ನಿರ್ಧಾರಗಳನ್ನು ಅವು ಕೈಗೊಂಡಿವೆ. ಪಿಪಿಇಗಳನ್ನು ಉತ್ಪಾದಿಸದೇ ಇದ್ದರೂ, ಎಚ್ ಎಲ್ ಎಲ್ ಕಂಪನಿಗೆ ದೇಶದ ಪಿಪಿಇ ಸರಬರಾಜು ಹೊಣೆ ವಹಿಸಲಾಗಿದೆ. ಇದು ಕೂಡ ಸಮಸ್ಯೆ ಇನ್ನಷ್ಟು ಉಲ್ಬಣಕ್ಕೆ ಕಾರಣವಾಗಿದೆ. ಖರೀದಿ ಮತ್ತು ಮಾರಾಟದ ಹೊಣೆ ಹೊತ್ತಿರುವ ಆ ಕಂಪನಿ, ತನ್ನ ಲಾಭಕ್ಕಾಗಿ ಪಿಪಿಇಗಳ ಬೆಲೆಯನ್ನು ಮನಸೋಇಚ್ಛೆ ಹೆಚ್ಚಿಸಿದೆ. ಪಿಪಿಇ ಕಿಟ್ ತಯಾರಕ ಸಂಸ್ಥೆಗಳ ಪ್ರಕಾರ, ಕೇವಲ ರೂ.400-500 ದರದಲ್ಲಿ ಮಾರಬಹುದಾದ ಪಿಪಿಇ ಕಿಟ್ ಗಳನ್ನು ಎಚ್ ಎಲ್ ಎಲ್ ಸಂಸ್ಥೆ ಒಂದು ಸಾವಿರ ರೂ. ದರದಲ್ಲಿ ಮಾರಾಟ ಮಾಡುತ್ತಿದೆ. ಸಂಕಷ್ಟದ ಹೊತ್ತಲ್ಲಿ ಸರ್ಕಾರದ ಸಂಸ್ಥೆಯೇ ಇಂತಹ ಹಗಲು ದರೋಡೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಕಣ್ಣುಮುಚ್ಚಿಕುಳಿತಿದೆ!
ಆ ಹಿನ್ನೆಲೆಯಲ್ಲಿಯೇ ವೈದ್ಯಕೀಯ ಸಾಮಗ್ರಿ ಉತ್ಪಾದನಾ ಉದ್ಯಮದ ಕಣ್ಗಾವಲು ಸ್ವಯಂಸೇವಾ ಸಂಸ್ಥೆ ಆಲ್ ಇಂಡಿಯಾ ಡ್ರಗ್ ಆಕ್ಷನ್ ನೆಟ್ವರ್ಕ್ ನ ಸಹಸಂಚಾಲಕಿ ಮಾಲಿನಿ ಐಸೋಲಾ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ, ಮತ್ತು ಕೇಂದ್ರೀಯ ಖರೀದಿ ವ್ಯವಸ್ಥೆಯ ನೋಡಲ್ ಏಜೆನ್ಸಿಯಾಗಿರುವ ಎಚ್ ಎಲ್ ಎಲ್ ನ್ನು ಆ ಸ್ಥಾನದಿಂದ ತೆಗೆದುಹಾಕಬೇಕು ಎಂದು ಪ್ರಧಾನಿಗೆ ಪತ್ರ ಬರೆದಿದೆ.
ಜೊತೆಗೆ, ಇಡೀ ದೇಶಕ್ಕೆ ಪಿಪಿಇ ಕಿಟ್ ಸರಬರಾಜು ಹೊಣೆ ಹೊತ್ತಿರುವ ಎಚ್ ಎಲ್ ಎಲ್ ಎಷ್ಟೊಂದು ಹೊಣೆಗೇಡಿತನದಿಂದ ನಡೆದುಕೊಂಡಿದೆ ಎಂದರೆ’; ಸದ್ಯದ ಕರೋನಾ ಸೋಂಕು ಮತ್ತು ಚಿಕಿತ್ಸೆಯ ಲೆಕ್ಕದಲ್ಲಿ ದೇಶದಲ್ಲಿ ದಿನವೊಂದಕ್ಕೆ ಸುಮಾರು 5 ಲಕ್ಷ ಕವರಾಲ್ ಗಳು ಬೇಕಾಗಿವೆ. ಆದರೆ, ಎಚ್ ಎಲ್ ಎಲ್ ಮುಂದಿನ ಮೇ ಅಂತ್ಯದವರೆಗೆ ಕೇವಲ 7.5 ಲಕ್ಷ ಕವರಾಲ್ ಗಳಿಗೆ ಬೇಡಿಕೆ ಸಲ್ಲಿಸಿದೆ. ದಿನವೊಂದಕ್ಕೆ ಐದು ಲಕ್ಷ ಬೇಡಿಕೆ ಇರುವಾಗ ಬರೋಬ್ಬರಿ ಮೂರು ತಿಂಗಳಿಗೆ 7.5 ಲಕ್ಷ ಕವರಾಲ್ ಬೇಡಿಕೆ ಸಲ್ಲಿಸಿದೆ ಎಂದರೆ, ಆ ಕಂಪನಿಯ ಧೋರಣೆ ಎಂತಹದ್ದಿದ್ದೆಎಂಬುದನ್ನು ಊಹಿಸಬಹುದು ಎಂದೂ ಮಾಲಿನಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮಾ.18ರಂದು ನಡೆದ ಆರೋಗ್ಯ ಮತ್ತು ಜವಳಿ ಸಚಿವಾಲಯ ಹಾಗೂ ಎಚ್ ಎಲ್ ಎಲ್ ಸಭೆಯಲ್ಲಿ ಈ ಅಂಕಿಅಂಶಗಳನ್ನು ಚರ್ಚಿಸಲಾಗಿದ್ದು, ಎಚ್ ಎಲ್ ಎಲ್ 7.5 ಲಕ್ಷ ಕವರಾಲ್, 60 ಲಕ್ಷ ಎನ್ 95 ಮಾಸ್ಕ್, ಒಂದು ಕೋಟಿ ತ್ರೀಪೈ ಮಾಸ್ಕ್ ಸರಬರಾಜು ಮಾಡಲಿದೆ. ಆದರೆ, ಸದ್ಯದ ಬೇಡಿಕೆಗೆ ಹೋಲಿಸಿದರೆ ಇದೂ ಏನೇನೂ ಸಾಲದು ಎಂದು ಆರೋಗ್ಯ ಸಚಿವಾಲಯ ಟಿಪ್ಪಣಿ ಹೇಳಿದೆ. ಈ ನಡುವೆ ಸಚಿವೆ ಸ್ಮೃತಿ ಇರಾನಿ ಅವರ ಅಧೀನದಲ್ಲಿರುವ ಜವಳಿ ಸಚಿವಾಲಯ ಪಿಪಿಇ ಸಾಧನಗಳ ಕಚ್ಛಾ ವಸ್ತು ಸರಬರಾಜು ಮತ್ತು ಗುಣಮಟ್ಟ ಪರೀಕ್ಷೆಗಾಗಿ ಹೆಚ್ಚುವರಿ ಕೇಂದ್ರಗಳನ್ನು ತೆರೆಯುವಂತೆ ವಲಯದ ಉತ್ಪಾದಕರ ಕೋರಿಕೆಗೆ ಈವರೆಗೆ ಸ್ಪಂದಿಸಿಲ್ಲ. ಜೊತೆಗೆ ಪಿಪಿಇ ಸುರಕ್ಷಾ ಸಾಧನಗಳ ತಯಾರಿಕೆಗೆ ಬೇಕಾದ ಕಚ್ಛಾ ವಸ್ತುಗಳ ಬೆಲೆ ಏರಿಕೆ ಮಾಡಿ ಲಾಭ ಮಾಡುವ ಲಾಭಕೋರತನಕ್ಕೆ ಕಡಿವಾಣ ಹಾಕಬೇಕು ಎಂದು ಪ್ರಿವೆಂಟಿವ್ ವಿಯರ್ ಮಾನ್ಯುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಫೆ.7ರ ಹೊತ್ತಿಗೆ ಮುಂಚಿತವಾಗಿ ಮನವಿ ಮಾಡಿದ್ದರೂ ಆ ಬಗ್ಗೆ ಕೂಡ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಂಘಟನೆಯ ಚೇರ್ಮನ್ ಸಂಜೀವ್ ಕುಮಾರ್ ಹೇಳಿದ್ದಾರೆ!
“ಸರ್ಕಾರದ ಈ ಉದಾಸೀನ ಧೋರಣೆಯಿಂದಾಗಿ 3 ಪ್ಲೈ ಮಾಸ್ಕ್ ತಯಾರಿಕೆಯಲ್ಲಿ ಬಳಸುವ ವಿವಿಧ ಸಾಮಗ್ರಿಗಳ ಬೆಲೆ ಪ್ರತಿ ಕೆಜಿಗೆ 250 ರೂ. ನಿಂದ ಮೂರು ಸಾವಿರ ರೂಗೆ ಏರಿಕೆಯಾಗಿದೆ. ಇನ್ನು ಬಳಕೆಯಾಗುವ ಎಲಾಸ್ಟಿಕ್ ಮಾರುಕಟ್ಟೆಯಲ್ಲೇ ಎಷ್ಟು ಹಣ ಕೊಟ್ಟರೂ ಲಭ್ಯವಿಲ್ಲದ ಸ್ಥಿತಿ ಇದೆ” ಎಂದು ಸಂಜೀವ್ ಹೇಳಿರುವುದಾಗಿ ವರದಿ ತಿಳಿಸಿದೆ.
ಈ ನಡುವೆ, ದೇಶದ ಜನಸಾಂಧ್ರತೆ ಮತ್ತು ಅನಕ್ಷರತೆ, ಕುರಿಮಂದೆ ಮನಸ್ಥಿತಿಯ ಹಿನ್ನೆಲೆಯಲ್ಲಿ ಒಂದು ವೇಳೆ ಇಟಲಿ, ಸ್ಪೇನ್, ಇರಾನಿನಂತಹ ಪರಿಸ್ಥಿತಿ ನಿರ್ಮಾಣವಾದರೆ ಮುಂದೇನು ಎಂಬ ಆತಂಕ ಆವರಿಸಿದೆ. ಒಂದು ಕಡೆ ಸಂಪೂರ್ಣ ಲಾಕ್ ಡೌನ್ ಪ್ರಮಾಣ ಮತ್ತು ಕಾಲಮಿತಿ ಹೆಚ್ಚುತ್ತಿದೆ. ಸೋಂಕು ಸಮುದಾಯದ ಮಟ್ಟದಲ್ಲಿ ಹರಡಿದೆ. ಸರ್ಕಾರಗಳು ಸರಿಯಾದ ರೀತಿಯಲ್ಲಿ ವ್ಯಾಪಕ ತಪಾಸಣೆ ಮತ್ತು ವೈರಾಣು ಪರೀಕ್ಷೆ ನಡೆಸಿಲ್ಲ, ಹಾಗಾಗಿ ವಾಸ್ತವವಾಗಿ ಸೋಂಕಿತರ ಪ್ರಮಾಣ ಮತ್ತು ಸರ್ಕಾರದ ಅಂಕಿಅಂಶಗಳ ನಡುವೆ ಅಗಾಧ ವ್ಯತ್ಯಾಸವಿದೆ ಎಂಬ ವಾದಗಳೂ ಕೇಳಿಬರುತ್ತಿವೆ. ಆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವಾಲಯದ ಮಾಜಿ ಕಾರ್ಯದರ್ಶಿ ಕೆ ಸುಜಾತಾ ರಾವ್, ಚೀನಾ ಅಥವಾ ಇಟಲಿ ಮಾದರಿಯ ವ್ಯಾಪಕ ಸೋಂಕು ಕಾಣಿಸಿಕೊಂಡಲ್ಲಿ ಅಂತಹದ್ದನ್ನು ತಡೆಯುವ ಸಾಮರ್ಥ್ಯ ಭಾರತಕ್ಕಿಲ್ಲ ಮತ್ತು ಆ ನಿಟ್ಟಿನಲ್ಲಿ ಸರ್ಕಾರ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ. ಕೇವಲ ದಕ್ಷಿಣ ಭಾರತದ ರಾಜ್ಯಗಳು ಇರುವುದರಲ್ಲಿ ಸ್ವಲ್ಪ ಪರಿಣಾಮಕಾರಿಯಾಗಿ ಸೋಂಕು ಎದುರಿಸಬಲ್ಲವು ವಿನಃ ಉತ್ತರಪ್ರದೇಶದಂತಹ ಉತ್ತರಭಾರತದಲ್ಲಿ ಮಾರಣಹೋಮವೇ ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ, ಕರ್ನಾಟಕ, ಕೇರಳ, ದೆಹಲಿಯಂತಹ ರಾಜ್ಯ ಸರ್ಕಾರಗಳು ಸೋಂಕು ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳುವ ಜೊತೆಯಲ್ಲೇ ಲಾಕ್ ಡೌನ್ ಮತ್ತು ಕರ್ಫ್ಯೂನಂತಹ ನಿಯಂತ್ರಣ ಕ್ರಮಗಳಿಂದ ಸಂತ್ರಸ್ತರಾಗುವ ಜನರಿಗೆ ನೆರವಿನ ಪ್ಯಾಕೇಜ್ ಮತ್ತು ಪರಿಹಾರ ಘೋಷಣೆಯನ್ನೂ ಮಾಡುತ್ತಿವೆ. ಆದರೆ, ಕೇಂದ್ರ ಸರ್ಕಾರ ಅಂತಹ ಯಾವ ಕ್ರಮಗಳನ್ನೂ ಈವರೆಗೆ ಘೋಷಿಸಿಲ್ಲ ಎಂಬುದು ಕೂಡ ಸರ್ಕಾರ ಈ ಮಹಾಮಾರಿಯ ಬಗ್ಗೆ ಎಷ್ಟು ರಚನಾತ್ಮಕವಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ನಿದರ್ಶನ. ಆರ್ಥಿಕವಾಗಿ ಸಂಕಷ್ಟಕ್ಕೀಡುವ ಜನರ ಬದುಕಿಗೆ ಆಧಾರವಾಗಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಆಸಕ್ತಿ ವಹಿಸದ ಸರ್ಕಾರ, ಕನಿಷ್ಠ ರೋಗದ ಜೊತೆ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯ ಜೀವ ರಕ್ಷಣೆಯ ನಿಟ್ಟಿನಲ್ಲಾದರೂ ಮುಂಜಾಗ್ರತೆ ವಹಿಸಿದೆಯೇ ಎಂದರೆ, ಅದೂ ಕೂಡ ಇಲ್ಲ ಎಂಬುದಕ್ಕೆ ಈ ವರದಿಯೇ ಸಾಕ್ಷಿ. ಹಾಗಾಗಿ, ಶಂಖ-ಜಾಗಟೆ ಬಾರಿಸಲು ಕರೆ ಕೊಡುವುದು ಕೊನೆಯ ಹತಾಶೆಯ ವರಸೆಯಾಗಿ ಗೋಚರಿಸತೊಡಗಿದೆ!