ಪೌರತ್ವ ತಿದ್ದುಪಡಿ ಕಾನೂನನ್ನು ಜಾರಿಗೆ ತರಲು ಹೊರಟು ದೇಶಾದ್ಯಂತ ಪ್ರತಿಭಟನೆಗಳನ್ನು ಎದುರಿಸಿದ ನಂತರ ಬುದ್ಧಿ ಬಂದಂತಿರುವ ಆಡಳಿತಾರೂಢ ಬಿಜೆಪಿ ಇದೀಗ ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಲು ಹೊರಟಿದೆ. ಇಂದಿನಿಂದಲೇ ಈ ಜಾಗೃತಿ ಅಭಿಯಾನವನ್ನು ಕೈಗೊಂಡಿರುವ ಬಿಜೆಪಿ ಜನರನ್ನು ಓಲೈಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದೆ. 10 ದಿನಗಳ ಕಾಲ ಈ ಅಭಿಯಾನವನ್ನು ನಡೆಸಲು ನಿರ್ಧರಿಸಿದ್ದು, ಇದಕ್ಕೆ “ಜನ ಜಾಗರಣ ಅಭಿಯಾನ’’ ಎಂದು ನಾಮಕರಣ ಮಾಡಿದೆ. ಆದರೆ, ಈಗಾಗಲೇ ಸಿಎಎ ಅಲ್ಪಸಂಖ್ಯಾತ ಮುಸ್ಲಿಂರ ವಿರುದ್ಧವಾಗಿಯೇ ತರುತ್ತಿರುವ ಕಾನೂನು ಆಗಿದೆ ಎಂಬುದು ಜನರ ಮನಃಪಟಲದಲ್ಲಿ ಬೇರೂರಿಯಾಗಿದೆ.
ಈ ಸಿಎಎಯನ್ನು ಜಾರಿಗೆ ತರುತ್ತಿರುವುದೇ ಮುಸ್ಲಿಂರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ನೋಡಲೆಂಬುದು ನಾಡಿನ ಜನತೆಗೆ ಖಾತರಿಯಾಗಿದೆ. ಇದೊಂದು ಬಿಜೆಪಿಯ ಹಿಡನ್ ಅಜೆಂಡಾದ ಪ್ರಮುಖ ಕಾರ್ಯಕ್ರಮವಾಗಿದೆ ಎಂಬುದಂತೂ ಸ್ಪಷ್ಟವಾಗಿದೆ. ಈ ಬಗ್ಗೆ ಬಿಜೆಪಿ ನಾಯಕರೇ ಹಲವು ಸಂದರ್ಭಗಳಲ್ಲಿ ಖಚಿತಪಡಿಸಿಯೂ ಆಗಿದೆ. ಈ ಕಾರಣದಿಂದಾಗಿಯೇ ದೇಶಾದ್ಯಂತ ಈ ವಿವಾದಿತ ಸಿಎಎ ವಿರುದ್ಧ ಜನರು ದಂಗೆ ಎದ್ದಿದ್ದು, ಹಿಂಸಾತ್ಮಕ ಪ್ರತಿಭಟನೆಗಳನ್ನೂ ನಡೆಸುತ್ತಿದ್ದಾರೆ. ಇದರ ಗಂಭೀರತೆಯನ್ನು ಅರಿತಂತಿರುವ ಬಿಜೆಪಿ ನಾಯಕರು ಜನಾಭಿಪ್ರಾಯವಿಲ್ಲದೇ ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಅರಿತುಕೊಂಡಂತಿದೆ. ಹೀಗಾಗಿಯೇ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ.
ಆದರೆ, ಈ ಅಭಿಯಾನದ ಹಿಂದೆ ಬಿಜೆಪಿಯ ಮತ್ತೊಂದು ಹಿಡನ್ ಅಜೆಂಡಾ ಕೆಲಸ ಮಾಡಲಿದೆ ಎಂಬ ಗುಮಾನಿಗಳೂ ಕೇಳಿ ಬರುತ್ತಿವೆ. ಈ ಅಭಿಯಾನವನ್ನು ಕೇವಲ ಬಹುಸಂಖ್ಯಾತ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ನಡೆಸಲಾಗುತ್ತಿದೆ ಎಂಬ ಅನುಮಾನಗಳು ಮೂಡಿವೆ. ಅಭಿಯಾನವನ್ನು ಹಿಂದೂ ಮತಗಳನ್ನು ಕ್ರೋಢೀಕರಿಸಿಕೊಳ್ಳಲು ಬಳಸಲಾಗುವುದೇ? ಎಂಬ ಪ್ರಶ್ನೆಯೂ ಎದ್ದಿದೆ. ಏಕೆಂದರೆ, ಮೂಲಗಳ ಪ್ರಕಾರ ಅಭಿಯಾನದಲ್ಲಿ ಪಾಲ್ಗೊಳ್ಳುವ ಗುಂಪುಗಳು ಕೇವಲ ಹಿಂದೂಗಳೇ ಹೆಚ್ಚಿರುವ ಪ್ರದೇಶಗಳ ಮನೆಗಳಿಗೆ ತೆರಳಿ ಸಿಎಎ ಹಿಂದಿರುವ ಉದ್ದೇಶವನ್ನು ಮನವರಿಕೆ ಮಾಡಿಕೊಡುವ ಮೂಲಕ ಆ ಕುಟುಂಬಗಳ ಬ್ರೈನ್ ವಾಶ್ ಮಾಡಲಿವೆ ಎಂಬಂತೆ ಕಾಣುತ್ತಿದೆ. ಆದರೆ, ಆತಂಕಕ್ಕೆ ಒಳಗಾಗಿರುವ ಮುಸಲ್ಮಾನರ ಕುಟುಂಬಗಳಿಗೆ ಇದರಿಂದ ಯಾವುದೇ ಅಪಾಯವಿಲ್ಲ ಎಂಬ ಧೈರ್ಯವನ್ನು ಹೇಳುವ ಗೋಜಿಗೆ ಹೋಗುವುದಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಹಠಕ್ಕೆ ಬಿದ್ದಂತಿರುವ ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ಸಿಎಎ ಜಾರಿಯಿಂದ ಹಿಂದೆ ಸರಿಯುವುದಿಲ್ಲ ಎಂದಿದೆ. ದೇಶದಲ್ಲಿ ಎಷ್ಟೇ ಪ್ರತಿಭಟನೆಗಳು ನಡೆಯುತ್ತಿದ್ದರೂ ಈ ಕಾನೂನನ್ನು ಜಾರಿಗೆ ತಂದೇ ತರುತ್ತೇವೆ. ಇದರ ಸದುದ್ದೇಶವನ್ನು ಜನತೆಗೆ ತಿಳಿಹೇಳುತ್ತೇವೆ ಎಂದು ಹೇಳಿಕೊಳ್ಳುತ್ತಿದೆ. ಸಿಎಎ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸದೇ ಏಕಾಏಕಿ ಜಾರಿಗೆ ತರಲು ಹೊರಟಿದೆ ಎಂಬ ಅಪವಾದ ಬಿಜೆಪಿ ಸರ್ಕಾರದ ಮೇಲೆ ಬಂದಿದೆ. ಈ ಆರೋಪದಿಂದ ಹೊರಬರುವ ದೃಷ್ಟಿಯಿಂದ ಬಿಜೆಪಿ ಇದೀಗ ಜಾಗೃತಿ ಮೂಡಿಸುವ ಅಭಿಯಾನವನ್ನು ನಡೆಸುತ್ತಿದೆ. ಆದರೆ, ಈ ಅಭಿಯಾನದ ಪ್ರಮುಖ ಉದ್ದೇಶವೆಂದರೆ ಜನರಲ್ಲಿ ಸಿಎಎ ಬಗ್ಗೆ ಅರಿವು ಮೂಡಿಸುವುದರ ಬದಲಾಗಿ ಅದಕ್ಕೆ ಬೆಂಬಲ ನೀಡುವಂತೆ ಜನರಲ್ಲಿ ಮಾಡಿಕೊಳ್ಳುವುದಾಗಿದೆ. ಅಂದರೆ, ಇದರ ಸಾಧಕ ಬಾಧಕಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುವ ಅಭಿಯಾನ ಇದಲ್ಲ. ಬದಲಿಗೆ ಸಿಎಎ ಪರವಾಗಿರುವವರಿಂದ ಬೆಂಬಲವನ್ನು ಪಡೆಯುವುದಾಗಿದೆ.
ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ಅವರೇ ಹೇಳಿರುವಂತೆ, ಈ ಕಾನೂನಿಗೆ ಬೆಂಬಲ ಪಡೆಯಲೆಂದೇ ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆಯಂತೆ. ಸಿಎಎ ಬಗ್ಗೆ ಪ್ರತಿಪಕ್ಷಗಳು ಜನರಲ್ಲಿ ತಪ್ಪು ಸಂದೇಶಗಳನ್ನು ನೀಡುತ್ತಿವೆ. ಇದರಿಂದಾಗಿಯೇ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಇದರಿಂದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಜೈನ್ ಹೇಳಿದ್ದಾರೆ.
ದೇಶದ ಪ್ರಮುಖ 42 ನಗರಗಳಲ್ಲಿ, 700 ಜಿಲ್ಲಾ ಕೇಂದ್ರಗಳಲ್ಲಿ ಈ ಜಾಗೃತಿ ಅಭಿಯಾನ ನಡೆಯಲಿದೆ. ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿರುವ ದೆಹಲಿಯಲ್ಲಿ ಪಕ್ಷದ ಹಲವಾರು ಹಿರಿಯ ಮುಖಂಡರು ಅಭಿಯಾನ ನಡೆಸಲಿದ್ದಾರೆ. ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಮತ್ತಿತರೆ ನಾಯಕರು ಗಲಭೆ ಪೀಡಿತ ಉತ್ತರಪ್ರದೇಶದಲ್ಲಿ ಹಲವಾರು ರ್ಯಾಲಿಗಳನ್ನು ನಡೆಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಇದಲ್ಲದೇ, ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ನಾಯಕರು ರ್ಯಾಲಿ, ಸಭೆಗಳನ್ನು ನಡೆಸಿ ಜನರನ್ನು ಓಲೈಸಿಕೊಳ್ಳುವ ಪ್ರಯತ್ನ ಮಾಡಲಿದ್ದಾರೆ.
ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವುದಷ್ಟೇ ಅಲ್ಲ, ಬೀದಿ ಬದಿಯ ಸಭೆಗಳು, ವಿಚಾರ ಸಂಕಿರಣಗಳು, ಬೀದಿ ನಾಟಕಗಳು, ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕವೂ ಜಾಗೃತಿ ಮೂಡಿಸಲಾಗುತ್ತದೆ. ತಳಮಟ್ಟದ ಅಭಿಯಾನಕ್ಕೆ ಪಕ್ಷದ 3 ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು ಬಳಸಿಕೊಳ್ಳಲಿದೆ.