ಭಾರತದೊಂದಿಗೆ ವೃಥಾ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಚೀನಾದ ವಿರುದ್ಧ ಭಾರತದ ಜನಸಾಮಾನ್ಯರೂ ರೋಸಿ ಹೋಗಿದ್ದಾರೆ. ಲಢಾಖ್ ಪ್ರಾಂತ್ಯದಲ್ಲಿ ಉಭಯ ಸೇನೆಯ ಮುಖಾಮುಖಿಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಮೇಲಂತೂ ಭಾರತೀಯ ಜನ ಸಾಮಾನ್ಯರು ಚೈನಾ ನಿರ್ಮಿತ ವಸ್ತುಗಳನ್ನು ಬಹಿಷ್ಕರಿಸಲು ದೊಡ್ಡ ಮಟ್ಟಕ್ಕೆ ಕರೆ ನೀಡಿದ್ದಾರೆ.
ಈ ಮೊದಲೇ ಭಾರತ ಸ್ವದೇಶಿ ಕಡೆಗೆ ಮನಸು ಮಾಡಿತ್ತಾದರೂ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಭಾರತೀಯರಿಗೆ ಬೇಕಾದ ವಸ್ತುಗಳನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸುವಂತೆ ಉತ್ತೇಜಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆ ಬಂದಷ್ಟೇ ವೇಗದಲ್ಲಿ ಹಳ್ಳ ಹಿಡಿಯಿತು. ದೂರದರ್ಶಿತ್ವದ ಕೊರತೆ, ಬಂಡವಾಳ ಹೂಡುವಿಕೆದಾರರಲ್ಲಿ ನಂಬಿಕೆ ಹುಟ್ಟಿಸದಂತಹ ಆರ್ಥಿಕ ಬಜೆಟ್ ಮುಂತಾದ ವೈಫಲ್ಯಗಳಿಂದ ಮೇಕ್ ಇನ್ ಇಂಡಿಯಾ ಎಂಬ ಅದ್ಭುತ ಕಲ್ಪನೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿಲ್ಲ.
ಸದ್ಯ ಭಾರತದಲ್ಲಿ ಚೀನಾ ವಿರೋಧಿ ಅಲೆ ಇದೆ. ನೆರೆ ರಾಷ್ಟ್ರದೊಂದಿಗೆ ವಿವಾದ, ಸಂಘರ್ಷ ಏರ್ಪಡುವುದು ಇದೇ ಮೊದಲೇನಲ್ಲ. ಪಾಕಿಸ್ತಾನದೊಂದಿಗಿನ ಜಗಳಗಳು ವರ್ಷಕ್ಕೊಮ್ಮೆಯಾದರೂ ತೀವ್ರ ಸ್ವರೂಪ ಪಡೆಯುವಂತಹ ಪರಿಸ್ಥಿತಿ ಇದೆ. ಆದರೆ ಪಾಕಿಸ್ತಾನದೊಂದಿಗಿನ ಜಗಳಗಳಿಗಿಂತ ಭಿನ್ನವಾಗಿ ಚೀನಾದ ಮೊಂಡುತನವನ್ನು ಭಾರತೀಯರು ನೋಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಭಾರತೀಯರು ತಮ್ಮ ದಿನನಿತ್ಯ ಬಳಸುವ ವಸ್ತುಗಳಿಗೆ ಚೀನಾವನ್ನು ಬಹುವಾಗಿ ಅವಲಂಬಿಸಿಕೊಂಡಿದ್ದಾರೆ. ತಮ್ಮೊಂದಿಗೆ ವ್ಯಾಪಾರ ಮಾಡಿಕೊಂಡು ತಮ್ಮ ಯೋಧರನ್ನೇ ಕೊಲ್ಲುತ್ತಿರುವ ಚೀನಾದ ನಡೆ ಸಾಮಾನ್ಯ ಜನರಲ್ಲೂ ಆಕ್ರೋಶವನ್ನು ಹುಟ್ಟುಹಾಕಿಸಿದೆ.
ಇನ್ನು ಮುಂದೆ ಚೀನಾದ ವಸ್ತುಗಳನ್ನು ಬಳಸುವುದಿಲ್ಲವೆಂದು ನಿರ್ಧರಿಸಿರುವಂತಿರುವ ಭಾರತೀಯರು ಚೀನಾ ನಿರ್ಮಿತ ವಸ್ತುಗಳನ್ನು ಸಾರ್ವಜನಿಕವಾಗಿ ಒಡೆದು ಹಾಕಿ, ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಈ ಮೊದಲೇ ಚೀನಾ ಅಪ್ಲಿಕೇಶನ್ ಬಳಸಬಾರದೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದವರು, ರಸ್ತೆಗಿಳಿದು ವಸ್ತುಗಳನ್ನು ಒಡೆಯುತ್ತಿದ್ದಾರೆ. ಆದರೆ ಹೆಚ್ಚಿನವರಿಗೆ ತಾವು ಚೀನಾದ ಅಪ್ಲಿಕೇಶನ್ ಡಿಲಿಟ್ ಮಾಡಿರುವುದು, ಚೀನಾವನ್ನು ಬಹಿಷ್ಕರಿಸಿರುವುದು, ಚೀನಾ ನಿರ್ಮಿತ ವಸ್ತುಗಳನ್ನು ಒಡೆದು ಹಾಕುವ ವೀಡಿಯೋಗಳನ್ನು ಚಿತ್ರಿಸಿ, ಹಂಚುತ್ತಿರುವುದು ಚೈನಾ ನಿರ್ಮಿತ ಫೋನ್ಗಳಲ್ಲಿಯೇ ಎಂಬುದು ಗೊತ್ತಿಲ್ಲ.
ಭಾರತದಲ್ಲಿ ಸ್ಮಾರ್ಟ್ ಫೋನ್ ಚಾಲ್ತಿ ಅಷ್ಟೊಂದು ಇಲ್ಲದಿದ್ದಾಗ ಕಾರ್ಬನ್, ಮೈಕ್ರೋಮ್ಯಾಕ್ಸ್, ಲಾವಾ ಮುಂತಾದ ಭಾರತದ್ದೇ ಕಂಪೆನಿಗಳು ಭಾರತದ ಮಾರುಕಟ್ಟೆಯಲ್ಲಿ ತನ್ನ ಬೇಸಿಕ್ ಮಾಡೆಲ್ ಫೋನ್ಗಳಿಂದ ಪಾರುಪತ್ಯ ಹೊಂದಿತ್ತು. ಹಾಗೂ ಭಾರತದ ಕಂಪೆನಿಗಳೊಳಗಷ್ಟೇ ತೀವ್ರ ಪೈಪೋಟಿಯಿದ್ದಿತ್ತು. ಆ ಸಮಯದಲ್ಲಿ ಇನ್ನಷ್ಟು ಕಡಿಮೆ ಬೆಲೆಗೆ ಫಾರ್ಮಿ, ಜಿಫೈವ್ ಮೊದಲಾದ ಚೈನಾ ಕಂಪೆನಿಗಳು ಬೇಸಿಕ್ ಫೋನ್ ಭಾರತದ ಮಾರುಕಟ್ಟೆಗೆ ಇಳಿಸಿತ್ತಾದರೂ ಭಾರತದ ಕಾರ್ಬನ್, ಮೈಕ್ರೋಮ್ಯಾಕ್ಸ್, ಲಾವಾ ಮುಂತಾದ ಫೋನ್ಗಳು ಒಂದು ಅಥವಾ ಎರಡು ವರ್ಷದ ಗ್ಯಾರಂಟಿಯೊಂದಿಗೆ ಭಾರತದ ಬಹುತೇಕ ಜನರ ಕಿಸೆ ಅಲಂಕರಿಸಿತ್ತು. ಗುಣಮಟ್ಟವೂ ಚೆನ್ನಾಗಿದ್ದರಿಂದ ಭಾರತದ ಮಧ್ಯಮ ವರ್ಗ ಭಾರತದ ಕಂಪೆನಿಗಳೊಂದಿಗೆ ಗಟ್ಟಿಯಾಗಿ ನಿಂತಿತ್ತು.

ಯಾವಾಗ ಸ್ಮಾರ್ಟ್ ಫೋನ್ಗಳತ್ತ ಭಾರತದ ಜನತೆ ವಾಲಿದರೋ ಮಾರುಕಟ್ಟೆಯಲ್ಲಿ ಭಾರತೀಯ ಕಂಪೆನಿಗಳು ಕ್ರಮೇಣ ತನ್ನ ಪಾರುಪತ್ಯ ಕಳೆದುಕೊಂಡಿತು. ಅಲ್ಲದೆ ಹೊಸದಾಗಿ ಬಂದ ಮೋದಿ ಸರ್ಕಾರ ಆನ್ಲೈನ್ ವ್ಯಾಪಾರ, ಡಿಜಿಟಲ್ ಇಂಡಿಯಾ ಮುಂತಾದವುಗಳಿಗೆ ಪ್ರಾಶಸ್ತ್ಯ ನೀಡಿದ್ದು ಸ್ಮಾರ್ಟ್ ಫೋನ್ಗಳತ್ತ ಜನ ಸಾಮಾನ್ಯರೂ ಆಕರ್ಷಿತರಾಗುವಂತೆ ಮಾಡಿತು. ಅದೇ ಹೊತ್ತಿಗೆ ಜೊತೆಗೆ ರಿಲಾಯನ್ಸ್ ಜಿಯೋ ಸಿಮ್ ಪರಿಚಯಿಸಿ ಎಲ್ಲರಿಗೂ ಉಚಿತ ಇಂಟರ್ನೆಟ್ ಸೌಲಭ್ಯ ನೀಡುವುದರೊಂದಿಗೆ ಭಾರತೀಯರಲ್ಲಿ ಇಂಟರ್ನೆಟ್, ಸ್ಮಾರ್ಟ್ಫೋನ್ಗಳತ್ತ ಒಲವು ಹೆಚ್ಚಿತು.
ಭಾರತದಲ್ಲಿ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯನ್ನು ಆವರಿಸುತ್ತಿದ್ದಂತೆ ಬಲವಾದ ಹೊಡೆತ ಬಿದ್ದದ್ದು ಭಾರತದ ಲಾವಾ, ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಕಾರ್ಬನ್, ಐಬಾಲ್, ಸ್ಪೈಸ್, ವೀಡಿಯೋಕಾನ್, ಸೆಲ್ಕಾನ್ ಮುಂತಾದ ಕಂಪೆನಿಗಳಿಗೆ. ಸಾಧಾರಣವಾಗಿ ಸ್ಮಾರ್ಟ್ಫೋನ್ ಇನ್ನಷ್ಟು ತಂತ್ರಜ್ಞಾನ ಬಯಸುವುದರಿಂದ ಭಾರತದ ಫೋನ್ ಕಂಪೆನಿಗಳು ಚೀನಾ ನಿರ್ಮಿತ ಅತ್ಯಾಧುನಿಕ ಹಾಗೂ ಹೆಚ್ಚಿನ ಕಾರ್ಯಕ್ಷಮತೆ ಇರುವ ಚೀನಾ ಫೋನ್ಗಳೊಂದಿಗೆ ಸ್ಪರ್ಧಿಸಲು ಸೋತು ಬಿಟ್ಟಿತು. ನಷ್ಟ ತಾಳಲಾರದೆ ಮೈಕ್ರೊಮ್ಯಾಕ್ಸ್ ಅಂತೂ ತಮ್ಮ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತು.

ಇದಕ್ಕೂ ಮೊದಲು ಭಾರತದಲ್ಲಿ ಸ್ಮಾರ್ಟ್ ಪೋನ್ ಮಾರುಕಟ್ಟೆಯನ್ನು ಸ್ಯಾಮ್ಸಂಗ್ ಚಕ್ರವರ್ತಿಯಂತೆ ತನ್ನ ತೆಕ್ಕೆಯಲ್ಲಿಟ್ಟಿದ್ದರೂ, ನರೇಂದ್ರ ಮೋದಿ ಆಡಳಿತದ ಬಳಿಕ ಹೆಚ್ಚಿದ ಸ್ಮಾರ್ಟ್ ಫೋನ್ ಬಳಕೆದಾರರ ವಿಶ್ವಾಸವನ್ನು ನಿಭಾಯಿಸಲು ಸ್ಯಾಮ್ಸಂಗ್ ಪೋನ್ಗಳಿಗೆ ಸಾಧ್ಯವಾಗಿಲ್ಲ. ಆಗ ಭಾರತದ ಮಾರುಕಟ್ಟೆಯಲ್ಲಿ ಅರಸರಂತೆ ಮೆರೆದಿದ್ದೇ ಚೈನಾ ಮೊಬೈಲ್ ಫೋನ್ ಕಂಪೆನಿಗಳು. ಆಪಲ್, ಬ್ಲಾಕ್ಬೆರಿಯಂತಹ ಫೋನ್ಗಳು ಶ್ರೀಮಂತರ ವಸ್ತುವಾಗಿಯೇ ಬಿಟ್ಟ ಭಾರತದಲ್ಲಿ ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಕೂಸಾಗಿಬಿಟ್ಟ ಚೈನಾ ಸ್ಮಾರ್ಟ್ ಫೋನ್ಗಳನ್ನು ಮಟ್ಟಹಾಕಲು ಭಾರತದ ಯಾವ ಕಂಪೆನಿಗಳಿಗೂ ಸಾಧ್ಯವಾಗಿಲ್ಲ. ಜಪಾನ್, ಫಿನ್ಲ್ಯಾಂಡ್ರಂತಹ ರಾಷ್ಟ್ರಗಳ ಫೋನ್ ಕಂಪೆನಿಗಳೂ ಭಾರತದ ಮಾರುಕಟ್ಟೆಯಲ್ಲಿ ಚೈನಾ ಫೋನ್ಗಳನ್ನು ಸಮರ್ಥವಾಗಿ ಎದುರಿಸಲು ಸೋತು ಹೋಯಿತು. ಆದರೆ ಚೈನಾ ಕಂಪೆನಿಗಳ ಜನಪ್ರಿಯತೆಗೆ ತಕ್ಕ ಮಟ್ಟಿಗೆ ಪ್ರತಿರೋಧ ಒಡ್ಡಿದ್ದು ಜಪಾನ್ ಮೂಲದ ಸ್ಯಾಮ್ಸಂಗ್. ಆದರೆ ಚೈನಾ ಕಂಪೆನಿಗಳು ಸ್ಯಾಮ್ಸಂಗನ್ನೂ ಮೀರಿ ಭಾರತೀಯರ ವಿಶ್ವಾಸ ಗಳಿಸಿಬಿಡಲು ಶುರುಮಾಡಿದೆ.

ಇದರ ನಡುವೆ, ಜಿಯೋ ಸಿಮ್ನೊಂದಿಗೆ ಪರಿಚಯಿಸಿದ ಲೈಫ್(LYF) ಫೋನ್ ತನ್ನ ಅಸಮರ್ಥತೆಯನ್ನು ಬಹಳ ಬೇಗನೇ ಸಾಬೀತು ಪಡಿಸಿತು. ಚೀನಾದ ಸ್ಮಾರ್ಟ್ ಫೋನ್ಗಳ ಚಕ್ರವ್ಯೂಹದೆದುರು ಅಭಿಮನ್ಯುನಂತೆ ನುಗ್ಗಿ ಭರವಸೆ ಮೂಡಿಸಿದ ಲೈಫ್ ಸ್ಮಾರ್ಟ್ ಫೋನ್ ತನ್ನ ಅಸಮರ್ಥತೆಯಿಂದ ತಾನು ಅಭಿಮನ್ಯು ಅಲ್ಲ ಎಂದು ಸೋಲೊಪ್ಪಿ ಮೂಲೆಗುಂಪಾಯಿತು.
ಭಾರತಕ್ಕೆ ಅವಳಿಗಳಂತೆ ಭವ್ಯವಾಗಿ ಎಂಟ್ರಿಕೊಟ್ಟ ಎರಡು ಚೈನಾ ಮೇಡ್ ಸ್ಮಾರ್ಟ್ ಫೋನ್ಗಳೆಂದರೆ ವೀವೋ ಮತ್ತು ಒಪ್ಪೋ. ಭಾರೀ ಬಂಡವಾಳದೊಂದಿಗೆ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ ಈ ಎರಡು ಫೋನ್ ಕಂಪೆನಿಗಳು ಇಡಿಯ ಭಾರತದ ನಗರಗಳೆಲ್ಲವೂ ತಮ್ಮ ಜಾಹಿರಾತಿನಿಂದ ಕಂಗೊಳಿಸುವಂತೆ ಮಾಡಿತು. ಭಾರತದಲ್ಲಿ ಉಳಿದೆಲ್ಲಾ ಫೋನ್ಗಳಿಗಿಂತ ಹೆಚ್ಚು ಪ್ರಚಾರಕ್ಕೆ ಬಂಡವಾಳ ಹೂಡಿದ್ದು ಇವೇ ಎರಡು ಕಂಪೆನಿಗಳೆಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಅದುವರೆಗೂ ಶಯೋಮಿ ಎಂಬ ಇನ್ನೊಂದು ಚೈನಾ ನಿರ್ಮಿತ ಪೋನ್ಗಳು ಬಹಳಷ್ಟು ಅಂಗಡಿ, ಷೋರೂಮ್ಗಳನ್ನು ಹೊಂದಿರಲಿಲ್ಲ. ಆದರೂ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕ ವಲಯವನ್ನು ಸೃಷ್ಟಿಸಿತು.
ಭಾರತದಲ್ಲಿ ಸ್ಮಾರ್ಟ್ಫೋನ್ಗಳು ಪ್ರಚಲಿತವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದ ಚೀನಾದ ಬೀಜಿಂಗ್ ಮೂಲದ ಫೋನ್ ಶಿಯೋಮಿ(Xiaomi). ಹೆಚ್ಚಿನ ಕಾರ್ಯಕ್ಷಮತೆಯನ್ನು ಸಾಧಾರಣ ಬೆಲೆಗೆ ನೀಡಿ ಭಾರತದ ಮಧ್ಯಮ ವರ್ಗದ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿತು. ವೀವೋ-ಒಪ್ಪೋ ಇಷ್ಟಪಡದ ಆದರೆ ಸುಮಾರು ಅದೇ ಆಸುಪಾಸಿನ ಬೆಲೆಯ ಶಿಯೋಮಿ ಮುಖ್ಯವಾಗಿ ನಗರ ನಿವಾಸಿಗಳನ್ನು ಬಹುವಾಗಿ ಆಕರ್ಷಿಸಿತು. ನೋಟ್ 4 ಹಾಗೂ ಎ1 ಮಾರುಕಟ್ಟೆಯಲ್ಲಿ ಭಾರೀ ಸದ್ದನ್ನು ಉಂಟುಮಾಡಿತ್ತು. ತನ್ನ ಎ1 ಮಾಡೆಲ್ ಫೋನ್ನಲ್ಲಿ ಅಪ್ರತಿಮ ಕೆಮರಾ ಫಂಕ್ಷನ್ ನೀಡಿದ ಶಿಯೋಮಿ ಕಡೆಗೆ ಫೊಟೋಗ್ರಾಫಿ ಆಸಕ್ತಿ ಇರುವವರು ವಾಲಿದರು. ನಂತರ ಬಂದ ಪೋಕೋ ಎಫ್ 1 ಕೂಡಾ ತಕ್ಕ ಮಟ್ಟಿಗೆ ಯಶಸ್ಸನ್ನು ಪಡೆಯಿತು.
ಸದ್ಯ ಭಾರತದ ಮೊಬೈಲ್ಫೋನ್ ಮಾರುಕಟ್ಟೆಯನ್ನು ವಿವೋ, ಒಪ್ಪೋ, ರಿಯಲ್ಮಿ, ಶಯೋಮಿ, ಒನ್ಪ್ಲಸ್ ಹಂಚಿಕೊಂಡು ಆಳುತ್ತಿದೆ. ಪ್ರತಿಯೊಂದು ಕಂಪೆನಿಗಳೂ ತನ್ನದೇ ಆದ ಗ್ರಾಹಕ ವರ್ಗವನ್ನು ಕಟ್ಟಿಕೊಂಡಿದೆ.

2019 ರ ಮೊದಲ ತ್ರೈಮಾಸಿಕದಲ್ಲಿ 29 ಶೇಕಡಾದಷ್ಟು ಚೀನಾದ ಶಯೋಮಿ, ಎರಡನೇ ತ್ರೈಮಾಸಿಕದಲ್ಲಿ 28, ಮೂರನೇ ತ್ರೈಮಾಸಿಕದಲ್ಲಿ 26 ಹಾಗೂ ನಾಲ್ಕನೇ ತ್ರೈ ಮಾಸಿಕದಲ್ಲಿ 27 ಶೇಕಡಾ ಪಾರುಪತ್ಯ ಹೊಂದಿತ್ತು. 2020 ರ ಮೊದಲ ತ್ರೈಮಾಸಿಕದಲ್ಲಿ ಮತ್ತೆ ತನ್ನ ಷೇರು ವೃದ್ಧಿಸಿಕೊಂಡ ಶಯೋಮಿ 30 ಶೇಕಡಾದಷ್ಟು ಫೋನುಗಳನ್ನು ಮಾರಾಟ ಮಾಡಿದೆ. ಬಳಿಕದ ಸ್ಥಾನದಲ್ಲಿ ವೀವೋ ಇದ್ದರೆ, ಸ್ಯಾಮ್ಸಂಗ್ ತನ್ನ ಮಾರುಕಟ್ಟೆಯನ್ನು ಕಳೆದುಕೊಂಡು ಮೂರನೇ ಸ್ಥಾನಕ್ಕಿಳಿಯಿತು. ನಾಲ್ಕನೇ ಮತ್ತು ಐದನೇ ಸ್ಥಾನ ಪಡೆದಿರುವ ಒಪ್ಪೋ ಮತ್ತು ರಿಯಲ್ಮಿ ಕೂಡಾ ತನ್ನ ಗ್ರಾಹಕರನ್ನು ವೃದ್ಧಿಸಿಕೊಂಡಿದೆ.
ಭಾರತದ ಮಾರುಕಟ್ಟೆಯಲ್ಲಿ ಶಿಯೋಮಿ 30%, ವೀವೋ 17% , ರಿಯಲ್ಮಿ 14% ,ಒಪ್ಪೊ 12% ಪಾರುಪತ್ಯ ಹೊಂದಿದೆ, ಅಂದರೆ ಸಾಧಾರಣ ಬೆಲೆಯ 62% ದಷ್ಟು ಭಾರತದ ಸ್ಮಾರ್ಟು ಫೋನುಗಳು ಚೀನಾ ಮೂಲದವೇ ಆಗಿವೆ. ಇನ್ನು ಪ್ರೀಮಿಯಂ ವಿಭಾಗದಲ್ಲಿ ಆಪಲ್, ಸ್ಯಾಮ್ಸಂಗ್ ಕಂಪೆನಿಗಳಿಗೆ ಪ್ರಬಲ ಪೈಪೋಟಿ ನೀಡಿ ಚೈನಾ ಮೂಲದ ಒನ್ಪ್ಲಸ್ ಪ್ರೀಮಿಯಂ ವಿಭಾಗದ 33% ದಲ್ಲಿ ತನ್ನ ಪಾರುಪತ್ಯ ಛಾಪಿಸಿದೆ. ಒನ್ಪ್ಲಸ್ ಪ್ರೀಮಿಯಂ ವಿಭಾಗದ ದಿಗ್ಗಜರಾದ ಆಪಲ್, ಸ್ಯಾಮ್ಸಂಗನ್ನೂ ಭಾರತದ ಮಾರುಕಟ್ಟೆಯಲ್ಲಿ ಅನಾಮತ್ತಾಗಿ ಮಟ್ಟ ಹಾಕಿದೆ. ಜುಲೈನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಒನ್ಪ್ಲಸ್ 8 ಸರಣಿಯ ಫೋನ್ಗಳಿಗೆ ಬಳಕೆದಾರರು ಉತ್ಸುಕರಾಗಿ ಕಾಯುತ್ತಿದ್ದಾರೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸಾಮಾನ್ಯ ಹಾಗೂ ಪ್ರೀಮಿಯಂ ಎರಡೂ ವಿಭಾಗದಲ್ಲೂ ಚೈನಾ ಕಂಪೆನಿಗಳು ದೊಡ್ಡ ಷೇರನ್ನು ಹೊಂದಿದೆ. ಪ್ರೀಮಿಯಂ ವಿಭಾಗದಲ್ಲಿ ಈ ಮೊದಲು ಅಮೇರಿಕಾ, ಜಪಾನ್ ಕಂಪೆನಿಗಳು ಇರುತ್ತಿದ್ದವು, ಈಗ ಅದನ್ನೂ ಹಿಂದಿಕ್ಕಿ ಚೀನಾ ಕಂಪೆನಿ ಮೆರೆದಿದೆ.
ವಸ್ತು ಸ್ಥಿತಿ ಹೀಗಿದೆ. ಹತ್ತಿಪ್ಪತ್ತು ಸಾವಿರ ರುಪಾಯಿ ನೀಡಿ ಚೈನಾ ಫೋನ್ಗಳನ್ನು ಕೊಂಡು ಗೂಗಲ್ ಪ್ಲೇ ಸ್ಟೋರಿನಲ್ಲಿ ಸಿಗೋ ಉಚಿತ ಅಪ್ಲಿಕೇಶನ್ ಅನ್ಇನ್ಸ್ಟಾಲ್ ಮಾಡಿದರೆ ಚೀನಾಕ್ಕೆ ಯಾವುದೇ ಹೆಚ್ಚಿನ ಫರಕಾಗದು. ಅಷ್ಟಕ್ಕೂ ಚೀನಾ ಸರಕುಗಳನ್ನು ಬಹಿಷ್ಕರಿಸುವುದೆಂದರೆ ಅವರಿಗೆ ಇಲ್ಲಿಯ ಹಣ ಪಾವತಿಸಿ ಆಮದು ಮಾಡಿದ ವಸ್ತುಗಳನ್ನು ಇಲ್ಲಿ ನಾಶ ಪಡಿಸುವುದೆಂದಲ್ಲ. ಬದಲಾಗಿ ಭಾರತಕ್ಕೆ ಅಗತ್ಯ ಇರುವಂತಹ ವಸ್ತುಗಳನ್ನು ಭಾರತವೇ ತಯಾರಿಸುವಂತಹ ವಾತಾವರಣ ನಿರ್ಮಿಸುವುದು. ಈಗಾಗಲೇ ಆಮದು ಮಾಡಿದ ವಸ್ತುಗಳನ್ನು ಇಲ್ಲಿ ಒಡೆದು ಹಾಕಿದರೆ ಚೀನಾಕ್ಕೆ ಯಾವ ನಷ್ಟ ಹೇಳಿ? ವಸ್ತುವಿನ ಹಣ ಅವರಿಗೆ ಈಗಾಗಲೇ ತಲುಪಿಯಾಗಿದೆ. ಒಮ್ಮೆ ಮಾರಾಟವಾದ ಮೇಲೆ ಗ್ರಾಹಕರು ವಸ್ತುವನ್ನು ಬಳಸಿಕೊಳ್ಳುತ್ತಾರೋ, ನಾಶ ಮಾಡುತ್ತಾರೋ ಅನ್ನುವುದನ್ನು ಮಾರಾಟ ಮಾಡಿದವನು ಯಾಕೆ ಯೋಚಿಬೇಕು? ಅವನ ಗಲ್ಲಾ ತುಂಬಬೇಕು, ತುಂಬಿದೆ.