ಕಳೆದ ಹಲವು ತಿಂಗಳಿಂದ ಈ ಬಲಪಂಥೀಯ, ಎಡ ಪಂಥೀಯ ವಾದಗಳ ಸಂಕೋಲೆಯಲ್ಲಿ ಸಿಲುಕಿ ನಲುಗುತ್ತಿರುವ ದೇಶದ ಎರಡು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿವೆ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಪ್ರತಿಷ್ಠೆಯಿಂದಾಗಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಗಳು ಹೊತ್ತಿ ಉರಿಯುತ್ತಿವೆ.
ಕಳೆದ ತಿಂಗಳು 15 ರಂದು ಪೌರತ್ವ ಕಾನೂನಿನ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದಾಗ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲದೊಳಗೆ ಏಕಾಏಕಿ ನುಗ್ಗಿದ್ದ ಪೊಲೀಸರು ಗೂಂಡಾವರ್ತನೆ ತೋರಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿ, ಗೋಲಿಬಾರ್ ಸಹ ಮಾಡಿ ಪೈಶಾಚಿಕವಾಗಿ ನಡೆದುಕೊಂಡಿದ್ದರು.
ಅಂದಿನಿಂದ ಇಂದಿನವರೆಗೆ ವಿವಿಗೆ ಪೊಲೀಸರ ಸರ್ಪಗಾವಲನ್ನು ಹಾಕಲಾಗಿದೆ. ವಿವಿಗೆ ಹೋಗಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ವಿವಿಯ ಸಿಬ್ಬಂದಿ ವರ್ಗ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ವಿಶ್ವವಿದ್ಯಾಲಯವೀಗ ಆತಂಕ-ಭೀತಿಯನ್ನು ಹುಟ್ಟಿಸುವಂತಹ ವಾತಾವರಣದಲ್ಲಿದೆ.
ಇದರ ಪರಿಣಾಮ ವಿವಿಯ ವಿವಿಧ ಕೋರ್ಸ್ ಗಳಿಗೆ ನಡೆಯುತ್ತಿದ್ದ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಪೊಲೀಸ್ ಸರ್ಪಗಾವಲಿನಲ್ಲಿ ಪರೀಕ್ಷೆಗಳು ಕೆಲವು ದಿನಗಳಿಂದ ನಡೆಯುತ್ತಿದ್ದವು. ಆದರೆ, ಸೋಮವಾರ ವಿದ್ಯಾರ್ಥಿಗಳು ತಮ್ಮ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಅಲ್ಲಿನ ಉಪಕುಲಪತಿಗೆ ಘೆರಾವ್ ಹಾಕಿದ್ದರಿಂದ ಏಕಾಏಕಿ ಪರೀಕ್ಷೆಗಳನ್ನೇ ರದ್ದು ಮಾಡುವ ನಿರ್ಧಾರವನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕೈಗೊಂಡಿದೆ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದು, ಮತ್ತೆ ಇನ್ನೆಷ್ಟು ದಿನಕ್ಕೆ ಪರೀಕ್ಷೆಗಳನ್ನು ನಡೆಸುತ್ತಾರೋ? ಫಲಿತಾಂಶ ಬರುವುದು ಯಾವಾಗಲೋ? ತಮ್ಮ ಮುಂದಿನ ಶೈಕ್ಷಣಿಕ ಅಥವಾ ವೃತ್ತಿ ಬದುಕಿಗೆ ಇದು ಮಾರಕವಾಗಲಿದೆ ಎಂಬ ಆತಂಕ ಅವರಲ್ಲಿ ಮನೆ ಮಾಡಿದೆ.
ಡಿಸೆಂಬರ್ 15 ರಂದು ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಜಾಮಿಯಾ ಮಿಲಿಯಾ ವಿವಿ ಆವರಣದ ಸಮೀಪ ಬಸ್ ಗಳಿಗೆ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಇದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಈ ಲಾಠಿ ಪೆಟ್ಟಿನಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ವಿವಿಯೊಳಗೆ ಹೋದರು.
ಆದರೆ, ಅಲ್ಲಿ ನಡೆದದ್ದೇ ಬೇರೆಯದ್ದಾಗಿತ್ತು.
ಸಾಮಾನ್ಯವಾಗಿ ಯಾವುದೇ ಶಿಕ್ಷಣ ಸಂಸ್ಥೆಯೊಳಗೆ ಖಾಕಿ ಪಡೆ ಅಂದರೆ ಪೊಲೀಸರು ಪ್ರವೇಶಿಸಬೇಕಾದರೆ ಆಯಾ ಸಂಸ್ಥೆಯ ಪೂರ್ವಾನುಮತಿ ಬೇಕಾಗುತ್ತದೆ. ಆದರೆ, ಪೊಲೀಸರು ವಿವಿಯ ಯಾವುದೇ ಅನುಮತಿಗೂ ಕಾಯದೇ ವಿದ್ಯಾರ್ಥಿಗಳನ್ನು ಕಳ್ಳರ ರೀತಿಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಮನಸೋಇಚ್ಛೆ ಥಳಿಸಿದ್ದರು. ಪೊಲೀಸರ ಕ್ರೌರ್ಯ ಹೇಗಿತ್ತೆಂದರೆ, ಲೈಬ್ರರಿಗೂ ನುಗ್ಗಿದ ಪೊಲೀಸರು ತಮ್ಮ ಪಾಡಿಗೆ ಓದುತ್ತಾ ಕುಳಿತ್ತಿದ್ದ ವಿದ್ಯಾರ್ಥಿಗಳನ್ನು ಹೊರಗೆ ಎಳೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಇದರಲ್ಲಿ ವಿದ್ಯಾರ್ಥಿನಿಯರು, ವಿವಿಯ ಭದ್ರತಾ ಸಿಬ್ಬಂದಿಯನ್ನೂ ಬಿಡದೇ ಅವರ ಮೇಲೂ ಲಾಠಿ ಬೀಸುವ ಮೂಲಕ ಕ್ರೌರ್ಯವನ್ನು ಮೆರೆದರು.
ಈ ಘಟನೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಹಿರಿಯ ಐಪಿಎಸ್ ಅಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ದೂರು ನೀಡಿತ್ತಾದರೂ ಇದುವರೆಗೂ ತಪ್ಪಿತಸ್ಥ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವ ಪ್ರಯತ್ನವನ್ನು ಪೊಲೀಸ್ ಇಲಾಖೆ ಮಾಡಲಿಲ್ಲ. ಒತ್ತಡಗಳು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆಂಬ ಗುಮಾನಿ ಇರುವುದರಿಂದ ವಿದ್ಯಾರ್ಥಿ ಸಮೂಹ ಸೋಮವಾರ ಎಫ್ಐಆರ್ ದಾಖಲು ಮಾಡುವಂತೆ ಒತ್ತಡ ಹೇರಲಿ ಎಂಬ ಕಾರಣಕ್ಕೆ ವಿವಿ ಉಪಕುಲತಿಗೆ ಘೆರಾವ್ ಮಾಡಿದೆ.
ಪೊಲೀಸರು ಉದ್ದೇಶಪೂರ್ವಕವಾಗಿಯೇ ಸಿಸಿಟಿವಿ ಕ್ಯಾಮೆರಾಗಳ ನೆಟ್ವರ್ಕ್ ಅನ್ನು ನಾಶ ಪಡಿಸಿ ನಂತರ ವಿದ್ಯಾರ್ಥಿಗಳ ಮೇಲೆ ಟಿಯರ್ ಗ್ಯಾಸ್ ಸಿಡಿಸಿದ್ದಾರೆ, ಸ್ಟನ್ ಗ್ರೆನೇಡ್ ಎಸೆದಿದ್ದಾರೆ. ಅಂದರೆ ಇದರರ್ಥ ಪೊಲೀಸರು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಬೇಕೆಂದು ಮೊದಲೇ ನಿರ್ಧರಿಸಿ ಬಂದಂತಿದ್ದರು.
ಪೊಲೀಸರ ಈ ಪೈಶಾಚಿಕ ಕೃತ್ಯವನ್ನು ಉಪಕುಲಪತಿ ನಜ್ಮಾ ಅಖ್ತರ್ ಅವರು ತೀವ್ರವಾಗಿ ಖಂಡಿಸಿದ್ದರು. ಅಲ್ಲದೇ, ಪೊಲೀಸರು ವಿವಿಯೊಳಗೆ ಪ್ರವೇಶಿಸಲು ವಿವಿಯ ಅನುಮತಿಯನ್ನೇ ಕೇಳಿರಲಿಲ್ಲ, ವಿವಿ ಕೂಡ ಅನುಮತಿ ನೀಡಿರಲಿಲ್ಲ. ಹೀಗಾಗಿ ಪೊಲೀಸರು ವಿಶ್ವವಿದ್ಯಾಲಯವನ್ನು ಕಾನೂನು ಬಾಹಿರವಾಗಿ ಪ್ರವೇಶ ಮಾಡಿರುವುದು ಸ್ಪಷ್ಟವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಜೆಎನ್ ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶ್ ಘೋಷ್ ಸೇರಿದಂತೆ ವಿದ್ಯಾರ್ಥಿಗಳ ಮೇಲೆ ಗೂಂಡಾಗಳು ಹಲ್ಲೆ ನಡೆಸಿದ ನಡೆಸುತ್ತಿದ್ದ ವಿಷಯ ತಿಳಿದಿದ್ದರೂ ಪೊಲೀಸರು ವಿಶ್ವವಿದ್ಯಾಲಯ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಅನುಮತಿಗಾಗಿ ವಿವಿಯ ಬಾಗಿಲಲ್ಲಿ ಕಾಯುತ್ತಾ ಕುಳಿತ್ತಿದ್ದರು. ಏಕೆಂದರೆ, ಹಲ್ಲೆ ಮಾಡುತ್ತಿದ್ದವರು ಸಂಘ ಪರಿವಾರ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಕಾರ್ಯಕರ್ತರು. ಹಲ್ಲೆಗೊಳಗಾದವರು ಎಡ ಪಕ್ಷ ಬೆಂಬಲಿತ ವಿದ್ಯಾರ್ಥಿಗಳು. ಅಂದರೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಅಂಗವಾದ ಕಾರಣಕ್ಕೆ ಎಬಿವಿಪಿ ಎಷ್ಟೇ ಆಟಾಟೋಪ, ಪುಂಡಾಟ ಮಾಡುತ್ತಿದ್ದರೂ ಅದನ್ನು ತಡೆಯಲು ಪೊಲೀಸರು ಮನಸು ಮಾಡಲಿಲ್ಲ. ಆಗ ಮಾತ್ರ ಪೊಲೀಸರಿಗೆ ವಿವಿ ಪ್ರವೇಶಿಸಲು ಪೂರ್ವಾನುಮತಿ ಬೇಕಿತ್ತು. ಅಲ್ಲದೇ, ಎಬಿವಿಪಿ ಕಾರ್ಯಕರ್ತರ ಪುಂಡಾಟ ಮುಗಿದು ಅವರು ಪರಾರಿಯಾದ ನಂತರ ಅನುಮತಿ ಸಿಕ್ಕಿತು ಎಂದು ಪೊಲೀಸರು ಆವರಣದೊಳಕ್ಕೆ ಬಂದು ಶಾಸ್ತ್ರಕ್ಕೆಂಬಂತೆ ಅಲ್ಲಿ ನೆರೆದಿದ್ದವರನ್ನು ಚದುರಿಸಿದರು.
ಆದರೆ, ಜಾಮಿಯಾ ವಿವಿ ವಿಚಾರದಲ್ಲಿ ಪೊಲೀಸರಿಗೆ ಯಾರದೇ ಅನುಮತಿ ಬೇಕಿರಲಿಲ್ಲ. ಏಕೆಂದರೆ, ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಅವರು ಪ್ರತಿಭಟನೆ ನಡೆಸುತ್ತಿದ್ದುದು ಕೇಂದ್ರ ಸರ್ಕಾರದ ಸಿಎಎ ಕಾನೂನಿನ ವಿರುದ್ಧ. ಹೀಗಾಗಿ ಪ್ರತಿಭಟನಾಕಾರರನ್ನು ಹೇಗಾದರೂ ಮಾಡಿ ಹತ್ತಿಕ್ಕಬೇಕೆಂದುಕೊಂಡೇ ಪೊಲೀಸರು ವಿವಿಯೊಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂಬುದು ಬಹಿರಂಗ ಗುಟ್ಟಾಗಿದೆ.
ವಿದ್ಯಾರ್ಥಿಗಳ ನಿಯೋಗಗಳು ಹಲವು ಬಾರಿ ಉಪಕುಲಪತಿಗಳನ್ನು ಭೇಟಿ ಮಾಡಿ ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯದ ಮೊರೆ ಹೋಗಬೇಕು ಮತ್ತು ಪ್ರತಿಭಟನೆಗಳು ನಡೆದಿರುವುದರಿಂದ ಪರೀಕ್ಷೆಗೆ ಸಿದ್ಧರಾಗಲು ಸಾಧ್ಯವಾಗಿಲ್ಲದಿರುವುದರಿಂದ ಪರೀಕ್ಷೆಗಳನ್ನು ಮುಂದೂಡಬೇಕೆಂದು ಮನವಿ ಮಾಡಿದ್ದರು.
ಆದರೆ, ಈ ಬಗ್ಗೆ ಉಪಕುಲಪತಿಗಳು ಯಾವುದೇ ತೀರ್ಮಾನಗಳನ್ನು ಕೈಗೊಳ್ಳದಿದ್ದುದರಿಂದ ವಿದ್ಯಾರ್ಥಿಗಳು ಸೋಮವಾರ ನೇರವಾಗಿ ಅವರ ಕಚೇರಿಗೆ ತೆರಳಿ ತಮ್ಮ ಬೇಡಿಕೆಗಳನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ವಿವಿ ಆಡಳಿತ ಮಂಡಳಿ ಪರೀಕ್ಷೆಗಳನ್ನು ಮುಂದೂಡುವ ನಿರ್ಧಾರಕ್ಕೆ ಬಂದಿದೆ.
ಕೃಪೆ: ದಿ ಟೆಲಿಗ್ರಾಫ್