ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕನಿಷ್ಠ ಮಟ್ಟಕ್ಕೆ ಕುಸಿದಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏಕೆ ಸಾಮಾನ್ಯ ಮಟ್ಟದಲ್ಲೇ ಇದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಗ್ರಾಹಕರ ಜೇಬಿಗೆ ಮತ್ತೆ ಕನ್ನ ಹಾಕಿದೆ. ಅರ್ಥಾತ್ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತಲಾ ₹3 ಎಕ್ಸೈಜ್ ಸುಂಕ ಹೇರಿದೆ.
ಇದರರ್ಥ ಬರುವ ದಿನಗಳಲ್ಲಿ ದಿನಗಳಲ್ಲಿ ಕಚ್ಚಾ ತೈಲ ದರ ಕುಸಿದರೆ ಪೆಟ್ರೋಲ್ ಮತ್ತು ಡಿಸೇಲ್ ದರವು ಈಗಿರುವ ಮಟ್ಟದಿಂದ ದೊಡ್ಡ ಪ್ರಮಾಣದಲ್ಲಿ ಇಳಿಯುವುದಿಲ್ಲ. ಒಂದು ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಆದರೆ, ಆಗ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ತ್ವರಿತವಾಗಿ ಏರುತ್ತದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಇಳಿದಾಗ ದೇಶೀಯ ಮಾರುಕಟ್ಟೆಯಲ್ಲಿ ದರ ಇಳಿಸದೇ, ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿದಾಗ, ದೇಶೀಯ ಮಾರುಕಟ್ಟೆ ದರವನ್ನು ತ್ವರಿತವಾಗಿ ಏರಿಸುವ ತಂತ್ರವನ್ನು ನರೇಂದ್ರ ಮೋದಿ ಸರ್ಕಾರ ಆರಂಭದಿಂದಲೂ ಅನುಸರಿಸುತ್ತಾ ಬಂದಿದೆ.
ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ನಿರುದ್ಯೋಗ ಹೆಚ್ಚುತ್ತಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಈ ಹೊತ್ತಿನಲ್ಲಾದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದ ತೈಲ ದರದ ಲಾಭವನ್ನು ಗ್ರಾಹಕರಿಗೆ ವರ್ಗಾಹಿಸಬೇಕಿತ್ತು. ಜನಸಾಮಾನ್ಯರ ಮೇಲಿನ ಭಾರವನ್ನು ಒಂದಷ್ಟು ತಗ್ಗಿಸಬಹುದಿತ್ತು. ಸದಾ ತನ್ನ ಖಜಾನೆ ಭರ್ತಿ ಮಾಡಿಕೊಳ್ಳುವ ಉಮೇದಿನಲ್ಲಿರುವ ನರೇಂದ್ರ ಮೋದಿ ಸರ್ಕಾರ ಗ್ರಾಹಕರ ಮೇಲೆ ಕರುಣೆ ತೋರಿಸಿಲ್ಲ. ಎಕ್ಸೈಜ್ ಸುಂಕ ಹೇರುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ.
ಕೇಂದ್ರ ಸರ್ಕಾರದ ಹೇರಿರುವ ಎಕ್ಸೈಜ್ ಸುಂಕವು ಮಾರ್ಚ್ 14ರಿಂದಲೇ ಜಾರಿಯಾಗುತ್ತಿದೆ. ಹೇರಿರುವ ಮೂರು ರುಪಾಯಿ ಸುಂಕದ ಪೈಕಿ ವಿಶೇಷ ಹೆಚ್ಚುವರಿ ಎಕ್ಸೈಜ್ ಸುಂಕ (ಎಸ್ಎಇಡಿ)ದಡಿ ಎರಡು ರುಪಾಯಿ ಮತ್ತು ರಸ್ತೆ ಮತ್ತು ಮೂಲಭೂತ ಸೌಲಭ್ಯಗಳ ಕರ (RIC) ಅಡಿಯಲ್ಲಿ 1 ರುಪಾಯಿ ಸುಂಕ ಹೇರಲಾಗಿದೆ.
ಕೇಂದ್ರ ಸರ್ಕಾರವು ಸುಂಕ ಹೇರಿದ್ದರೂ ಮಾರುಕಟ್ಟೆಯಲ್ಲಿನ ಈಗಿರುವ ದರದಲ್ಲಿ ಏರಿಕೆ ಕಾಣುವುದಿಲ್ಲ. ಏಕೆಂದರೆ, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೀವ್ರವಾಗಿ ದರ ಕುಸಿದಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲೂ ತೀವ್ರವಾಗಿ ದರ ಇಳಿಯಬೇಕಿತ್ತು. ಆದರೆ, ಮೋದಿ ಸರ್ಕಾರ ಸುಂಕ ಹೇರಿರುವುದರಿಂದ ನಿತ್ಯ 2 ರಿಂದ 10 ಪೈಸೆಯಷ್ಟು ದರ ಇಳಿಯಬಹುದು. ಆದರೆ, ಒಂದನ್ನು ಗಮನಿಸಿ, ಮೋದಿ ಸರ್ಕಾರವು ಪೆಟ್ರೋಲ್ ದರ 70 ರುಪಾಯಿಗಿಂತ ಕೆಳಮಟ್ಟಕ್ಕೆ ಇಳಿಯಲು ಬಿಡುವುದಿಲ್ಲ.
ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರ ಈಗ ಮೂರು ರುಪಾಯಿ ಸುಂಕ ಹೇರಿದ್ದರೆ, ಕರ್ನಾಟಕದಲ್ಲಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಬಜೆಟ್ ಮಂಡಿಸುವಾಗಲೇ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಕರ ಏರಿದೆ. ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ.32ರಿಂದ 35ಕ್ಕೂ ಡಿಸೇಲ್ ಮೇಲಿನ ತೆರಿಗೆಯನ್ನು ಶೇ.21ರಿಂದ 24ಕ್ಕೂ ಏರಿಸಿದೆ. ತತ್ಪರಿಣಾಮ ರಾಜ್ಯದ ಜನತೆಯು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಹೆಚ್ಚುವರಿಯಾಗಿ 1.60 ರುಪಾಯಿ ತೆರುವಂತಾಗಿದೆ.
ರಾಜ್ಯ ಸರ್ಕಾರದ 1.60 ಮತ್ತು ಕೇಂದ್ರ ಸರ್ಕಾರದ 3 ರುಪಾಯಿ ಸೇರಿದಂತೆ ರಾಜ್ಯದ ಜನತೆಯು ಒಟ್ಟು ಹೆಚ್ಚುವರಿಯಾಗಿ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ 4.60 ಪೈಸೆ ತೆರುತ್ತಿದ್ದಾರೆ. ಮಾರ್ಚ್ 14 ರಂದು ಶನಿವಾರ ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹72.26 ಮತ್ತು ಡಿಸೇಲ್ ದರ ₹64.22 ಇತ್ತು. ಪೆಟ್ರೋಲ್ ಮತ್ತು ಡಿಸೇಲ್ ದರವು 16 ಪೈಸೆ ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ತ್ವರಿತವಾಗಿ ಕುಸಿದಿದೆ. ರಷ್ಯಾ ದೇಶವನ್ನು ತೈಲ ಮಾರುಕಟ್ಟೆಯಿಂದ ಹೊರಹಾಕಲು ಮುಂದಾಗಿರುವ ಸೌದಿ ಅರೇಬಿಯಾವು ಭಾರಿ ಪ್ರಮಾಣದಲ್ಲಿ ದರ ಕಡಿತ ಮಾಡಿ ದರ ಸಮರ ಸಾರಿದೆ. ಜನವರಿ ಆರಂಭದಲ್ಲಿ ಪ್ರತಿ ಬ್ಯಾರೆಲ್ ಗೆ 66 ಡಾಲರ್ ಇದ್ದ ಕಚ್ಚಾ ತೈಲವು ಈಗ 30 ಡಾಲರ್ ಆಜುಬಾಜಿಗೆ ಇಳಿದಿದೆ. ಅಂದರೆ ಶೇ.52ರಷ್ಟು ಕುಸಿತವಾಗಿದೆ. ಬೆಂಗಳೂರಿನಲ್ಲಿ ಜನವರಿ 1ರಂದು ಪೆಟ್ರೋಲ್ ದರ ₹77.71 ಇದ್ದದ್ದು ಈಗ ₹72.26ಕ್ಕೆ ಇಳಿದಿದೆ. ಅಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಶೇ.52ರಷ್ಟು ಕುಸಿದಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ ಇಳಿದಿರುವುದು ಶೇ.7ರಷ್ಟು ಮಾತ್ರ.
ಕೇಂದ್ರ ಸರ್ಕಾರ ಮಾರ್ಚ್ 14ರಂದು ಮತ್ತೆ ಎಕ್ಸೈಜ್ ಸುಂಕ ಹೇರಿರುವುದರಿಂದ ಕೇಂದ್ರ ಸರ್ಕಾರ ಸರ್ಕಾರ ಪೆಟ್ರೋಲ್ ಮೇಲಿನ ಹಾಲಿ ತೆರಿಗೆಯು ₹17.98 ರಿಂದ ₹20.98ಕ್ಕೆ ಮತ್ತು ಡಿಸೇಲ್ ತೆರೆಗೆಯು ₹13.83ರಿಂದ ₹16.83ಕ್ಕೆ ಏರಿದೆ. ಸಾಮಾನ್ಯವಾಗಿ ಒಂದು ಅಥವಾ ಗರಿಷ್ಠ ಎರಡು ರುಪಾಯಿ ಸುಂಕ ಹೇರುವ ವಾಡಿಕೆ ಇತ್ತು. ನರೇಂದ್ರ ಮೋದಿ ಸರ್ಕಾರವು ಕಚ್ಚಾ ತೈಲ ದರ ಮತ್ತಷ್ಟು ಕುಸಿಯುವ ನಿರೀಕ್ಷೆಯಿಂದಾಗಿ 3 ರುಪಾಯಿ ಸುಂಕ ಹೇರಿದೆ. ಇದು ಕಳೆದ ಎಂಟು ವರ್ಷಗಳಲ್ಲೇ ಅತಿ ಗರಿಷ್ಠ ಪ್ರಮಾಣದ ಏರಿಕೆಯಾಗಿದೆ.
ಫೆಬ್ರವರಿಯಿಂದೀಚೆಗೆ ರಾಜ್ಯದ ಜನರು ಪೆಟ್ರೋಲ್ ಮೇಲೆ ಯಡಿಯೂರಪ್ಪ ಸರ್ಕಾರದ ಕೊಡುಗೆ ₹1.60 ಮತ್ತು ನರೇಂದ್ರ ಮೋದಿ ಸರ್ಕಾರದ ಕೊಡುಗೆ ₹3 ಸೇರಿದಂತೆ ಒಟ್ಟು ₹4.60 ಹೆಚ್ಚುವರಿ ತೆರಿಗೆ ನೀಡುವಂತಾಗಿದೆ. ಜನವರಿಯಿಂದ ಪೆಟ್ರೋಲ್ ದರ ₹5.45 ಇಳಿಕೆಯಾಗಿದ್ದರೆ, ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಇಬ್ಬರೂ ಸೇರಿ ₹4.60 ಏರಿಸಿದ್ದಾರೆ. ಹೀಗಾಗಿ ಗ್ರಾಹಕರಿಗೆ ವಾಸ್ತವಿಕವಾಗಿ ಇಳಿದಿರುವ ಬೆಲೆ 85 ಪೈಸೆ ಮಾತ್ರ!