ದಾಸನದೊಡ್ಡಿ ಗ್ರಾಮಸ್ಥರು ಹಾಗೂ ಕಾಮೇಗೌಡರ ವಿರುದ್ದದ ಸಂಘರ್ಷಕ್ಕೆ ಮಂಡ್ಯ ಜಿಲ್ಲಾಡಳಿತ ತೆರೆ ಎಳೆಯುವ ಪ್ರಯತ್ನ ಪಡುತ್ತಿದೆ. ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿರುವ ಉಪ ವಿಭಾಗಾಧಿಕಾರಿ ಸೂರಜ್ ಅವರು ಕಾಮೇಗೌಡ ಅವರ ಸಾಧನೆಯ ಕುರಿತು ಪರಿಶೀಲನೆ ನಡೆಸಲು ತನಿಖಾ ತಂಡವನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.
ಶಾಂತಿ ಸಭೆಯಲ್ಲಿ ಕಾಮೇಗೌಡರ ವಿರುದ್ದ ದೂರುಗಳ ಸುರಿಮಳೆಗೈದಿರುವ ಗ್ರಾಮಸ್ಥರ ಮಾತುಗಳನ್ನು ಆಲಿಸದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ತನಿಖಾ ತಂಡವನ್ನು ರಚಿಸುವುದರೊಂದಿಗೆ ಕಾಮೇಗೌಡರ ಹಾಗೂ ಗ್ರಾಮಸ್ಥರ ಮುಖಾಮುಖಿಯಲ್ಲಿ ಇನ್ನೊಂದು ಸಭೆಯನ್ನು ಕೂಡಾ ನಡೆಸಲಾಗುವುದು ಎಂದು ಭರವಸೆಯನ್ನೂ ನೀಡಿದ್ದಾರೆ.
ನೂರಕ್ಕೂ ಹೆಚ್ಚು ಜನರು ಭಾಗವಹಿಸದ್ದ ಶಾಂತಿಸಭೆಯಲ್ಲಿ ಮಹಿಳೆಯರು ಕಣ್ಣೀರಿಡುತ್ತಲೇ ಕಾಮೇಗೌಡರಿಂದ ತಮಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆಂದು ಹೇಳಲಾಗಿದೆ. ಕಾಮೇಗೌಡರಿಗೆ ನೀಡಿರುವ ಪ್ರಶಸ್ತಿಗಳಿಗೆ ಅವರು ಅರ್ಹರಲ್ಲ ಹಾಗಾಗಿ ಅವರ ಸಾಧನೆಗಳ ಕುರಿತು ಮರುಪರಿಶೀಲನೆ ಅಗತ್ಯ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದಕ್ಕೂ ಮಿಗಿಲಾಗಿ, ಈ ಪರಿಸ್ಥಿತಿ ನಿರ್ಮಾಣವಾಗಲು ಜಿಲ್ಲಾಡಳಿತವೇ ಪ್ರಮುಖ ಕಾರಣ ಎಂದು ಅಧಿಕಾರಿಗಳನ್ನು ಗ್ರಾಮಸ್ಥರು ದಬಾಯಿಸಿದ ಘಟನೆಯೂ ನಡೆಯಿತು. ಗ್ರಾಮಸ್ಥರ ಆಕ್ರೋಶವನ್ನು ಹೊರಹಾಕಲು ಈ ಶಾಂತಿ ಸಭೆ ವೇದಿಕೆಯಾಗಿದ್ದು ಸುಳ್ಳಲ್ಲ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಈ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದ ಗ್ರಾಮಸ್ಥರು, ಕಾಮೇಗೌಡರಿಂದ ತಮ್ಮ ಮೇಲಾಗುತ್ತಿರುವ ಕಿರುಕುಳದ ಬಗ್ಗೆ ವಿವರಿಸಿ ಕಾಮೇಗೌಡ ಓರ್ವ ಡೋಂಗಿ ಪರಿಸರವಾದಿ. ಕೇವಲ ತನ್ನ ಸ್ವಾರ್ಥಕ್ಕಾಗಿ ಕಟ್ಟೆಗಳ ನಿರ್ಮಾಣ ಮಾಡಿದ್ದರು. ಬೇರೆ ಯಾವ ಉದ್ದೇಶಕ್ಕೂ ಅಲ್ಲ. ಅಷ್ಟು ಮಾತ್ರವಲ್ಲದೇ ಗ್ರಾಮದ ಮಹಿಳೆಯರಿಗೂ ಅಶ್ಲೀಲ ಪದಗಳಿಂದ ನಿಂದಿಸಿ ಅವರ ಮೇಲೆ ಸುಳ್ಳು ಕೇಸುಗಳನ್ನೂ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಮೇಗೌಡರು ನಿರ್ಮಿಸಿದ ಕೆರೆ ಎಂದು ಹೇಳಲಾಗುವ ಕಟ್ಟೆಗಳಲ್ಲಿ ಒಂದೆರಡನ್ನು ಹೊರತುಪಡಿಸಿ ಉಳಿದೆಲ್ಲವೂ ಮೊದಲೇ ಇದ್ದವು, ಸರ್ಕಾರಕ್ಕೆ ಮತ್ತು ಇತರ ಸಂಘ ಸಂಸ್ಥೆಗಳಿಗೆ ಮೋಸ ಮಾಡಿ ಪ್ರಶಸ್ತಿ ಹಾಗೂ ಹಣವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತಾಗಿ ಪ್ರತಿಧ್ವನಿಯೊಂದಿಗೆ ಮಾತನಾಡಿದ ಕಾಮೇಗೌಡರು ತಾವು ಎಲ್ಲಾ ಕೆರೆಗಳನ್ನು ತೋಡಿಸಿದ್ದು ನಿಜ. ಅದರೊಂದಿಗೆ ಸಾವಿರಾರು ಮರಗಳನ್ನೂ ನೆಟ್ಟಿದ್ದೇನೆ. ನಾನು ಮಾಡಿರುವ ಸಾಧನೆಯನ್ನು ಪರಿಶೀಲಿಸಿದ ನಂತರವೇ ಹಲವಾರು ಪ್ರಶಸ್ತಿಗಳೆಲ್ಲಾ ದೊರಕಿವೆ. ಸುಮಾರು ಹತ್ತು ಲಕ್ಷದಷ್ಟು ಪ್ರಶಸ್ತಿ ಮೊತ್ತವೂ ಲಭಿಸಿದೆ ಎಂದು ಹೇಳಿದ್ದಾರೆ.
ಇನ್ನು ಗ್ರಾಮಸ್ಥರ ಆರೋಪದ ಕುರಿತಾಗಿ ಮಾತನಾಡಿರುವ ಅವರು, ಗ್ರಾಮಸ್ಥರು ಬೆಟ್ಟದಲ್ಲಿರುವ ಮರಗಳನ್ನು ಕಡಿಯಲು ಹೊರಟಾಗ ದೂರು ದಾಖಲಿಸಿದ್ದೇನೆ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ. ಗ್ರಾಮದ ದುಷ್ಟರ ಜೊತೆಗೆ ಸಹವಾಸ ನನಗೆ ಬೇಡ ಎಂದು ಅವರಿಂದ ದೂರ ಉಳಿದಿದ್ದೇನೆ. ನನ್ನ ಮೇಲೆ ಅವರು ಮಾಡುವ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದದ್ದು ಎಂದು ಅವರು ಹೇಳಿದ್ದಾರೆ.
ಇನ್ನು ತಾವು ಬೆಟ್ಟದ ರಕ್ಷಣೆಗಾಗಿಯೇ ಇಷ್ಟೆಲ್ಲಾ ಮಾಡುತ್ತಿರುವುದು ಎಂದು ಸಮಜಾಯಿಷಿಯನ್ನೂ ನೀಡಿದ್ದಾರೆ. ಪ್ರಾಣಿ ಪಕ್ಷಿಗಳಿಗಾಗಿ ಕಟ್ಟೆಗಳ ನಿರ್ಮಾಣ ಮಾಡಲಾಗಿದೆ ನನ್ನ ಸ್ವಂತ ಉಪಯೋಗಕ್ಕಾಗಿ ಅಲ್ಲ ಎಂದು ಹೇಳಿದ್ದಾರೆ.