ಈ ಲೇಖನದ ಆಡಿಯೋ ಆವೃತ್ತಿ ಇಲ್ಲಿದೆ. ಕ್ಲಿಕ್ ಮಾಡಿ ಕೇಳಿ
ಕರ್ನಾಟಕದ ಅರ್ಧ ಭಾಗ ಭೀಕರ ಮಳೆ, ಪ್ರವಾಹದಿಂದ ಮುಳುಗಿ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಾಗ ಕರ್ನಾಟಕಕ್ಕಾಗಿ ಮನ ಮಿಡಿಯಲಿಲ್ಲ. ಭೀಕರ ಬರ ಆವರಿಸಿ ಜನ ಬಳಲಿ ಬೆಂಡಾದಾಗಲೂ ಕನ್ನಡದ ಜನ ನೆನಪಾಗಲಿಲ್ಲ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ನಡೆದಾಗ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಗೋಲಿಬಾರಿ ನಡೆಸಿ ಅದರಲ್ಲಿ ಇಬ್ಬರು ಮೃತಪಟ್ಟಾಗ ತಾಯಿ ಕರುಳು ಮಿಡಿಯಿತು. ಕರುಳು ಚುರುಕ್ ಎಂದಿತು. ರಾಜ್ಯ ಎಷ್ಟೊಂದು ಸಂಕಷ್ಟಕ್ಕೆ ಸಿಲುಕಿದಾಗಲೂ ನಯಾ ಪೈಸೆ ನೆರವು ನೀಡದವರು ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಜತೆಗೆ ಪಕ್ಷದ ನಿಯೋಗವೊಂದನ್ನು ಕಳುಹಿಸಿ ಕುಟುಂಬಕ್ಕೆ ಸಾಂತ್ವನ ಹೇಳಲು ಮುಂದಾದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಹಿಂಸಾಚಾರ ನಡೆದು ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ ಪೊಲೀಸರು ಗೋಲಿಬಾರ್ ನಡೆಸಿದ್ದರು. ಪೊಲೀಸರ ಗುಂಡಿಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದರು. ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರಿಗೆ ರಾಜ್ಯ ಸರ್ಕಾರ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿತಾದರೂ ನಂತರದಲ್ಲಿ ಅವರ ಮೇಲೆ ಎಫ್ಐಆರ್ ದಾಖಲಾಗಿದ್ದರಿಂದ ಪರಿಹಾರವನ್ನು ತಡೆಹಿಡಿಯಿತು. ಇದರ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳೂರಿನಲ್ಲಿ ಮೃತಪಟ್ಟ ಇಬ್ಬರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದರು. ಅಷ್ಟೇ ಅಲ್ಲ, ಪಕ್ಷದ ನಿಯೋಗವೊಂದನ್ನು ಕಳುಹಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಮುಂದಾಗಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಮೃತರ ಮೇಲಿನ ಪ್ರೀತಿ, ಅನುಕಂಪದಿಂದ ಈ ಕೆಲಸ ಮಾಡಿದ್ದರೆ ಯಾರೂ ಆಕ್ಷೇಪ ಎತ್ತುತ್ತಿರಲಿಲ್ಲ. ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರು. ಆದರೆ, ಯಾವತ್ತೂ ಕರ್ನಾಟಕದ ಬಗ್ಗೆ ಗಮನಹರಿಸದ, ಇಲ್ಲಿನ ಜನರ ಬಗ್ಗೆ ಕಾಳಜಿಯೇ ಇಲ್ಲದ ಮಮತಾ ಬ್ಯಾನರ್ಜಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಂಗಳೂರಿನ ಪ್ರಕರಣವನ್ನು ದಾಳವಾಗಿ ಬಳಸಿಕೊಂಡಿರುವುದು ಎಷ್ಟು ಮಾತ್ರ ಸರಿ?
ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟವರಿಗೆ ಕರ್ನಾಟಕ ಸರ್ಕಾರ ಘೋಷಿಸಿದ ಪರಿಹಾರವನ್ನು ತಡೆಹಿಡಿದಿದ್ದಕ್ಕೆ ಎಲ್ಲರ ಆಕ್ಷೇಪವಿದೆ. ಮೃತಪಟ್ಟವರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅವರ ಬಗ್ಗೆ ನಿಷ್ಕಾಳಜಿ ತೋರುತ್ತಿದೆ ಎಂಬುದು ಪ್ರತಿಪಕ್ಷಗಳ ಆರೋಪ ಮಾತ್ರವಲ್ಲ, ರಾಜಕೀಯೇತರವಾಗಿ ಈ ಪ್ರಕರಣಗಳನ್ನು ಗಮನಿಸುವವರ ಅಭಿಪ್ರಾಯವೂ ಹೌದು. ಅದನ್ನು ಎಲ್ಲರೂ ಬಹಿರಂಗವಾಗಿ ಹೇಳಿದ್ದಾರೆ ಕೂಡ. ಆದರೆ, ಮಮತಾ ಬ್ಯಾನರ್ಜಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪರಿಹಾರ ಘೋಷಿಸಿ ಅನುಕಂಪ ಗಿಟ್ಟಿಸುತ್ತಿರುವುದು ‘ಕಂಡವರ ಮನೆ ಹೊತ್ತಿ ಉರಿದಾಗ ಚಳಿ ಕಾಯಿಸಿಕೊಂಡರು’ ಎಂಬಂತಾಗಿದೆ.
ಮಮತಾ ಬ್ಯಾನರ್ಜಿ ಅವರ ರಾಜಕೀಯ ಇತಿಹಾಸವನ್ನು ನೋಡಿದಾಗ ಗೊತ್ತಾಗುತ್ತದೆ ಅವರು ಎಷ್ಟೊಂದು ಗೊಂದಲದ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂಬುದನ್ನು. ಮೂಲತಃ ಕಾಂಗ್ರೆಸಿಗರಾದ ಮಮತಾ ಬ್ಯಾನರ್ಜಿ 1984ರಲ್ಲಿ ಸೋಮನಾಥ ಚಟರ್ಜಿ ಅವರನ್ನು ಸೋಲಿಸಿ ಅತಿ ಕಿರಿಯ ಸಂಸದೆ ಎಂಬ ಹೆಗ್ಗಳಿಕೆಯೊಂದಿಗೆ ಲೋಕಸಭೆ ಪ್ರವೇಶಿಸಿದ್ದರು. 1991ರಲ್ಲಿ ಕೇಂದ್ರದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಅವರು ನಂತರ ತಮ್ಮ ಖಾತೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರತಿಭಟನಾ ರ್ಯಾಲಿ ನಡೆಸಿದರು. ನಂತರ ಅವರನ್ನು ಸಚಿವ ಸ್ಥಾನದಿಂದ ಉಚ್ಛಾಟಿಸಲಾಗಿತ್ತು.
ನಂತರದಲ್ಲಿ ಸಂಸದರಾಗಿಯೂ ಅವರು ತಮ್ಮ ದಾಷ್ಠ್ಯವನ್ನೇನೂ ಕಮ್ಮಿ ಮಾಡಿಕೊಂಡಿರಲಿಲ್ಲ. ರೈಲ್ವೆ ಸಚಿವರು ತಮ್ಮ ರಾಜ್ಯಕ್ಕೆ ಯೋಜನೆಗಳನ್ನು ಪ್ರಕಟಿಸಲಿಲ್ಲ ಎಂದು ಸಿಟ್ಟಾಗಿ ಅವರ ಮೇಲೆ ತಮ್ಮಮೇಲುಹೊದಿಕೆ ಎಸೆದಿದ್ದರು. ಮಹಿಳಾ ಮೀಸಲಾತಿ ವಿರೋಧಿಸಿದ ಸಮಾಜವಾದಿ ಪಕ್ಷದ ಸಂಸದರೊಬ್ಬರನ್ನು ಕೊರಳಪಟ್ಟಿ ಹಿಡಿದು ಲೋಕಸಭೆಯಿಂದ ಹೊರಗೆ ಎಳೆದು ಹಾಕಿದ್ದರು. ನಂತರ ಕಾಂಗ್ರೆಸ್ ವಿರುದ್ಧವಾಗಿ ತೃಣಮೂಲ ಕಾಂಗ್ರೆಸ್ ಸ್ಥಾಪಿಸಿದ ಅವರು ಎನ್ ಡಿಎ ಮೈತ್ರಿಕೂಟ ಸೇರಿಕೊಂಡು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ರೈಲ್ವೆ ಖಾತೆ ಸಚಿವರಾದರು. ಈ ಅವಧಿಯಲ್ಲಿ ತಮ್ಮ ರಾದಜ್ಯವಾದ ಪಶ್ಚಿಮ ಬಂಗಾಳಕ್ಕೆ ಸಾಕಷ್ಟು ಅನುಕೂಲ ಕಲ್ಪಿಸಿದ್ದ ಅವರು ಬೇರೆ ರಾಜ್ಯಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದರು. ಇನ್ನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷದ ಆಟಾಟೋಪಗಳು ಬಹುತೇಕ ಎಲ್ಲರಿಗೂ ಗೊತ್ತಿದೆ. ತಮ್ಮ ಪಕ್ಷ ಮತ್ತು ರಾಜ್ಯ ಹೊರತುಪಡಿಸಿ ಬೇರೆ ಯಾವ ಬಗ್ಗೆಯೂ ಅವರು ಯೋಚಿಸುತ್ತಿರಲಿಲ್ಲ ಎಂಬುದೂ ತಿಳಿದಿರುವ ಸಂಗತಿ.
ಕರ್ನಾಟಕದ ಮೇಲೆ ಯಾವತ್ತೂ ಪ್ರೀತಿ ತೋರಿಸಿರಲಿಲ್ಲ
ಇಂತಹ ಮಮತಾ ಬ್ಯಾನರ್ಜಿ ಕೇಂದ್ರದಲ್ಲಿ ರೈಲ್ವೆ, ಕಲ್ಲಿದ್ದಲು ಮತ್ತು ಗಣಿ ಇಲಾಖೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮುಂತಾದ ಮಹತ್ವದ ಖಾತೆಗಳನ್ನು ಹೊಂದಿದ್ದಾಗ ಕರ್ನಾಟಕಕ್ಕೇನೂ ಅನುಕೂಲ ಮಾಡಿಕೊಟ್ಟಿರಲಿಲ್ಲ. ಇತರೆ ಖಾತೆಗಳಿರಲಿ, ರೈಲ್ವೆ ಖಾತೆ ಸಚಿವರಾಗಿದ್ದಾಗಲೂ ರಾಜ್ಯದ ಬಾಕಿ ಯೋಜನೆಗಳ ಬಗ್ಗೆ ಗಮನಹರಿಸಲಿಲ್ಲ. ಕರ್ನಾಟಕದ ಬಗ್ಗೆ ಅವರು ಗಮನಹರಿಸಿದ್ದೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ. ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರಕ್ಕೆ ಬಂದಿದ್ದ ಮಮತಾ ಬ್ಯಾನರ್ಜಿ, ಬಿಜೆಪಿಯೇತರ ಮೈತ್ರಿಕೂಟ ರಚಿಸುವ ಕನಸು ಕಂಡಿದ್ದರು. ಹಾಗೆ ಬಂದಾಗಲೂ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡು ಹೋಗಿದ್ದರು.
ಮತ್ತೆಂದೂ ಅಂದರೆ ಭೀಕರ ಪ್ರವಾಹದಿಂದ ಅರ್ಧ ರಾಜ್ಯ ಮುಳುಗಿ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಾಗಲೂ, ಲಕ್ಷಾಂತರ ರೈತರು ಆತಂಕಕ್ಕೊಳಗಾದಗಲೂ ಮಮತಾ ಬ್ಯಾನರ್ಜಿ ಅವರಿಗೆ ಕರ್ನಾಟಕದ ಕಷ್ಟ ಅರ್ಥವಾಗಲಿಲ್ಲ. ಏಕೆಂದರೆ, ಇಂತಹ ಸಂದರ್ಭದಲ್ಲಿ ನೆನಪು ಮಾಡಿಕೊಂಡರೂ ಅದರಿಂದ ವೈಯಕ್ತಿಕ ಅಥವಾ ರಾಜಕೀಯ ಲಾಭ ಸಿಗುವುದಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು.
ಆದರೆ, ಕೇಂದ್ರ ಸರ್ಕಾರ, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಈ ಶಬ್ಧಗಳನ್ನು ಕೇಳಿದರೆ ನಖಶಿಖಾಂತ ಉರಿದುಕೊಳ್ಳುವ ಮಮತಾ ಬ್ಯಾನರ್ಜಿಗೆ ಕೇಂದ್ರದ ವಿರುದ್ಧ ಮುಸ್ಲಿಮ್ ಸಮುದಾಯವನ್ನು ಎತ್ತಿಕಟ್ಟಲು ಪೌರತ್ವ ತಿದ್ದುಪಡಿ ಕಾಯ್ದೆ ಎಂಬ ಉತ್ತಮ ಅಸ್ತ್ರ ಸಿಕ್ಕಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಏನೆಲ್ಲಾ ಅಸ್ತ್ರಗಳು ಸಿಗುವುದೋ ಅದೆಲ್ಲವೂ ತನ್ನ ಬತ್ತಳಿಕೆಯಲ್ಲಿರಬೇಕು ಎನ್ನುತ್ತಿದ್ದ ಮಮತಾ ಅವರಿಗೆ ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟಕ್ಕಿಳಿದಿದ್ದ ಅಲ್ಪಸಂಖ್ಯಾತ ಸಮುದಾಯದ ಇಬ್ಬರು ಮೃತಪಟ್ಟಿದ್ದು ಹಸಿದವನಿಗೆ ಮೃಷ್ಠಾನನ್ ಭೋಜನ ಸಿಕ್ಕಿದಂತಾಯಿತು. ತಕ್ಷಣ ಮೃತಪಟ್ಟ ಇಬ್ಬರಿಗೆ ಪರಿಹಾರ ಘೋಷಿಸಿಬಿಟ್ಟರು.
ಮಂಗಳೂರು ಗೋಲಿಬಾರ್ ನಲ್ಲಿ ತಮ್ಮ ಕುಟುಂಬದ ಆಧಾರಸ್ಥಂಭಗಳನ್ನು ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಮಮತಾ ಬ್ಯಾನರ್ಜಿ ನೀಡುವ ಪರಿಹಾರದ ಅವಶ್ಯಕತೆ ನಿಜಕ್ಕೂ ಇದೆ. ಆದರೆ, ಮಮತಾ ಬ್ಯಾನರ್ಜಿ ಅವರು ಅನುಕಂಪದಿಂದ ಈ ಪರಿಹಾರ ನೀಡಿದ್ದರೆ ಅದಕ್ಕೊಂದು ಮೌಲ್ಯ, ಗೌರವ ಇರುತ್ತಿತ್ತು. ಆದರೆ, ತಮ್ಮ ರಾಜಕೀಯ ಚದುರಂಗದಾಟಕ್ಕೆ ಇಬ್ಬರ ಮರಣವನ್ನು ದಾಳವಾಗಿ ಮಾಡಿಕೊಳ್ಳುತ್ತಿರುವುದು ದುರಂತ