ಅಹಮದಾಬಾದ್‌ನಿಂದ 21,000 ಕಾರ್ಮಿಕರು ʼಶ್ರಮಿಕ್ʼ ರೈಲಿನಲ್ಲಿ ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ ಎಂದು ಗುಜರಾತ್ ಸರ್ಕಾರ ಹೇಳಿದ್ದರೂ ಊರುಗಳಿಗೆ ತೆರಳಲು ಸಾಧ್ಯವಾಗದ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಲು ಅನುವು ಮಾಡಿಕೊಡಬೇಕೆಂಬ ಬೇಡಿಕೆಯಿಟ್ಟು ಸೂರತ್‌ನ ರಸ್ತೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.
ಸೇರಿದ್ದ ಕಾರ್ಮಿಕರನ್ನು ನಿಭಾಯಿಸಲು ಸಾಧ್ಯವಾಗದ ಪೋಲಿಸರು ಲಘು ಲಾಠಿ ಚಾರ್ಜ್ ಮಾಡಿದ್ದಾರೆಂದು ವರದಿಯಾಗಿದೆ. ಇದರಿಂದ ಉದ್ರಿಕ್ತಗೊಂಡ ಗುಂಪು ಸೂರತ್‌ನ ಕಡೋದರ ಪ್ರದೇಶದಲ್ಲಿ ಪೋಲಿಸರೊಂದಿಗೆ ಸಂಘರ್ಷಕ್ಕಿಳಿದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಹಲವಾರು ವಾಹನಗಳಿಗೆ ಹಾನಿ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಪೋಲಿಸರು ಆಶ್ರುವಾಯು ಸಿಡಿಸಿದ್ದಾರೆಂದು ‘ದಿ ಹಿಂದು’ ವರದಿ ಮಾಡಿದೆ.

ಉತ್ತರ ಪ್ರದೇಶ, ಬಿಹಾರಕ್ಕೆ ಸೇರಿದ ಸುಮಾರು 300 ಕ್ಕೂ ಹೆಚ್ಚು ಕಾರ್ಮಿಕರು ಗುಜರಾತ್- ಮಧ್ಯಪ್ರದೇಶದ ಗಡಿವರೆಗೂ ಹೋಗಿ ಹಿಂತಿರುಗಿ ಬಂದಿದ್ದಾರೆ. ಮಧ್ಯಪ್ರದೇಶ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಸಂಚರಿಸಲು ಅನುಮತಿ ನೀಡಿಲ್ಲವಾದ್ದರಿಂದ ಕಾರ್ಮಿಕರು ಗಡಿಯಿಂದ ಹಿಂತಿರುಗಿ ಬಂದಿದ್ದಾರೆಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸತತ 40 ದಿನಗಳ ದೀರ್ಘ ಲಾಕ್‌ಡೌನ್‌ನಿಂದ ಬೇಸತ್ತಿರುವ ಕಾರ್ಮಿಕರು ಅತ್ತ ತಿನ್ನಲೂ ಇಲ್ಲದೆ, ಇತ್ತ ದುಡಿಮೆಯೂ ಇಲ್ಲದೆ ಕಂಗಾಲಾಗಿದ್ದಾರೆ. ಈ ನಡುವೆ ಇದ್ದ ಅಲ್ಪ ಸ್ವಲ್ಪ ದುಡ್ಡನ್ನು ಶೇಖರಿಸಿ ಊರಿಗೆ ಮರಳಲು ಟಿಕೇಟ್ ಮಾಡಿದ್ದರು. ಮಧ್ಯಪ್ರದೇಶ ಸರ್ಕಾರ ತನ್ನ ರಾಜ್ಯದ ಪ್ರದೇಶಗಳ ಮೂಲಕ ತೆರಳಲು ಅನುಮತಿ ನೀಡದ ಕಾರಣ ಉತ್ತರಪ್ರದೇಶ, ಬಿಹಾರ, ಒಡಿಸ್ಸಾ ಮೂಲದ ಹಲವಾರು ಕಾರ್ಮಿಕರು ಗುಜರಾತಿನಲ್ಲೇ ಬಾಕಿಯಾಗಿದ್ದರು. ತಾವು ನೀಡಿರುವ ಟಿಕೆಟಿನ ಹಣವೂ ವಾಪಾಸು ಸಿಗದಿದ್ದರಿಂದ ಕಾರ್ಮಿಕರು ಇನ್ನಷ್ಟು ಹತಾಷೆಗೊಳಗಾಗಿದ್ದರೆಂದು ಪೋಲಿಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ʼಡೆಕ್ಕನ್ ಹೆರಾಲ್ಡ್ʼ ವರದಿ ಮಾಡಿದೆ.