ಒಂದು ಕಡೆ ಕಾಡಂಚಿನ ಜಮೀನಿನ ಬದಿಯಲ್ಲಿ ಅರ್ಧ ಎಕರೆ ಜಾಗದಲ್ಲಿ ದನ ಮೇಯಿಸಲು ಬೇಲಿ ಹಾಕಿದ ಮಲೆನಾಡಿನ ಬಡ ರೈತನ ಮೇಲೆ 192 ಎ ಕಾಯ್ದೆಯಡಿ ಸರ್ಕಾರಿ ಜಮೀನು ಒತ್ತುವರಿ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುತ್ತಿರುವ ವರದಿಗಳನ್ನು ಕೇಳುತ್ತಿದ್ದೇವೆ. ಅದೇ ಹೊತ್ತಿಗೆ, ಗಣಿ ಲಾಬಿಗೆ ಮಣಿದು ಒಂದಲ್ಲ, ಎರಡಲ್ಲ ಮೂರು ವನ್ಯಜೀವಿ ಅಭಯಾರಣ್ಯಗಳನ್ನು ಸರ್ಕಾರವೇ ಅನಾಮತ್ತಾಗಿ ಗಣಿಗಾರಿಕೆಗೆ ಬಿಟ್ಟುಕೊಟ್ಟ ಪ್ರಕರಣ ಜಾರ್ಖಂಡ್ ನಲ್ಲಿ ನಡೆದಿದೆ.
ಪರಿಸರ ಪತ್ರಿಕೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಡೌನ್ ಟು ಅರ್ಥ್ ಪತ್ರಿಕೆಯ ವರದಿಯ ಪ್ರಕಾರ, ಜಾರ್ಖಂಡ್ ನ ಪಶ್ಚಿಮ ಸಿಂಗಮ್ ಜಿಲ್ಲೆಯ ಸರಂದಾ, ಕೊಲ್ಹಾನ್ ಮತ್ತು ಪೋರಹತ್ ಅರಣ್ಯ ವಿಭಾಗಗಳ ಸುಮಾರು 80 ಸಾವಿರ ಹೆಕ್ಟೇರಿಗೂ ಅಧಿಕ ಪ್ರದೇಶದಲ್ಲಿ ಹರಡಿದ್ದ ಸಾಸಂಗ್ದ-ಬುರು, ಬಾಮಿಯಾಬುರು ಮತ್ತು ಸಂಗ್ರಾ ಅಭಯಾರಣ್ಯಗಳನ್ನು ರದ್ದು ಮಾಡಿ, ಇಡೀ ಪ್ರದೇಶದಲ್ಲಿ ಕಬ್ಬಿಣದ ಗಣಿಗಾರಿಕೆ ನಡೆಸಲು ಎನ್ ಎಂ ಡಿಸಿ(ರಾಷ್ಟ್ರೀಯ ಅದಿರು ಅಭಿವೃದ್ಧಿ ನಿಗಮ)ಗೆ ವಹಿಸಲಾಗಿದೆ.
ವಾಸ್ತವವಾಗಿ ಈ ಮೂರೂ ಅಭಯಾರಣ್ಯಗಳನ್ನು ಬ್ರಿಟಿಷ್ ಆಡಳಿತಾವಧಿಯಲ್ಲೇ ಗುರುತಿಸಿ, ಘೋಷಣೆ ಮಾಡಲಾಗಿತ್ತು. ಸಂಗ್ರಾ ಅಭಯಾರಣ್ಯವನ್ನು 1932ರಲ್ಲಿ ಆರಂಭಿಸಿದ್ದರೆ, ಸಾಸಂಗ್ದ ಬುರು ಮತ್ತು ಬಾಮಿಯಾಬುರು ಅಭಯಾರಣ್ಯಗಳನ್ನು 1936ರಲ್ಲಿ ಆರಂಭಿಸಲಾಗಿತ್ತು. ಆದರೆ, 1972ರಲ್ಲಿ ವನ್ಯಜೀವಿ ರಕ್ಷಣಾ ಕಾಯ್ದೆ ಜಾರಿಗೆ ಬಂದ ಬಳಿಕ ಸಂಗ್ರಾ ಮತ್ತು ಬಾಮಿಯಾಬುರು ಅಭಯಾರಣ್ಯಗಳನ್ನು ಕೈಬಿಟ್ಟು ಸಾಸಂಗ್ದಬುರುವನ್ನು ಮಾತ್ರ ಮುಂದುವರಿಸಲಾಗಿತ್ತು. ಇದೀಗ, ಉಳಿದ ಒಂದು ಅಭಯಾರಣ್ಯವನ್ನು ಕೂಡ ಗಣಿಗಾರಿಕೆಗೆ ಮುಕ್ತಗೊಳಿಸುವಂತೆ ರಾಜ್ಯ ಸರ್ಕಾರದ ಒತ್ತಡಕ್ಕೆ ಕೇಂದ್ರ ಸಮ್ಮತಿಸಿದ್ದು, ಒಟ್ಟಾರೆ ಮೂರೂ ಅಭಯಾರಣ್ಯಗಳು ಕಬ್ಬಿಣದ ಅದಿರಿನ ಗಣಿಗಾರಿಕೆಗೆ ಬಲಿಯಾಗಿವೆ ಎಂದು ವರದಿ ಹೇಳಿದೆ.
ಈ ಪ್ರದೇಶದಲ್ಲಿ ಸದ್ಯಕ್ಕೆ ಇಡೀ ಭೂಮಿ ಬಾಯ್ದೆರೆದ ಸ್ಥಿತಿಯಲ್ಲಿದೆ. ತೆರೆದ ಗಣಿಗಾರಿಕೆಯಿಂದಾಗಿ ಮಣ್ಣು ಮಿಶ್ರಿತ ಕೆಂಪು ನೀರು ಹರಿವ ಚಿಕ್ಕಪುಟ್ಟ ತೊರೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬರಿ ಮಣ್ಣಿನ ರಾಶಿ ಕಾಣುತ್ತಿದೆ. ಕೇವಲ ಹತ್ತು ವರ್ಷಗಳ ಹಿಂದೆ ಸಮೀಕ್ಷೆಯೊಂದು ಇಲ್ಲಿ 253 ಆನೆಗಳಿವೆ ಮತ್ತು ಸುಮಾರು 300 ಸಸ್ಯ ಪ್ರಭೇದಗಳ ನೆಲೆ ಇದು ಎಂದು ಗುರುತಿಸಿತ್ತು. ಆದರೆ, 2016ರ ಅಧ್ಯಯನವೊಂದರ ಪ್ರಕಾರ ಅಲ್ಲಿನ ಸಸ್ಯ ಪ್ರಭೇದಗಳ ಸಂಖ್ಯೆ ಕೇವಲ 87ಕ್ಕೆ ಕುಸಿದಿದ್ದರೆ, ಒಂದೇ ಒಂದು ಆನೆ ಕೂಡ ಅಲ್ಲಿ ನೆಲೆಸಿಲ್ಲ ಎಂದಿದೆ! ಅಷ್ಟರಮಟ್ಟಿಗೆ ಗಣಿಗಾರಿಕೆ ಅಲ್ಲಿನ ಜೀವವೈವಿಧ್ಯವನ್ನು ನುಂಗಿಹಾಕಿದೆ!
ಅಲ್ಲಿನ ಉತ್ಕೃಷ್ಟ ದರ್ಜೆಯ ಅದಿರು ಈಗ ಇಡೀ ಆ ಪ್ರದೇಶಕ್ಕೇ ಶಾಪವಾಗಿದ್ದು, ಸಂಪೂರ್ಣ ಅರಣ್ಯ ಪ್ರದೇಶವನ್ನು ಬುಡಮೇಲು ಮಾಡಲಾಗುತ್ತಿದೆ. ವಿಪರ್ಯಾಸವೆಂದರೆ, ಅರಣ್ಯ ಮತ್ತು ಪರಿಸರ ಉಳಿವಿಗಾಗಿ ಜನರ ತೆರಿಗೆ ಹಣದ ಲಕ್ಷಾಂತರ ಕೋಟಿ ಹಣವನ್ನು ಪ್ರತಿವರ್ಷ ವ್ಯಯಮಾಡುವ ಸರ್ಕಾರಗಳೇ ಮತ್ತೊಂದು ಕಡೆ ಸಂಪದ್ಭರಿತ ಕಾಡುಗಳನ್ನು ಸರ್ವನಾಶ ಮಾಡಲು ಯಾವುದೇ ಎರಡನೇ ಯೋಚನೆ ಇಲ್ಲದೆ ಮುನ್ನುತ್ತಿವೆ ಎಂಬುದು ಅಲ್ಲಿನ ಸ್ಥಳೀಯ ಬುಡಕಟ್ಟು ಜನರ ಆತಂಕ.
ಹಾಗೆ ನೋಡಿದರೆ, ಜಾರ್ಖಂಡ್, ಛತ್ತೀಸಗಢ, ಬಿಹಾರ, ಒಡಿಶಾದ ಅಪಾರ ಅರಣ್ಯ ಪ್ರದೇಶವನ್ನು ಒಳಗೊಂಡ ಆ ಭಾಗದಲ್ಲಿ ಕಬ್ಬಿಣ, ಕಲ್ಲಿದ್ದಲು, ತಾಮ್ರ ಸೇರಿದಂತೆ ಹಲವು ಖನಿಜಗಳ ಅದಿರು ಗಣಿಗಾರಿಕೆಗಾಗಿ ಅಲ್ಲಿನ ಅರಣ್ಯವನ್ನು ಬಲಿಕೊಡುತ್ತಿರುವುದು ಇದೇ ಮೊದಲೇನಲ್ಲ. 1950ರ ದಶಕದಲ್ಲಿ ಆ ಭಾಗದಲ್ಲಿ ಆರಂಭವಾದ ಬೊಕಾರೊ ಮತ್ತು ರೋರ್ಕೆಲಾದಂತಹ ಬೃಹತ್ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳ ಕಾಲದಿಂದಲೂ ಬುಡಕಟ್ಟು ಜನರ ನೆಲೆಯಾಗಿದ್ದ ದಟ್ಟ ಅರಣ್ಯ ಪ್ರದೇಶಗಳು ಬಲಿಯಾಗುತ್ತಲೇ ಇವೆ. ಆ ಭಾಗದಲ್ಲಿ ದೊಡ್ಡ ಆತಂಕ ಒಡ್ಡಿರುವ ನಕ್ಸಲ್ ಚಳವಳಿಗೆ ಇಂಬು ನೀಡಿದ್ದು ಕೂಡ ಗಣಿಗಾರಿಕೆ ಹೆಸರಿನಲ್ಲಿ ಆದಿವಾಸಿ ಬುಡಕಟ್ಟು ಜನರ ಮೇಲೆ ನಡೆದ ಸರ್ಕಾರದ ದಬ್ಬಾಳಿಕೆಯ ನೀತಿಗಳೇ ಎಂಬುದು ಈಗ ಇತಿಹಾಸ.
ತೀರಾ ಇತ್ತೀಚೆಗೆ, ಕಳೆದ ವರ್ಷವಷ್ಟೇ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಬರೋಬ್ಬರಿ 1.70 ಲಕ್ಷ ಹೆಕ್ಟೇರ್ ಅರಣ್ಯವನ್ನು ಪ್ರಧಾನಿಯವರ ಪರಮ ಮಿತ್ರ ಅದಾನಿ ಅವರ ಕಂಪನಿಗೆ ಗಣಿಗಾರಿಕೆಗಾಗಿ ಮುಕ್ತಗೊಳಿಸಿತು.
ಕಳೆದ ವರ್ಷದ ಮಾರ್ಚ್ ನಲ್ಲಿ ಕೇಂದ್ರ ಪರಿಸರ ಸಚಿವಾಲಯ ತೆಗೆದುಕೊಂಡು ಒಂದು ನಿರ್ಣಯದಿಂದಾಗಿ ಛತ್ತೀಸಗಢದ ಹಸದೆಯೊ ಅರಂಡ್ ಅರಣ್ಯ ಪ್ರದೇಶದ ಸುಮಾರು 1.70 ಲಕ್ಷ ಹೇಕ್ಟೇರ್ ಅತ್ಯಂತ ದಟ್ಟ ಅರಣ್ಯದಲ್ಲಿ ಅದಾನಿ ಅವರ ರಾಜಸ್ಥಾನ್ ಕೊಲಿರೀಸ್ ಲಿಮಿಟೆಟ್(ಆರ್ ಸಿಎಲ್) ಕಂಪನಿ ಗಣಿಗಾರಿಕೆ ನಡೆಸುವ ಮುಕ್ತ ಅವಕಾಶ ಪಡೆಯಿತು. ಆ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲೇಬಾರದು ಎಂಬ ಅರಣ್ಯ ಸಲಹಾ ಸಮಿತಿಯ ಅಭಿಪ್ರಾಯ ಹಾಗೂ 2014ರ ಭಾರತೀಯ ಅರಣ್ಯ ಸಮೀಕ್ಷೆ ವರದಿಯ ಸ್ಪಷ್ಟ ಸೂಚನೆಗಳನ್ನು ಗಾಳಿಗೆ ತೂರಿ ಅದಾನಿ ಕಂಪನಿಗೆ ಈ ಪ್ರದೇಶವನ್ನು ಗಣಿಗಾರಿಕೆಗ ಬಿಟ್ಟುಕೊಡಲಾಗಿತ್ತು.
ಇದೀಗ ಜಾರ್ಖಂಡಿನಲ್ಲಿ ಮೂರು ಅಭಯಾರಣ್ಯಗಳನ್ನೇ ಗಣಿಗಾರಿಕೆಗಾಗಿ ಬಲಿಕೊಡಲಾಗಿದೆ. ಇಂತಹ ಹಗಲುದರೋಡೆಗಳ ವಿರುದ್ಧ ದನಿ ಎತ್ತುವ ಶಕ್ತಿ ಆ ಪ್ರದೇಶದ ಆದಿವಾಸಿಗಳಿಗೆ ಇಲ್ಲ. ಒಂದು ವೇಳೆ ಹೊರಗಿನ ಪರಿಸರವಾದಿಗಳು, ಆದಿವಾಸಿ- ಬುಡಕಟ್ಟು ಜನರ ಹಿತ ಕಾಯುವ ಉದ್ದೇಶದ ವ್ಯಕ್ತಿಗಳು ಅಲ್ಲಿ ಜನ ಸಂಘಟನೆಯ ಮೂಲಕ ಹೋರಾಟ ಕಟ್ಟಿದರೆ, ಅವರನ್ನು ನಕ್ಸಲೀಯರು ಎಂಬ ಹಣೆಪಟ್ಟಿಕಟ್ಟಿ ಬಗ್ಗುಬಡಿಯವುದು ಸರ್ಕಾರಗಳಿಗೆ ಸುಲಭ ಉಪಾಯ. ಈಗಂತೂ ದೇಶದ್ರೋಹಿ ಪಟ್ಟ ಕಟ್ಟಿ ಎಂಥ ಜನಪರ ಹೋರಾಟವನ್ನು ಕೂಡ ಸರ್ವನಾಶ ಮಾಡುವುದು ಸರ್ಕಾರ ಮತ್ತು ಆಡಳಿತ ಪಕ್ಷಕ್ಕೆ ದೊಡ್ಡ ಸಂಗತಿಯೇ ಅಲ್ಲ!
ಇಂತಹ ಪರಿಸ್ಥಿತಿಯಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಮೇಲೆ ನಡೆಯುತ್ತಿರುವ ಇಂತಹ ದಾಳಿ- ದಬ್ಬಾಳಿಕೆಯನ್ನು ಕೇಳುವವರು ಯಾರು? ಎಂಬುದು ಇನ್ನ ಆತಂಕಕಾರಿ ಸಂಗತಿ.