ಗುಜರಾತ್ ಮೂಲದ ಅಸಾರಾಂ ಬಾಪು, ಹರಿಯಾಣದ ದೇರಾ ಸಚ್ಚಾ ಸೌದಾ ಸಂಸ್ಥಾಪಕ, ಕುಖ್ಯಾತ ಗುರುಮೀತ್ ಸಿಂಗ್ ರಾಮ್ ರಹೀಮ್, ರಾಂಪಾಲ್, ನಮ್ಮದೇ ರಾಜ್ಯದ ಬಿಡದಿಯಲ್ಲಿ ಆಶ್ರಮ ಸ್ಥಾಪಿಸಿ ಕುಖ್ಯಾತನಾದ ನಿತ್ಯಾನಂದನಂಥ ಸ್ವಯಂ ಘೋಷಿತ ದೇವ ಮಾನವರ ಕಾಮ ಪುರಾಣ, ತಿಕ್ಕಲುತನಗಳಿಗೆ ಸಾಕ್ಷಿಯಾಗಿದ್ದ ಭಾರತೀಯರು ಅವರ ತಲೆತಿರುಕ ಹೇಳಿಕೆಗಳಿಗೆ ಗಹಗಹಿಸಿ ನಗುತ್ತಿದ್ದಾರೆ. ಅಧ್ಯಾತ್ಮದ ಹೆಸರಿನಲ್ಲಿ ನಂಬಿಕೆಯನ್ನು ಸರ್ವನಾಶ ಮಾಡಿದ ನಕಲಿ ಬಾಬಾಗಳು ಸಾಮಾಜಿಕ ಕ್ಷೋಭೆಗೆ ಕಾರಣವಾಗುತ್ತಿರುವುದು ಇಂದು ಸಾಮಾನ್ಯವಾಗಿಬಿಟ್ಟಿದೆ.
ಹೆಣ್ಣು ಬಾಕತನ, ಅತ್ಯಾಚಾರ, ಯುವತಿಯರನ್ನು ಅಕ್ರಮವಾಗಿ ಒತ್ತೆಯಾಳಾಗಿಸಿಕೊಂಡಿದ್ದ ಆರೋಪದಲ್ಲಿ ನ್ಯಾಯಾಲಯದಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ನಿತ್ಯಾನಂದ ಈಗ ಏಕಾಏಕಿ ‘ಕೈಲಾಸ’ ಎಂಬ ಹಿಂದೂ ರಾಷ್ಟ್ರ ಸ್ಥಾಪಿಸಿರುವುದಾಗಿ ಘೋಷಿಸುವ ಮೂಲಕ ಜಾಗತಿಕ ಜೋಕರ್ ಆಗಿ ಹೊರಹೊಮ್ಮಿದ್ದಾನೆ. ಈಕ್ವೆಡಾರ್ ಕರಾವಳಿ ಹಾಗೂ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಸಮೀಪದಲ್ಲಿ ದ್ವೀಪವೊಂದನ್ನು ಖರೀದಿಸಿದ್ದು, ಸನಾತನ ಹಿಂದೂ ಸಂಸ್ಕೃತಿ ರಕ್ಷಿಸಲು ಗಡಿಗಳಿಲ್ಲದ ದೇಶವನ್ನು ಸ್ಥಾಪಿಸದ್ದು, ಇಲ್ಲಿಗೆ ಭೇಟಿ ನೀಡಲು ಯಾವುದೇ ಪಾಸ್ ಪೋರ್ಟ್ ಅಗತ್ಯವಿಲ್ಲ ಎಂದು ಘೋಷಿಸಿರುವ ನಿತ್ಯಾನಂದ ಬಿಡುಗಡೆ ಮಾಡಿರುವ ವಿಡಿಯೊ ಕುರಿತು ವಿಭಿನ್ನ ಬಗೆಯ ಜೋಕ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
41 ವರ್ಷದ ತಮಿಳುನಾಡು ಮೂಲದ ನಿತ್ಯಾನಂದನ ಅಹಮದಾಬಾದ್ ಆಶ್ರಮದಲ್ಲಿದ್ದ ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರು ಇತ್ತೀಚೆಗೆ ಬಿಡದಿಯ ಆಶ್ರಮಕ್ಕೆ ಭೇಟಿ ನೀಡಿ, ನಿತ್ಯಾನಂದನಿಗೆ ಹುಡುಕಾಟ ನಡೆಸಿದ್ದರು.
ಆಗ ತಲೆಮರೆಸಿಕೊಂಡಿದ್ದ ನಿತ್ಯಾನಂದ, ಈಗ ಏಕಾಏಕಿ ವಿಡಿಯೊ ಬಿಡುಗಡೆ ಮಾಡಿ ತನ್ನ ಹೊಸ ದೇಶ ಕೈಲಾಸವು ತನ್ನದೇ ಸರ್ಕಾರ ಹೊಂದಿದ್ದು, ಗೃಹ, ಹಣಕಾಸು, ಮಾನವ ಸಂಪನ್ಮೂಲ, ರಕ್ಷಣಾ ಇಲಾಖೆಯನ್ನು ಹೊಂದಿದೆ. ಪರಶಿವ, ನಂದಿಯನ್ನೊಳಗೊಂಡ ತ್ರಿವರ್ಣ ಧ್ವಜವನ್ನು ಕೈಲಾಸ ಹೊಂದಿರಲಿದ್ದು, ತಮಿಳು, ಸಂಸ್ಕೃತ ಮತ್ತು ಇಂಗ್ಲಿಷ್ ಅಧಿಕೃತ ಭಾಷೆಯಾಗಿರಲಿವೆ ಎಂದು ಹೇಳಿದ್ದಾನೆ.

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾದ ನಿತ್ಯಾನಂದನ ಪಾಸ್ ಪೋರ್ಟ್ ಅನ್ನು ಪೊಲೀಸರು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ನೇಪಾಳ ಮಾರ್ಗವಾಗಿ ನಿತ್ಯಾನಂದ ಇಕ್ವೆಡಾರ್ ಸಮೀಪದ ತನ್ನ ಕೈಲಾಸ ಪ್ರದೇಶ ತಲುಪಿರುವ ಸಾಧ್ಯತೆ ಇದೆ ಎನ್ನಲಾಗಿದೆ. 2018ರಲ್ಲೇ ನಿತ್ಯಾನಂದನ ಪಾಸ್ ಪೋರ್ಟ್ ನಿಷ್ಕ್ರಿಯವಾಗಿದ್ದು, ಈ ಮಧ್ಯೆ ಆತ ಆಸ್ಟ್ರೇಲಿಯಾ ಪಾಸ್ ಪೋರ್ಟ್ ಗೆ ಪ್ರಯತ್ನಿಸಿದ್ದ. ಅಲ್ಲಿನ ಅಧಿಕಾರಿಗಳು ಬಿಡದಿ ಪೊಲೀಸರ ಸ್ಪಷ್ಟನೆ ಕೇಳಿದ್ದರಿಂದ ನಿತ್ಯಾನಂದನ ಅವತಾರ ಬಹಿರಂಗವಾಗಿತ್ತು.
2010ರಲ್ಲಿ ತಮಿಳು ಸಿನಿಮಾ ನಟಿಯೊಂದಿಗೆ ಕಾಮಕೇಳಿಯಲ್ಲಿ ತೊಡಗಿದ್ದ ನಿತ್ಯಾನಂದನ ವಿಡಿಯೊ ದೇಶಾದ್ಯಂತ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಅನಂತರ ಆತ ಹಲವು ಯುವತಿಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ವಿಚಾರ ಬಹಿರಂಗಗೊಂಡಿತ್ತು. ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ನಿತ್ಯಾನಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.
ಕಳೆದ ವರ್ಷ ವಿಭಿನ್ನ ವೇಷತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಪ್ರತ್ಯಕ್ಷನಾಗಿ ಮನರಂಜನೆ ಒದಗಿಸಿದ್ದ. ಕಳೆದ ವಾರ ನಿತ್ಯಾನಂದನ ಹಲವು ಆಶ್ರಮಗಳ ಪೈಕಿ ಒಂದಾದ ಅಹಮದಾಬಾದ್ ಆಶ್ರಮದಲ್ಲಿ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮೇಲೆ ಎಫ್ ಐ ಆರ್ ದಾಖಲಾಗಿದ್ದರಿಂದ ನಿತ್ಯಾನಂದ ಸುದ್ದಿಯ ಕೇಂದ್ರಬಿಂದುವಾಗಿದ್ದನು.

ಆಶ್ರಮ ಬೆಳವಣಿಗೆಗೆ ಚ್ಯುತಿ ತರದ ವಿವಾದ
ನಿತ್ಯಾನಂದನ ಕುರಿತಾಗಿ ಹಲವಾರು ವಿವಾದಗಳು ಸೃಷ್ಟಿಯಾದರೂ ಆತನ ಅಧ್ಯಾತ್ಮ ಉದ್ಯಮ ಬೆಳವಣಿಗೆ ಕಾಣುತ್ತಿರುವ ಪರಿ ಯಾರಿಗಾದರೂ ಆಶ್ಚರ್ಯ ಉಂಟು ಮಾಡದೇ ಇರದು. 2000ನೇ ಇಸ್ವಿಯಲ್ಲಿ ಮೊದಲ ಬಾರಿಗೆ ನಿತ್ಯಾನಂದ ತಮಿಳುನಾಡಿನಲ್ಲಿ ನಿತ್ಯಾನಂದ ಪೀಠ ಆರಂಭಿಸುವ ಮೂಲಕ ಸ್ವಯಂಘೋಷಿತ ದೇವಮಾನವ ಸ್ಥಾನಕ್ಕೇರುತ್ತಾನೆ.
ಬಳಿಕ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಪೀಠ ತೆರೆಯುವ ನಿತ್ಯಾನಂದ ಮೊದಲ ಬಾರಿಗೆ 2003ರಲ್ಲಿ ಬೆಂಗಳೂರು ಸಮೀಪದ ಬಿಡದಿಯಲ್ಲಿ ಆಶ್ರಮ ತೆರೆಯುವುದರೊಂದಿಗೆ ಅಂತಾರಾಜ್ಯ ಪ್ರವೇಶಿಸುತ್ತಾನೆ. 2010ರಲ್ಲಿ ನಿತ್ಯಾನಂದನ ಕಾಮಪುರಾಣದ ಸಿಡಿಯನ್ನು ಆತನ ಬೆಂಬಲಿಗನೊಬ್ಬ ಬಿಡುಗಡೆ ಮಾಡುವ ಮೂಲಕ ನಿತ್ಯಾನಂದನ ಅಸಲಿ ಆಟವನ್ನು ಅನಾವರಣಗೊಳಿಸುತ್ತಾನೆ. ಈ ಸಂದರ್ಭದಲ್ಲಿ ನಿತ್ಯಾನಂದ ತಾನು ಹಿಂದೂ ಸ್ವಾಮೀಜಿ ಎಂಬ ಕಾರಣಕ್ಕೆ ಇಷ್ಟೆಲ್ಲಾ ಸಮಸ್ಯೆ ಮಾಡಲಾಗುತ್ತದೆ ಎಂದೂ ಹೇಳಿಕೆ ನೀಡಿದ್ದು ಉಂಟು. ಮತ್ತೆ 2015ರಲ್ಲಿ ನಿತ್ಯಾನಂದನ ಆಶ್ರಮದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಹೊರಬೀಳುತ್ತಿದ್ದಂತೆ ನಿತ್ಯಾನಂದ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಾಪಕಗೊಂಡಿತ್ತು.
ಈ ಆಪತ್ತಿನಿಂದಲೂ ಬಚಾವಾದ ನಿತ್ಯಾನಂದ ಕೆಲವು ವರ್ಷ ಮೌನಕ್ಕೆ ಶರಣಾಗಿದ್ದ. ಇಷ್ಟೆಲ್ಲಾ ರಾದ್ಧಾಂತಗಳಿಗೆ ನಿತ್ಯಾನಂದ ಗುರಿಯಾದರೂ ಆತನ ಬೆಂಬಲಿಗರಾದ ಶ್ರೀಮಂತ ವರ್ಗ ಆಶ್ರಮದ ಬೆಳವಣಿಗೆಗೆ ನೀಡುತ್ತಿರುವ ಕೊಡುಗೆಯನ್ನು ಅರ್ಥೈಸುವ ಬಗೆ ತಿಳಿಯದಂತಾಗಿದೆ. ದೇಶ, ವಿದೇಶಗಳಲ್ಲಿ ನಿತ್ಯಾನಂದನ ಆಶ್ರಮಗಳು ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವುದು ಸಹ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಅಧ್ಯಾತ್ಮದ ಸೋಗಿನಲ್ಲಿ ಅಕ್ರಮ ದಂಧೆಗಳಲ್ಲಿ ತೊಡಗಿದ್ದ ವ್ಯಕ್ತಿಯ ನೈಜ ಮುಖ ಜಗಜ್ಜಾಹೀರಾದರೂ ಆತನನ್ನು ಒಪ್ಪಿಕೊಳ್ಳುವ ಜನಸಮುದಾಯ ನಮ್ಮ ನಡುವೆ ಇರುವಾಗ ನಿತ್ಯಾನಂದನ ಅಂತ್ಯ ಹೇಗೆ ಸಾಧ್ಯ?