ಭಾರತದ ಮುಖ್ಯ ನಗರಗಳಲ್ಲಿ ಸೈಬರ್ ದಾಳಿ ನಡೆಯಬಹುದು ಎಂದು ತನ್ನ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಚ್ಚರಿಕೆ ನೀಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ನೀಡಿರುವ ಸಲಹೆಯಲ್ಲಿ, ಭಾರತದ ಹಲವು ನಗರಗಳಲ್ಲಿ ಸೈಬರ್ ದಾಳಿ ನಡೆಸಿ ವೈಯಕ್ತಿಕ ಡೇಟಾ, ಬ್ಯಾಂಕ್ ಡೇಟಾ ಕದಿಯುವ ಪ್ರಕರಣಗಳು ನಮ್ಮ ಗಮನಕ್ಕೆ ಬರುತ್ತಿದೆ. ncov2019@gov.in ಎಂಬ ಈಮೇಲ್ನಲ್ಲಿ ಬರುವ ಮೇಲ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಹೋಗಬೇಡಿ ಎಂದು ಎಚ್ಚರಿಸಿದೆ.
ಉಚಿತ ಕೋವಿಡ್-19 ಪರೀಕ್ಷೆ ನಡೆಸಲಾಗುವುದು ಎಂದು ಈ ಈಮೇಲ್ ಮುಖಾಂತರ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಹಾಗೂ ಅಹಮದಾಬಾದ್ ನಗರ ನಿವಾಸಿಗಳಿಗೆ ಮೇಲ್ ಹೋಗಿದೆ. ಈ ಈಮೇಲ್ ಮುಖಾಂತರ ಯಾವುದೇ ಮೇಲ್ ಬಂದರೂ ಕ್ಲಿಕ್ ಮಾಡಬಾರದೆಂದು ಹೇಳಿದೆ.
ಕೋವಿಡ್-19 ಉಚಿತ ಪರೀಕ್ಷೆಯ ಹೆಸರಲ್ಲಿ ನಕಲಿ ಈ ಮೇಲ್, ಸಾಮಾಜಿಕ ಜಾಲತಾಣ ಪೋಸ್ಟ್ಗಳು ಹಾಗೂ ಟೆಕ್ಸ್ಟ್ ಸಂದೇಶಗಳು ಭಾರತಾದ್ಯಂತ ಹರಿದಾಡುತ್ತಿದೆ, ಈ ಕುರಿತು ಎಚ್ಚರವಾಗಿರಿ ಎಂದು ರಾಷ್ಟ್ರೀಯ ಭದ್ರತಾ ಸಂಸ್ಥೆ ಎಚ್ಚರಿಕೆ ನೀಡಿರುವ ಬೆನ್ನಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಎಚ್ಚರಿಕೆ ನೀಡಿದೆ.
ಸರ್ಕಾರದ ಅಧಿಕೃತ ಸಂವಹನವನ್ನು ಅನುಕರಿಸಿರುವ ಹ್ಯಾಕರ್ಗಳು ಸರ್ಕಾರಿ ವೆಬ್ಸೈಟಿನಂತೆ ತೋರುವ ವೆಬ್ಸೈಟ್, ಈಮೇಲ್ಗಳನ್ನು ರಚಿಸಿದ್ದಾರೆ.
ಉಚಿತ ಕರೋನಾ ಪರೀಕ್ಷೆ ನಡೆಸಲಾಗುವುದು ಎಂದು ncov2019@gov.in ಹಾಗೂ ಹಲವು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂತಹ ಈಮೇಲ್ ಮುಖಾಂತರ ನಕಲಿ ವೆಬ್ಸೈಟಿಗೆ ತಮ್ಮ ವೈಯಕ್ತಿಕ, ಹಣಕಾಸಿನ ಮಾಹಿತಿಗಳಿಗೆ ಕನ್ನ ಹಾಕುವ ಸಾಧ್ಯತೆ ಇದೆಯೆಂದು ಭಾರತ ಸರ್ಕಾರದ ಸೈಬರ್ ಭದ್ರತಾ ಸಂಸ್ಥೆ CERT-In (Indian Computer Emergency Response Team) ಜೂನ್ 19 ರಂದು ಎಚ್ಚರಿಸಿತ್ತು.