ಸದ್ಯ ರಾಜ್ಯ ರಾಜಕಾರಣದಲ್ಲಿ, ದಿನದಿಂದ ದಿನಕ್ಕೆ ಕೈಮೀರಿ ಹೋಗುತ್ತಿರುವ ಕರೋನಾ ಮತ್ತು ಅದು ಸೃಷ್ಟಿಸುತ್ತಿರುವ ಸಾವು-ನೋವಿನ ಸಂಗತಿ ಒಂದು ಕಡೆಯಾದರೆ; ಮತ್ತೊಂದು ಕಡೆ, ಅದೇ ಕರೋನಾದ ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿ ಜನರ ತೆರಿಗೆ ಹಣವನ್ನು ನುಂಗಿದ ವಿಷಯವೇ ತೀವ್ರ ಚರ್ಚೆಗೊಳಗಾಗಿದೆ.
ಹಾಗೆ ನೋಡಿದರೆ, ಕೋವಿಡ್ ನಿರ್ವಹಣೆಯ ಹೆಸರಲ್ಲಿ ಹಣಕಾಸು ಅವ್ಯವಹಾರದ ಸಂಗತಿ ಹೊಸದೇನಲ್ಲ. ಸರಿಸುಮಾರು ಮೊದಲ ಸುತ್ತಿನ ಲಾಕ್ ಡೌನ್ ಆರಂಭವಾಗುತ್ತಲೇ, ಸಾರ್ವಜನಿಕ ಹಣದ ಅಂದಾದುಂದಿಯ ಹೆಬ್ಬಾಗಿಲು ರಾಜಧಾನಿಯ ವಿವಿಧ ಇಲಾಖೆಗಳಲ್ಲಿ ತೆರೆದುಕೊಂಡಿದ್ದವು. ಮಾಸ್ಕ್, ಸ್ಯಾನಿಟೈಸರು, ಪಿಪಿಇ ಕಿಟ್, ವೆಂಟಿಲೇಟರು ಹೀಗೆ ವಿವಿಧ ಅಗತ್ಯ ಜೀವರಕ್ಷಕ ವೈದ್ಯಕೀಯ ಸಾಧನಗಳ ಜೊತೆಗೆ, ಹಾಸಿಗೆ, ಮಂಚ ಮತ್ತಿತರ ಸೌಲಭ್ಯ್-ಸಲಕರಣೆಗಳ ವಿಷಯದಲ್ಲಿಯೂ ಭಾರೀ ಭ್ರಷ್ಟಾಚಾರದ ವರದಿಗಳು ಇದ್ದವು.
ಇದೀಗ ತೀರಾ ತಡವಾಗಿ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋವಿಡ್-19 ನಿರ್ವಹಣೆಯ ಸಂಬಂಧ ಈವರೆಗೆ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಮೂಲಕ ನಡೆಸಿರುವ ಖರೀದಿ ವ್ಯವಹಾರದಲ್ಲಿ ಭಾರೀ ದೊಡ್ಡ ಮಟ್ಟದ ಹಣಕಾಸು ಅವ್ಯವಹಾರ ನಡೆದಿದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಈವರೆಗೆ ಮಾಡಿರುವ 4,167 ಕೋಟಿ ರೂ. ಒಟ್ಟಾರೆ ವೆಚ್ಚದಲ್ಲಿ ಕನಿಷ್ಟ 2,000 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮೊನ್ನೆ ದಾಖಲೆಸಹಿತ ಆರೋಪ ಮಾಡಿದ ಬಳಿಕ ವಿಷಯ ಗಂಭೀರ ತಿರುವು ಪಡೆದುಕೊಂಡಿದೆ.
ಸ್ವತಃ ಮಾಜಿ ಸಿಎಂ ಈ ವಿಷಯದಲ್ಲಿ ದಾಖಲೆ ಮುಂದಿಟ್ಟು ಆರೋಪ ಮಾಡುತ್ತಿರುವುದರಿಂದ, ಕೆಪಿಸಿಸಿ ಅಧ್ಯಕ್ಷರು ಕೂಡ ಅವರೊಂದಿಗೆ ದನಿಗೂಡಿಸಿ, ಅವರು ಲೆಕ್ಕ ಕೊಡಿ ಎಂದರೆ, ಇವರು ಉತ್ತರ ಕೊಡಿ ಎನ್ನುತ್ತಿದ್ದಾರೆ. ನಾಯಕರ ಅದೇ ಪ್ರಶ್ನೆಗಳು ಈಗ ಕೆಪಿಸಿಸಿಯ ಅಂಗಳದಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೂ ಕಾಂಗ್ರೆಸ್ ವಲಯದಲ್ಲಿ ಪ್ರತಿಧ್ವನಿಸುತ್ತಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಎರಡು ಸಾವಿರ ಕೋಟಿ ಅವ್ಯವಹಾರ ಕುರಿತು ದಾಖಲೆ ಬಿಡುಗಡೆ ಮಾಡಿದ ಸಿದ್ದರಾಮಯ್ಯ ಅವರು, ತಮ್ಮ ಬಹುತೇಕ ಆರೋಪಗಳಿಗೆ ಸಮರ್ಥನೆಯಾಗಿ ವಿವಿಧ ಸಾಧನ- ಸಲಕರಣೆಗಳ ಖರೀದಿ ಪ್ರಕ್ರಿಯೆಯ ದಾಖಲೆ-ಪತ್ರಗಳನ್ನು ಹೆಸರಿಸಿ ಪ್ರತಿ ಇಲಾಖಾವಾರು ಮತ್ತು ಪ್ರತಿ ಖರೀದಿವಾರು ಮಾಹಿತಿ ನೀಡಿದ್ದರು. ಅವರದೇ ಹೇಳಿಕೆಯಂತೆ, “ಕೋವಿಡ್ ನಿರ್ವಹಣೆಗಾಗಿ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ 700 ಕೋಟಿ ರೂ, ಬಿಬಿಎಂಪಿ ಮತ್ತು ವಿವಿಧ ಸ್ಥಳೀಯ ಸಂಸ್ಥೆಗಳು 200 ಕೋಟಿ ರೂ., ಜಿಲ್ಲಾಡಳಿತಗಳು ಒಟ್ಟು 742 ಕೋಟಿ ರೂ., ಕಾರ್ಮಿಕ ಇಲಾಖೆ 1000 ಕೋಟಿ ರೂ., ವೈದ್ಯಕೀಯ ಶಿಕ್ಷಣ ಇಲಾಖೆ 815 ಕೋಟಿ ರೂ., ಸಮಾಜಕಲ್ಯಾಣ, ಶಿಕ್ಷಣ, ಪೊಲೀ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿ ಒಟ್ಟು 500 ಕೋಟಿ ರೂ., ಕೋವಿಡ್ ಕೇರ್ ಸೆಂಟರ್ ಗೆ ಕೇಂದ್ರ ನೀಡಿದ 160 ಕೋಟಿ ರೂ. ಸೇರಿ ಒಟ್ಟು ರಾಜ್ಯ ಸರ್ಕಾರ 4,167 ಕೋಟಿ ರೂ. ವೆಚ್ಚ ಮಾಡಿದೆ. ಆ ಪೈಕಿ ಉಪಕರಣಗಳಿಗೆ ಮಾರುಕಟ್ಟೆ ದರಕ್ಕಿಂತ ಎರಡು ಮೂರು ಪಟ್ಟು ದರ ನೀಡಿ ಸುಮಾರು 2000 ಕೋಟಿ ರೂ. ಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ”.
ಅಲ್ಲದೆ ವೆಂಟಿಲೇಟರು, ಪಿಪಿಇ ಕಿಟ್, ಎನ್ 95 ಮಾಸ್ಕ್, ಸ್ಯಾನಿಟೈಸರ್ ಮುಂತಾದ ಸಲಕರಣೆಗಳ ಖದೀರಿ ಕುರಿತು, ಅವುಗಳ ಮಾರುಕಟ್ಟೆ ದರ, ಸರ್ಕಾರ ವಿವಿಧ ಇಲಾಖೆಗಳ ಅಡಿಯಲ್ಲಿ ಖರೀದಿಸಿದ ದರ ಸಹಿತ ಸಂಪೂರ್ಣ ವಿವರ ಹೊಂದಿದ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೇ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೂ “ಇದೊಂದು ಬೃಹತ್ ಹಗರಣ. ಕರೋಣಾದ ಹೆಸರಲ್ಲಿ ಬಿಜೆಪಿಯವರು ದುಡ್ಡು ಮಾಡಲು ಹೊರಟ್ಟಿದ್ದಾರೆ. ಇದನ್ನು ಸಹಿಸಲು ಸಾಧ್ಯವೇಇಲ್ಲ” ಎಂದು ಹೇಳಿದ್ದಾರೆ.
ಈ ಬಹುಕೋಟಿ ಹಗರಣದಲ್ಲಿ ನೇರವಾಗಿ ಆಯಾ ಇಲಾಖೆ ಸಚಿವರು ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರೆ. ಸಚಿವರೇ ಎರಡು ಸಾವಿರ ಕೋಟಿ ರೂ. ಜೇಬಿಗಿಳಿಸಿಕೊಂಡಿದ್ದಾರೆ ಎಂದೂ ಸಿದ್ದರಾಮಯ್ಯ ನೇರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಆರೋಪದ ಬಳಿಕ ವಿವಿಧ ಸಚಿವರು ಕುಂಬಳ ಕಾಯಿ ಕದ್ದವರು ನಾವಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ ಕೂಡ!
ಜನರ ತೆರಿಗೆಯ ಹಣವನ್ನು ಹೀಗೆ ಲೂಟಿ ಹೊಡೆದಿರುವ ಬಗ್ಗೆ ದಾಖಲೆ ಸಹಿತ ಸಾರ್ವಜನಿಕವಾಗಿ ಸರ್ಕಾರವನ್ನು ಪ್ರಶ್ನಿಸಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದೂ ಆಗ್ರಹಿಸಿರುವ ಸಿದ್ದರಾಮಯ್ಯ ಅವರ ಜನಪರ ಕಾಳಜಿ ಪ್ರಶ್ನಾತೀತ. ಆದರೆ, ಹಗರಣದ ಕುರಿತ ಎಲ್ಲಾ ದಾಖಲೆಪತ್ರಗಳಿರುವಾಗಲೂ, ಪ್ರತಿ ಇಲಾಖಾವಾರು, ಉಪಕರಣವಾರು ಖರೀದಿಯ ಮಾಹಿತಿ ಇರುವಾಗಲೂ ಕಾಂಗ್ರೆಸ್ ನಾಯಕರು, ಯಾಕೆ ಅಧಿಕೃತ ದೂರು ದಾಖಲಿಸದೆ, ಕೇವಲ ನ್ಯಾಯಾಂಗ ತನಿಖೆಗೆ ಆಗ್ರಹ, ಪತ್ರ ಚಳವಳಿ, ಪತ್ರಿಕಾಹೇಳಿಕೆ, ಪತ್ರಿಕಾಗೋಷ್ಠಿ, ಪ್ರತಿಭಟನೆಗಳಿಗೆ ಸೀಮಿತವಾಗಿದ್ದಾರೆ ಎಂಬುದು ಉತ್ತರಿಸಬೇಕಾದ ಪ್ರಶ್ನೆ.
ಒಂದು ಸರ್ಕಾರ, ಜನರು ಜೀವ ಮತ್ತು ಬದುಕು ಸಂಕಷ್ಟದಲ್ಲಿರುವಾಗ, ದುಡಿಮೆ ಮತ್ತು ಆರ್ಥಿಕ ಶಕ್ತಿ ಕಳೆದುಕೊಂಡ ಜನ ಭೀಕರ ಸಾಂಕ್ರಾಮಿಕದ ಎದುರು ನಿತ್ರಾಣರಾಗಿ, ಅಸಹಾಯಕರಾಗಿ ಸೋತು ಹೋಗಿರುವಾಗ ಕೂಡ, ರೋಗ ಹೆಸರಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರದಲ್ಲಿ ಮುಳುಗುತ್ತದೆ. ಸಾವಿನ ಮನೆಯಲ್ಲಿ ಅಸಹ್ಯಕರ ದಂಧೆ ನಡೆಸುತ್ತದೆ. ಜೀವ ಒತ್ತೆ ಇಟ್ಟು ಲಾಭದ ಕೊಯಿಲು ನಡೆಸುತ್ತದೆ ಮತ್ತು ಯಾವ ಹಿಂಜರಿಕೆ ಇಲ್ಲದೆ, ಚೂರು ಅಸಹ್ಯಪಟ್ಟುಕೊಳ್ಳದೆ ಭ್ರಷ್ಟ ಹಣ ಚರಂಡಿಗೆ ಬಾಯಿ ಹಾಕುತ್ತದೆ ಎಂದರೆ; ಅದನ್ನು ಕಾನೂನು ರೀತಿಯಲ್ಲಿ ಪ್ರಶ್ನಿಸುವ ಅವಕಾಶವನ್ನು ಪ್ರತಿಪಕ್ಷ ಕೈಚೆಲ್ಲುತ್ತಿರುವುದು ಏಕೆ?
ಪ್ರತಿಪಕ್ಷಕ್ಕೆ ನಿಜವಾಗಿಯೂ ಸಾರ್ವಜನಿಕ ಹಣದ ದುರುಪಯೋಗದ ಬಗ್ಗೆ, ಜನರ ಬಗ್ಗೆ ಕಾಳಜಿ ಇದ್ದರೆ, ಅದು ಮೊದಲು ಸೂಕ್ತ ತನಿಖಾ ವ್ಯವಸ್ಥೆಯಲ್ಲಿ; ಅದು ಎಸಿಬಿಯಾಗಿರಬಹುದು, ಅಥವಾ ಇನ್ನಾವುದೇ ಸಂಸ್ಥೆಯಾಗಿರಬಹುದು; ದೂರು ದಾಖಲಿಸಬೇಕಲ್ಲವೆ? ಸಿದ್ದರಾಮಯ್ಯ ಅವರಿಗೆ ಹಿಂದಿನ ಲೋಕಾಯುಕ್ತವನ್ನು ದುರ್ಬಲಗೊಳಿಸಿ, ಎಸಿಬಿಯನ್ನು ರಚಿಸಿದ್ದು ಮರೆತುಹೋಗಿದೆಯೇ? ಅಥವಾ ತಾವೇ ರಚಿಸಿದ ಎಸಿಬಿಯ ಮೇಲೆ ತಮಗೇ ನಂಬಿಕೆ ಕಳೆದುಹೋಗಿದೆಯೇ? ಎಂಬ ಪ್ರಶ್ನೆಗಳಿಗೂ ಉತ್ತರ ಸಿಗಬೇಕಿದೆ.
ಈ ಅವ್ಯವಹಾರಕ್ಕೆ ಸಂಬಂಧಿಸಿದಂತೆ, ಈವರೆಗೆ ಕರ್ನಾಟಕ ರಾಷ್ಟ್ರಸಮಿತಿಯ ರವಿ ಕೃಷ್ಣಾ ರೆಡ್ಡಿಯವರನ್ನು ಹೊರತುಪಡಿಸಿ ಇನ್ನಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂಬುದು ಸದ್ಯದ ಮಾಹಿತಿ. ಪ್ರತಿ ಖರೀದಿಗೆ ಸಂಬಂಧಸಿದ ಟೆಂಡರ್ ವಿವರ, ಇಲಾಖಾ ಅನುಮೋದನೆ, ಟಿಪ್ಪಣಿ, ಗುತ್ತಿಗೆದಾರರ ಅಂದಾಜು ದರಪಟ್ಟಿ, ಖರೀದಿ ಆದೇಶ ಸೇರಿದಂತೆ ವಿವಿಧ ತಾಂತ್ರಿಕ ಮಾಹಿತಿ ಮತ್ತು ಸಂಪೂರ್ಣ ಕಡತದೊಂದಿಗೆ ಸರ್ಕಾರದ ವಿರುದ್ಧ, ಅಥವಾ ಖರೀದಿಗೆ ಹಣಕಾಸು ಅನುಮೋದನೆ ನೀಡಿದ ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಸಿಎಂ ವಿರುದ್ಧವೇ ದೂರು ದಾಖಲಿಸಲು ಅವಕಾಶವಿರುವಾಗಲೂ ಪ್ರತಿ ಪಕ್ಷ ನಾಯಕರು, ಈ ವಿಷಯದಲ್ಲಿ ಕೇವಲ ರಾಜಕೀಯ ಪ್ರಚಾರದ ವರಸೆಗೆ ಸೀಮಿತವಾಗಿರುವುದು ಯಾಕೆ? ಸರ್ಕಾರದ ವಿರುದ್ದ ದೂರು ನೀಡಲಾಗದೇ ಹೋದರೂ, ಕನಿಷ್ಟ ಆಯಾ ಖರೀದಿಗೆ ಸಂಬಂಧಿಸಿದಂತೆ ಮಾರುಕಟ್ಟೆ ದರಕ್ಕಿಂತ ಎರಡು ಮೂರು ಪಟ್ಟು ಅಧಿಕ ದರಕ್ಕೆ ಸರ್ಕಾರಕ್ಕೆ ಮಾರಾಟ ಮಾಡಿರುವ ಟೆಂಡರುದಾರರವಿರುದ್ಧವಾದರೂ ಕ್ರಿಮಿನಲ್ ಪ್ರಕರಣ ಹೂಡಬಹುದಾಗಿದ್ದರೂ, ಇಂತಹ ವಿಷಯದಲ್ಲಿ ಸಾಕಷ್ಟು ಅನುಭವ ಮತ್ತು ಕಾನೂನು ಅರಿವುಳ್ಳ ನಾಯಕರು ಯಾಕೆ ಪತ್ರಚಳವಳಿಗೆ ಸೀಮಿತವಾಗಿದ್ದಾರೆ?
ಇಂತಹ ಪ್ರಶ್ನೆಗಳ ನಡುವೆ, ಪ್ರತಿಪಕ್ಷಗಳು ಈಗ ಈ ಹಗರಣದ ವಿಷಯದಲ್ಲಿ ತೋರುತ್ತಿರುವುದು ನೈಜ ಜನಪರ ಕಾಳಜಿಯೇ? ಜನರ ತೆರಿಗೆ ಹಣದ ಕುರಿತ ಕಾಳಜಿಯೇ? ಅಥವಾ ಈ ವಿಷಯವನ್ನು ಮುಂದಿಟ್ಟುಕೊಂಡು ಕೇವಲ ರಾಜಕೀಯ ಲಾಭ ಪಡೆಯುವ ಹುನ್ನಾರವೇ ಎಂಬ ಗಂಭೀರ ಅನುಮಾನಗಳೂ ವ್ಯಕ್ತವಾಗುತ್ತಿವೆ. ಏಕೆಂದರೆ; ಈಗಾಗಲೇ ಮತ್ತೊಂದು ಪ್ರತಿಪಕ್ಷ ಜೆ ಡಿಎಸ್ ನಾಯಕರು ಈ ವಿಷಯದಲ್ಲಿ ತಾವು ಯಾವುದೇ ತನಿಖೆಗೆ ಕೇಳುವುದಿಲ್ಲ ಎಂಬರ್ಥದಲ್ಲಿ ಮಾತನಾಡುವ ಮೂಲಕ, ಬಹುಕೋಟಿ ಹಗರಣದ ವಿಷಯದಲ್ಲಿ ಪ್ರತಿಪಕ್ಷವಾಗಿ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದಾರೆ. ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಕೂಡ ಕೇವಲ ಪ್ರಚಾರ ಮತ್ತು ರಾಜಕೀಯ ಲಾಭಕ್ಕೆ ಈ ಹಗರಣವನ್ನು ಸೀಮಿತಗೊಳಿಸಿದರೆ; ಅದೇ ನಾಯಕರು ಹೇಳುವಂತೆ ನಿಜವಾಗಿಯೂ ಎರಡು ಸಾವಿರ ಕೋಟಿಯಷ್ಟು ಅಪಾರ ಹಣದ ಅವ್ಯವಹಾರದ ಬಗ್ಗೆ ಕಾನೂನುಬದ್ಧವಾಗಿ ಪ್ರಶ್ನಿಸುವವರು ಯಾರು? ತಪ್ಪಿತಸ್ಥರನ್ನು ಕಟಕಟೆಗೆ ಎಳೆಯುವ ಹೊಣೆಗಾರಿಕೆ ಯಾರದು? .
ಈ ನಡುವೆ; ಪ್ರತಿಪಕ್ಷಗಳ ಹಗರಣದ ವಿಷಯದಲ್ಲಿ ರಾಜಕೀಯ ಲಾಭವನ್ನಷ್ಟೇ ನೋಡುತ್ತಿವೆ ಎಂಬುದನ್ನು ಗ್ರಹಿಸಿರುವ ರಾಜ್ಯ ಸರ್ಕಾರ, ಗಂಭೀರ ಆರೋಪಗಳ ಹೊರತಾಗಿಯೂ ಖರೀದಿ ವ್ಯವಹಾರ ನಡೆಸಿದ ಅಧಿಕಾರಿಗಳನ್ನು ಅದೇ ಹುದ್ದೆ ಮತ್ತು ಅದೇ ಸ್ಥಾನಗಳಲ್ಲಿ ಮುಂದುವರಿಸಿದೆ. ಆ ಮೂಲಕ ‘ವ್ಯವಹಾರ’ ಸರಿಪಡಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಒಟ್ಟಾರೆ; ಜನ ಸಾವು-ಬದುಕಿನ ನಡುವೆ ಹೋರಾಡುತ್ತಿರುವಾಗ ಕೂಡ ಜನರ ಹಿತ ಕಾಯಬೇಕಾದ ಸರ್ಕಾರ ಮತ್ತು ಸಚಿವರು, ಅಪಾಯಕಾರಿ ಸೋಂಕಿನ ಹೆಸರಲ್ಲೂ ಸಾವಿರಾರು ಕೋಟಿ ಲೂಟಿಗೆ ಇಳಿದಿದ್ದಾರೆ ಎಂದು ಬೊಬ್ಬೆ ಹೊಡೆಯುವ ಪ್ರತಿಪಕ್ಷ ಕೂಡ, ನೈಜ ಕಾಳಜಿಯ ಬದಲು ರಾಜಕೀಯ ಲಾಭದ ಗಿಮಿಕ್ ನಲ್ಲಿ ಮುಳುಗಿರುವುದು ನಿಜವಾದ ದುರವಸ್ಥೆ ಮತ್ತು ದುರಂತ! ನಮ್ಮ ರಾಜಕೀಯ ವ್ಯವಸ್ಥೆ ತಲುಪಿರುವ ಪರಮ ನೀಚತನಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ!