ಸರಿ ಸುಮಾರು ಎರಡೂ ಮುಕ್ಕಾಲು ತಿಂಗಳ ಬಳಿಕ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ನೂತನ ಸಾರಥಿ ಬರುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕೆಪಿಸಿಸಿ ಅಧ್ಯಕ್ಷ ರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಕಾಂಗ್ರೆಸ್ ರಾಜ್ಯ ಘಟಕದ ನಾಯಕರಲ್ಲಿದ್ದ ಭಿನ್ನಾಭಿಪ್ರಾಯಗಳು, ರಾಷ್ಟ್ರ ನಾಯಕತ್ವದಲ್ಲಿದ್ದ ಗೊಂದಲಗಳಿಂದ ಅಭ್ಯರ್ಥಿ ಯಾರೆಂಬುದು ಬಹುತೇಕ ಖಚಿತವಾಗಿದ್ದರೂ ಘೋಷಣೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಪೂರ್ಣ ಪ್ರಮಾಣದ ನಾಯಕತ್ವವಿಲ್ಲದೆ ಮತ್ತು ರಾಜ್ಯ ಕಾಂಗ್ರೆಸ್ ನಲ್ಲಿ ಹೇಳುವವರು, ಕೇಳುವವರೂ ಕೂಡ ಇಲ್ಲದೆ ದಿಕ್ಕೆಟ್ಟ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳು ಕಾಣಿಸಿಕೊಳ್ಳಲಾರಂಭಿಸಿರುವುದರಿಂದ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ನಾಯಕರು, ಕೆಪಿಸಿಸಿ ಅಧ್ಯಕ್ಷರ ಘೋಷಣೆಗೆ ಮನಸ್ಸು ಮಾಡಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವರು ಬೆಂಗಳೂರಿಗೆ ಬಂದಿರುವುದು ಇದೇ ಕಾರಣಕ್ಕೆ. ಎಐಸಿಸಿ ವರಿಷ್ಠರ ಸೂಚನೆಯಂತೆ ಬೆಂಗಳೂರಿಗೆ ಬಂದಿಳಿದ ಆಜಾದ್ ಅವರು ನೇರವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದ್ದಾರೆ. ನಂತರದಲ್ಲಿ ಇತರೆ ನಾಯಕರೊಂದಿಗೂ ಅವರು ಸಮಾಲೋಚನೆ ನಡೆಸಿ ವರಿಷ್ಠರಿಗೆ ಮಾಹಿತಿ ನೀಡಲಿದ್ದು, ಅದರ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷರ ಹೆಸರು ಘೋಷಣೆಯಾಗಲಿದೆ. ಈ ವಾರಾಂತ್ಯದೊಳಗೆ ನೂತನ ಅಧ್ಯಕ್ಷರ ನೇಮಕವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರೊಂದಿಗೆ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್ ಸಾಕಷ್ಟು ಪ್ರಯತ್ನ ಮಾಡಿದರೂ ಅಂತಿಮವಾಗಿ ಡಿ.ಕೆ.ಶಿವಕುಮಾರ್ ಅವರ ಹೆಸರನ್ನೇ ಅಂತಿಮಗೊಳಿಸಲಾಗಿತ್ತು. ಅಧ್ಯಕ್ಷರ ಜತೆಗೆ ಕಾರ್ಯಾಧ್ಯಕ್ಷರನ್ನೂ ನೇಮಕ ಮಾಡಬೇಕು ಎಂದು ವರಿಷ್ಠರು ನಿರ್ಧರಿಸಿ ಅಧ್ಯಕ್ಷರ ಹೆಸರು ಘೋಷಣೆ ಮಾಡಿರಲಿಲ್ಲ. ಆದರೆ, ಕಾರ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಗೊಂದಲ ಉಂಟಾಗಿದ್ದರಿಂದ ಘೋಷಣೆಯನ್ನು ಮುಂದೂಡಲಾಯಿತು. ಈ ಮಧ್ಯೆ ಮತ್ತೊಂದು ಸುತ್ತಿನ ಲಾಬಿ ಶುರುವಾಗಿ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಚಲಾವಣೆಗೆ ಬಂತು. ಆದರೆ, ಡಿ.ಕೆ.ಶಿವಕುಮಾರ್ ಅವರ ಬಗ್ಗೆಯೇ ವರಿಷ್ಠ ನಾಯಕರು ಒಲವು ಹೊಂದಿದ್ದರಿಂದ ಎರಡನೇ ಹಂತದ ಲಾಬಿ ಅಲ್ಲಿಗೇ ನಿಂತಿತ್ತು. ನಂತರವೂ ಅಧ್ಯಕ್ಷರ ನೇಮಕ ವಿಳಂಬವಾಗಿದ್ದರಿಂದ, ಯಾರಾದರೂ ಸರಿ, ಹೊಸ ಅಧ್ಯಕ್ಷರು ಬಂದರೆ ಸಾಕು ಎಂಬಂತಹ ಪರಿಸ್ಥಿತಿ ರಾಜ್ಯ ಕಾಂಗ್ರೆಸ್ ನಲ್ಲಿ ನಿರ್ಮಾಣವಾಗಿದೆ.
ವೇಣುಗೋಪಾಲ್ ಬದಲು ಆಜಾದ್ ಬಂದಿದ್ದೇಕೆ?
ಸಾಮಾನ್ಯವಾಗಿ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ಮಾಹಿತಿ ನೀಡುವುದು ಎಐಸಿಸಿ ರಾಜ್ಯ ಉಸ್ತುವಾರಿಯಾದವರು. ಪ್ರಸ್ತುತ ಕೆ.ಸಿ.ವೇಣುಗೋಪಾಲ್ ಅವರು ಎಐಸಿಸಿ ರಾಜ್ಯ ಉಸ್ತುವಾರಿಯಾಗಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದ ಕುರಿತು ಚರ್ಚಿಸಲು ವೇಣುಗೋಪಾಲ್ ಅವರ ಬದಲು ಗುಲಾಂ ನಬಿ ಆಜಾದ್ ಅವರನ್ನು ಕಳುಹಿಸಿಕೊಟ್ಟಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಡೆ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಸೆಂಬರ್ 9ರಂದು ರಾಜೀನಾಮೆ ನೀಡಿದ ಬಳಿಕ ರಾಜ್ಯ ಕಾಂಗ್ರೆಸ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವೇಣುಗೋಪಾಲ್ ಅವರ ಬದಲು ಬೇರೆಯವರಿಗೆ ಮಣೆ ಹಾಕಲಾಗುತ್ತಿದೆ. ಈ ಹಿಂದೆ ಮಧುಸೂಧನ್ ಮಿಸ್ತ್ರಿ (ಈ ಹಿಂದೆ ಎಐಸಿಸಿ ರಾಜ್ಯ ಉಸ್ತುವಾರಿಯಾಗಿದ್ದರು) ಮತ್ತು ಭಕ್ತಚರಣದಾಸ್ ಅವರನ್ನು ಕಳುಹಿಸಿಕೊಟ್ಟು ಅವರ ಮೂಲಕ ಹೈಕಮಾಂಡ್ ನಾಯಕರು ವರದಿ ತರಿಸಿಕೊಂಡಿದ್ದರು. ಇದಕ್ಕೆ ಕಾರಣ ವೇಣುಗೋಪಾಲ್ ಅವರ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ, ಅದರಲ್ಲೂ ಹಿರಿಯ ಕಾಂಗ್ರೆಸ್ ನಾಯಕರಲ್ಲಿರುವ ಅಸಮಾಧಾನ. ವೇಣುಗೋಪಾಲ್ ಅವರು ಸಿದ್ದರಾಮಯ್ಯ ಮತ್ತು ಅವರ ಬಣದ ಪಕ್ಷಪಾತಿಯಾಗಿದ್ದಾರೆ ಎಂದು ವರಿಷ್ಠರಿಗೆ ದೂರನ್ನೂ ನೀಡಿದ್ದರು. ಈ ಕಾರಣದಿಂದ ಎರಡನೇ ಬಾರಿಯೂ ವೇಣುಗೋಪಾಲ್ ಅವರನ್ನು ದೂರವಿಟ್ಟು ಗುಲಾಂ ನಬಿ ಆಜಾದ್ ಅವರನ್ನು ಕಳುಹಿಸಲಾಗಿದೆ.
ಆಜಾದ್ ಅವರು ಈ ಹಿಂದೆ ಎಐಸಿಸಿ ರಾಜ್ಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲ, ಕರ್ನಾಟಕೇ ಸೇರಿದಂತೆ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಸಮಸ್ಯೆಗೆ ಸಿಲುಕಿದಾಗ ಅದನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಆ ಮೂಲಕ ಕಾಂಗ್ರೆಸ್ ಪಾಲಿಗೆ ಅವರು ಟ್ರಬಲ್ ಶೂಟರ್ ಎನಿಸಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷರ ವಿಚಾರದಲ್ಲಿ ಮತ್ತೆ ಗೊಂದಲಗಳಾಗದಂತೆ ನೋಡಿಕೊಳ್ಳಲು ಅಜಾದ್ ಅವರನ್ನು ಕಾಂಗ್ರೆಸ್ ವರಿಷ್ಠರು ಆಯ್ಕೆ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಹೆಸರು ಅಂತಿಮಗೊಂಡಿದ್ದರೂ ಅದಕ್ಕೆ ಅಡ್ಡಿಯೂ ಅಷ್ಟೇ ಜೋರಾಗಿದೆ. ಬೇರೆ ಯಾರನ್ನೇ ಕಳುಹಿಸಿಕೊಟ್ಟರೂ ಮತ್ತೆ ಹೊಸ ರೀತಿಯ ಅಭಿಪ್ರಾಯಗಳು ರಾಜ್ಯ ನಾಯಕರಿಂದ ಬರಬಹುದು. ರಾಜ್ಯದ ಪರಿಸ್ಥಿತಿ ಗೊತ್ತಿಲ್ಲದವರು ಈ ಅಭಿಪ್ರಾಯ ಆಧರಿಸಿ ಮತ್ತೊಂದು ರೀತಿಯ ವರದಿ ನೀಡಿದರೆ ಅದು ಮತ್ತೆ ಗೊಂದಲಕ್ಕೆ ಎಡೆಮಾಡಿಕೊಡುತ್ತದೆ. ಅಷ್ಟೇ ಅಲ್ಲ, ಹಿರಿಯ ನಾಯಕರು ಅಭಿಪ್ರಾಯ ಕೇಳಲು ಬಂದವರ ದಾರಿ ತಪ್ಪಿಸಬಹುದು. ಇದರಿಂದ ಹೊಸ ಸಮಸ್ಯೆಗಳು ಸೃಷ್ಟಿಯಾಗಿ ಅಧ್ಯಕ್ಷರ ನೇಮಕ ಮತ್ತಷ್ಟು ವಿಳಂಬವಾಗಬಹುದೇ ಹೊರತು ಸಮಸ್ಯೆಗೆ ಪರಿಹಾರವಂತೂ ಸಿಗುವುದಿಲ್ಲ. ಒಟ್ಟಾರೆ ಹೇಳುವುದಾದರೆ, ಕೆಪಿಸಿಸಿ ಅಧ್ಯಕ್ಷರನ್ನು ಶೀಘ್ರದಲ್ಲೇ ನೇಮಕ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್ ವರಿಷ್ಠರು, ಅದಕ್ಕೆ ಪೂರಕ ವಾತಾವಣ ನಿರ್ಮಿಸಲು ಗುಲಾಂ ನಬಿ ಆಜಾದ್ ಅವರನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ ಎಂಬುದು ಕಾಂಗ್ರೆಸ್ ಮೂಲಗಳ ಸ್ಪಷ್ಟ ಅಭಿಪ್ರಾಯ.
ಡಿಕೆಶಿ ಜತೆ ಇತರೆ ಪದಾಧಿಕಾರಿಗಳ ನೇಮಕದ ಬಗ್ಗೆ ಚರ್ಚೆ
ಕೆಪಿಸಿಸಿ ಅಧ್ಯಕ್ಷರ ಜತೆಗೆ ಕಾರ್ಯಾಧ್ಯಕ್ಷರನ್ನೂ ನೇಮಕ ಮಾಡಬೇಕು. ಇದಾದ ಬಳಿಕ ಲೋಕಸಭೆ ಚುನಾವಣೆ ನಂತರ ಖಾಲಿ ಇರುವ ಕೆಪಿಸಿಸಿ ಪದಾಧಿಕಾರಿಗಳನ್ನು ಕೂಡ ಶೀಘ್ರದಲ್ಲೇ ನೇಮಕ ಮಾಡಲು ಎಐಸಿಸಿ ನಿರ್ಧರಿಸಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಗುಲಾಂ ನಭಿ ಆಜಾದ್ ಅವರು ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಹೆಸರು ಘೋಷಿಸಿದ ಬಳಿಕ ಪಕ್ಷ ಸಂಘಟಿಸಲು ಅವರಿಗೆ ಬೇಕಾದ ವ್ಯಕ್ತಿಗಳನ್ನು ಪದಾಧಿಕಾರಿಗಳಾಗಿ ನೇಮಕ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಮತ್ತೆ ಗೊಂದಲಗಳು ಸೃಷ್ಟಿಯಾಗಿ ಎತ್ತು ಏರಿಗೆ ಎಂದರೆ, ಕೋಣ ನೀರಿಗೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದಕ್ಕೆ ಅವಕಾಶವಾಗದಂತೆ ಶಿವಕುಮಾರ್ ಅವರು ಬಯಸಿದ ತಂಡವನ್ನು ಅವರಿಗೆ ಕೊಟ್ಟು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸುವ ಯೋಚನೆ ಹೈಕಮಾಂಡ್ ನಾಯಕರಿಗೆ ಇದ್ದಂತೆ ಕಾಣಿಸುತ್ತಿದೆ.
ಪ್ರಸ್ತುತ ರಾಜ್ಯ ಕಾಂಗ್ರೆಸ್ಸಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ಬಲಾಢ್ಯರಾಗಿದ್ದಾರೆ. ಅವರ ಮಾತಿಗೆ ಹೆಚ್ಚಿನ ಮನ್ನಣೆ ಸಿಗುತ್ತದೆ. ಆದರೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದು ಅನುಮಾನ. ಹೀಗಿರುವಾಗ ಪಕ್ಷವನ್ನು ಕಟ್ಟಲು ಬೇರೊಬ್ಬರಿಗೆ ಸಾರಥ್ಯ ವಹಿಸಿದರೆ ಅವರಿಗೆ ಬೆಂಬಲವಾಗಿ ನಿಲ್ಲಲು ಬೇಕಾದ ಸೈನ್ಯವನ್ನೂ ಒದಗಿಸಬೇಕಾಗುತ್ತದೆ. ಹೀಗೆ ಮಾಡಿದರೆ ಇತರರು ಅನಿವಾರ್ಯವಾಗಿ ಅವರೊಂದಿಗೆ ಬರಬೇಕಾಗುತ್ತದೆ. ಅಂದರೆ, ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ದೂರ ಸರಿಯುತ್ತಾರೆ ಎಂದರೆ ಅವರೊಂದಿಗಿರುವವರೂ (ಅವರಲ್ಲಿ ಮೂಲ ಕಾಂಗ್ರೆಸ್ಸಿಗರೂ ಇದ್ದಾರೆ) ಡಿ.ಕೆ.ಶಿವಕುಮಾರ್ ಜತೆ ನಿಲ್ಲಬೇಕಾಗುತ್ತದೆ. ಈ ಎಲ್ಲಾ ವಿಚಾರಗಳ ಕುರಿತು ಆಜಾದ್ ಅವರು ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಕಳೆದ ಎರಡೂವರೆ ತಿಂಗಳಿಗಿಂತಲೂ ಹೆಚ್ಚು ಕಾಲ ನಿಂತ ನೀರಾಗಿರುವ ಕಾಂಗ್ರೆಸ್ಸಿಗೆ ಹೊಸ ಅಧ್ಯಕ್ಷರನ್ನು ನೇಮಿಸಲು ದಿನಗಣನೆ ಆರಂಭವಾಗಿರುವುದಂತೂ ಸತ್ಯ. ಆದರೆ, ನಿರೀಕ್ಷೆಯಂತೆ ಆ ಕೆಲಸ ಆಗಬೇಕಾದರೆ ಈ ಹಿಂದಿನಂತೆ ಮತ್ತೆ ಮತ್ತೆ ಗೊಂದಲಗಳಾಗದಂತೆ ನೋಡಿಕೊಳ್ಳಬೇಕು. ಆ ಕೆಲಸವನ್ನು ಗುಲಾಂ ನಬಿ ಆಜಾದ್ ಅವರು ಮಾಡಬೇಕಾಗುತ್ತದೆ.