ಕೇರಳದ ಕೊಚ್ಚಿಯ ಮರಾಡು ಮುನಿಸಿಪಾಲಿಟಿ ಪ್ರದೇಶದ ನಾಲ್ಕು ಬೃಹತ್ ಅಪಾರ್ಟ್ಮೆಂಟ್ ಧ್ವಂಸ ಮಾಡಲು ಸುಪ್ರೀಂ ಕೋರ್ಟ್ ಗಡು ನೀಡಿರುವ ತೀರ್ಪು ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುವ ಮತ್ತು ಅಂತಹ ಕಟ್ಟಡಗಳಲ್ಲಿ ವಸತಿ ಖರೀದಿಸುವ ಜನರಿಗೆ ಎಚ್ಚರಿಕೆಯ ಗಂಟೆಯಾಗಲಿದೆ.
ನಿಯಮ ಉಲ್ಲಂಘಿಸಿದ ಕಟ್ಟಡಗಳನ್ನು ಧ್ವಂಸ ಮಾಡಲು ನ್ಯಾಯಾಲಯ ಆದೇಶ ನೀಡಿರುವುದು ಇದೇ ಮೊದಲಲ್ಲ. ಹವಾಮಾನ ವೈಪರಿತ್ಯ ಕುರಿತಾಗಿ ದೇಶ ವಿದೇಶಗಳಲ್ಲಿ ಜನಜಾಗೃತಿ ಆಗುತ್ತಿರುವ ಈ ಸಂದರ್ಭದಲ್ಲಿ ಜೀವವೈವಿಧ್ಯತೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪು ಇದಾಗಿದೆ. ಮಾತ್ರವಲ್ಲದೆ, ಸುಪ್ರೀಂ ಕೋರ್ಟು ನೀಡಿರುವ ಈ ಮಹತ್ವದ ತೀರ್ಪು ದೇಶದಾದ್ಯಂತ ಬೃಹತ್ ವಸತಿ ಸಮುಚ್ಛಯಗಳಲ್ಲಿ ಮನೆ ಖರೀದಿಸುವವರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ಕೆರೆಯ ದಂಡೆಯಲ್ಲಿ ಕರಾವಳಿಯ ವಲಯ ನಿಯಂತ್ರಣ (Coastal Regulation Zone) ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿರುವ ನಾಲ್ಕು ಕಟ್ಟಡಗಳ 343 ಫ್ಲಾಟುಗಳು 138 ದಿನಗಳಲ್ಲಿ ನೆಲಸಮ ಆಗಲಿದೆ. ಸುಮಾರು 90 ದಿನಸಗಳಲ್ಲಿ ಕಟ್ಟಡ ಧ್ವಂಸ ಪ್ರಕ್ರಿಯೆ ನಡೆಯಲಿದ್ದು, ಮುಂದಿನ ಫೆಬ್ರವರಿ ತಿಂಗಳೊಳಗೆ ಡೆಬ್ರಿಗಳನ್ನು ಸಾಗಾಟ ಮಾಡಬೇಕಾಗಿದೆ.
ಒಂದೊಂದು ಫ್ಲಾಟ್ 50 ಲಕ್ಷ ರೂಪಾಯಿಯಿಂದ ಒಂದೂವರೆ ಕೋಟಿ ರೂಪಾಯಿ ಬೆಲೆಬಾಳುತ್ತದೆ. ಇದೀಗ ಸುಪ್ರೀಂ ಕೋರ್ಟ್ ಪ್ರತಿ ಫ್ಲಾಟ್ ಮಾಲೀಕನಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಧನ ವಿತರಿಸುವಂತೆ ಕೇರಳ ಸರಕಾರಕ್ಕೆ ಆದೇಶ ನೀಡಿದೆ.
ಕಳೆದ 13 ವರ್ಷಗಳಿಂದ ಕಾನೂನು ಹೋರಾಟ ನಡೆಯುತ್ತಿದ್ದು, ಅಂತಿಮವಾಗಿ ಕಳೆದ ಕೆಲವು ತಿಂಗಳಿಂದ ಕೊಚ್ಚಿ ನಗರದ ಸುಂದರವಾದ ಮತ್ತು ವಿಶಾಲವಾದ ವಂಬನಾಡ್ ಕೆರೆಯ ಸನಿಹದಲ್ಲಿ ನಿರ್ಮಿಸಲಾಗಿರುವ ನಾಲ್ಕು ಅಪಾರ್ಟ್ಮೆಂಟುಗಳನ್ನು ಧ್ವಂಸ ಮಾಡಲು ಸಮಯ ಮಿತಿಯನ್ನು ನಿಗದಿ ಮಾಡಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಕಳೆದ ವರ್ಷ ಕೇರಳದಲ್ಲಿ ಪ್ರಾಕೃತಿಕ ವಿಕೋಪ ಆಗಿರುವುದನ್ನು ಪ್ರಸ್ತಾವಿಸಿರುವ ನ್ಯಾಯಾಲಯ, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ ಕರಾವಳಿಯ ನಿಯಂತ್ರಣ ವಲಯ ನಿಯಮ ಉಲ್ಲಂಘನೆ ಆಗಿರುವುದನ್ನು ಪರಿಗಣಿಸಿ ತೀರ್ಪು ನೀಡಿದೆ. ವಿವಾದಿತ ಕಟ್ಟಡಗಳಲ್ಲಿ ವಾಸಿಸುತ್ತಿರುವ ಮಂದಿಯ ವಿರುದ್ಧವಾಗಿ ತೀರ್ಪು ನೀಡುತ್ತಿಲ್ಲ. ಕಾನೂನು ಉಲ್ಲಂಘನೆ ಆಗಿರುವುದರಿಂದ ಇಂತಹ ತೀರ್ಪು ನೀಡಬೇಕಾಗಿದೆ ಎಂದು ಕೋರ್ಟ್ ಹೇಳಿದೆ.
2006ರ ನಂತರ ಈ ಕಾನೂನು ಬಾಹಿರ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಕೊಚ್ಚಿ ನಗರದಲ್ಲಿ ಹಿನ್ನೀರಿನಂತಿರುವ ವಂಬನಾಡು ಕೆರೆಯ ತೀರ ಬದಿಯಲ್ಲಿ ಗ್ರಾಹಕರ ಆಕರ್ಷಣೆಗಾಗಿ ನಿರ್ಮಾಣ ಮಾಡಲಾದ ವಸತಿ ಸಮುಚ್ಛಯ ಇದಾಗಿದೆ. ಈ ಕಾನೂನು ಬಾಹಿರ ಕಟ್ಟಡಗಳು ಕೊಚ್ಚಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇಲ್ಲ. ಬದಲಾಗಿ ಮರಾಡು ಗ್ರಾಮ ಪಂಚಾಯತು (ಈಗ ಮುನಿಸಿಪಾಲಿಟಿ) ಆಡಳಿತ ವ್ಯಾಪ್ತಿಯಲ್ಲಿದೆ. ಅಂದಿನ ಪಂಚಾಯತು ಆಡಳಿತ ಮಂಡಳಿ ಕರಾವಳಿಯ ವಲಯ ನಿಯಂತ್ರಣ ನಿಯಮವನ್ನು ಪರಿಗಣಿಸದೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿತ್ತು.
ಆದರೆ, ಕೇರಳ ರಾಜ್ಯ ಕರಾವಳಿ ವಲಯ ನಿರ್ವಹಣಾ ಮಂಡಳಿ ಗ್ರಾಮ ಪಂಚಾಯತಿನ ಈ ಕ್ರಮವನ್ನು ಪ್ರಶ್ನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಬಿಲ್ಡರುಗಳಿಗೆ ನೊಟೀಸು ಜಾರಿ ಮಾಡಿತ್ತು. ಮಾತ್ರವಲ್ಲದೆ, ರಾಜ್ಯ ಕರಾವಳಿ ವಲಯ ನಿಯಮಗಳ ಉಲ್ಲಂಘನೆ ಆಗಿದೆ ಎಂದು ಉಲ್ಲೇಖಿಸಿತ್ತು. ಈ ಪ್ರಕರಣಗಳನ್ನು 2007ರಲ್ಲಿ ಕೇರಳ ಹೈಕೋರ್ಟಿನಲ್ಲಿ ಪ್ರಶ್ನಿಸಿದ ಬಿಲ್ಡರುಗಳು ಪಂಚಾಯತು ಪ್ರಕರಣಕ್ಕ ತಡಯಾಜ್ಞೆ ತಂದು ಕಟ್ಟಡ ನಿರ್ಮಾಣ ಮುಂದುವರಿಸಿದ್ದರು.
2016ರಲ್ಲಿ ಈ ಪ್ರಕರಣಕ್ಕೆ ಮಹತ್ವದ ತಿರುವು ದೊರೆಯಿತು. ನಾಯಾಲಯವು ಕರಾವಳಿ ವಲಯ ನಿರ್ವಹಣಾ ಮಂಡಳಿ ವಿರುದ್ಧವಾಗಿ ತೀರ್ಪು ನೀಡಿತು. ಮಾತ್ರವಲ್ಲದೆ, ಗ್ರಾಮ ಪಂಚಾಯತು ತಪ್ಪೆಸಗಿದೆ ಎಂದು ಹೇಳಿತು. ಹೈ ಕೋರ್ಟ್ ತೀರ್ಪಿನ ವಿರುದ್ಧ ಕರಾವಳಿ ವಲಯ ನಿರ್ವಹಣಾ ಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಲೇರಿತು. ಮಂಡಳಿಯ ಅನುಮತಿ ಇಲ್ಲದೆ ಮರಾಡು ಗ್ರಾಮ ಪಂಚಾಯತು ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದು ಅದು ವಾದಿಸಿತು. 2019 ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಕರಾವಳಿ ವಲಯ ನಿರ್ವಹಣಾ ಮಂಡಳಿ ಪರವಾಗಿ ತೀರ್ಪು ನೀಡಿ, ಕಟ್ಟಡಗಳನ್ನು ಕೆಡಹುವಂತೆ ಆದೇಶ ನೀಡಿತು.
ವಂಬನಾಡು ಕೆರೆ ಹಿನ್ನೀರು ಪ್ರದೇಶದಲ್ಲಿ ಬೃಹತ್ ಕಟ್ಟಡಗಳ ನಿರ್ಮಾಣ ಜೀವವೈವಿಧ್ಯತೆ ಅಪಾಯವಿದ್ದು, ಇದೊಂದು ಭಾರತದ ಅತ್ಯಂತ ವಿಶಾಲವಾದ ಕೆರೆ ಪ್ರದೇಶ ಎಂದು ಕರಾವಳಿ ವಲಯ ನಿರ್ವಹಣಾ ಮಂಡಳಿ ಬಲವಾದ ವಾದ ಮಂಡಿಸಿತ್ತು. ಹವಾಮಾನ ವೈಪರಿತ್ಯ ಕುರಿತಾಗಿ ದೇಶ ವಿದೇಶಗಳಲ್ಲಿ ಜನಜಾಗೃತಿ ಆಗುತ್ತಿರುವ ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಜೀವವೈವಿಧ್ಯತೆಗೆ ಸಂಬಂಧಪಟ್ಟಂತೆ ನೀಡಿದ ಮಹತ್ವದ ತೀರ್ಪು ಇದಾಗಿದ್ದು, ಕೇರಳ ಸೇರಿದಂತೆ ದೇಶದ ಬಹುತೇಕ ಕಡೆ ನಡೆದ ಪ್ರವಾಹ ಮತ್ತು ಪ್ರಾಕೃತಿಕ ಅನಾಹುತಗಳ ಬಗ್ಗೆ ಉಲ್ಲೇಖ ಮಾಡಿದ ನ್ಯಾಯಾಧೀಶರು ಸೂಕ್ಷ್ಮವಾದ ಕರಾವಳಿ ತೀರ ಪ್ರದೇಶಗಳಲ್ಲಿ ಅನಿಯಂತ್ರಿತ ಕಟ್ಟಡ ನಿರ್ಮಾಣ ಮಾಡುವುದರಿಂದ ಅಪಾಯಕಾರಿ ಸನ್ನಿವೇಶ ಉಂಟಾಗಲಿದೆ ಮತ್ತು ನೀರಿನ ಸಹಜ ಹರಿವಿಗೆ ಅಡೆತಡೆ ಆಗಲಿದೆ ಎಂದಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ಕೂಡ ಬಿಡಿಎ ಸೇರಿದಂತೆ ಖಾಸಗಿ ಬಿಲ್ಡರುಗಳು ನೈಸರ್ಗಿಕ ಕೆರೆ ಮತ್ತು ಕೆರೆದಂಡೆಗಳನ್ನು ಆಕ್ರಮಿಸಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಹೈ ಕೋರ್ಟ್ ಕಟ್ಟಡ ತೆರವು ಮಾಡುವಂತೆ ಕೆಲವು ತೀರ್ಪುಗಳನ್ನು ನೀಡಿದೆ. ಬೆಂಗಳೂರಿನ ಈ ಪ್ರಕರಣಗಳು ಮತ್ತು ಕೊಚ್ಚಿ ಪ್ರಕರಣದಲ್ಲಿ ಕೂಡ ಕಟ್ಟಡ ನಿರ್ಮಾಣ ಮಾಡಿದವರು ಗ್ರಾಹಕರಿಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ದಾರೆ. ಎಲ್ಲಿಯೂ ಕೂಡ ಫ್ಲಾಟ್ ಖರೀದಿ ಮಾಡುವವನಿಗೆ ಕಟ್ಟಡ ನಿಯಮ ಪ್ರಕಾರ ನಿರ್ಮಾಣ ಆಗಿಲ್ಲ ಎಂಬ ಸೂಚನೆ ದೊರೆತೇ ಇಲ್ಲ. ಯಾವುದೇ ಕಟ್ಟಡ ನಿರ್ಮಾಣ ಹಲವು ಸರಕಾರಿ ಇಲಾಖೆ ಮತ್ತು ಏಜೆನ್ಸಿಗಳ ಪ್ರಮಾಣ ಪತ್ರ ಬೇಕು. ಎಲ್ಲವೂ ಕ್ರಮ ಬದ್ಧವಾಗಿದೆಯೇ ಎಂಬುದನ್ನು ಪರಾಂಬರಿಸಲು ನಮ್ಮಲ್ಲಿ ಯಾವುದೇ ಪ್ರಾಧಿಕಾರ ಇಲ್ಲವಾಗಿದೆ.
ಇಂತಹ ಸಂದರ್ಭಗಳಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ (ರೇರಾ) 2016 ಪ್ರಕಾರ ರಚಿಸಲಾಗುವ ಪ್ರಾಧಿಕಾರಗಳು ಗ್ರಾಹಕನಿಗೆ ಸಹಾಯಕ ಮಾಡಬೇಕು ಎನ್ನುತ್ತಾರೆ ಮಂಗಳೂರಿನ ವಕೀಲರಾದ ವಿವೇಕಾನಂದ ಪನಿಯಾಲ. ರೇರಾ ಪ್ರಕಾರ ಡೆವಲಪರ್ ಕಟ್ಟಡ ನಿರ್ಮಾಣ ಮಾಡುವ ಆಸ್ತಿಗೆ ವಿಮೆ ಮಾಡಬೇಕಾಗುತ್ತದೆ. ಆಗ, ವಿಮಾ ಕಂಪೆನಿ ಆಸ್ತಿ ದಾಖಲೆಯನ್ನು ಕೂಲಂಕುಶವಾಗಿ ಪರಿಶೀಲನೆ ಮಾಡುತ್ತದೆ. ದಾಖಲೆ ಸರಿಯಾಗಿದ್ದಲ್ಲಿ ಮಾತ್ರ ವಿಮೆ ಆಗುತ್ತದೆ.
ಎರಡನೇಯದಾಗಿ, ಯಾವುದೇ ಪ್ರಕರಣಗಳು, ಉಲ್ಲಂಘನೆ ಕುರಿತು ಯಾವುದೇ ಪ್ರಾಧಿಕಾರಗಳಿಂದ ನೊಟೀಸು ಜಾರಿ ಆಗಿದ್ದರೆ ಅವುಗಳನ್ನು ಪ್ರಾಧಿಕಾರಕ್ಕೆ Real Estate Regulatory Authority (RERA) ಸಲ್ಲಿಸಬೇಕಾಗುತ್ತದೆ. ಆದರೆ, ಇವರೆಡೂ ಕೆಲಸಗಳು ಆಗುತ್ತಿಲ್ಲ ಎನ್ನುತ್ತಾರೆ ಪನಿಯಾಲ.