“ರೈತರು ತಮ್ಮ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತರ ಜಮೀನನ್ನು ಕಸಿದುಕೊಳ್ಳಲಿವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ, ದಯವಿಟ್ಟು ನೂತನ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿರುವ ಸಿಂಘು ಗಡಿ ಪ್ರದೇಶಕ್ಕೆ ಭಾನುವಾರ ಕೇಜ್ರಿವಾಲ್ ಎರಡನೇ ಬಾರಿಗೆ ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ಕೇಂದ್ರ ಸರ್ಕಾರದ ಯಾವುದೇ ಸಚಿವರಾಗಲೀ ಪ್ರತಿಭಟನಾನಿರತ ರೈತರೊಂದಿಗೆ ಮುಕ್ತ ಚರ್ಚೆ ನಡೆಸುವ ಸವಾಲು ಸ್ವೀಕರಿಸಲಿ. ಈ ಕಾಯ್ದೆಗಳು ಎಷ್ಟು ಉಪಯುಕ್ತ ಮತ್ತು ಹಾನಿಕಾರಕ ಎಂದು ರೈತರೇ ಹೇಳಲಿದ್ದಾರೆ ಎಂದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರೈತರು ಕಳೆದ 32 ದಿನಗಳಿಂದ ಚಳಿ, ಮಳೆ, ಗಾಳಿಯೆನ್ನದೇ ತೆರೆದ ಬೀದಿಗಳಲ್ಲಿ ಮಲಗುತ್ತಿದ್ದಾರೆ. ಇದುವರೆಗೂ 40ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಇದು ನನಗೆ ಬಹಳ ನೋವು ತಂದಿದೆ. ಕೇಂದ್ರ ಸರ್ಕಾರ ರೈತರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಆಲಿಸಲಿ. ಮೊದಲು ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಲಿ ಎಂದು ಕೇಂದ್ರ ಸರ್ಕಾರಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ಮೊದಲ ಬಾರಿ ಡಿಸೆಂಬರ್ ಏಳನೇ ತಾರೀಕಿನಂದು ರೈತರ ಪ್ರತಿಭಟನೆಯಲ್ಲಿ ಕೇಜ್ರಿವಾಲ್ ಭಾಗಿಯಾಗಿದ್ದರು. ನಂತರ ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಅರವಿಂದ್ ಕೇಜ್ರೀವಾಲ್ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ರೈತರ ಪರವಾಗಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿ ಎಂದು ಆಮ್ ಆದ್ಮಿ ಪಕ್ಷದ(ಎಎಪಿ) ಕಾರ್ಯಕರ್ತರಿಗೆ ಕೇಜ್ರಿವಾಲ್ ಕರೆ ನೀಡಿದ್ದರು.
ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಯ ವಿರುದ್ಧ ದೇಶದ ರೈತರು ಕಳೆದೊಂದು ತಿಂಗಳಿನಿಂದ ಹೋರಾಟ ನಡೆಸುತ್ತಿದ್ದಾರೆ. ಈ ಹಿಂದೆಯೇ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಅಲ್ಲದೆ, ಸ್ವತಃ ಕೇಜ್ರಿವಾಲ್ ದೆಹಲಿ ಗಡಿಯಲ್ಲಿದ್ದ ಪ್ರತಿಭಟನಾ ನಿರತ ರೈತರನ್ನು ಭೇಟಿಯಾಗಿ ನೈತಿಕ ಬಲ ತುಂಬಿದ್ದರು. ಇದರ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಕೇಂದ್ರ ಸರ್ಕಾರ ಗೃಹ ಬಂಧನದಲ್ಲಿರಿಸಿತ್ತು ಎನ್ನಲಾಗಿತ್ತು.
ಇತ್ತೀಚೆಗೆ ನಡೆದ ಭಾರತ್ ಬಂದ್‌ನಲ್ಲೂ ಎಎಪಿ ಕಾರ್ಯಕರ್ಯರು ಭಾಗವಹಿಸಿದ್ದರು. ರೈತರಿಗೆ ಅಗತ್ಯವಾದ ಎಲ್ಲಾ ಅನುಕೂಲಗಳನ್ನೂ ದೆಹಲಿಯಲ್ಲಿ ನಾವು ಮಾಡಿದ್ದೇವೆ. ನಾವು ಎಂದಿಗೂ ರೈತರ ಸೇವಕರು. ಅಲ್ಲದೆ, ರೈತರನ್ನು ಬೆಂಬಲಿಸುವುದು ನಮ್ಮ ಸರ್ಕಾರದ ಜವಾಬ್ದಾರಿ” ಎಂದು ಎಎಪಿ ಕಾರ್ಯಕರ್ತರು ಹೇಳಿದ್ದರು.
ನಮ್ಮ ಪಕ್ಷ ರೈತ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದೆ. ಹೀಗಾಗಿ ನಮ್ಮ ಸರ್ಕಾರದಿಂದ ರೈತರಿಗೆ ಮುಜುಗರವಾಗುವ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ. ಈ ಹಿಂದೆ ರೈತರನ್ನು ಬಂಧಿಸಲು ಕ್ರೀಡಾಂಗಣಗಳನ್ನು ಜೈಲುಗಳನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರದಿಂದ ನಮಗೆ ಮನವಿ ಬಂದಿತ್ತು. ಆದರೆ, ನಾನು ಈ ಮನವಿಯನ್ನು ನಾನು ಸಾರಾಸಗಟಾಗಿ ತಳ್ಳಿ ಹಾಕಿದ್ದೆ ಎಂದು ಕೇಜ್ರಿವಾಲ್ ತಿಳಿಸಿದ್ದರು.
ReplyForward