ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್ ಖಾತೆಯಲ್ಲಿದ್ದ ಕನಿಷ್ಠ 2000 ಕೋಟಿ ರೂಪಾಯಿ ಆಗಿರೋದನ್ನ ಪತ್ತೆ ಹಚ್ಚಲಾಗಿದೆ. ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ್ ಆತ್ಮಹತ್ಯೆ ಪ್ರಕರಣ ನಂತರ ನಡೆಸಲಾಗುತ್ತಿರುವ ಆಂತರಿಕ ತನಿಖೆ ಸಂದರ್ಭ ಈ ವಿಚಾರ ಬಯಲಾಗಿದೆ. ಸಿದ್ಧಾರ್ಥ್ ಸಾವಿನ ನಂತರ ತನಿಖೆಯನ್ನ ಕೈಗೆತ್ತಿಕೊಂಡಿದ್ದ ಅಶೋಕ್ ಕುಮಾರ್ ಮಲ್ಹೋತ್ರಾ ಈ ಕುರಿತು ಸಮಗ್ರ ತನಿಖೆಯಲ್ಲಿ ನಿರತವಾಗಿದ್ದು, ತನಿಖೆ ಸಂದರ್ಭ ಭಾರೀ ಮೊತ್ತದ ಹಣ ನಾಪತ್ತೆಯಾಗಿರುವದನ್ನ ಪತ್ತೆಹಚ್ಚಿದ್ದಾರೆ. ಈ ಕುರಿತು ತಯಾರಿಸಲಾದ ನೂರಾರು ಪುಟಗಳ ವರದಿಯಲ್ಲೂ ಈ ವಿಚಾರ ಉಲ್ಲೇಖಿಸಿದ್ದಾಗಿ ಕಂಪೆನಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿದ್ಧಾರ್ಥ್ ಸಂಸ್ಥೆಯ ಹೆಸರಲ್ಲಿ ನಡೆಸಿದ ಬ್ಯಾಂಕಿಂಗ್ ವ್ಯವಹಾರ, ವೈಯಕ್ತಿಕ ವ್ಯವಹಾರಗಳ ಬಗ್ಗೆಯೂ ಅಶೋಕ್ ಮಲ್ಹೋತ್ರಾ ತನಿಖೆ ನಡೆಸಿದ್ದಾರೆ. ಆದರೂ ಇದುವರೆಗೂ ಹಣ ʼಮಿಸ್ಸಿಂಗ್ʼ ಆಗಿರೋದಾಗಲೀ, ಇಲ್ಲವೇ ಸಿದ್ದಾರ್ಥ್ ವೈಯಕ್ತಿಕ ವ್ಯವಹಾರದ ಬಗ್ಗೆಯಾಗಲೀ ತನಿಖಾಧಿಕಾರಿ ಅಶೊಕ್ ಕುಮಾರ್ ಮಲ್ಹೋತ್ರಾ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಬದಲಾಗಿ ತನಿಖೆ ಪ್ರಗತಿಯಲ್ಲಿದ್ದು, ಇನ್ನೊಂದು ವಾರದೊಳಗಾಗಿ ಅಂತಿಮ ಷರಾ ಬರೆಯುವ ಸಾಧ್ಯತೆ ಇದೆ. ಆ ಸಂದರ್ಭವೂ ಈ ಎಲ್ಲಾ ವಿಚಾರಗಳು ಬಹಿರಂಗಗೊಳ್ಳುತ್ತಾ ಅನ್ನೋ ಕೌತುಕ ಹೆಚ್ಚಿಸಿದೆ.
ಅದರ ಜೊತೆಗೆ ಕಂಪೆನಿಯ ಇನ್ನೊಂದು ಮೂಲದ ಪ್ರಕಾರ 25 ಬಿಲಿಯನ್ಗೂ ಅಧಿಕ ನಗದು ನಾಪತ್ತೆಯಾಗಿರುವ ಬಗ್ಗೆಯೂ ಕೆಲವು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ ಕಂಪೆನಿಯ ಅಧಿಕೃತ ವಕ್ತಾರರು ಈ ಎಲ್ಲ ವಿಚಾರಗಳನ್ನ ಅಲ್ಗಲಗಳೆದಿದ್ದು, “ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಅಂತಿಮ ಹಂತವನ್ನ ತಲುಪಿಲ್ಲ. ಆದ್ದರಿಂದ ಕಂಪೆನಿಯ ನಿರ್ದೇಶಕರು ಈ ಬಗ್ಗೆ ತಲೆಕೆಡಿಸಬೇಕಿಲ್ಲ. ತನಿಖಾ ಅವಧಿಯಲ್ಲಿಯೇ ಈ ರೀತಿಯ ಗೊಂದಲ ಸರಿಯಲ್ಲ” ಎಂದಿದ್ದಾರೆ. ಅಲ್ಲದೇ “ಆಡಳಿತ ಮಂಡಳಿ ಮತ್ತು ಸಿದ್ದಾರ್ಥ್ ಕುಟುಂಬ ಇಂತಹ ಪರಿಸ್ಥಿತಿಯಲ್ಲೂ ವ್ಯವಹಾರದ ಬಗ್ಗೆ ಹಾಗೂ ಏಜೆಂಟ್ಗಳ ಜೊತೆ ಮಾಡಲಾದ ಕರಾರುಗಳ ಕುರಿತು ಬದ್ಧವಾಗಿರಲು ಇಚ್ಛಿಸುತ್ತಿದೆ” ಎಂದಿದ್ದಾರೆ.
ಸಿದ್ದಾರ್ಥ್ ಸಾವಿನ ನಂತರ ಸಿಕ್ಕಿದ್ದ ಪತ್ರವೊಂದರಲ್ಲಿ ಕಂಪೆನಿ ಹೆಸರಲ್ಲಿ ಇರುವ ಅಧಿಕ ಪ್ರಮಾಣದ ಸಾಲದ ವಿಚಾರ ತಿಳಿಯುತ್ತಿದ್ದಂತೆ ಷೇರುದಾರರು ಹಿಂಜರಿದಿದ್ದರು. ಅಲ್ಲದೇ ಕಂಪೆನಿಯ ನಿರ್ದೇಶಕರು ಹಾಗೂ ಉದ್ಯೋಗಿಗಳಿಗೆ ಬರೆಯಲಾದ ಪತ್ರದಲ್ಲಿ, ಸಿದ್ದಾರ್ಥ್ ತಾನು ಮಾಡಿರುವ ಅಧಿಕ ಪ್ರಮಾಣದ ಸಾಲ ಹಾಗೂ ಸಾಲಗಾರರು ಮತ್ತು ತೆರಿಗೆ ಅಧಿಕಾರಿಗಳಿಂದ ಅನುಭವಿಸುತ್ತಿರುವ ನಿರಂತರ ಕಿರುಕುಳದ ವಿಚಾರವನ್ನು ಉಲ್ಲೇಖಿಸಿದ್ದರು. ಖಾಸಗಿ ಫೈನಾನ್ಸ್ ಕಂಪೆನಿಗಳಿಂದ ಅಧಿಕ ಬಡ್ಡಿದರದಲ್ಲಿ ಸಾಲ ಪಡೆದಿರುವುದು ಕೂಡಾ ಕಂಪೆನಿಯ ಬೆಳವಣಿಗೆಗೆ ಅಡ್ಡಿಯಾಗಿತ್ತು ಅನ್ನೋದು ಕೂಡಾ ತನಿಖೆ ಸಂದರ್ಭ ತಿಳಿದು ಬಂದಿದೆ. ಜೊತೆಗೆ 2019 ರ ಹಣಕಾಸು ವರ್ಷಾಂತ್ಯಕ್ಕೆ 24 ಬಿಲಿಯನ್ ನಗದು ಹೊಂದಿದ್ದ ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್ ಖಾತೆಯಲ್ಲಿ ಸಿದ್ದಾರ್ಥ್ ಸಾವಿನ ನಂತರ ʼಝೀರೋ ಬ್ಯಾಲೆನ್ಸ್ʼ ಇತ್ತು ಅನ್ನೋ ವಿಚಾರವೂ ಅಚ್ಚರಿಯನ್ನ ಮೂಡಿಸಿದೆ.
ಸಿದ್ದಾರ್ಥ್ ಸಾವನ್ನಪ್ಪಿದ ನಂತರ ಕಂಪೆನಿ ಅದೆಷ್ಟರ ಮಟ್ಟಿಗೆ ಆರ್ಥಿಕ ಹೊಡೆತಕ್ಕೆ ಸಿಕ್ಕಿತ್ತೆಂದರೆ ಕಂಪೆನಿಯಲ್ಲಿರುವ ಉದ್ಯೋಗಿಗಳಿಗೆ ವೇತನ ನೀಡಲೂ ಪರದಾಡಿತ್ತು. ಷೇರು ಕುಸಿತಗೊಂಡ ಪರಿಣಾಮ ಒಂದೊಮ್ಮೆ ಕಂಪೆನಿಯ ಮೌಲ್ಯ 80 ಬಿಲಿಯನ್ಗೆ ಕುಸಿದಿತ್ತು. ದಾಖಲೆ ಮಟ್ಟದಲ್ಲಿ ಅಂದು ಕಂಪೆನಿ ಷೇರು ಕುಸಿದ ಪರಿಣಾಮ CCDಗೆ ಅತ್ಯಂತ ಕಠಿಣ ಸವಾಲು ಎದುರಾಗಿತ್ತು. ಇದೀಗ ಕಂಪೆನಿ ಖಾತೆಯಿಂದ 2000 ಸಾವಿರ ಕೋಟಿ ರೂಪಾಯಿ ನಾಪತ್ತೆಯಾಗಿರುವುದು ಮತ್ತಷ್ಟು ಕುತೂಹಲಕ್ಕೂ ಕಾರಣವಾಗಿದೆ. ಇದೆಲ್ಲದರ ನಡುವೆ ಕಂಪೆನಿ ಮತ್ತೆ ಹಿಂದಿನ ವ್ಯವಹಾರವನ್ನು ಸಾಧಿಸುವುದರ ಜೊತೆಗೆ “ದೇಶದಲ್ಲೇ ಸಿಸಿಡಿಯನ್ನ ಮಾದರಿಯನ್ನಾಗಿರಿಸುವುದೇ ತನ್ನ ಗುರಿ” ಅಂತ ಹೇಳಿಕೊಂಡಿದೆ.
ಕೃಪೆ: ಬ್ಲೂಮ್ಬರ್ಗ್