ಪಿಎಂಸಿ ಮತ್ತು ಯೆಸ್ ಬ್ಯಾಂಕ್ ಬಳಿಕ ಇದೀಗ ಲಕ್ಷ್ಮಿ ವಿಲಾಸ್ ಬ್ಯಾಂಕ್ ಗ್ರಾಹಕರಿಗೆ ಸಂಕಷ್ಟ ಎದುರಾಗಿದೆ.
ಬ್ಯಾಂಕಿನ ಹಣಕಾಸಿನ ಪರಿಸ್ಥಿತಿ ಹದಗಟ್ಟು ದಿವಾಳಿಯಾಗಿರುವ ಹಿನ್ನೆಲೆಯಲ್ಲಿ ಆರ್ ಬಿಐ ಶಿಫಾರಸಿನಂತೆ ಕೇಂದ್ರ ಸರ್ಕಾರ, ಲಕ್ಷ್ಮಿ ವಿಲಾಸ್ ಬ್ಯಾಂಕಿನ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿ, ಕೆನರಾ ಬ್ಯಾಂಕಿನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಟಿ ಎನ್ ಮನೋಹರನ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿದೆ. ಬ್ಯಾಂಕಿನ ಠೇವಣಿದಾರರಿಗೆ ಒಂದು ತಿಂಗಳ ಅವಧಿಗೆ ಕೇವಲ 25 ಸಾವಿರ ರೂಪಾಯಿ ಮಾತ್ರ ಹಿಂಪಡೆಯಲು ಮಿತಿ ಹೇರಿ ಆದೇಶಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಖಾಸಗೀ ವಲಯದ ಲಕ್ಷ್ಮಿವಿಲಾಸ್ ಬ್ಯಾಂಕಿನ ಹಣಕಾಸು ಪರಿಸ್ಥಿತಿ ಸುಧಾರಿಸಲಾಗದ ಮಟ್ಟಿಗೆ ಹದಗೆಟ್ಟಿತ್ತು. ಪುನಃಶ್ಚೇತನಕ್ಕೆ ವಿಶ್ವಾಸಾರ್ಹ ಬೇರೆ ದಾರಿಗಳೂ ಇರಲಿಲ್ಲ. ಹಾಗಾಗಿ ಬ್ಯಾಂಕಿನ ಗ್ರಾಹಕರ ಹಿತ ರಕ್ಷಣೆಯ ದೃಷ್ಟಿಯಿಂದ ಆಡಳಿತ ಮಂಡಳಿ ಸೂಪರ್ ಸೀಡ್ ಮಾಡಿ ಠೇವಣಿ ಹಿಂಪಡೆಯಲು ಮಿತಿ ಹೇರಲು ಆರ್ ಬಿಐ ಸಲಹೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ಈ ಕ್ರಮ ಜರುಗಿಸಿದೆ ಎಂದು ಆರ್ ಬಿಐ ಹೇಳಿದೆ.
ಮುಖ್ಯವಾಗಿ ಕಳೆದ ಮೂರು ವರ್ಷಗಳಿಂದ ವಸೂಲಾಗದ ಸಾಲದ ಭಾರದಲ್ಲಿ ಕುಸಿಯತೊಡಗಿದ್ದ ಬ್ಯಾಂಕ್, ಇದೀಗ ಅದರ ಒಟ್ಟಾರೆ ಹಣಕಾಸು ಮೌಲ್ಯಕ್ಕೂ ಮೀರಿ ಬಾಕಿ ಬೆಳೆದುನಿಂತಿದೆ. ಈ ನಡುವೆ ಏರುತ್ತಿರುವ ಸಾಲದ ಹೊರೆ ಮತ್ತು ನಷ್ಟದ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಬ್ಯಾಂಕ್ ಯಾವ ಪ್ರಯತ್ನವನ್ನು ಮಾಡಲಿಲ್ಲ. ಹಾಗಾಗಿ ಅಂತಿಮವಾಗಿ ಗ್ರಾಹಕರ ಹಿತ ಕಾಯುವ ಪ್ರಯತ್ನವಾಗಿ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಆರ್ ಬಿಐ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಸದ್ಯ ಬ್ಯಾಂಕಿನ ಒಟ್ಟು ನಷ್ಟ ಸುಮಾರು 400 ಕೋಟಿ ಎಂದು ಅಂದಾಜಿಸಲಾಗಿದ್ದು, ಕಳೆದ ಮೂರು ವರ್ಷಗಳಿಂದ ನಿರಂತರ ನಷ್ಟದ ಪ್ರಮಾಣ ಗಣನೀಯ ಏರಿಕೆ ಕಂಡಿದೆ. 2020ರ ಸೆಪ್ಟೆಂಬರ್ ಅಂತ್ಯದ ಹೊತ್ತಿಗೆ ಬ್ಯಾಂಕಿನ ವಸೂಲಾಗದ ಸಾಲ(ಎನ್ ಪಿಎ) ಮೊತ್ತ ಬರೋಬ್ಬರಿ 4,063.27 ಕೋಟಿ ರೂಗಳಷ್ಟಿದೆ. ಒಟ್ಟಾರೆ ಮುಂಗಡದ ಶೇ.25.40ರಷ್ಟು ಎನ್ ಪಿಎ ಬೆಳೆದುನಿಂತಿದೆ. ಆ ಹಿನ್ನೆಲೆಯಲ್ಲಿ ಬ್ಯಾಂಕ್ ದಿವಾಳಿ ಅಂಚಿಗೆ ತಲುಪಿದೆ ಎಂದು ಹೇಳಲಾಗಿದೆ.
“ಬ್ಯಾಂಕಿಂಗ್ ಕ್ಷೇತ್ರದ ಅವ್ಯವಹಾರಗಳು ಮತ್ತು ಅಕ್ರಮಗಳಿಂದಾಗಿ ಇಡೀ ದೇಶದ ಬ್ಯಾಂಕಿಂಗ್ ವಲಯ ಕುಸಿಯುತ್ತಿದೆ. ಅದಕ್ಕೆ ನೇರ ಕಾರಣ ಸಾರ್ವಜನಿಕ ಮತ್ತು ಖಾಸಗೀ ವಲಯದ ಬ್ಯಾಂಕ್ ಗಳ ಮೇಲೆ ಕಾಂಗ್ರೆಸ್ನ ನೆಹರು-ಗಾಂಧಿ ಕುಟುಂಬ ಹೊಂದಿದ್ದ ಹಿಡಿತವೇ ಕಾರಣ. ಒಂದು ದೂರವಾಣಿ ಕರೆ, ಒಂದು ಚೀಟಿಯ ಮೇಲೆ ಬ್ಯಾಂಕುಗಳು ಯಾವುದೇ ಗ್ಯಾರಂಟಿ ಇಲ್ಲದೆ, ಯಾವುದೇ ದಾಖಲೆಪತ್ರಗಳಿಲ್ಲದೆ ಸಾವಿರಾರು ಕೋಟಿ ಸಾಲ ನೀಡಿವೆ. ಹಾಗಾಗಿ ದೇಶದ ಬ್ಯಾಂಕಿಂಗ್ ವಲಯ ಮುಳುಗುತ್ತಿದೆ. ಸಾಲ ಪಡೆದವರೆಲ್ಲಾ ಕಾಂಗ್ರೆಸ್ಸಿಗರು ಅಥವಾ ನೆಹರು-ಗಾಂಧಿ ಕುಟುಂಬದ ಆಪ್ತರೇ” ಎಂದು 2014ರ ಲೋಕಸಭಾ ಚುನಾವಣೆಯ ಭಾಷಣಗಳಲ್ಲಿ ಹೇಳುತ್ತಲೇ ಕಾಂಗ್ರೆಸ್ ವಿರೋಧಿ ಜನಾಭಿಪ್ರಾಯ ಸೃಷ್ಟಿಸಿದ ಪ್ರಧಾನಿ ಮೋದಿಯವರು ಈಗ ಏಳು ವರ್ಷಗಳಿಂದ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ್ದಾರೆ. ಬ್ಯಾಂಕುಗಳ ಅಕ್ರಮಗಳನ್ನು ಸ್ವಚ್ಛಗೊಳಿಸಿ, ಎನ್ ಪಿಎ ವಸೂಲಿ ಮಾಡಿ ಸರಿದಾರಿಗೆ ತರುವ ಭರವಸೆ ಮೇಲೆಯೇ ಅವರು ಮೊದಲ ಬಾರಿ ಆಯ್ಕೆಯಾಗಿದ್ದರು.
ಆದರೆ, ಅದೇ ಮೋದಿ ಮತ್ತು ಅವರ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಬ್ಯಾಂಕಿಂಗ್ ವಲಯ ನಿಜವಾಗಿಯೂ ಎಲ್ಲರ ಕಣ್ಣೆದುರೇ ಕುಸಿಯತೊಡಗಿದೆ. ಒಂದೊಂದೇ ಸಾರ್ವಜನಿಕ ಮತ್ತು ಖಾಸಗೀ ವಲಯದ ಬ್ಯಾಂಕುಗಳು ಮುಚ್ಚತೊಡಗಿವೆ. ಎನ್ ಪಿಎ ಹೊರೆ ತಡೆಯಲಾಗದೆ ಮುಚ್ಚುವ ಹಂತದಲ್ಲಿರುವ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸುವ ಮೂಲಕ ವಾಸ್ತವಾಂಶಗಳನ್ನು, ಅಕ್ರಮಗಳನ್ನು ಮುಚ್ಚಿಹಾಕುವ ಪ್ರಯತ್ನವನ್ನು ಸ್ವತಃ ಸರ್ಕಾರವೇ ಮಾಡುತ್ತಿದೆ. ಅದರಲ್ಲೂ ಪಿಎಂಸಿ ಮತ್ತು ಲಕ್ಷ್ಮಿ ವಿಲಾಸ್ ಬ್ಯಾಂಕುಗಳ ವಿಷಯದಲ್ಲಂತೂ ಸ್ವತಃ ಮೋದಿಯವರ ಆಪ್ತರು ಮತ್ತು ಅವರ ಪಕ್ಷದ ನಿಕಟವರ್ತಿಗಳ ಹೆಸರುಗಳೇ ಎನ್ ಪಿಎ ಬಾಕಿದಾರರ ಪಟ್ಟಿಯಲ್ಲಿ ಕಂಡುಬಂದಿದ್ದವು.
ಇದೀಗ ಲಕ್ಷ್ಮಿ ವಿಲಾಸ್ ಬ್ಯಾಂಕಿನ ದಿವಾಳಿಯ ಹಿನ್ನೆಲೆಯಲ್ಲಿ; ಬಿಜೆಪಿ ಸಂಸದ ಹಾಗೂ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರಿಗೆ ಸೇರಿದ್ದ ಕಂಪನಿಯೊಂದು ಕೆಎಂಎಫ್ ಮೂಲ ಮಾಲೀಕತ್ವದ ಭೂಮಿಯ ದಾಖಲೆ ತೋರಿಸಿ, ತನ್ನದೇ ಮಾಲೀಕತ್ವದ ಭೂಮಿ ಎಂದು ನೂರಾರು ಕೋಟಿ ರೂ. ಸಾಲ ಪಡೆದ ಹಳೆಯ ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ. ಬ್ಯಾಂಕುಗಳು ಸಾಲ ನೀಡುವಾಗ ಪ್ರಭಾವಿಗಳ ವಿಷಯದಲ್ಲಿ ಹೇಗೆ ನಡೆದುಕೊಳ್ಳುತ್ತವೆ ಮತ್ತು ಅಂತಹ ನಡವಳಿಕೆಯೇ ಹೇಗೆ ಎನ್ ಪಿಎ ಹೊರೆಗೆ ಕಾರಣವಾಗುತ್ತದೆ ಎಂಬುದಕ್ಕೂ ಆ ಪ್ರಕರಣ ಸಾಕ್ಷಾತ್ ನಿದರ್ಶನ. ರಾಜೀವ್ ಚಂದ್ರಶೇಖರ್ ಅವರ ಜ್ಯೂಪಿಟರ್ ಕ್ಯಾಪಿಟಲ್ ಕಂಪನಿಯ ಅಂಗಸಂಸ್ಥೆಯಾದ ಪಿವಿಕೆ ಕೋರಮಂಗಲ ಸಂಸ್ಥೆ ಮತ್ತು ಅದರ ಪಾಲುದಾರ ಮಂತ್ರಿ ಹ್ಯಾಬಿಟೇಟ್ಸ್ ಕೆಎಂಎಫ್ ಗೆ ರಾಜ್ಯ ಸರ್ಕಾರ, ಮಂಜೂರು ಮಾಡಿದ್ದ ಭೂಮಿಯನ್ನು ಗುತ್ತಿಗೆಗೆ ಪಡೆದು, ಆ ಜಾಗದ ಮೇಲೆ ಮೂಲ ಮಾಲೀಕ ಕೆಎಂಎಫ್ ಗಮನಕ್ಕೇ ಬಾರದಂತೆ ಬರೋಬ್ಬರಿ 165 ಕೋಟಿ ರೂ. ಸಾಲ ಪಡೆದ 2011ರ ಪ್ರಕರಣ ಇದು (ಡೆಕ್ಕನ್ ಹೆರಾಲ್ಡ್ ವರದಿ).
ಅಲ್ಲದೆ, ಬ್ಯಾಂಕಿನ ಆಡಳಿತ ಮಂಡಳಿ ಆರ್ ಬಿಐ ಕಣ್ಣುತಪ್ಪಿಸಿ, ನಿಯಮಗಳನ್ನು ಗಾಳಿಗೆ ತೂರಿ ಹತ್ತಾರು ಬಗೆಯಲ್ಲಿ ಸಾಲ ನೀಡಿಕೆ, ಎನ್ ಪಿಎ ನಿರ್ವಹಣೆ, ಬಡ್ಡಿದರ ಮುಂತಾದ ವಿಷಯದಲ್ಲಿ ಅಕ್ರಮಗಳನ್ನು ಎಸಗಿದೆ. ಸಾಲ ನೀಡಿಕೆಯಲ್ಲಿ ಸೂಕ್ತ ಭದ್ರತಾ ದಾಖಲೆಗಳನ್ನು ಪರಿಗಣಿಸದೆ, ಆಡಳಿತ ಮಂಡಳಿಯ ಆಪ್ತರಿಗೆ ಮನಸೋಇಚ್ಚೆ ಸಾಲ ನೀಡಿರುವುದು, ಬಡ್ಡಿದರದಲ್ಲಿ ಆಡಳಿತ ಮಂಡಳಿಯ ಆಪ್ತರಿಗೆ ಒಂದು ದರ, ಇತರೆ ಗ್ರಾಹಕರಿಗೆ ಒಂದು ದರ ವಿಧಿಸಿರುವುದು, ಕಪ್ಪುಹಣ ವಹಿವಾಟಿಗೆ ಪೂರಕವಾಗಿ ಬೇನಾಮಿ ಖಾತೆಗಳ ಮೂಲಕ ಹಣಕಾಸು ವಹಿವಾಟಿಗೆ ಅವಕಾಶ ನೀಡಿರುವುದು, ಸಾಲದ ಮೇಲೆ ಸಾಲ ನೀಡಿ ಅದನ್ನು ವಹಿವಾಟು ಎಂದು ಬಿಂಬಿಸಿರುವುದು, ಸೇರಿದಂತೆ ಹತ್ತಾರು ಬಗೆಯಲ್ಲಿ ಅಕ್ರಮಗಳನ್ನು ಎಸಗಲಾಗಿದೆ. ಅಂತಹ ಅಕ್ರಮಗಳೇ ಅದರ ಇಂದಿನ ಈ ದಿವಾಳಿ ಸ್ಥಿತಿ ಮತ್ತು ಬೆಟ್ಟದಷ್ಟು ಬೆಳೆದುನಿಂತಿರುವ ಎನ್ ಪಿಎ ಹೊರೆಗೆ ಕಾರಣ. ಇದೀಗ ಈ ಆಘಾತಕಾರಿ ಅಕ್ರಮಗಳು ಬಯಲಿಗೆ ಬಂದ ಹಿನ್ನೆಲೆಯಲ್ಲಿಯೇ ಆರ್ ಬಿಐ, ಬ್ಯಾಂಕಿಂಗ್ ವಲಯದ ಕಣ್ಗಾವಲು ಸಂಸ್ಥೆಯಾಗಿ ತನ್ನ ಮಾನ ಉಳಿಸಿಕೊಳ್ಳಲು ಅಂತಿಮವಾಗಿ ಶಿಸ್ತುಕ್ರಮ ಜಾರಿಗೊಳಿಸಿದೆ ಎನ್ನಲಾಗಿದೆ.
ಬ್ಯಾಂಕ್ ಆಡಳಿತದ ಇಂತಹದ್ದೇ ವ್ಯವಹಾರಗಳ ಕಾರಣಕ್ಕೆ ಕಳೆದ ವರ್ಷ ಪಿಎಂಸಿ ಮತ್ತು ಯೆಸ್ ಬ್ಯಾಂಕುಗಳು ದಿವಾಳಿಯಾಗಿ ಅವುಗಳನ್ನು ಠೇವಣಿ ಇಟ್ಟಿದ್ದ ಜನ ಕೋವಿಡ್ ಸಂಕಷ್ಟದ ನಡುವೆ ಬೀದಿಬೀದಿಯಲ್ಲಿ ಹೋರಾಟ ನಡೆಸಿದ್ದರು. ಆದರೂ ಕೊನೆಗೂ ಅವರಲ್ಲಿ ಬಹುತೇಕ ಮಂದಿಗೆ ಆ ಬ್ಯಾಂಕುಗಳಲ್ಲಿ ಹಣ ಹೂಡಿದ್ದಕ್ಕೆ ಸಿಕ್ಕದ್ದು ಸಂಕಷ್ಟ ಮತ್ತು ಕಣ್ಣೀರೆ. ಇದೀಗ ಆ ಸರದಿ ಲಕ್ಷ್ಮಿ ವಿಲಾಸ್ ಬ್ಯಾಂಕಿನ ಗ್ರಾಹಕರದ್ದು. ಈಗಾಗಲೇ ತಿಂಗಳಿಗೆ ಕೇವಲ 25 ಸಾವಿರ ರೂಪಾಯಿ ಹಿಂತೆಗೆತದ ಅವಕಾಶದ ವಿರುದ್ಧ ಬ್ಯಾಂಕಿನ ಗ್ರಾಹಕರು ದನಿ ಎತ್ತಿದ್ದಾರೆ. ತಿಂಗಳ ಕರ್ಚುವೆಚ್ಚಗಳನ್ನು 25 ಸಾವಿರ ರೂಪಾಯಿನಲ್ಲಿ ನಿಭಾಯಿಸುವುದು ಸಾಧ್ಯವಿಲ್ಲ. ಜೊತೆಗೆ ಕೋವಿಡ್ ಸಂಕಷ್ಟದ ಹೊತ್ತಲ್ಲಿ ದುಡಿಮೆ ಮತ್ತು ಆರೋಗ್ಯವನ್ನು ಕಳೆದುಕೊಂಡಿರುವ ಜನರ ಮೇಲೆ ಇಂತಹ ಕ್ರಮಗಳು ಇನ್ನಷ್ಟು ವ್ಯತಿರಿಕ್ತ ಪರಿಣಾಮ ಬೀರಲಿವೆ ಎಂದು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.
ಬಹುತೇಕ ದಕ್ಷಿಣ ಭಾರತದಲ್ಲಿ ಹೆಚ್ಚು ವ್ಯವಹಾರ ಹೊಂದಿದ್ದ ಬ್ಯಾಂಕ್, ತೀರಾ ಇತ್ತೀಚಿನವರೆಗೆ ಖಾಸಗೀ ವಲಯದ ಜನಪ್ರಿಯ ಬ್ಯಾಂಕುಗಳಲ್ಲಿ ಒಂದಾಗಿತ್ತು. ಕಳೆದ ಮೂರು ವರ್ಷಗಳಿಂದ ಎನ್ ಪಿಎ ಸಂಕಷ್ಟಕ್ಕೆ ಸಿಲುಕಿ, ಇದೀಗ ಅಂತಿಮವಾಗಿ ದಿವಾಳಿ ಸ್ಥಿತಿಗೆ ಬಂದು ನಿಂತಿದೆ.