ಮಾಹಿತಿ ತಂತ್ರಜ್ಞಾನ ವಲಯದ ನವೋದ್ಯಮಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ನಿರ್ಮಾಣ ಮಾಡಿದ್ದ ಇನ್ ಕ್ಯುಬೇಷನ್ ಸೆಂಟರನ್ನು ಇಡಿಯಾಗಿ ಸಚಿವರ ಪುತ್ರನ ಕಂಪನಿಗೆ ನೀಡಿರುವ ಕಿಯೋನಿಕ್ಸ್ ಕರ್ಮಕಾಂಡ ಅಷ್ಟಕ್ಕೇ ಮುಗಿಯಲಿಲ್ಲ!
ಸಾರ್ವಜನಿಕ ಉದ್ದೇಶದ ಒಂದು ಸೌಲಭ್ಯವನ್ನು ಸರ್ಕಾರದ ಭಾಗವೇ ಆದ ಸಚಿವರ ಸ್ವಂತ ಅನುಕೂಲಕ್ಕೆ ಬಳಸಿಕೊಳ್ಳಲು ನೀಡಿದ ಕಿಯೋನಿಕ್ಸ್ ಹಿಂದಿನ ಎಂಡಿ ಒ ಪಾಲಯ್ಯ, ಶಿವಮೊಗ್ಗದ ಮಾಚೇನಹಳ್ಳಿಯ ಐಟಿ ಪಾರ್ಕಿನ ಮೂರನೇ ಮಹಡಿಯ ಸುಸಜ್ಜಿತ ಇನ್ ಕ್ಯೂಬೇಷನ್ ಸೆಂಟರನ್ನು ಸಚಿವ ಕೆ ಎಸ್ ಈಶ್ವರಪ್ಪ ಅವರ ಪುತ್ರ ಕೆ ಇ ಕಾಂತೇಶ್ ಮತ್ತು ಮೊಮ್ಮಗ ಎನ್ ಪೃಥ್ವಿರಾಜ್ ಮಾಲೀಕತ್ವದ ಇಷ್ಟಾರ್ಥ ಸಾಫ್ಟ್ ವೇರ್ ಕಂಪನಿಗೆ ಅನಾಮತ್ತಾಗಿ ವಹಿಸಿಕೊಟ್ಟಿದ್ದಾರೆ. ಇಡೀ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಮತ್ತು ಸರ್ಕಾರದ ಉದ್ದೇಶಕ್ಕೆ ವಿರುದ್ಧವಾಗಿದೆ ಎಂಬುದನ್ನು ಹಲವು ದಾಖಲೆಗಳು ಹೇಳುತ್ತಿವೆ.
ಜೊತೆಗೆ, ಖಾಸಗೀ ಕಂಪನಿಗೆ ಸಾರ್ವಜನಿಕ ಉದ್ದೇಶದ ಸೌಲಭ್ಯವನ್ನು ಬಾಡಿಗೆಗೆ ನೀಡುವ ಹಂತದಲ್ಲಿ ಪಾಲಯ್ಯ, ಕಾನೂನುಬಾಹಿರ ಕ್ರಮಗಳನ್ನು ಕೈಗೊಂಡಿದ್ದಾರೆ ಮತ್ತು ಆ ಇಡೀ ಪ್ರಕ್ರಿಯೆಯ ಬಗ್ಗೆ ಪ್ರಶ್ನಿಸಿದ ಮಾಹಿತಿ ಹಕ್ಕು ಅರ್ಜಿದಾರರಿಗೂ ಒಂದೊಂದು ವಿಷಯದಲ್ಲಿ ಒಂದೊಂದು ಬಗೆಯ ಮಾಹಿತಿ ನೀಡಿ ದಿಕ್ಕುತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂಬುದನ್ನೂ ಕಿಯೋನಿಕ್ಸ್ ನೀಡಿದ ಅಧಿಕೃತ ದಾಖಲೆಗಳೇ ಹೇಳುತ್ತಿವೆ.
ಮಾಹಿತಿ ಹಕ್ಕು ಅರ್ಜಿಯೊಂದಕ್ಕೆ ನೀಡಿದ ಮಾಹಿತಿಯಲ್ಲಿ, ಕಳೆದ ವರ್ಷದ ಜನವರಿ 25ರಂದು ಶಿವಮೊಗ್ಗ ಐಟಿ ಪಾರ್ಕಿನಲ್ಲಿ ಯಾವುದೇ ಇನ್ ಕ್ಯೂಬೇಷನ್ ಸೆಂಟರ್ ಇಲ್ಲ ಎಂದು ಹೇಳಲಾಗಿತ್ತು. ಆದರೆ ಕೇವಲ ಮೂವತ್ತೈದು ದಿನದಲ್ಲೇ ಐಟಿ ಪಾರ್ಕಿನ ಮೊದಲ ಮಹಡಿಯಲ್ಲಿ ಇನ್ ಕ್ಯೂಬೇಷನ್ ಸೆಂಟರ್ ಇದೆ ಎಂದು ಮತ್ತೆ ಮಾಹಿತಿ ನೀಡಲಾಗಿತ್ತು. ಕೇವಲ ಒಂದು ತಿಂಗಳ ಹಿಂದೆ ಯಾವುದೇ ಇನ್ ಕ್ಯೂಬೇಷನ್ ಸೆಂಟರ್ ಇಲ್ಲ. ಮೂರನೇ ಮಹಡಿಯಲ್ಲಿದ್ದ ಇನ್ ಕ್ಯೂಬೇಷನ್ ಸೆಂಟರನ್ನು ಇಷ್ಟಾರ್ಥ ಕಂಪನಿಗೆ ಬಾಡಿಗೆಗೆ ನೀಡಲಾಗಿದೆ ಎಂದಿದ್ದ ಕಿಯೋನಿಕ್ಸ್, ಕೇವಲ 35 ದಿನದಲ್ಲಿ ಮತ್ತೆ ಹೊಸದಾಗಿ ಹೇಗೆ ಸುಸಜ್ಜಿತವಾದ ಸೆಂಟರ್ ನಿರ್ಮಿಸಲು ಸಾಧ್ಯ? ಯಾವ ಪವಾಡ ನಡೆದಿರಬಹುದು ಎಂಬ ಕುತೂಹಲಕ್ಕೆ ಆ ಮಾಹಿತಿ ಕಾರಣವಾಗಿತ್ತು.
ಆ ಹಿನ್ನೆಲೆಯಲ್ಲಿ; ಮೊದಲ ಮಹಡಿಯಲ್ಲಿ ಇನ್ ಕ್ಯೂಬೇಷನ್ ಸೆಂಟರ್ ಹೊಸದಾಗಿ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದ ಬರೋಬ್ಬರಿ ಒಂದು ವರ್ಷದ ಬಳಿಕ ಇನ್ ಕ್ಯೂಬೇಷನ್ ಸೆಂಟರ್ ಬಗ್ಗೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಬಯಲಾಗಿದ್ದು ಕಿಯೋನಿಕ್ಸ್ ಎಂಬ ಬಿಳಿಯಾನೆಯ ಹಸಿಸುಳ್ಳಿನ ಭಯಾನಕ ರೂಪ!
ವಾಸ್ತವವಾಗಿ ಮೊದಲ ಮಹಡಿಯಲ್ಲಿ ಈಗಲೂ ಯಾವುದೇ ರೀತಿಯಲ್ಲೂ ಸುಸಜ್ಜಿತ ವರ್ಕ್ ಸ್ಟೇಷನ್ ಎನ್ನಬಹುದಾದ ಯಾವ ವ್ಯವಸ್ಥೆಯೂ ಇಲ್ಲ. ಅಲ್ಲಿ ಸದ್ಯ ಇರುವುದು ಮೂರನೇ ಮಹಡಿಯಿಂದ ತೆಗೆದುಹಾಕಿರುವ ಕ್ಯೂಬಿಕಲ್ಸ್ ಗಳು ಮಾತ್ರ. ಅದನ್ನು ಹೊರತುಪಡಿಸಿ ಇನ್ನಾವುದೇ ಸೌಲಭ್ಯಗಳಾಗಲೀ, ಬೋರ್ಡ್ ರೋಂ ಆಗಲೀ, ಬ್ಯಾಟರಿ ವ್ಯವಸ್ಥೆಯಾಗಲೀ, ಹೈಸ್ಪೀಡ್ ಇಂಟರ್ನೆಟ್ ಆಗಲೀ ಅಲ್ಲಿ ಇಲ್ಲ.
ಆ ಬಗ್ಗೆ ಮಾಹಿತಿ ನೀಡಿದ ಶಿವಮೊಗ್ಗ ಐಟಿ ಪಾರ್ಕ್ ನಿರ್ವಹಣೆ ಹೊಣೆ ಹೊತ್ತಿರುವ ಕಿಯೋನಿಕ್ಸ್ ಉದ್ಯೋಗಿ, ಚಂದ್ರಪ್ಪ, “ಮೂರನೇ ಮಹಡಿಯ ಇನ್ ಕ್ಯೂಬೇಷನ್ ಸೆಂಟರನ್ನು ಇಷ್ಟಾರ್ಥ ಕಂಪನಿಗೆ ನೀಡಿದ ಬಳಿಕ ಮೊದಲ ಮಹಡಿಗೆ ಕೆಲವು ಸಾಮಗ್ರಿಗಳನ್ನು ಸ್ಥಳಾಂತರ ಮಾಡಲಾಗಿದೆ, ವಿನಃ ಯಾವುದೇ ವರ್ಕ ಸ್ಟೇಷನ್ ನಿರ್ಮಾಣ ಮಾಡಿಲ್ಲ. ಕಂಪ್ಯೂಟರಾಗಲೀ, ಬ್ಯಾಟರೀಗಳಾಗಲೀ ಇಲ್ಲ. ಹಾಗಾಗಿ ಅದು ಈಗ ಖಾಲಿ ಜಾಗವಾಗಿದೆ. ಯಾರಿಗೂ ನೀಡಲಾಗಿಲ್ಲ” ಎಂದು ಕೇವಲ ಕಾಗದದ ಮೇಲೆ ಮಾತ್ರ ಸದ್ಯಕ್ಕೆ ಇನ್ ಕ್ಯೂಬೇಷನ್ ಸೆಂಟರ್ ಇದೆ ಎಂಬುದನ್ನು ಪರೋಕ್ಷವಾಗಿ ಖಚಿತಪಡಿಸಿದರು.
ಈ ಬಗ್ಗೆ ಕಿಯೋನಿಕ್ಸ್ ಬೆಂಗಳೂರು ಕೇಂದ್ರ ಕಚೇರಿಯನ್ನು ಸಂಪರ್ಕಿಸಿದಾಗ, “ ಶಿವಮೊಗ್ಗ ಐಟಿ ಪಾರ್ಕಿನಲ್ಲಿ ಇನ್ ಕ್ಯೂಬೇಷನ್ ಸೆಂಟರ್ ನಡೆಯುತ್ತಿದೆ” ಎಂಬ ಆಘಾತಕಾರಿ ಮಾಹಿತಿ ನೀಡಿದವರು, ಹಿರಿಯ ಅಧಿಕಾರಿ ಚಂದ್ರಿಕಾ ದೇವಿ! ಆ ಬಗ್ಗೆ ಇನ್ನಷ್ಟು ಖಚಿತತೆಗಾಗಿ ಹಾಗಾದರೆ ಆ ಸೆಂಟರಿನಲ್ಲಿ ಎಷ್ಟು ಸ್ಟಾರ್ಟಪ್ ಗಳಿವೆ. ಎಷ್ಟು ಮಂದಿಗೆ ಅಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬ ವಿವರ ಸಿಗಬಹುದೆ ಎಂದಾಗ, “ಅದನ್ನು ಇಷ್ಟಾರ್ಥ ಎಂಬ ಕಂಪನಿಗೆ ಇಡಿಯಾಗಿ ಬಾಡಿಗೆಗೆ ನೀಡಲಾಗಿದೆ. ಅವರು ಅದನ್ನು ನಡೆಸುತ್ತಿದ್ಧಾರೆ” ಎಂದು ವಿವರಿಸಿದರು. ಹಾಗೆ ಇನ್ ಕ್ಯೂಬೇಷನ್ ಸೆಂಟರನ್ನು ಇಡಿಯಾಗಿ ಒಂದು ಕಂಪನಿಗೆ ನೀಡಲು ಅವಕಾಶವಿದೆಯೇ? ಕ್ಯೂಬಿಕಲ್ಸ್ ಲೆಕ್ಕದಲ್ಲಿ ಬಾಡಿಗೆ ನೀಡಬೇಕು ಎಂಬುದು ಇನ್ ಕ್ಯೂಬೇಷನ್ ಸೆಂಟರಿನ ಉದ್ದೇಶವಲ್ಲವೆ? ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿರಲಿಲ್ಲ. ಬದಲಾಗಿ, “ಇನ್ ಕ್ಯೂಬೇಷನ್ ಸೆಂಟರ್ ಕಿಯೋನಿಕ್ಸ್ ಆಸ್ತಿ. ಅದನ್ನು ಯಾರಿಗೆ ಹೇಗೆ ನೀಡಬೇಕು ಎಂಬುದು ಕಿಯೋನಿಕ್ಸ್ ಗೆ ಬಿಟ್ಟದ್ದು. ಕಿಯೋನಿಕ್ಸ್ ಒಂದು ನಿಗಮವಾದ್ದರಿಂದ ಅದರ ಎಲ್ಲಾ ತೀರ್ಮಾನಗಳನ್ನು ಕೈಗೊಳ್ಳುವ ಅಧಿಕಾರಿ ವ್ಯವಸ್ಥಾಪಕ ನಿರ್ದೇಶಕರದ್ದಾಗಿರುತ್ತದೆ. ಅವರ ತೀರ್ಮಾನವೇ ಅಂತಿಮ. ಅದಕ್ಕೆ ಯಾರ ಅನುಮತಿ ಪಡೆಯುವ ಅಗತ್ಯವೇ ಇಲ್ಲ” ಎಂಬ ವಾದ ಕೂಡ ಅವರಿಂದ ಮಂಡನೆಯಾಯಿತು!
ಅಂದರೆ; ಸ್ವಂತ ಕಚೇರಿ, ಸೌಲಭ್ಯಗಳಿಗೆ ಹೂಡಿಕೆ ಮಾಡುವಷ್ಟು ಹಣಕಾಸು ಬಲವಿಲ್ಲದ ಆದರೆ ಐಟಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಕನಸಿನ ಯುವ ಉತ್ಸಾಹಿ ನವೋದ್ಯಮಿಗಳಿಗೆ ಆಸರೆಯಾಗಿ ಸಾರ್ವಜನಿಕ ತೆರಿಗೆ ಹಣದಲ್ಲಿ ರೂಪಿಸಿದ ಇನ್ ಕ್ಯೂಬೇಷನ್ ಸೆಂಟರನ್ನು ಕಿಯೋನಿಕ್ಸ್ ಎಂಡಿಯೊಬ್ಬರು ತಮಗೆ ಬೇಕಾದವರಿಗೆ ಸಾರಾಸಗಟಾಗಿ ನೀಡುವ ಹಕ್ಕು ಹೊಂದಿದ್ದಾರೆ. ಸರ್ಕಾರ ಹಣ ಬಳಕೆಯಾಗಿದ್ದರೂ, ಇಡೀ ಆ ಕೇಂದ್ರವನ್ನು ಖಾಸಗಿಯವರಿಗೆ ಬಾಡಿಗೆಗೆ (ಖಾಲಿ ಜಾಗದ ದರದಲ್ಲಿ ಸುಸಜ್ಜಿತ ಇನ್ ಕ್ಯೂಬೇಷನ್ ಸೆಂಟರ್ ನೀಡಿರುವುದು!) ನೀಡಲು ಅವರು ಐಟಿ-ಬಿಟಿ ಇಲಾಖೆಯ ಅಧಿಕಾರಿಗಳಾಗಲೀ, ಪರೋಕ್ಷವಾಗಿ ಸರ್ಕಾರದ ಅನುಮತಿಯನ್ನಾಗಲೀ ಪಡೆಯುವ ಅಗತ್ಯವೇ ಇಲ್ಲ ಎಂಬುದು ಅವರ ವಾದದ ಸಾರ!
ಅಂದರೆ, ಕಿಯೋನಿಕ್ಸ್ ಎಂಡಿ ಎಂದರೆ ಸ್ವತಃ ಸರ್ಕಾರಕ್ಕಾಗಲೀ, ಸಾರ್ವಜನಿಕರಿಗಾಗಲೀ ಉತ್ತರದಾಯಿಯಾಗಬೇಕಾದವರಲ್ಲ. ಅವರಿಗೆ ಅವರ ಸ್ಥಾನಕ್ಕೆ ದತ್ತವಾದ ಪರಮಾಧಿಕಾರ ಲಭಿಸಿರುತ್ತದೆ. ಆ ಪರಮಾಧಿಕಾರವನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದಾಯಿತು! ಹಾಗಾಗಿಯೇ, 2012-13ರಲ್ಲಿ ಸಜ್ಜಗಾಗಿದ್ದ ಇನ್ ಕ್ಯೂಬೇಷನ್ ಸೆಂಟರನ್ನು ಸುಮಾರು ಆರು ವರ್ಷಗಳ ಕಾಲ ಯಾವೊಬ್ಬ ನವೋದ್ಯಮಿಗಳಿಗೂ ನೀಡದೇ, ಸಚಿವರ ಪುತ್ರನಿಗೆ ಕೇವಲ ಒಂದು ಶಿಫಾರಸು ಪತ್ರದ ಆಧಾರದ ಮೇಲೆ ಇಡಿ ಕೇಂದ್ರವನ್ನೇ ಬಾಡಿಗೆ ನೀಡಿದರು. ಅದೂ ಕೂಡ ಸಚಿವರು ಶಿಫಾರಸು ಪತ್ರ ಕೊಟ್ಟ ಕೇವಲ 24 ತಾಸಿನಲ್ಲೇ ಬರೋಬ್ಬರಿ ಒಂದು ಕೋಟಿ ರೂಪಾಯಿ ವೆಚ್ಚದ ಇನ್ ಕ್ಯೂಬೇಷನ್ ಸೆಂಟರನ್ನು ಅವರ ಮಗ-ಮೊಮ್ಮಗನ ಕಂಪನಿಗೆ ಬಾಡಿಗೆ ನೀಡಲು ಏಕಪಕ್ಷೀಯ ನಿರ್ಣಯ ಕೈಗೊಂಡರು!