ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ನಿವಾಸಿ ಹಿಂದೂ ಮಹಿಳೆಯೊಬ್ಬರ ಕೇರಳದಿಂದ ಹೊತ್ತು ತಂದ ಅಂಬ್ಯುಲೆನ್ಸಿಗೆ ಕರ್ನಾಟಕ ಗಡಿ ಪ್ರವೇಶಿಸಲು ನಿರಾಕರಿಸಲಾಗುತ್ತದೆ. ಕೇರಳ – ಕರ್ನಾಟಕ ಗಡಿ ತಲಪಾಡಿಯಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಪೇದೆ ಆಂಬುಲೆನ್ಸಿನತ್ತ ನೋಡುವುದಕ್ಕೆ ನಿರಾಕರಿಸುತ್ತಾನೆ. ಪರಿಸ್ಥಿತಿ ಸೀರಿಯಸ್ ಇದೆ, ಆಸ್ಪತ್ರೆಗೆ ಕೊಂಡು ಹೋಗಲು ಅವಕಾಶ ಕೊಡಿ ಎಂದು ಚಾಲಕ ಹೇಳಿದರೂ ಗಮನ ನೀಡಲಾಗುವುದಿಲ್ಲ. ಆ ಮಹಿಳೆ ಅಂದೇ ಚಿಕಿತ್ಸೆ ದೊರೆಯದೆ ಸಾವನ್ನಪ್ಪುತ್ತಾರೆ.
ಬಂಟ್ವಾಳ ನಿವಾಸಿಯಾಗಿದ್ದ ವೃದ್ಧೆ ಮಂಜೇಶ್ವರದಲ್ಲಿದ್ದ ತನ್ನ ಮಗಳ ಮನೆಗೆ ಹೋಗಿರುತ್ತಾರೆ. ಅಸೌಖ್ಯ ಉಂಟಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗದ ಕಾರಣ ಮಂಗಳೂರಿಗೆ ಕರೆತರಲಾಗಿತ್ತು. ಕರೋನಾ ವೈರಸ್ ಸೋಂಕಿನ ಭೀತಿಯಿಂದ ಕೇರಳ ಕರ್ನಾಟಕ ಗಡಿಗಳನ್ನು ಬಂದ್ ಮಾಡಲಾಗಿತ್ತು. ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವುದಕ್ಕೂ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರಾಕರಿಸುತ್ತಿದೆ. ಕೇವಲ ಕರೋನಾ ಸೋಂಕಿತರನ್ನು ಮಾತ್ರವಲ್ಲದೆ ಯಾವುದೇ ನಿರಂತರ ಚಿಕಿತ್ಸೆಯಲ್ಲಿರುವ ರೋಗಿಗಳು ಕೂಡ ದಕ್ಷಿಣ ಕನ್ನಡದ ಯಾವುದೇ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೂ ಬರುವಂತಿಲ್ಲ.
ಇಷ್ಟು ಮಾತ್ರವಲ್ಲದೆ ಕಾಸರಗೋಡು ಜಿಲ್ಲೆಗೆ ಆವಶ್ಯ ಸಾಮಾಗ್ರಿಗಳನ್ನು ಸಾಗಿಸುವ ವಾಹನಗಳ ಸಂಚಾರಕ್ಕೂ ಸಂಚಕಾರ ಬಂತು. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹಾಲು ಮತ್ತು ಆವಶ್ಯ ಸಾಮಾಗ್ರಿಗಳ ಸಾಗಾಟದ ವಾಹನಕ್ಕೆ ಅಡೆತಡೆ ಮಾಡಿದ ರಾಜ್ಯ ಪೊಲೀಸರು ಕೇರಳಕ್ಕೆ ವಾಹನ ಸಂಚಾರ ನೀಡುವ ಸಾಧ್ಯತೆಯೇ ಇಲ್ಲ. ಕೇವಲ ರಸ್ತೆ ಬಂದ್ ಮಾಡಿರುವುದು ಮಾತ್ರವಲ್ಲದೆ, ಹಲವೆಡೆ ಸ್ವತಃ ಪೊಲೀಸರು ಮತ್ತು ಅಧಿಕಾರಿಗಳ ಉಪಸ್ಥಿತಿಯಲ್ಲಿ ರಸ್ತೆ ಮಣ್ಣು ರಾಶಿ ಹಾಕಿ ಅಮಾನವೀಯತೆ ಮೆರೆದಿದ್ದಾರೆ.
ಕಾಸರಗೋಡು – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿರುವ ವಿರುದ್ಧ ಕೇರಳ ಹೈಕೋರ್ಟ್ ಅಸೋಸಿಯೇಷನ್ ತಿರುವನಂತಪುರದಲ್ಲಿ ಕರ್ನಾಟಕ ವಿಧಿಸಿರುವ ಗಡಿ ದಿಗ್ಬಂಧನವನ್ನು ತೆಗೆದುಹಾಕುವಂತೆ ರಿಟ್ ಅರ್ಜಿ ಸಲ್ಲಿಸಿತು. ಕೇರಳ ಹೈಕೋರ್ಟ್ ಬುಧವಾರ ಈ ರಿಟ್ ಅರ್ಜಿಯ ವಿಚಾರಣೆ ನಡೆಸುತ್ತಿದ್ದಂತೆ ಮಂಗಳೂರು ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಲವು ರೋಗಿಗಳನ್ನು ಬಲತ್ಕಾರವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಸರಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಸಂಪೂರ್ಣ ಕರೋನಾ ಐಸೋಲೇಶನ್ ಆಸ್ಪತ್ರೆ ಮಾಡಿರುವುದರಿಂದ ರೋಗಿಗಳನ್ನು ಮಂಗಳೂರು ಹೊರ ವಲಯದ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲಾಗಿದೆ. ಅದೇ ವೇಳೆ ನತದೃಷ್ಟ ಕಾಸರಗೋಡಿನ ರೋಗಿಳನ್ನು ಡಿಸ್ಚಾರ್ಜ್ ಮಾಡಿದ್ದು, ಅವರು ನಡೆದುಕೊಂಡೇ ಕಾಸರಗೋಡಿನತ್ತ ಹೊರಟಿದ್ದಾರೆ. ಅವರಲ್ಲೆಷ್ಟು ದಾರಿ ಮಧ್ಯೆ ಅಸ್ವಸ್ಥರಾಗಿ ಬಿದ್ದರೊ ಗೊತ್ತಿಲ್ಲ, ಬಾಲನ್ ಎಂಬಾತ ಮೂರ್ಛೆ ಹೋಗಿ ಹೆದ್ದಾರಿ ಬದಿ ಬಿದ್ದಿರುವುದು ಸ್ವತಃ ಕಾಸರಗೋಡು ಎಸ್ಪಿ ಪಿ.ಎಸ್.ಸಾಬು ನೋಡಿ ಆತನಿಗೆ ವಾಹನ ವ್ಯವಸ್ಥೆ ಮಾಡಿದ್ದಾರೆ.
ಇತ್ತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದು ಕರ್ನಾಟಕ ಬಿಜೆಪಿ ಸರಕಾರದ ಕ್ರಮವನ್ನು ಖಂಡಿಸಿದ್ದಾರೆ. ಮಾತ್ರವಲ್ಲದೆ, ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸುವುದಾಗಿ ಕೂಡ ಹೇಳಿದ್ದಾರೆ.
ಮಂಗಳೂರು ಮತ್ತು ಕೇರಳದ ಕಾಸರಗೋಡು ನಡುವೆ ಸಂಪರ್ಕಿಸುವ ರಸ್ತೆಯು ರಾಷ್ಟ್ರೀಯ ಹೆದ್ದಾರಿಗಳ ಭಾಗ ಆಗಿರುವುದರಿಂದ ಅಗತ್ಯ ಸೇವೆಗಳ ವಾಹನ ಸಂಚಾರಕ್ಕೆ ಅಡ್ಡಿ ಆಗದಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಎರಡು ರಾಜ್ಯಗಳ ನಡುವಿನ ಗಡಿಯುದ್ದಕ್ಕೂ, ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ರೋಗಿಗಳನ್ನು ಕರೆದೊಯ್ಯುವ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಕರ್ನಾಟಕವು ನಿರ್ಮಿಸಿರುವ ಗಡಿ ಪ್ರವೇಶ ದಿಗ್ಬಂಧನವನ್ನು ತಕ್ಷಣವೇ ತೆಗೆದುಹಾಕಬೇಕೆಂದು ನ್ಯಾಯಮೂರ್ತಿ ಎ.ಕೆ.ಜಯಶಂಕರ್ ನಂಬಿಯಾರ್ ಹಾಗೂ ಶಾಜಿ ಪಿ ಚಲಿ ಅವರಿದ್ದ ನ್ಯಾಯಪೀಠವು ಹೇಳಿದೆ.
ಭಾರತದ ಪ್ರಜೆ ದೇಶದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಬಹುದು ಎಂದು ಸಂವಿಧಾನದ 19 (1) (ಡಿ) ವಿಧಿಯಲ್ಲಿ ತಿಳಿಸಲಾಗಿದೆ. ಗಡಿ ಮುಚ್ಚಿರುವುದರಿಂದ ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಗಳಿಗೆ ತೊಂದರೆ ಆಗಬಹುದು ಎಂದು ಹೈಕೋರ್ಟ್ ಹೇಳಿದೆ.
ಕೇರಳ ಹೈಕೋರ್ಟಿನ ಮಧ್ಯಂತರ ತೀರ್ಪನ್ನು ಪಾಲಿಸಲು ಕರ್ನಾಟಕ ಸರಕಾರ ಸಿದ್ಧವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ರಾಜ್ಯ ಸರಕಾರ ಸಿದ್ಧವಾಗಿದೆ. ಅಷ್ಟು ಮಾತ್ರವಲ್ಲದೆ, ಸುಪ್ರೀಂ ಕೋರ್ಟಿನಲ್ಲಿ ರಾಜ್ಯಕ್ಕೆ ವ್ಯತಿರಿಕ್ತವಾಗ ತೀರ್ಪು ಬಂದಾಗ ಕೂಡ ಅಂತಹ ತೀರ್ಪನ್ನು ಪಾಲಿಸದೇ ಇರಲು ದಕ್ಷಿಣ ಕನ್ನಡ ಜಿಲ್ಲಾಡಳಿತ ತೀರ್ಮಾನ ಮಾಡಿದೆ.
ಏಪ್ರಿಲ್ 2ರಂದು ಮಂಗಳೂರಿನ ಹಲವು ಕೇಬಲ್ ಟಿವಿ ಚಾನಲುಗಳಿಗೆ ಸಂದರ್ಶನ ನೀಡಿ, ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸುಪ್ರೀಂ ಕೋರ್ಟಿನ ಆದೇಶ ಉಲ್ಲಂಘಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೂಡ ಗಡಿ ವಿವಾದದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಾಸರಗೋಡಿನಿಂದ ಮಂಗಳೂರಿಗೆ ಚಿಕಿತ್ಸೆಗಾಗಿ ಬರುವವರನ್ನು ಮಾನವೀಯ ದೃಷ್ಟಿಯಿಂದ ನೋಡಬೇಕಾಗಿದೆ. ಸಾಮಾನ್ಯ ಸಂಚಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ ಚಿಕಿತ್ಸೆಗೆ ಬರುವವರಿಗೆ ಮಾತ್ರ ಎರಡು ರಾಜ್ಯಗಳ ನಡುವಿನ ಹೆದ್ದಾರಿಯನ್ನು ತೆರೆದಿಡಬೇಕೆಂದು ಟ್ವೀಟ್ ಮಾಡಿದ್ದಾರೆ.
ನ್ಯಾಯಾಲಯದ ಆದೇಶ ಹೊರ ಬೀಳುತ್ತಿದ್ದಂತೆ ಅದಕ್ಕೆ ವಿರುದ್ಧವಾಗಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಟೀಕಿಸಿ ಕರಾವಳಿಯ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್. ಭರತ್ ಶೆಟ್ಟಿ ಮತ್ತಿತರರು ಟ್ವೀಟ್ ಮಾಡಿ ಕರೋನಾ ವಿಚಾರದಲ್ಲೂ ಎಡಪಕ್ಷದ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಅಲ್ಲದೇ ರೋಗ ನಿಯಂತ್ರಿಸೋದಕ್ಕೆ ಪ್ರಯತ್ನ ಪಡುವ ಬದಲು ಅಲ್ಲೂ ರಾಜಕೀಯ ಬೆರೆಸಿ ಚಳಿ ಕಾಯಿಸುತ್ತಿದ್ದಾರೆ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅಂತೂ #SaveKarnatakaFromPinarayi ಎಂದು ಹ್ಯಾಷ್ ಟ್ಯಾಗ್ ಮಾಡಿ ಟ್ವೀಟ್ ಮಾಡುವ ಮೂಲಕ ಕೇರಳ ಸರಕಾರದ ವಿರುದ್ಧವೇ ದಂಗೆ ಏಳುವಂತೆ ಪ್ರಚೋದಿಸಿದ್ದಾರೆ. ಅಲ್ಲದೇ ಕಟೀಲ್ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಅವರನ್ನು ಸಂಪರ್ಕಿಸಿ ಯಾವ ಕಾರಣಕ್ಕೂ ಕೇರಳದ ಬೇಡಿಕೆಗೆ ಮಣಿಯಬಾರದು ಎಂದು ತಾಕೀತು ಮಾಡಿದ್ದಾರೆ.
ಚಾಮರಾಜನಗರ, ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೇರಳ ಗಡಿ ರಸ್ತೆಗಳನ್ನು ಹೊಂದಿದ್ದು, ತಲಪಾಡಿ-ಮಂಗಳೂರು ಅಲ್ಲದೆ, ಸಾರಡ್ಕ (ಕಲ್ಲಡ್ಕ-ಕಾಂಞಗಾಂಡ್ ರಾಜ್ಯ ಹೆದ್ದಾರಿ), ಕರಿಕೆ, ಕುಟ್ಟ, ಮಕುಟ ಹೀಗೆ ಹಲವು ರಸ್ತೆಗಳನ್ನು ಹೊಂದಿದೆ. ಕಳೆದ ವಾರ ಆರಂಭದಲ್ಲಿ ಕೇರಳ ಮುಖ್ಯಮಂತ್ರಿಯ ಮನವಿ ಮೇರೆಗೆ ಯಡ್ಯೂರಪ್ಪ ಅವರು ಮಂಗಳೂರು – ಕಾಸರಗೋಡು, ಮೈಸೂರು- ಮಾನಂದವಾಡಿ, ಗುಂಡ್ಲುಪೇಟ್ – ಸುಲ್ತಾನ್ ಬತ್ತೇರಿ ಹೆದ್ದಾರಿಗಳನ್ನು ತೆರವು ಮಾಡಲು ಮುಂದಾಗಿದ್ದರು. ಆದರೆ, ಮಡಿಕೇರಿ ಮತ್ತು ಮೈಸೂರು ಭಾಗದಲ್ಲಿ ಸಂಸದ ಪ್ರತಾಪ್ ಸಿಂಹ, ದಕ್ಷಿಣ ಕನ್ನಡದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರನ್ನು ಕೇರಳ ರಾಜ್ಯದ ಉಸ್ತುವಾರಿ ಮಾಡಿದ್ದು, ಅವರು ಗಡಿ ಮುಚ್ಚುವ ಬೆಂಬಲಿಗರ ಆಕ್ರೋಶಕ್ಕೆ ತುತ್ತಾದರು. ಹೈಕೋರ್ಟಿನ ಆದೇಶದ ಹೊರತಾಗಿಯೂ ತಲಪಾಡಿ ಗಡಿ ಮುಚ್ಚಲಾಗಿದೆ.