• Home
  • About Us
  • ಕರ್ನಾಟಕ
Sunday, July 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

`ಕಾವೇರಿ ಕೂಗು’ ಅಭಿಯಾನದ ಲೆಕ್ಕ ಕೊಡಿ

by
January 8, 2020
in ಕರ್ನಾಟಕ
0
`ಕಾವೇರಿ ಕೂಗು’ ಅಭಿಯಾನದ ಲೆಕ್ಕ ಕೊಡಿ
Share on WhatsAppShare on FacebookShare on Telegram

`ಕಾವೇರಿ ಕೂಗು’ ಅಭಿಯಾನಕ್ಕೆ ದೇಶ ವಿದೇಶಗಳಿಂದ ಕೋಟ್ಯಂತರ ರೂಪಾಯಿ ಹರಿದುಬಂದಿದೆ, ಬರುತ್ತಿದೆ. ಹಲವಾರು ಸರ್ಕಾರಗಳು ತಮ್ಮದೇ ಆದ ಕೊಡುಗೆಯನ್ನೂ ನೀಡಿವೆ. ಆದರೆ, ಇದಕ್ಕೆ ಲೆಕ್ಕ ಕೇಳುವ ದಾರ್ಷ್ಯವನ್ನು ಯಾರೂ ಕೇಳಿರಲಿಲ್ಲ. ನಾಡಿನ ಜೀವನದಿ ಕಾವೇರಿಯನ್ನು ಉಳಿಸಿ, ಬೆಳೆಸುತ್ತೇನೆಂದು ಬಿಂಬಿಸಿಕೊಂಡಿದ್ದ ಈಶ ಫೌಂಡೇಶನ್ ನ ಜಗ್ಗಿ ವಾಸುದೇವ್ ಅಭಿಯಾನದ ಹೆಸರಿನಲ್ಲಿ ಯಾರೂ ಕಂಡರಿಯದಷ್ಟು ಪ್ರಚಾರವನ್ನು ಗಿಟ್ಟಿಸಿದ್ದರು. ಅಷ್ಟೇ ವೇಗವಾಗಿ ಕೋಟ್ಯಂತರ ರೂಪಾಯಿ ದೇಣಿಗೆಯನ್ನೂ ಸಂಗ್ರಹಿಸಿದರು. ಶಾಲಾ ಮಕ್ಕಳು, ದಿನಗೂಲಿ ನೌಕರರು, ವ್ಯಾಪಾರಿಗಳು, ಕೂಲಿಗಳು ಸೇರಿದಂತೆ ಸಮಾಜದ ಬಹುತೇಕ ಎಲ್ಲಾ ವರ್ಗಗಳ ಜನರು ಇದೊಂದು ಉತ್ತಮ ಕಾರ್ಯ ಎಂದು ಭಾವಿಸಿ ತಾವು ಗಳಿಸಿದ ಹಣದಲ್ಲಿ ಸ್ವಲ್ಪವನ್ನು ದೇಣಿಗೆಯಾಗಿ ನೀಡಿದರು.

ಸಾರ್ವಜನಿಕರಿಂದ ಸಂಗ್ರಹಿಸಲಾದ ಒಂದು ಪೈಸೆಗೂ ಲೆಕ್ಕ ಇಡಲೇಬೇಕು. ಇದು ದೇಣಿಗೆ ಸಂಗ್ರಹಿಸುವ ಸಂಸ್ಥೆಗಳ ಜವಾಬ್ದಾರಿಯೂ ಹೌದು. ಆದರೆ, ಅಭಿಯಾನ ಆರಂಭವಾಗಿ ಅದೆಷ್ಟೋ ತಿಂಗಳು ಕಳೆದಿದ್ದರೂ ಜಗ್ಗಿ ವಾಸುದೇವ್ ಆಗಲಿ ಅಥವಾ ದೇಣಿಗೆ ಸಂಗ್ರಹಿಸಿದ ಸಂಸ್ಥೆಗಳಾಗಲೀ ಲೆಕ್ಕ ಕೊಡುವುದರಿಂದ ನುಣುಚಿಕೊಂಡಿದ್ದರು.

ಇದೊಂದು ಕೋಟ್ಯಂತರ ರೂಪಾಯಿಗಳ ವ್ಯವಹಾರವಾಗಿರುವುದರಿಂದ ಲೆಕ್ಕ ಕೇಳುವ ಅಧಿಕಾರ ಪ್ರತಿಯೊಬ್ಬರಿಗೂ ಇರುತ್ತದೆ. ಅದರಂತೆ ವಕೀಲರಾದ ಎ.ವಿ.ಅಮರನಾಥನ್ ಅವರು ಜಗ್ಗಿ ವಾಸುದೇವ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿರುವ ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಮತ್ತು ನ್ಯಾ.ಹೇಮಂತ್ ಚಂದನಗೌಡರ್ ಅವರು, ಇದುವರೆಗೆ ಅಭಿಯಾನದ ಹೆಸರಿನಲ್ಲಿ ಎಷ್ಟು ಹಣ ಸಂಗ್ರಹಿಸಿದ್ದೀರಿ ಎಂಬ ಲೆಕ್ಕ ಕೊಡಿ ಎಂದು ತಾಕೀತು ಮಾಡಿದೆ.

ರಾಜ್ಯ ಸರ್ಕಾರಗಳು ದೇಣಿಗೆ ಸಂಗ್ರಹಿಸುವಂತೆ ಅನುಮತಿ ನೀಡದಿದ್ದರೂ ನೀವು ಯಾವ ಆಧಾರದಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದ್ದೀರಿ? ನಿಮ್ಮದು ಲಾಭರಹಿತವಾದ ಆಧ್ಯಾತ್ಮಿಕ ಸಂಸ್ಥೆ ಎಂದು ಹೇಳಿಕೊಳ್ಳುತ್ತೀರಿ. ಹಾಗಾದರೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಅಗತ್ಯವಾದರೂ ಏನಿತ್ತು? ನಿಮ್ಮ ಸಂಸ್ಥೆಗೊಬ್ಬರು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಕ ಮಾಡಿಕೊಂಡಿದ್ದೀರಿ. ಅವರಿಗೆ ಈ ದೇಣಿಗೆ ಸಂಗ್ರಹ ಮಾಡಿದ ವಿಚಾರವನ್ನು ತಿಳಿಸಿದ್ದೀರಾ? ಎಂದೆಲ್ಲಾ ನ್ಯಾಯಪೀಠ ಈಶ ಫೌಂಡೇಶನ್ ಅನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಯಾವುದೇ ಸಂಸ್ಥೆ ಅಥವಾ ಆಧ್ಯಾತ್ಮಿಕ ಸಂಸ್ಥೆ ಅಥವಾ ವ್ಯಕ್ತಿಗಳು ನೆಲದ ಕಾನೂನಿಗಿಂತ ದೊಡ್ಡವರಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

A very positive review and discussion regarding #CauveryCalling implementation program and the next steps with Chief Minister @BSYBJP in Bengaluru. -Sg @CMofKarnataka pic.twitter.com/1WqujYKzLf

— Sadhguru (@SadhguruJV) December 27, 2019


ಸಂಸ್ಥೆಯು ಸಾರ್ವಜನಿಕರಿಂದ ಒತ್ತಡ ಹೇರಿ ದೇಣಿಗೆ ಸಂಗ್ರಹಿಸುತ್ತಿಲ್ಲ. ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ದೇಣಿಗೆ ನೀಡುತ್ತಿದ್ದಾರೆ ಎಂದು ಹೇಳಿದ ಫೌಂಡೇಶನ್ ಪರ ವಕೀಲರ ಮಾತನ್ನು ತಳ್ಳಿ ಹಾಕಿದ ನ್ಯಾಯಪೀಠ, ಒತ್ತಾಯಪೂರ್ವಕವಾಗಿ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ತನಿಖೆಯನ್ನೇಕೆ ನಡೆಸಿಲ್ಲ ಎಂದು ಕರ್ನಾಟಕ ಸರ್ಕಾರಕ್ಕೂ ಚಾಟಿ ಬೀಸಿದೆ.

ಕಾವೇರಿ ಕೂಗು ಅಭಿಯಾನದಲ್ಲಿ ದೇಣಿಗೆ ಸಂಗ್ರಹಿಸಿ 242 ಕೋಟಿ ಸಸಿಗಳನ್ನು ನೆಡುವ ಬೃಹತ್ತಾದ ಯೋಜನೆಯಾಗಿದೆ. ಒಂದು ಸಸಿಗೆ 42 ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಹೀಗೆ ನಿಗದಿಪಡಿಸಲಾಗಿರುವ ದರದಂತೆ ಇದುವರೆಗೆ 4,66,93,937 ಸಸಿಗಳಿಗೆ ದೇಣಿಗೆ ಸಂಗ್ರಹಿಸಲಾಗಿದೆ. ಅಂದರೆ, ಈಶ ಫೌಂಡೇಶನ್ ಗೆ ಇದುವರೆಗೆ 196,11,45,354 ರೂಪಾಯಿ ದೇಣಿಗೆ ಸಂಗ್ರಹವಾಗಿದೆ.

ಈಶ ಫೌಂಡೇಶನ್ ಮತ್ತು ಜಗ್ಗಿ ವಾಸುದೇವ್

ಯುವಜನತೆಯ ಜೊತೆಗೆ ಗಾಸಿಪ್‌ ಹರಟೆಗಳ ಮೂಲಕ ಸತ್ಯವನ್ನು ಕಂಡುಕೊಳ್ಳುವ ‘ಯೂತ್‌ ಅಂಡ್‌ ಟ್ರುಥ್’ ಸರಣಿ ಸಂವಾದಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಅಧ್ಯಾತ್ಮ ಗುರು ಜಗ್ಗಿ ವಾಸುದೇವ್‌ ಅವರು ತಮ್ಮ ಕೆಲ ಅಸಮರ್ಥನೀಯ ಹೇಳಿಕೆಗಳ ಮೂಲಕ ಈಚೆಗೆ ಸುದ್ದಿಯಲ್ಲಿದ್ದಾರೆ. ದೇಶಾದ್ಯಂತ ವಿವಿಧ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ‌ ವಿದ್ಯಾರ್ಥಿಗಳೊಂದಿಗೆ ಅವರು ಮೇಲೆ ಹೇಳಿದ ಸರಣಿ ಕಾರ್ಯಕ್ರಮಗಳ ಮೂಲಕ ಸಂವಾದ ನಡೆಸಿದ್ದಾರೆ. ಈವರೆಗೆ ಅವರ ಕಾರ್ಯಕ್ರಮಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪುಣೆಯ ಫಿಲ್ಮ್‌ ಅಂಡ್‌ ಟೆಲಿವಿಷನ್‌ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯಾದಲ್ಲಿ ಅವರು ನಡೆಸಬೇಕಿದ್ದ ಕಾರ್ಯಕ್ರಮ ರದ್ದಾಯಿತು ಕೂಡ. ಇದಕ್ಕೆ ವಿದ್ಯಾರ್ಥಿಗಳ ವಿರೋಧ ಕಾರಣ ಎನ್ನುವ ವರದಿ ಒಂದೆಡೆಯಿದ್ದರೆ, ಕಾರ್ಯಕ್ರಮದ ವೇಳಾಪಟ್ಟಿಯ ಕುರಿತಾಗಿ ಆದ ಸಂವಹನದ ಕೊರತೆ ಕಾರಣ ಎನ್ನುವುದು ಮತ್ತೊಂದು ವರದಿ.

In less than two years after their cycle rally for the nation’s rivers, these wonderful & enthusiastic volunteers from Maharashtra are back on two wheels, riding from Udgir to Coimbatore to raise awareness and funds to save Mother Cauvery. Blessings. –Sg #CauveryCalling pic.twitter.com/D7l3iMzQRy

— Sadhguru (@SadhguruJV) December 19, 2019


ಇರಲಿ, ಇತ್ತೀಚೆಗೆ ಹೈದರಾಬಾದ್‌ನ ಕಾನೂನು ಅಧ್ಯಯನ ಮತ್ತು ಸಂಶೋಧನಾ ರಾಷ್ಟ್ರೀಯ ಸಂಸ್ಥೆಯ (ಎನ್‌ಎಎಲ್‌ಎಸ್ಎ‌ಆರ್‌) ವಿದ್ಯಾರ್ಥಿಗಳಿಗೊಂದಿಗೆ ಮೇಲಿನ ಸರಣಿಯಡಿ ಅವರು ಸಂವಾದ ನಡೆಸಲು ಆಗಮಿಸಿದ್ದ ವೇಳೆ, ಪತ್ರಕರ್ತರೊಂದಿಗೆ ಮಾತನಾಡುತ್ತಾ, “ಭಾರತದಲ್ಲಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ದೇಶದ ಗಡಿಯನ್ನು ಹೊರತುಪಡಿಸಿ ಬೇರೆಲ್ಲೂ ಬಾಂಬ್‌ ಸ್ಫೋಟಗಳು ನಡೆದಿಲ್ಲ,” ಎಂದು ಹೇಳಿದ್ದರು. ಆ ಮೂಲಕ ತಮ್ಮ ಪಾರಲೌಕಿಕ ಪಾಂಡಿತ್ಯಕ್ಕೆ ಹೊರತಾದ ಸಮಕಾಲೀನ ಸಮಸ್ಯೆಯೊಂದನ್ನು ರಾಜಕೀಯ ಕಣ್ಣಿನಿಂದ ನೋಡಲು ಮುಂದಾಗಿದ್ದರು. ಪರಿಣಾಮ ಸದ್ಗುರುಗಳ ಸರಣಿಗಿಂತ ಅವರ ಈ ಹೇಳಿಕೆಯ ಸುತ್ತ ಹೆಚ್ಚು ಚರ್ಚೆ ನಡೆಯಿತು.

ಸದ್ಗುರಗಳ ‘ಗಾಸಿಪ್’‌ ಯಾವಾಗ ಪಾರಮಾರ್ಥಿಕದಿಂದ ಹೀಗೆ ನೇರ ರಾಜಕೀಯದ ಅಂಗಳಕ್ಕೆ ಜಿಗಿಯಿತೋ ತಕ್ಷಣವೇ ಮಾಧ್ಯಮಗಳು, ಅಂಕಿಅಂಶಗಳ ವಿಶಾರದರು ಎಚ್ಚೆತ್ತು ೨೦೧೪ರಿಂದ ಇಲ್ಲಿಯವರೆಗೆ ದೇಶದಲ್ಲಿ ಎಷ್ಟು ಬಾಂಬ್‌ ಗಳು ಸ್ಫೋಟಗೊಂಡಿವೆ, ಎಷ್ಟು ಜನ ಸತ್ತಿದ್ದಾರೆ ಎನ್ನುವ ಸತ್ಯದರ್ಶನವನ್ನು ಗುರುಗಳಿಗೆ ಮಾಡಿಸಲು ಮುಂದಾದರು. ೨೦೧೬ರೊಂದರಲ್ಲಿಯೇ ದೇಶದಲ್ಲಿ ೪೦೬ ಬಾಂಬ್‌ ಬ್ಲಾಸ್ಟ್‌ಗಳು ನಡೆದಿದ್ದು ೧೧೮ ಮಂದಿಯ ಸಾವಿಗೆ ಕಾರಣವಾಗಿದ್ದಲ್ಲದೆ ೫೦೫ ಮಂದಿ ಗಾಯಗೊಂಡಿದ್ದರು. 2015ರಲ್ಲಿ ೨೬೮ ಸ್ಫೋಟಗಳು ಸಂಭವಿಸಿದ್ದು, ೧೧೭ ಮಂದಿಯ ಸಾವಿಗೆ ಕಾರಣವಾಗಿತ್ತು, ೪೫೭ ಮಂದಿ ಗಾಯಗೊಂಡಿದ್ದರು. ೨೦೧೪ರಲ್ಲಿ ೧೯೦ ಬಾಂಬ್‌ ಸ್ಫೋಟಗಳಲ್ಲಿ ೭೫ ಮಂದಿ ಮರಣ ಹೊಂದುವ ಮೂಲಕ ೨೯೫ ಮಂದಿ ಗಾಯಗೊಂಡಿದ್ದರು ಎನ್ನುವ ಅಧಿಕೃತ ಅಂಕಿಅಂಶಗಳನ್ನು ಮಾಧ್ಯಮಗಳು ಪ್ರಕಟಿಸಿದವು.

ಪ್ರಧಾನಿ ನರೇಂದ್ರ ಮೋದಿಯವರನ್ನು ಅವಕಾಶವಾದಾಗಲೆಲ್ಲ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹೊಗಳಲು ಮುಂದಾಗುವ ಜಗ್ಗಿ ವಾಸುದೇವ ಅವರ ನಡೆ ಇದೇ ಮೊದಲ ಬಾರಿ ಏನೂ ವ್ಯಕ್ತವಾಗಿಲ್ಲ. ಈ ಹಿಂದೆಯೂ ಅವರು ಸಾಕಷ್ಟು ಸನ್ನಿವೇಶಗಳಲ್ಲಿ ಮೋದಿ ಪರವಾದ ತಮ್ಮ ಒಲವನ್ನು ತೋರಿಸಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯವಾದರೆ ಸಮಸ್ಯೆಯಿಲ್ಲ, ಆದರೆ ಅವರು ತಮ್ಮನ್ನು ತಾವು ಓರ್ವ ಅಧ್ಯಾತ್ಮ ಗುರು ಎಂದು ಬಿಂಬಿಸಿಕೊಂಡಿರುವಾಗ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ತರಗಳಲ್ಲಿ ಭಾರತದ ಅಧ್ಯಾತ್ಮದ ರಾಯಭಾರಿ ಎನ್ನುವಂತೆ ಕಾಣಿಸಿಕೊಳ್ಳಲು ತೊಡಗಿರುವಾಗ ಸಹಜವಾಗಿಯೇ ಇಂತಹ ಹೇಳಿಕೆಗಳಲ್ಲಿ ಅಧಿಕಾರಸ್ಥರನ್ನು ಅತಾರ್ಕಿಕವಾಗಿ ಓಲೈಸುವ ಗುಣವಿರುವುದು ಕಾಣತೊಡಗುತ್ತದೆ.

Participation of people & people's representatives has been instrumental in success of @rallyforrivers & #CauveryCalling, but this is just the beginning. #CauveryCalling is a 12-year commitment to farmers & Mother Cauvery.Looking forward to your continued support-Sg @thekiranbedi https://t.co/KGBbSId2Q6

— Sadhguru (@SadhguruJV) December 11, 2019


ADVERTISEMENT

ಅಧ್ಯಾತ್ಮ ಗುರುಗಳಾದವರು, ಐಹಿಕ ಪರಿಧಿಗೆ ಒಳಪಡುವ ಅಧಿಕಾರ ಕೇಂದ್ರಗಳಿಂದ ದೂರವಿದ್ದುಕೊಂಡೇ ತಮ್ಮ ಪಾರಮಾರ್ಥಿಕ ಸಾಧನೆಗಳ ಮೂಲಕ ಜನ ಹಾಗೂ ಸಮಾಜವನ್ನು ಉತ್ತಮ ಮೌಲ್ಯಗಳೆಡೆಗೆ ಮುಖ ಮಾಡುವಂತೆ ಪ್ರೇರೇಪಿಸಬೇಕು. ಶುದ್ಧ ಅಧ್ಯಾತ್ಮಿಗಳಿಗೆ ಧರ್ಮ, ರಾಜಕಾರಣ ಎಲ್ಲವೂ ತೃಣ ಸಮಾನವಾಗಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿಪರ್ಯಾಸವೆಂದರೆ, ಜಗ್ಗಿ ವಾಸುದೇವ್‌ ಅಥವಾ ಬಾಬಾ ರಾಮ್ ದೇವ್‌ ಅಂತಹವರ ಸಾರ್ವಜನಿಕ ನಡಾವಳಿಗಳನ್ನು ಗಮನಿಸಿದರೆ ಈ ಭಾವನೆ ಮೂಡುವುದಿಲ್ಲ. ಬಾಬಾ ರಾಮ್ ದೇವ್‌ ಯೋಗವನ್ನೇ ಬಂಡವಾಳ ಮಾಡಿಕೊಂಡು ಸಾವಿರಾರು ಕೋಟಿ ರೂ ಮೌಲ್ಯದ ಬ್ರ್ಯಾಂಡ್‌ ಅನ್ನು ಕಟ್ಟಿದರೆ, ವಾಸುದೇವ್‌ ಅವರು ಅಧ್ಯಾತ್ಮವನ್ನು ಯಶಸ್ಸಿನ ಏಣಿಯಾಗಿಸಿಕೊಂಡಿದ್ದಾರೆ. ಹೀಗೆ ಯೋಗ, ಅಧ್ಯಾತ್ಮಗಳನ್ನು ಭಾರತದಲ್ಲಿ ಬಂಡವಾಳವಾಗಿ ಬದಲಾಯಿಸಿಕೊಂಡ ಸಾಕಷ್ಟು ಯಶಸ್ವಿ ಗುರುಗಳು ಭಾರತದಲ್ಲಿದ್ದಾರೆ. ಧಾರ್ಮಿಕ ಗುರುಗಳು ಹಾಗೂ ಮಠಮಾನ್ಯಗಳ ಪೀಠಾಧಿಪತಿಗಳಿಗಿಂತ ಇವರುಗಳ ಹಾದಿ ಭಿನ್ನ. ಇವರು ನೇರವಾಗಿ ಧಾರ್ಮಿಕ ಪರಿಭಾಷೆಯನ್ನು ಆಡದೇ ಹೋದರೂ, ಅಧ್ಯಾತ್ಮ, ಯೋಗದ ಹೆಸರಿನಲ್ಲಿ ಪರೋಕ್ಷವಾಗಿ ಧಾರ್ಮಿಕವೂ, ಕರ್ಮಠವೂ ಆದ ಸಂಸ್ಥೆಗಳನ್ನು ಬಲಗೊಳಿಸುತ್ತಿರುತ್ತಾರೆ. ಶುದ್ಧ ಅಧ್ಯಾತ್ಮವನ್ನು ವೈಚಾರಿಕತೆ ಹಾಗೂ ಮುಕ್ತ ಮನಸ್ಸಿನ ಮತ್ತೊಂದು ಆಯಾಮವಾಗಿ ಪರಿಗಣಿಸುವ ಬಹುತೇಕರಿಗೆ ಈ ಕಾರಣಕ್ಕೆ ವಾಸುದೇವ್ ಅಂತಹವರು ಎಷ್ಟೇ ಉತ್ತಮ ಪ್ರವಚನಗಳನ್ನು ನೀಡಿದರೂ, ಓರ್ವ ಪ್ರವಚನಕಾರರಾಗಿ ಮಾತ್ರವೇ ಕಾಣುತ್ತಾರೆಯೇ ಹೊರತು ಸಾಧಕನ ದನಿಯನ್ನು ಅವರಲ್ಲಿ ಆಲಿಸುವುದು ಕಷ್ಟವಾಗುತ್ತದೆ.

‘ಮಾಂಸಾಹಾರವನ್ನು ತಿನ್ನಲು ಮನುಷ್ಯನ ದೇಹದ ಪಚನಾಂಗಗಳು ಸೂಕ್ತ ರೀತಿಯಲ್ಲಿ ವಿಕಸಿತವಾಗಿಲ್ಲ,’ ಎಂದು ಜೀವಶಾಸ್ತ್ರ, ಅಂಗರಚನಾಶಾಸ್ತ್ರದ ತಮ್ಮ ಜ್ಞಾನವನ್ನು ಪ್ರದರ್ಶಿಸುವ ವಾಸುದೇವ್ ಅವರು ಮತ್ತೊಂದೆಡೆ, ‘‘ಬೃಹತ್‌ ಉದ್ಯಮಗಳ ಮೇಲೆ ದೊಂಬಿಹಲ್ಲೆ (ಲಿಂಚಿಂಗ್) ನಡೆಸುವುದು ವಿತ್ತೀಯ ಆತ್ಮಹತ್ಯೆಯಂತೆ’’ ಎಂದು ಹೇಳುವ ಮೂಲಕ ಜನಹೋರಾಟಗಳನ್ನು ಹತ್ತಿಕ್ಕಬಲ್ಲ ರೀತಿಯಲ್ಲಿ ತಮ್ಮ ವಿತ್ತೀಯ ಜ್ಞಾನವನ್ನೂ ಪ್ರದರ್ಶಿಸಬಲ್ಲರು! ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಸ್ಟೆರಲೈಟ್‌ ತಾಮ್ರ ಸಂಸ್ಕರಣಾ ಘಟಕದ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿ, ಪೊಲೀಸರ ಗುಂಡಿಗೆ ಬಲಿಯಾದ ಘಟನೆಯನ್ನು ಜಗ್ಗಿ ವಾಸುದೇವ್‌ ಮೇಲಿನ ಹೇಳಿಕೆಯ ಮೂಲಕ ಸುಲಭವಾಗಿ ತಳ್ಳಿಹಾಕುವುದರೊಟ್ಟಿಗೇ, ಪರೋಕ್ಷವಾಗಿ ವೇದಾಂತದಂತಹ ಬಹುರಾಷ್ಟ್ರೀಯ ಸಂಸ್ಥೆಯನ್ನು, ಜಾಗತಿಕವಾಗಿ ಪರಿಸರ ಹಾಗೂ ಬುಡಕಟ್ಟುಗಳ ಮೇಲೆ ಅದು ಸತತವಾಗಿ ದಾಳಿ ನಡೆಸುತ್ತ ಬಂದಿದೆ ಎನ್ನುವ ಆರೋಪಗಳನ್ನೂ ಬದಿಗೆ ಸರಿಸಬಲ್ಲರು. ಆ ಮೂಲಕ ವಿವಾದಾತ್ಮಕ ಬಹುರಾಷ್ಟ್ರೀಯ ಸಂಸ್ಥೆಯ ಹಿತಕಾಯ ಬಲ್ಲರು. ಪರಿಸರದ ನಿಯಮಾವಳಿಗಳ ಉಲ್ಲಂಘನೆಯ ಆರೋಪಗಳಿಗೆ ಸ್ವತಃ ತಮ್ಮದೇ ಸಂಸ್ಥೆ ಈಡಾಗಿರುವಾಗ ನದಿಗಳನ್ನು ಉಳಿಸುವ, ಪರಿಸರವನ್ನು ರಕ್ಷಿಸುವ ಅಭಿಯಾನಕ್ಕೂ ಮುಂದಾಗಬಲ್ಲರು!

ಒಂದೆಡೆ, ಹಾವರ್ಡ್‌ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಗಳೊಟ್ಟಿಗೆ ಸುಪ್ತಾವಸ್ಥೆ, ಜಾಗೃತಾವಸ್ಥೆ, ಕೋಮಾದ ಬಗ್ಗೆ ಅದ್ಭುತವಾಗಿ ಮಾತನಾಡಬಲ್ಲ ವಾಸುದೇವ್, ದೇಶದೊಳಗಿನ ಪ್ರತಿಭಟನೆಗಳ ಬಗ್ಗೆ ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸುವಾಗ ‘ಆತ್ಮಸಾಕ್ಷಿ’ಯಿರಲಿ ತಮ್ಮ ಜಾಗೃತಾವಸ್ಥೆಯನ್ನೇ ಮರೆಯಬಲ್ಲರು! ‘ಜನಪ್ರಿಯತೆ’ ಹಾಗೂ ‘ಜನಪರತೆ’ಯ ನಡುವಿನ ತೆಳುಗೆರೆಯನ್ನು ತಮ್ಮ ವಾದಕ್ಕೆ ಅನುಗುಣವಾಗಿ ಅಳಿಸಬಲ್ಲರು. ಜನಪ್ರಿಯವಾದ ಆಲೋಚನೆ, ಭಾವನೆಗಳಿಗೆ ವಿರುದ್ಧವಾಗಿ ಆತ್ಮಸಾಕ್ಷಿ, ನಿರ್ಭಿಡೆ, ವೈಚಾರಿಕ ದನಿಯಾಗುವ ಎಲ್ಲ ಸಾಧ್ಯತೆಗಳಿದ್ದಾಗಲೂ ಅಧಿಕಾರಸ್ಥರಿಗೆ, ಬಂಡವಾಳಶಾಹಿಗಳಿಗೆ ಪ್ರಿಯವಾದ ಮಾತುಗಳನ್ನಾಡುತ್ತಾ ತಾವೆಷ್ಟು ಲೌಕಿಕರು ಎನ್ನುವುದನ್ನು ಜಗ್ಗಿ ವಾಸುದೇವ್ ನಿರೂಪಿಸಬಲ್ಲರು.

ಅಧಿಕಾರಸ್ಥರೊಂದಿಗೆ ಸದಾಕಾಲ ಶಾಮೀಲಾಗಲು ಅಧ್ಯಾತ್ಮವನ್ನು ಬಳಸಿಕೊಂಡವರ ಸಾಲು ಈ ದೇಶದಲ್ಲಿ ಬಲು ದೊಡ್ಡದಿದೆ. ರಾಜಕಾರಣಿಗಳಿಗೆ, ಉದ್ಯಮಿಗಳಿಗೆ, ಅಧಿಕಾರಿವರ್ಗಕ್ಕೆ ತಮ್ಮನ್ನು ಗುರುಗಳಾಗಿಸಿಕೊಳ್ಳಲು ಸದಾಕಾಲ ಹೆಣಗುವ, ಆತ್ಮಾಭಿಮಾನವುಳ್ಳ ಯಾರೂ ಹೇಸುವಂತೆ ನಡೆದುಕೊಳ್ಳುವ ಇಂತಹ ಮಂದಿ ತಮ್ಮ ಪ್ರವಚನ, ಉಪನ್ಯಾಸಗಳಿಗೆ ಗಣ್ಯರ ಹಿಂಡೇ ನೆರೆಯುವಂತೆ ನೋಡಿಕೊಳ್ಳುತ್ತಾರೆ. ಆ ಮೂಲಕ ಮಾರುಕಟ್ಟೆ ಕೇಂದ್ರಿತ ಈ ಸಮಾಜದಲ್ಲಿ ತಾವು ಅಧ್ಯಾತ್ಮದ ಯಶಸ್ವಿ ಬ್ರ್ಯಾಂಡ್‌ ಎಂದು ನಿರೂಪಿಸಿಕೊಳ್ಳುತ್ತಾರೆ. ವಾಸುದೇವ್‌ ಅವರ ಪ್ರವಚನಗಳಲ್ಲಿ, ಸಂವಾದಗಳಲ್ಲಿ ಅವರಿಗಿರುವ ವಿವಿಧ ವಿಷಯಗಳ ಬಗೆಗಿನ ಆಸಕ್ತಿ, ಗ್ರಹಿಕೆ, ಅರ್ಥೈಸುವಿಕೆ ಖುಷಿ ಹುಟ್ಟಿಸಬಲ್ಲದಾದರೂ ಅವರಿಗೆ ತಮ್ಮನ್ನು ಮಾರುಕಟ್ಟೆಯಲ್ಲಿನ ಸರಕನ್ನಾಗಿಸಿಕೊಳ್ಳುವಲ್ಲಿ, ಯಶಸ್ವಿ ಬ್ರ್ಯಾಂಡ್‌ ಆಗಿಸಿಕೊಳ್ಳುವಲ್ಲಿ ಇರುವ ಉತ್ಸಾಹ ಸಮಾಜದ ತಳಸಮುದಾಯಗಳ ಅಸ್ತಿತ್ವದ ಪ್ರಶ್ನೆಗಳಾದ ಊಟ, ಬಟ್ಟೆ, ಹಸಿವು, ಬಡತನ, ರೋಗ-ರುಜಿನಗಳ ಬಗ್ಗೆ ಇದ್ದಂತೆ ತೋರುವುದಿಲ್ಲ.

ಅಧ್ಯಾತ್ಮವೆನ್ನುವುದು ವ್ಯಕ್ತಿಯ ಮಾನಸಿಕ ಹಸಿವಾಗಬೇಕೇ ಹೊರತು ವಿಜೃಂಭಣೆಯ ವಿಕಾರವಾಗಬಾರದು. ಅಧ್ಯಾತ್ಮದ ಹಸಿವಿಗಿಂತ ಘನತೆಯ ಬಾಳಿಗಾಗಿ ಹಪಹಪಿಸುವ ವರ್ಗ ಈ ದೇಶದಲ್ಲಿ ದೊಡ್ಡದಿದೆ. ಅಮೂರ್ತ ಪ್ರಶ್ನೆಗಳಿಗೆ ಮುಖಾಮುಖಿಯಾಗುವ ಅಧ್ಯಾತ್ಮದ ತುರ್ತಿಗಿಂತ ಬಡವನಿಗೆ ಆಸರೆಯಾಗುವ ಆಡಳಿತಾತ್ಮಕ ತುರ್ತು ಈ ದೇಶದ ಅಗತ್ಯ. ಅಧ್ಯಾತ್ಮ ವ್ಯಕ್ತಿಯೊಳಗಿನ ಅವಿರತ ಹುಡುಕಾಟದ ಭಾಗವಾಗಬೇಕೆ ಹೊರತು ಸಾಂಸ್ಥೀಕರಣಗೊಳಿಸಬಲ್ಲ ವಿಷಯವಾಗಲಿ, ಮಾರಾಟ ಮಾಡಬಲ್ಲ ಸರಕಾಗಲಿ, ಐಹಿಕ ಮಹತ್ವಾಕಾಂಕ್ಷೆಗಳ ಹೆದ್ದಾರಿಯಾಗಲಿ ಆಗಬಾರದು. ಈ ದೇಶದಲ್ಲಿ ಯೋಗಿಗಳು, ಸಿದ್ಧರು, ಬುದ್ಧರು ಕಾಲಾನುಕಾಲದಿಂದ ಜನರ ನಡುವೆ ಬಾಳಿಬದುಕಿ, ಅವರಿಗಾಗಿ ಮಿಡಿದು, ತಮ್ಮ ಅರಿವುತಿಳಿವನ್ನು ಹಂಚಿಕೊಂಡು, ಸಾಮಾಜಿಕ ಸ್ವಾಸ್ಥ್ಯವನ್ನು ಕಾಯುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅಧಿಕಾರದಿಂದ ಗಾವುದ ದೂರ ಉಳಿಯುವ, ಪ್ರಚಾರಪ್ರಿಯತೆಯ ವ್ಯಾಧಿಗೆ ಬೀಳದ, ಇಂತಹ ನಿರ್ಮೋಹಿ ಯೋಗಿಗಳ ಪರಂಪರೆ ಇಂದು ಮುಕ್ಕಾಗಿದೆ. ಜನರ ನಾಲಗೆಯಲ್ಲಿ, ಹೃದಯದಲ್ಲಿ ಆಣೆ, ಪ್ರಮಾಣದ ಪರಿಮಾಣಗಳಾಗಿ ಒಂದೊಮ್ಮೆ ನೆಲೆಸಿದ್ದ ಯೋಗಿಗಳು ಇಂದು ಹೋರ್ಡಿಂಗ್ ಗಳಲ್ಲಿ, ಬಿಲ್‌ ಬೋರ್ಡ್ ಗಳಲ್ಲಿ ಅಡ್ಡಡ್ಡ ಉದ್ದುದ್ದ ವಿಜೃಂಭಿಸಿದ್ದಾರೆ. ಈ ಎರಡನೆಯ ಹಾದಿಯಲ್ಲಿಯೇ ಸಾಗಿರುವ ಜಗ್ಗಿ ವಾಸುದೇವ್‌, ಬಾಬಾ ರಾಮ್‌ ದೇವ್ ಅವರು ಈ ಕಾರಣಕ್ಕೆ ಜನರ ನಾಲಗೆಯಲ್ಲಿ, ಹೃದಯದಲ್ಲಿ ನೆಲೆಸಲಾರದೆ ಕಪಾಟುಗಳಲ್ಲಿ ಸ್ಥಾನ ಪಡೆಯುವ ಉತ್ಪನ್ನಗಳು ಮಾತ್ರವೇ ಅಗಿದ್ದಾರೆ. ಅಧಿಕಾರಸ್ಥರ ಓಣಿಗಳಲ್ಲಿ, ಉದ್ಯಮಿಗಳ ಕೋಠರಿಗಳಲ್ಲಿ, ಬಿಲ್ ಬೋರ್ಡ‌ಗಳ ಥಳಕಿನಲ್ಲಿ ವಿರಾಜಮಾನರಾಗಿದ್ದಾರೆ.

ಭಾರತದಲ್ಲಿ ವ್ಯಾಪಕವಾಗಿ ಕಂಡುಬರುವ ಒಂದು ಸಾರ್ವಜನಿಕ ರೋಗವೆಂದರೆ ಸಮಕಾಲೀನ ಸಮಸ್ಯೆಗಳಿಗಾಗಲಿ, ವಿವಿಧ ಜ್ಞಾನಶಿಸ್ತುಗಳಿಗೆ ಸಂಬಂಧಿಸಿದ ಜಟಿಲ ಪ್ರಶ್ನೆಗಳಿಗೆ ಧಾರ್ಮಿಕ, ಪಾರಮಾರ್ಥಿಕ ಗುರುಗಳ ಬಳಿ ಪರಿಹಾರಗಳನ್ನು ಹುಡುಕಲು ಹೋಗುವುದು! ವಿಜ್ಞಾನಿಗಳಿಂದ, ವೈಚಾರಿಕರಿಂದ, ಬೌದ್ಧಿಕರಿಂದ, ಅರ್ಥಶಾಸ್ತ್ರಜ್ಞರಿಂದ ಕಲಿಯಬೇಕಾದ, ಅವರೊಂದಿಗೆ ಸಂವಾದಿಸಬೇಕಾದ ವಿಷಯಗಳೆಲ್ಲವನ್ನೂ ಅಧ್ಯಾತ್ಮ ಹಾಗೂ ಧಾರ್ಮಿಕ ಗುರುಗಳೊಂದಿಗೆ ಸಂವಾದಿಸಲು ನಮ್ಮ ಸಮಾಜ, ಮಾದ್ಯಮಗಳು ಬಯಸುತ್ತವೆ. ಈಚಿನ ದಶಕಗಳಲ್ಲಿಯಂತೂ ನಮ್ಮ ಸಾರ್ವಜನಿಕ ಜೀವನದಲ್ಲಿ ಪಂಚಾಂಗವೆನ್ನುವುದು ಎಲ್ಲ ಜ್ಞಾನಶಿಸ್ತುಗಳನ್ನೂ ಒತ್ತರಿಸಿ ವಿಜೃಂಭಿಸಿದೆ. ಅಧ್ಯಾತ್ಮದ ಹಸಿವಿಲ್ಲದೆ ಅದನ್ನೊಂದು ಉಪಭೋಗವೆಂದು ಅನುಭವಿಸಲು ಹೊರಟ ಶ್ರೀಮಂತ ವರ್ಗಕ್ಕೆ ಹಾಗೂ ವಿವಿಧ ಅಧ್ಯಯನ ಶಿಸ್ತುಗಳಲ್ಲಿ, ಸಂಶೋಧನೆಗಳಲ್ಲಿ ಗಹನವಾಗಿ ತೊಡಗಿಕೊಳ್ಳಲಾಗದ ವೈಚಾರಿಕ ವೈಕಲ್ಯತೆ ಈಡಾಗಿರುವ ಪರಾವಲಂಬಿ ಅಕೆಡೆಮಿಕ್‌ ಮನಸ್ಸುಗಳಿಗೆ ಇಂದು ವಾಸುದೇವ್‌ ಹಾಗೂ ರಾಮ್ ದೇವ್ ‌ ಅವರಂತಹ ಪ್ರವಚನಕಾರರು, ಪ್ರದರ್ಶನಕಾರರು ಜ್ಞಾನವಿಜ್ಞಾನಗಳ ವಿಶಾರದರಾಗಿದ್ದಾರೆ. ಇದೆಲ್ಲಕ್ಕಿಂತ ದೊಡ್ಡ ವಿಪರ್ಯಾಸವೆಂದರೆ, ಸರ್ವಸಂಗ ಪರಿತ್ಯಾಗಿಯಾಗಿ, ಸಮಾಜ ಕಲ್ಯಾಣದಲ್ಲಿ ತೊಡಗಿಕೊಳ್ಳಬೇಕಾದ ಅಧ್ಯಾತ್ಮ ಜೀವಿಗಳಲ್ಲಿ ನಾವಿಂದು ಮಾರುಕಟ್ಟೆಯ ಯಶಸ್ವಿ ಬ್ರ್ಯಾಂಡ್‌ ಗಳನ್ನು, ಐಶ್ವರ್ಯಕ್ಕೆ ಉಪಮೆಗಳನ್ನು ಹುಡುಕುತ್ತಿದ್ದೇವೆ!

ಜಗ್ಗಿ ವಾಸುದೇವ್ ಅವರಂತಹವರು ಸಮಾಜ ತಮ್ಮಲ್ಲಿ ಏನನ್ನು ಕಾಣುತ್ತಿದೆ ಎನ್ನುವುದನ್ನು ಅರಿತಾಗ ತಾವು ಅಧ್ಯಾತ್ಮದ ಹಾದಿಯಲ್ಲಿದ್ದೇವೋ, ಐಹಿಕ ಯಶಸ್ಸುಗಳ ವಿಜೃಂಭಣೆಗೆ, ಅಧಿಕಾರದ ಓಣಿಗಳಲ್ಲಿನ ಒಡನಾಟಗಳಿಗೆ ಸೀಮಿತವಾಗಿದ್ದೇವೋ ಎನ್ನುವುದನ್ನು ಅರ್ಥಮಾಡಿಕೊಳ್ಳಬಲ್ಲರು. ತಮ್ಮನ್ನು ಯಾವ ತುದಿಯಲ್ಲಿ ಅವರು ನೋಡಿಕೊಳ್ಳಬಯಸುತ್ತಾರೆ ಎನ್ನುವುದರ ಮೇಲೆ ಅವರ ಸಾಧನೆ, ಯಶಸ್ಸನ್ನು ಅವರು ಗುರುತಿಸಿಕೊಳ್ಳಬಹುದು. ಇದು ಸಾಧ್ಯವಾಗುವುದು ಅವರು ತಮ್ಮ ಆಂತರ್ಯದೊಳಗೆ ಇಣುಕಿದಾಗ ಮಾತ್ರ. ಆದರೆ ಪ್ರವಚನದ ಹೆಸರಿನಲ್ಲಿ ದೇಶದುದ್ದಗಲಕ್ಕೂ ತಮ್ಮ ‘ಬ್ರ್ಯಾಂಡ್‌’ನ ಪ್ರಚಾರ ಭರಾಟೆಯಲ್ಲಿ ತೊಡಗಿರುವ ವಾಸುದೇವ್‌ ಅವರಿಂದ ಇದನ್ನು ನಿರೀಕ್ಷಿಸಬಹುದೇ?

Tags: AS OkaCauvery CallingChief JusticeIsha FoundationJaggi vasudevKarnataka High CourtSadguruSave waterಇಶಾ ಫೌಂಡೇಶನ್ಎ.ಎಸ್‌.ಓಕಾಕರ್ನಾಟಕ ಹೈಕೋರ್ಟ್ಕಾವೇರಿ ಕೂಗುಜಗ್ಗಿ ವಾಸುದೇವ್ನೀರು ಸಂರಕ್ಷಣೆಮುಖ್ಯ ನ್ಯಾಯಮೂರ್ತಿಸದ್ಗುರು
Previous Post

ಜನರ ನಾಡಿಮಿಡಿತ ಅರಿಯುವಲ್ಲಿ ಮೋದಿ-ಶಾ ಬಿಜೆಪಿ‌ ಸೋಲುತ್ತಿದೆಯೇ?

Next Post

HDD ಗೆ ರಾಜ್ಯಸಭೆ ಸೀಟ್ : ಕಾಂಗ್ರೆಸ್ ಜತೆ ಮೈತ್ರಿಗೆ ಜೆಡಿಎಸ್ ಯತ್ನ?     

Related Posts

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
0

https://youtube.com/live/zK_8kusfh_Q

Read moreDetails
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

July 12, 2025

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

July 12, 2025

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

July 12, 2025
Next Post
HDD ಗೆ ರಾಜ್ಯಸಭೆ ಸೀಟ್ : ಕಾಂಗ್ರೆಸ್ ಜತೆ ಮೈತ್ರಿಗೆ ಜೆಡಿಎಸ್ ಯತ್ನ?      

HDD ಗೆ ರಾಜ್ಯಸಭೆ ಸೀಟ್ : ಕಾಂಗ್ರೆಸ್ ಜತೆ ಮೈತ್ರಿಗೆ ಜೆಡಿಎಸ್ ಯತ್ನ?     

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
Top Story

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada