ಪಶ್ಚಿಮಘಟ್ಟ ಕಾಡುಗಳಲ್ಲಿ ಸಾವಿರಾರು ಜಾತಿಯ ಸಸ್ಯ ಪ್ರಬೇಧಗಳಿವೆ. ಅರ್ಧ ಅಡಿಗೊಂದು ಭಿನ್ನ ಜಾತಿಯ ಮರಗಳು ಇರುತ್ತವೆ, ಸ್ವಾಭಾವಿಕವಾಗಿ ಬೆಳೆದುಕೊಂಡ ಕಾಡಿನ ಸುತ್ತ ಕಣ್ಣಾಡಿಸಿದರೆ ಒಂದೇ ಜಾತಿಯ ಮರಗಳು ಹತ್ತಾರು ಒಟ್ಟಿಗೆ ಸಿಗುವುದು ಬಹಳ ಅಪರೂಪ, ಅಂತಹದರಲ್ಲಿ ಕಿಲೋಮೀಟರ್‌ಗಳಷ್ಟು ದೂರ ಕಾಡಿನೊಳಗೆ ಕರಿಬೇವು ಹುಲುಸಾಗಿ ಬೆಳೆದುಕೊಂಡಿದ್ದರೆ ಹೇಗಿರುತ್ತೆ ಊಹಿಸಿ. ಈ ಸೊಬಗನ್ನ ನೋಡಬೇಕಾದರೆ ಮಲೆಘಟ್ಟದ ದಟ್ಟಕಾನನದೊಳಗೆ ನುಸುಳಲೇಬೇಕು.
ಶಿವಮೊಗ್ಗ ಮೂಲದ ಪರಿಸರ ಹೋರಾಟಗಾರ ಅಜಯ್‌ಕುಮಾರ್ ಶರ್ಮಾ ಕರಿಬೇವಿನ ಕಾಡಿನ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು, ಅವರ ಲೇಖನ ಹೀಗಿತ್ತು., ದಕ್ಷಿಣ ಭಾರತದಲ್ಲಿ ಸಾವಿರಾರು ಹಳ್ಳಿಗಳಲ್ಲಿ ಪಂಚ ಪಾಂಡವರಿಗೆ ಸಂಬಂಧಿಸಿದ ಹಲವಾರು ರೋಚಕ ಕಥೆಗಳು ಸಿಗುತ್ತದೆ. ನಮ್ಮ ಪಶ್ಚಿಮ ಘಟ್ಟದ ಹೃದಯವಾಗಿರುವ ಶಿವಮೊಗ್ಗ ಸಹ ಅಂತಹ ಕಥೆಗಳಿಗೆ ಸಾಕ್ಷಿಯಾಗಿದೆ.
ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಸ್ವಲ್ಪ ಕಾಲ ಹೊಸನಗರದ ಶರಾವತಿಯ ದಂಡೆಯ ಮೇಲೆ ವಾಸವಿದ್ದರು, ಭಾರತದ ಸರ್ವಶ್ರೇಷ್ಠ ನಳಪಾಕನಾಗಿದ್ದ ಭೀಮಸೇನ ತನ್ನ ಪಕ್ವಾನಗಳು ರುಚಿಕರವಾಗಿರಲು ಅದಕ್ಕೆ ಸ್ವಾಭಾವಿಕವಾಗಿ ಕರಿಬೇವಿನ ಸೊಪ್ಪು ಹಾಕುತ್ತಿದ್ದ. ಭೀಮಸೇನ ತನ್ನ ಹಸ್ತದಿಂದ ನೀರು ಹಾಕಿ ಪೋಷಿಸಿದ ಕರಿಬೇವು, ಕಾಲಾಂತರದಲ್ಲಿ ನೂರಾರು ಹೆಕ್ಟೇರುಗಳಷ್ಟು ವಿಸ್ತರಿಸಿಕೊಂಡು ಕರಿಬೇವಿನ ಕಾಡಾಗಿ ಪರಿವರ್ತನೆಯಾಗಿದೆ, ಶರಾವತಿಗೆ ಅಡ್ಡಲಾಗಿ ಕಟ್ಟಲಾದ ಲಿಂಗನಮಕ್ಕಿ ಆಣೆಕಟ್ಟು, ಇತ್ತೀಚಿನ ದಿನಗಳಲ್ಲಿ ಆಗಿರುವ ಒತ್ತುವರಿಯಿಂದಾಗಿ ಭೀಮಸೇನನ ಈ “ಕರಿಬೇವಿನ ಕಾಡು” ಕೇವಲ ಕೆಲವೇ ಕೆಲವು ಎಕರೆಗಳಿಗೆ ಸೀಮಿತವಾಗಿದೆ. ಇಂದಿಗೂ ಸಹ ಈ ಕಾಡಿನೊಳಗೆ ಹೋದ ತಕ್ಷಣ ನಮ್ಮ ಮೂಗು ಘಮ್ ಎನ್ನುವ ಪರಿಮಳಕ್ಕೆ ಮಾರುಹೋಗುವುದು. ಎಲ್ಲಿ ನೋಡಿದರೂ ನಮಗೆ ಕಾಣಿಸುವುದು ಕೇವಲ ಕರಿಬೇವಿನ ಮರಗಳೇ.
ಅಜಯ್ ಕುಮಾರ್ ಶರ್ಮಾ ಅವರ ಲೇಖನದ ಜಾಡು ಹಿಡಿದು ಹೊರಟಾಗ ಸಿಕ್ಕಿದ್ದು ಸಂಕೂರು ಎಂಬ ಗ್ರಾಮ, ಹೊಸನಗರ ತಾಲೂಕು ಕೇಂದ್ರದಿಂದ ಎಂಟು ಕಿಲೋಮೀಟರ್ ಅಂತರದಲ್ಲಿರುವ ಪಟ್ಟಹಳ್ಳಿ, ಅಲ್ಲಿ ಮೂರು ಹಾದಿ ಕೂಡುವ ಪುಟ್ಟದೊಂದು ಸರ್ಕಲ್ ಇದೆ, ಬಲಕ್ಕೆ ತಿರುವಿಕೊಂಡರೆ ಸೀದಾ ಪಟ್ಟುಗುಪ್ಪ ಸೇತುವೆಗೆ ಹೋಗಬಹುದು, ಎಡಕ್ಕೆ ಧೂಮ ಎಂಬ ಪುಟ್ಟ ಗ್ರಾಮದ ಬಳಿಯಲ್ಲಿ ಶರಾವತಿ ಹಿನ್ನೀರಿನ ದಿಕ್ಕಿಗೆ ಕಾಲು ಹಾದಿಗಳಲ್ಲಿ ಸಾಗಿದರೆ ಈ ಬೇವಿನ ಬೆಟ್ಟ ಎದುರಾಗುತ್ತದೆ.
ಇದು ಹರಿದ್ರಾವತಿ ಮತ್ತು ಶರಾವತಿ ನದಿಗಳು ಸೇರುವ ಪುಣ್ಯ ಸಂಗಮ ಕ್ಷೇತ್ರವಾಗಿದ್ದು ಅಕ್ಕಪಕ್ಕದ ಅರಣ್ಯ ಪ್ರದೇಶಗಳಲ್ಲಿ ಪಾಂಡವರು ವಾಸಿಸಿದರು ಎಂದು ಸ್ಥಳ ಪುರಾಣಗಳಿಂದ ತಿಳಿದು ಬರುತ್ತದೆ ಎನ್ನುತ್ತಾರೆ ಅಜಯ್ ಶರ್ಮಾ. ಶರಾವತಿ ಕಣಿವೆಯಲ್ಲಿ ದಿನೇ ದಿನೇ ಒತ್ತುವರಿಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೇವಿನ ಕಾಡು ಕೂಡ ತನ್ನ ಕುರುಹುಗಳನ್ನ ಹಾಗೂ ಐತಿಹಾಸಿಕ ಹಿನ್ನೆಲೆಯನ್ನ ಕಳೆದುಕೊಳ್ಳಲಿದೆ ಎಂಬುದು ಪರಿಸರವಾದಿಗಳ ಆತಂಕ, ಸರ್ಕಾರ ಹಾಗೂ ಅರಣ್ಯ ಇಲಾಖೆ ಗಮನ ಹರಿಸುವ ಅನಿವಾರ್ಯ ಇದೆ.