ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಜಲ ವಿವಾದ ನ್ಯಾಯಾಧಿಕರಣ ನೀಡಿದ ಐ-ತೀರ್ಪಿನ ಕುರಿತು ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ನ್ಯಾಯಾಧಿಕರಣದಲ್ಲಿ ಮಹದಾಯಿ ನದಿಯಿಂದ ರಾಜ್ಯಕ್ಕೆ ಲಭ್ಯವಾಗಿರುವ ನೀರನ್ನು ಬಳಸಿಕೊಳ್ಳಲು ಅವಕಾಶವಾದಂತಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವುದರಿಂದ ಗೋವಾ ಸರ್ಕಾರ ಅವಗತ್ಯ ತಕರಾರು ತೆಗೆಯುವಂತೆಯೂ ಇಲ್ಲ. ಕೇಂದ್ರದ ಮೇಲೆ ನಾನಾ ಮೂಲಗಳಿಂದ ಒತ್ತಡ ತರುವಂತೆಯೂ ಇಲ್ಲ. ಅಷ್ಟರ ಮಟ್ಟಿಗೆ ಕೇಂದ್ರ ಸರ್ಕಾರದ ಅಧಿಸೂಚನೆ ಕರ್ನಾಟಕದ ಪರವಾಗಿ ನಿಂತಿದೆ.
ಈಗ ಇರುವ ಪ್ರಶ್ನೆ ಏನೆಂದರೆ, ಅಧಿಸೂಚನೆ ಹೊರಬಿದ್ದಿದೆಯೇನೋ ನಿಜ. ಅದರ ಅನುಕೂಲ ಪಡೆದುಕೊಳ್ಳಲು ರಾಜ್ಯ ಸರ್ಕಾರವೂ ಪ್ರಯತ್ನ ಮಾಡಬಹುದು. ಇನ್ನಷ್ಟೇ ಬಜೆಟ್ ಮಂಡನೆಯಾಗಬೇಕಾಗಿರುವುದರಿಂದ ಕಳಸಾ-ಬಂಡೂರಿ ಯೋಜನೆ ಆರಂಭಕ್ಕೆ ಒಂದಷ್ಟು ಅನುದಾನ ನಿಗದಿಪಡಿಸಬಹುದು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆದು ಕಾಲಮಿತಿಯೊಳಗೆ ಕಾಮಗಾರಿಗಳು ಪೂರ್ಣಗೊಂಡು ಜನರಿಗೆ ಅದರ ಅನುಕೂಲವಾಗುವುದೇ ಅಥವಾ ಈ ಹಿಂದಿನ ನೀರಾವರಿ ಯೋಜನೆಗಳಂತೆ ಕುಂಟುತ್ತಾ ಸಾಗಿ, ಯೋಜನಾ ವೆಚ್ಚ ಹೆಚ್ಚಾಗುವುದು ಮಾತ್ರವಲ್ಲದೆ, ಕಾಮಗಾರಿ ಮುಗಿಯದೆ ಜನರಿಗೂ ಅನುಕೂಲವಿಲ್ಲದಂತಾಗುವುದೇ ಎಂಬುದು.
ಏಕೆಂದರೆ, ಕೃಷ್ಣಾ ಮೇಲ್ದಂಡೆ ಯೋಜನೆ, ಕಾವೇರಿ ಕೊಳ್ಳದ ನೀರಾವರಿ ಯೋಜನೆಗಳು ಸೇರಿದಂತೆ ಬೃಹತ್ ನೀರಾವರಿ ಯೋಜನೆಗಳಾವುವೂ ತ್ವರಿತಗತಿಯಲ್ಲಿ ನಡೆದಿಲ್ಲ. ಅದರಲ್ಲೂ ಕೃಷ್ಣಾ ಮೇಲ್ದಂಡೆ ಯೋಜನೆಯಂತೂ ದೇಶದಲ್ಲೇ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿರುವ ಯೋಜನೆ ಎಂಬಷ್ಟರ ಮಟ್ಟಿಗೆ ಕೆಟ್ಟ ಹೆಸರು ಪಡೆದಿತ್ತು. ಆಡಳಿತ ನಡೆಸುವವರ ಇಚ್ಛಾಶಕ್ತಿಯ ಕೊರತೆ ಇದಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ನೀರು ಹಂಚಿಕೆಯಾದರೂ ಎರಡನೇ ಹಂತದಲ್ಲಿ ರಾಜ್ಯಕ್ಕೆ ಲಭ್ಯವಾದ ನೀರು ಬಳಸಿಕೊಳ್ಳುವ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಅದೇ ರೀತಿ ಎತ್ತಿನ ಹೊಳೆ ಯೋಜನೆಯ ಪರಿಸ್ಥಿತಿಯೂ ಆಗಿದೆ. ನಿಧಾನಗತಿಯ ಕಾಮಗಾರಿ, ಯೋಜನೆ ಅನುಷ್ಠಾನಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವಲ್ಲಿ ಸರ್ಕಾರ ಹೆಚ್ಚು ಆಸಕ್ತಿ ತೋರದೇ ಇರುವುದರಿಂದ ಇನ್ನೂ ಕಾಮಗಾರಿ ಆರಂಭಿಕ ಹಂತದಲ್ಲೇ ಇದೆ. ಇದರಿಂದ ಯೋಜನಾ ಗಾತ್ರ ಹೆಚ್ಚಾಗಿ ಸರ್ಕಾರದ ಮೇಲೆ ಹೊರೆಯಾಗುವುದು, ರಾಜಕಾರಣಿಗಳು ಒಂದಷ್ಟು ಅನುಕೂಲ ಮಾಡಿಕೊಳ್ಳುವುದಷ್ಟೇ ಬಂತು ಹೊರತು ಜನರಿಗೆ ನೀರು ಮಾತ್ರ ಸಿಕ್ಕಿಲ್ಲ.
ಅದರಲ್ಲೂ ಅಂತಾರಾಜ್ಯ ನೀರು ಹಂಚಿಕೆ ಪ್ರಕರಣಗಳಲ್ಲಂತೂ ಕರ್ನಾಟಕದ ಪರಿಸ್ಥಿತಿ ಶೋಚನೀಯ ಎನ್ನುವಷ್ಟರ ಮಟ್ಟಿಗೆ ತಲುಪಿದೆ. ನೆರೆ ರಾಜ್ಯಗಳು ಕಳ್ಳದಾರಿಯ ಮೂಲಕ ರಾಜ್ಯದ ನೀರನ್ನು ಕಬಳಿಸುತ್ತಿದ್ದರೆ ಅದನ್ನು ಕೂಡ ಉಳಿಸಿಕೊಳ್ಳಲು ಸಾಧ್ಯವಾಗದೆ ಪರದಾಡುವ ರಾಜ್ಯ ಸರ್ಕಾರ, ತನ್ನ ಪಾಲಿನ ನೀರನ್ನೂ ನಿಗದಿತ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿಲ್ಲ. ಇದಕ್ಕೆ ಆಲಮಟ್ಟಿ ಅಣೆಕಟ್ಟೆ ಗಾತ್ರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸುವ ವಿಚಾರ. ಈ ಬಗ್ಗೆ ಕೃಷ್ಣಾ ನ್ಯಾಯಾಧಿಕರಣ ಹಸಿರು ನಿಶಾನೆ ತೋರಿದರೂ ಭೂಸ್ವಾಧೀನ ಪ್ರಕ್ರಿಯೆ, ನೆರೆ ರಾಜ್ಯದ ಆಕ್ಷೇಪಣೆಗಳನ್ನು ಸಮರ್ಥವಾಗಿ ಎದುರಿಸದೇ ಇರುವ ಕಾರಣದಿಂದ ಇದುವರೆಗೂ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಕಾನೂನಿನಲ್ಲಿ ಅವಕಾಶವಿದ್ದರೂ ಅನಗತ್ಯವಾಗಿ ತೊಡರುಗಾಲು ಹಾಕುತ್ತಿರುವ ಗೋವಾ ರಾಜ್ಯದ ಎದುರು ಗಟ್ಟಿಯಾಗಿ ನಿಂತು ಕಳಸಾ-ಬಂಡೂರಿ ಯೋಜನೆಯನ್ನು ಪೂರ್ಣಗೊಳಿಸುವ ಇಚ್ಛಾಶಕ್ತಿ ಸರ್ಕಾರ ತೋರುವುದೇ ಎಂಬುದು ಈಗ ಎಲ್ಲರ ಮುಂದಿರುವ ಪ್ರಶ್ನೆ.
ಕಳಸಾ-ಬಂಡೂರಿ ಯೋಜನೆ ವಿವಾದ ಹೊಸದೇನೂ ಅಲ್ಲ. 2002ರಲ್ಲೇ ಕಾಮಗಾರಿ ಆರಂಭಿಸಲು ನಿರ್ಧರಿಸಲಾಯಿತಾದರೂ ಕೇಂದ್ರ ಸರ್ಕಾರ ಒಮ್ಮೆ ಅನುಮತಿ ನೀಡಿ ನಂತರ ಹಿಂಪಡೆದಿತ್ತು. 2006-07ನೇ ಸಾಲಿನಲ್ಲಿ ಇಚ್ಛಾಶಕ್ತಿ ತೋರಿದ ಆಗಿನ ಜೆಡಿಎಸ್-ಬಿಜೆಪಿ ಸರ್ಕಾರ, ಅದರಲ್ಲೂ ಮುಖ್ಯವಾಗಿ ಜಲಸಂಪನ್ಮೂಲ ಸಚಿವರು ಮತ್ತು ಇಲಾಖೆ ಕಾಮಗಾರಿಗೆ ಚಾಲನೆ ನೀಡಿಯೇ ಬಿಟ್ಟಿತ್ತು. ಆದರೆ, ಗೋವಾ ತಕರಾರಿನ ಕಾರಣ ಕಾನೂನು ಹೋರಾಟದಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗಿ ಕಾಮಗಾರಿ ಸ್ಥಗಿತಗೊಳಿಸಬೇಕಾಯಿತು.
ಈಗ ಬೇಕಿರುವುದು ಇಚ್ಛಾಶಕ್ತಿ ಮತ್ತು ಹಣ ಮಾತ್ರ
ಕಳಸಾ-ಬಂಡೂರಿ ಯೋಜನೆಯನ್ನು ತ್ವರಿತವಾಗಿ ಆರಂಭಿಸಿ ಜನರಿಗೆ ನೀರು ಒದಗಿಸಲು ಈಗ ಬೇಕಿರುವುದು ಇಚ್ಛಾಶಕ್ತಿ ಮತ್ತು ಹಣಕಾಸಿನ ನೆರವು ಮಾತ್ರ. ಏಕೆಂದರೆ, ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿಗಂತೆ 841 ಕೋಟಿ ರೂ. ಮೊತ್ತದ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ. ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೂ ಆಗಿದೆ. ಇದಕ್ಕೆ 2019ರ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಷರತ್ತುಬದ್ಧ ಅನುಮೋದನೆ ನೀಡಿತ್ತು. ಇದು ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಕಾಮಗಾರಿ ಕೈಗೊಳ್ಳಲು ಅಭ್ಯಂತರವಿಲ್ಲ. ಆದರೆ, ಜಲ ವಿದ್ಯುತ್, ನೀರಾವರಿ ಯೋಜನೆ ಕೈಗೆತ್ತಿಕೊಳ್ಳುವಂತಿಲ್ಲ. ನಾಶವಾಗುವ ಅರಣ್ಯಕ್ಕೆ ಪ್ರತಿಯಾಗಿ ಬೇರೆಡೆ ಅರಣ್ಯ ಬೆಳೆಸಲು ಜಾಗ ಗೊತ್ತು ಪಡಿಸಬೇಕು, ಭೂಸ್ವಾಧೀನ ಸಂಬಂಧದಲ್ಲಿ 2013ರ ಕಾಯಿದೆ ಅನುಸಾರ ಪರಿಹಾರ ನೀಡಬೇಕು ಎಂದು ಹೇಳಿತ್ತು. ನಂತರದಲ್ಲಿ ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧಿಕರಣವು (ಎಂಡಬ್ಲ್ಯುಡಿಟಿ) 2018ರ ಆಗಸ್ಟ್‌ನಲ್ಲಿ ನೀಡಿರುವ ತೀರ್ಪಿನ ಮೇಲಿನ ಸ್ಪಷ್ಟೀಕರಣವಿನ್ನೂ ಬಾಕಿಯಿದೆ. ಜತೆಗೆ ಇದರ ವಿರುದ್ಧ ಗೋವಾ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಕರ್ನಾಟಕ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಈ ವಿಚಾರಣೆ ಪೂರ್ಣಗೊಳ್ಳುವವರೆಗೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಹಿಂದೆ ನೀಡಿದ್ದ ಅನುಮತಿಯನ್ನು ಹಿಂಪಡೆದಿತ್ತು.
ಇದೀಗ ಸುಪ್ರೀಂ ಕೋರ್ಟ್ ಆದೇಶದಂತೆ ಅಧಿಸೂಚನೆ ಹೊರಡಿಸಿರುವುದರಿಂದ ಕಳಸಾ-ಬಂಡೂರಿ ಯೋಜನೆ ಕುರಿತಂತೆ ಸರ್ಕಾರ ಸಲ್ಲಿಸಿರುವ ಸಮಗ್ರ ಯೋಜನಾ ವರದಿಗೆ ಅನುಮತಿ ನೀಡಲು ನ್ಯಾಯಾಧಿಕರಣದ ತೀರ್ಪಿನ ಬಗ್ಗೆ ಸ್ಪಷ್ಟೀಕರಣವಿನ್ನೂ ಬಾಕಿಯಿದೆ. ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಬಾಕಿ ಇದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂಬ ನೆಪಗಳನ್ನು ಹೇಳಲು ಅರಣ್ಯ ಮತ್ತು ಪರಿಸರ ಇಲಾಖೆಗೆ ಸಾಧ್ಯವಿಲ್ಲ. ಏಕೆಂದರೆ, ಇದು ಸುಪ್ರೀಂ ಕೋರ್ಟ್ ಆದೇಶದನ್ವಯ ಮತ್ತು ಕುಡಿಯುವ ನೀರಿಗಾಗಿ ನಡೆಸುವ ಯೋಜನೆ.
ಆದರೆ, ರಾಜ್ಯ ಸರ್ಕಾರವೇ ಸಿದ್ಧಪಡಿಸಿದ ಸಮಗ್ರ ಯೋಜನಾ ವರದಿಯಂತೆ ಕಾಮಗಾರಿ ಕೈಗೊಳ್ಳಲು ಸುಮಾರು 814 ಕೋಟಿ ರೂ. ಬೇಕು. ವರ್ಷ ಕಳೆದಂತೆ ಯೋಜನಾ ಗಾತ್ರ ಹೆಚ್ಚಾಗುತ್ತದೆಯಾದ್ದರಿಂದ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂ ತ್ವರಿತವಾಗಿ ಕಾಮಗಾರಿ ಮುಗಿಸಬೇಕಾಗುತ್ತದೆ. ಆದ್ದರಿಂದ ಯೋಜನೆಗೆ ಬೇಕಾದ ಹಣಕಾಸು ನೆರವನ್ನು ಸರ್ಕಾರ ತಕ್ಷಣದಲ್ಲಿ ಒದಗಿಸಬೇಕು. ಆರಂಭದಲ್ಲೇ ಸುಮಾರು 300ರಿಂದ 400 ಕೋಟಿ ರೂ. ನೀಡಿದರೆ ಮಾತ್ರ ಯೋಜನೆಯನ್ನು ತ್ವರಿತವಾಗಿ ಮುಂದುವರಿಸಲು ಸಾಧ್ಯ. ಆದರೆ, ಪ್ರಸ್ತುತ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಸರ್ಕಾರ ಏಕಕಾಲದಲ್ಲಿ ಇಷ್ಟೊಂದು ಮೊತ್ತ ನೀಡಲು ಸಾಧ್ಯವೇ? ಹಣ ಒದಗಿಸಿದರೂ ಕಾಲಮಿತಿಯಲ್ಲಿ ಕಾಮಗಾರಿ ನಡೆಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸುವುದೇ?
ಸದ್ಯ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದರಿಂದ ಇಚ್ಛಾಶಕ್ತಿ ಪ್ರದರ್ಶಿಸಬಹುದು ಎಂಬ ನಿರೀಕ್ಷೆಯಿದೆ. ಏಕೆಂದರೆ, 1970ರ ದಶಕದಿಂದ ಕುಂಟುತ್ತಾ ಸಾಗುತ್ತಿದ್ದ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ಚುರುಕುಗೊಂಡಿದ್ದೇ ಯಡಿಯೂರಪ್ಪ ಅವರು 2008ರಲ್ಲಿ ಮುಖ್ಯಮಂತ್ರಿಯಾದ ಬಳಿಕ. ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚು ಆದ್ಯತೆ ನೀಡುವ ಅವರು ಅದಕ್ಕೆ ಹೆಚ್ಚಿನ ಅನುದಾನವನ್ನೂ ಒದಗಿಸಿದ್ದರು. ನಂತರದ ಸರ್ಕಾರ ಅದನ್ನು ಮುಂದುವರಿಸಿತ್ತು. ಈಗ ಕಳಸಾ-ಬಂಡೂರಿ ಯೋಜನೆ ಆರಂಭಿಸುವಾಗಲೂ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಅಗತ್ಯ ಹಣಕಾಸು ನೆರವು ಒದಗಿಸಿ ಯೋಜನೆಯನ್ನು ಒಂದು ಹಂತಕ್ಕೆ ಮೇಲೆತ್ತಬಹುದು ಎಂಬ ನಂಬಿಕೆ ಆ ಭಾಗದ ಜನರಲ್ಲಿದೆ.