ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಬಿಜೆಪಿ ಶಾಸಕರ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆ ಮತ್ತು ಅದನ್ನು ಬಿಜೆಪಿಯ ಸಚಿವರು, ಶಾಸಕರು ಸಮರ್ಥಿಸಿಕೊಳ್ಳುವ ರೀತಿಗೆ ವಿಧಾನಸಭೆಯಲ್ಲಿ ಸೋಮವಾರ ಇಡೀ ದಿನದ ಕಲಾಪ ಬಲಿಯಾಗಿದೆ. ಇತ್ತೀಚೆಗೆ ನಿಧನರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ನೇರವಾಗಿ ಈ ಎಚ್.ಎಸ್.ದೊರೆಸ್ವಾಮಿ ಅವರ ವಿಷಯ ಪ್ರಸ್ತಾಪವಾಗಿದ್ದು, ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ಈ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ವಿಧಾನಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಸಂಧಾನಕ್ಕೆ ಪ್ರಯತ್ನಿಸಿದರೂ ಅದು ವಿಫಲವಾಗಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಈ ವಿಚಾರ ಪ್ರಸ್ತಾಪಿಸಿ ಹೋರಾಟ ತೀವ್ರಗೊಳಿಸಲು ಕಾಂಗ್ರೆಸ್ ತೀರ್ಮಾನಿಸಿರುವುದರಿಂದ ಮಂಗಳವಾರವೂ ಕಲಾಪ ನಡೆಯುವುದು ಅನುಮಾನ ಎಂದೇ ಹೇಳಬಹುದು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆ ಅಕ್ಷ್ಯಮ್ಯ. ಏನೋ ಬಾಯಿ ತಪ್ಪಿ ಹೇಳಿ ನಂತರ ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದರೆ ಯತ್ನಾಳ್ ಅವರಿಗೆ ಗೌರವ ಬರುತ್ತಿತ್ತು. ಆದರೆ, ಪದೇ ಪದೇ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಯತ್ನಾಳ್, ಆಚಾರವಿಲ್ಲದ ನಾಲಿಗೆ, ನೀಚ ಬುದ್ಧಿಯ ಬಿಡುವುದಿಲ್ಲ ಎಂಬುದನ್ನು ಸಾಬೀತುಪಡಿಸಲು ಹೊರಟಂತಿದೆ. ಇದನ್ನು ಸಮರ್ಥಿಸಿಕೊಳ್ಳುವ ಮೂಲಕ ಬಿಜೆಪಿಯ ಸಚಿವರು ಮತ್ತು ಶಾಸಕರು ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಸರ್ಕಾರದ ವಿರುದ್ಧ ಸದನದ ಬಾವಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಒಟ್ಟಾರೆ ಇವರೆಲ್ಲರ ಉದ್ದೇಶ ಸದನದಲ್ಲಿ ಚರ್ಚೆಗಳು ನಡೆಯದೆ ಒಟ್ಟಾರೆ ಕಲಾಪ ಮುಗಿಸಿದರೆ ಸಾಕು ಎಂಬಂತಿದೆ.
ಹಾಗೆಂದು ಇದೊಂದೇ ವಿಚಾರವನ್ನು ಇಟ್ಟುಕೊಂಡು ಇಡೀ ಅಧಿವೇಶನವನ್ನೇ ಹಾಳು ಮಾಡುವಂತಹ ಕೆಲಸ ಸರಿಯಲ್ಲ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಬಗ್ಗೆ ಆಡಳಿತ ಪಕ್ಷದ ಸದಸ್ಯರು ನೀಡಿದ ಕೀಳು ಹೇಳಿಕೆಗಳನ್ನು ಖಂಡಿಸಿ ಸದನದ ಒಳಗೆ ಮತ್ತು ಹೊರಗೆ ಹೋರಾಡುವುದು ಪ್ರತಿಪಕ್ಷಗಳ ಕರ್ತವ್ಯ. ಹಾಗೆಂದು ಅದಕ್ಕಿಂತಲೂ ಮುಖ್ಯವಾದ, ಜನಪರ ವಿಚಾರಗಳನ್ನು ಬದಿಗಿಟ್ಟು ಇದೊಂದೇ ವಿಚಾರದಲ್ಲಿ ಗದ್ದಲ ಎಬ್ಬಿಸಲಾಗುತ್ತಿದೆ ಎಂದರೆ ಇವರಿಗೆ ಜನಪರ ಕಾಳಜಿಗಿಂತ ರಾಜಕೀಯ ಮೇಲಾಟವೇ ಮುಖ್ಯ ಎಂಬುದು ಸ್ಪಷ್ಟವಾಗುತ್ತಿದೆ. ಏಕೆಂದರೆ, ಪ್ರತಿಪಕ್ಷ ಕಾಂಗ್ರೆಸ್ ಇತ್ತೀಚಿನ ದಿನಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ, ಪ್ರಧಾನಿ ವಿರುದ್ಧ ನಾಟಕ ಪ್ರದರ್ಶಿಸಿದ ಬೀದರ್ ನಗರದ ಶಾಹೀನ್ ಶಾಲೆ ವಿರುದ್ಧ ಕ್ರಮ ಕೈಗೊಂಡಿದ್ದನ್ನು ಖಂಡಿಸಿ ಹೋರಾಟ, ಎಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಬಿಜೆಪಿ ಶಾಸಕರು ನೀಡಿದ ಕೀಳು ಹೇಳಿಕೆ ವಿರುದ್ಧ ಹೋರಾಟ… ಹೀಗೆ ಜಾತಿ, ಧರ್ಮ, ಸಿದ್ಧಾಂತ ಆಧಾರಿತ ಹೋರಾಟಗಳಿಗೆ ಆದ್ಯತೆ ನೀಡುತ್ತಿದೆಯೇ ಹೊರತು ಬಸ್ ಪ್ರಯಾಣ ದರ ಏರಿಕೆ, ಗ್ಯಾಸ ದರ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆರ್ಥಿಕ ಹಿಂಜರಿತದಂತಹ ಜನ ಸಾಮಾನ್ಯರಿಗೆ ಹೊರೆಯಾಗುತ್ತಿರುವ ಯಾವೊಂದು ಅಂಶಗಳನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಬಸ್ ಪ್ರಯಾಣ ದರ ಶೇ. 12ರಷ್ಟು ಏರಿಕೆಯಾಗಿದ್ದರೂ ಒಂದೇ ಒಂದು ಬೀದಿ ಹೋರಾಟವನ್ನು ಕಾಂಗ್ರೆಸ್ ಸಂಘಟಿಸಿಲ್ಲ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ವಿಚಾರಕ್ಕೇ ಬರೋಣ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಟು ಟೀಕೆಗಳನ್ನು ಮಾಡಿದ ದೊರೆಸ್ವಾಮಿ ಅವರನ್ನು ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ, ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕ್ ಏಜೆಂಟ್ ಎಂದು ಟೀಕಿಸಿದ್ದರು. ಇದನ್ನು ಬಿಜೆಪಿಯ ಕೆಲವು ಶಾಸಕರು, ಸಚಿವರು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಯತ್ನಾಳ್ ಅವರು ಬಳಸಿದ ಪದಗಳು ಸರಿಯಲ್ಲ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಈ ರೀತಿ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದಿದ್ದರು. ಪ್ರತಿಪಕ್ಷಗಳಂತೂ ಯತ್ನಾಳ್ ವಿರುದ್ಧ ಪುಂಖಾನುಪುಂಖವಾಗಿ ಟೀಕಾಪ್ರಹಾರಗಳನ್ನು ಮಾಡಿದ್ದವು. ಯತ್ನಾಳ್ ಕ್ಷಮೆ ಯಾಚಿಸುವಂತೆ ನಾಯಕರು ಒತ್ತಾಯಿಸಿದ್ದರು. ಆದರೆ, ಕ್ಷಮೆ ಯಾಚಿಸಲು ಒಪ್ಪದ ಯತ್ನಾಳ್ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು. ಸೋಮವಾರ ವಿಧಾನಸಭೆಯ ಇಡೀ ದಿನದ ಕಲಾಪ ಹಾಳಾಗಲು ಯತ್ನಾಳ್ ಅವರ ಮೊಂಡುತನವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
ಮಾತನಾಡುವ ಮುನ್ನ ಎಚ್ಚರ ಅಗತ್ಯ
ಪ್ರಧಾನಿ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡಿದಕ್ಕಾಗಿ ದೊರೆಸ್ವಾಮಿ ಅವರ ಬಗ್ಗೆ ನಾನು ಮಾತನಾಡಿದ್ದೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಕ್ಕೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಬಾರದು ಎಂದು ಬಿಜೆಪಿಯವರು ಹೇಳುತ್ತಾರೆ. ಪ್ರಧಾನಿ ಏನು ಪರಮಾತ್ಮನ ಸ್ವರೂಪನೇ ಎಂದು ಚಿಂತಕ ಜಿ.ಕೆ.ಗೋವಿಂದರಾವ್ ಪ್ರಶ್ನಿಸಿದ್ದಾರೆ. ಗೋವಿಂದರಾವ್ ಅವರ ಪ್ರಶ್ನೆಯಲ್ಲಿ ಅರ್ಥವಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯಂತಹ ಮಹಾನ್ ನಾಯಕರೇ ಟೀಕೆಯಿಂದ ಮುಕ್ತರಾಗಲಿಲ್ಲ. ಸ್ವಾತಂತ್ರ್ಯಾನಂತರ ಪ್ರಧಾನಿಯಾದವರ ಬಗ್ಗೆಯೂ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇಂದಿರಾ ಗಾಂಧಿಯಿಂದ ಪ್ರಶಂಸೆ ಪಡೆದಿದ್ದ ಅಜಾತ ಶತ್ರು ಎನಿಸಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸೋನಿಯಾ ಗಾಂಧಿ ಅವರು ಗದ್ಧರ್ ಎಂದು ನಿಂದಿಸಿದ್ದರು. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದರಲ್ಲಿ ಯಾವುದೇ ತಪ್ಪು ಇಲ್ಲ.
ಆದರೆ, ಟೀಕಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಜನರಿಂದ ಆಯ್ಕೆಯಾದ ದೇಶದ ಪ್ರಧಾನಿಯನ್ನೇ ರಾಷ್ಟ್ರ ದ್ರೋಹಿ ಎನ್ನುವ ಮಟ್ಟಕ್ಕೆ ಟೀಕಿಸಿದಾಗ ಅದಕ್ಕೆ ಪ್ರಧಾನಿ ಬೆಂಬಲಿಗರಿಂದ ಪ್ರತಿಕ್ರಿಯೆ ಬಂದೇ ಬರುತ್ತದೆ. ಇಲ್ಲಿ ಆಡಬಾರದನ್ನು ಆದರೆ ಕೇಳಬಾರದ್ದನ್ನು ಕೇಳಬೇಕಾಗುತ್ತದೆ ಎಂಬ ಸಚಿವ ಸುರೇಶ್ ಕುಮಾರ್ ಅವರ ಮಾತನ್ನೂ ನೆನಪಿಸಿಕೊಳ್ಳಬೇಕಾಗುತ್ತದೆ. ವಯೋಸಹಜ ಸಮಸ್ಯೆಯೋ ಅಥವಾ ಉದ್ದೇಶಪೂರ್ವಕವೋ, ಯತ್ನಾಳ್ ಅವರನ್ನು ಟೀಕಿಸುವ ಭರದಲ್ಲಿ ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಕುರಿತು ಕೀಳು ಮಟ್ಟದ ಹೇಳಿಕೆಗಳನ್ನು ನೀಡಿದ್ದಾರೆ. ವೀರ್ ಸಾವರ್ಕರ್ ಅವರ ಬಗ್ಗೆ ದೊರೆಸ್ವಾಮಿ ಅವರಿಗೆ ಆಕ್ಷೇಪಗಳು ಇರಬಹುದು. ಆದರೆ, ತಾವೂ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ದೊರೆಸ್ವಾಮಿ ಅವರು ಮಾತನಾಡುವಾಗ ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ಕೀಳು ಶಬ್ಧಗಳಿಂದ ನಿಂದಿಸುವ ಕೊಚ್ಚೆ ಬಾಯಿಯವರಿಗೆ ತಾವಾಗಿಯೇ ಆಹಾರವನ್ನು ಒದಗಿಸಿದಂತಾಗುತ್ತದೆ. ಪ್ರಸ್ತುತ ಈ ಪ್ರಕರಣದಲ್ಲಿ ಆಗಿರುವುದು ಕೂಡ ಇದುವೆ. ಯತ್ನಾಳ್ ಅವರು ದೊರೆಸ್ವಾಮಿ ಬಗ್ಗೆ ಟೀಕಿಸಿದಾಗ ಅವರಿಗೆ ಹೆಚ್ಚು ಬೆಂಬಲ ವ್ಯಕ್ತವಾಗಲಿಲ್ಲ. ಆದರೆ, ಯಾವಾಗ ದೊರೆಸ್ವಾಮಿ ಅವರು ವೀರ್ ಸಾವರ್ಕರ್ ಬಗ್ಗೆ ಮಾತನಾಡಿದರೋ ಬಿಜೆಪಿಯ ಬಹುತೇಕರು ಯತ್ನಾಳ್ ಪರ ನಿಂತರು. ಪ್ರಸ್ತುತ ಯತ್ನಾಳ್ ವಿರುದ್ಧ ಕಾಂಗ್ರೆಸ್ ಹೋರಾಟದ ಶಕ್ತಿಯನ್ನು ಸ್ವಲ್ಪ ಮಟ್ಟಿಗೆ ಕಮ್ಮಿ ಮಾಡಿದ್ದು ಕೂಡ ದೊರೆಸ್ವಾಮಿ ಅವರ ಇದೇ ಹೇಳಿಕೆ. ಇಲ್ಲವಾದಲ್ಲಿ ವಿಧಾನಮಂಡಲದ ಒಳಗೆ ಮಾತ್ರವಲ್ಲ, ಹೊರಗೂ ಕಾಂಗ್ರೆಸ್ ಹೋರಾಟಕ್ಕೆ ಹೆಚ್ಚು ಶಕ್ತಿ ಬರುತ್ತಿತ್ತು.