ಕರ್ನಾಟಕ ಉಪಚುನಾವಣೆಯ ಫಲಿತಾಂಶದ ಮೂಲಕ ಬಿಜೆಪಿ ತನ್ನ ಪ್ರಭುತ್ವವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಕಮಲ ಪಾಳೆಯದ ಪರವಾದ ಫಲಿತಾಂಶ ಹೊರಬೀಳುವುದರೊಂದಿಗೆ ಐತಿಹಾಸಿಕ ಘಟನೆಯೊಂದು ಮುಂದುವರಿದಿದೆ. ಇಡೀ ದೇಶವೇ ಒಂದು ರೀತಿಯಲ್ಲಿ ವರ್ತಿಸಿದರೆ ಕರ್ನಾಟಕ ಕೇಂದ್ರದಲ್ಲಿರುವ ಆಡಳಿತ ಪಕ್ಷದ ಪರವಾಗಿಯೇ ವರ್ತಿಸುತ್ತಿರುವುದು ವಾಡಿಕೆಯಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಮೂರು ದಶಕಗಳ ಮಿತ್ರ ಬಿಜೆಪಿಯನ್ನು ಹೊರಗಿಟ್ಟು ಸರ್ಕಾರ ರಚಿಸಿ ಶಿವಸೇನೆಯು ಬಿಜೆಪಿಗೆ ಮರ್ಮಾಘಾತ ನೀಡಿತ್ತು. ಸಮಕಾಲೀನ ಭಾರತದ ಪ್ರಚಂಡ ಜೋಡಿ ಮೋದಿ-ಶಾ ಗೆ ತೀವ್ರ ಮುಖಭಂಗ ಉಂಟು ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ವಿರುದ್ಧ ಅಸಹನೆಯ ಕಿಚ್ಚು ಹೇಳುವಂತೆ ಮಾಡುವಲ್ಲಿ ಶಿವಸೇನೆ-ರಾಷ್ಟ್ರೀಯ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಒಳಗೊಂಡ ಮಹಾ ವಿಕಾಸ್ ಅಗಡಿ ಸರ್ಕಾರ ಯಶಸ್ವಿಯಾಗಿದೆ.
ಈ ಮಧ್ಯೆದಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಹುತೇಕ ಕಡೆ ಬಿಜೆಪಿಯ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಬಿಜೆಪಿಯ ವಿರುದ್ಧ ಅಸಹನೆಯಿಲ್ಲ ಎಂಬ ಅಂಶವನ್ನು ಉಪಸಮರದ ಫಲಿತಾಂಶ ಸ್ಪಷ್ಟವಾಗಿ ರವಾನಿಸಿದೆ. ಜೂನ್ ನಲ್ಲಿ ಕಾಂಗ್ರೆಸ್-ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ 17 ಮಂದಿಯಿಂದ ರಾಜೀನಾಮೆ ಕೊಡಿಸಿದ ಬಿಜೆಪಿಯು ಮೈತ್ರಿ ಸರ್ಕಾರವನ್ನು ಪತನಗೊಳಿಸಿತ್ತು. ಅತೃಪ್ತ ಶಾಸಕರನ್ನು ಮುಂಬೈನ ಪಂಚತಾರ ಹೋಟೆಲ್ ನಲ್ಲಿ ಇಟ್ಟು ಮೈತ್ರಿ ಸರ್ಕಾರವನ್ನು ಅಲ್ಪ ಮತಕ್ಕೆ ಕುಸಿಯುವಂತೆ ಮಾಡಿದ ಬಿಜೆಪಿಯ ಕೇಂದ್ರ ನಾಯಕರು ಕರ್ನಾಟಕದಲ್ಲಿ ಅಧಿಕಾರ ಹಿಡಿಯುವಲ್ಲಿ ಸಫಲರಾಗಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬರುತ್ತಲೇ ಕರ್ನಾಟಕದ ಅರ್ಧಕ್ಕೂ ಮಿಕ್ಕಿದ ಜಿಲ್ಲೆಗಳ ಜನರು ಪ್ರವಾಹಕ್ಕೆ ತುತ್ತಾಗಿ ಯಾತನೆ ಅನುಭವಿಸುವಂತಾಯಿತು. ಈ ಸಂದರ್ಭದಲ್ಲಿ ಏಕ ಸದಸ್ಯ ಸಂಪುಟ ಸಭೆ ನಡೆಸಿ ಹಲವು ತೀರ್ಮಾನಗಳನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೈಗೊಂಡರೂ ಸಚಿವ ಸಂಪುಟವಿಲ್ಲದ ಸರ್ಕಾರ ಸಾಕಷ್ಟು ಟೀಕೆ ಎದುರಿಸಬೇಕಾಯಿತು. ಕೇಂದ್ರ ಸರ್ಕಾರವೂ ನಿರೀಕ್ಷಿತ ಪ್ರಮಾಣದಲ್ಲಿ ಬಿಎಸ್ವೈ ಗೆ ಬೆಂಬಲ ನೀಡದೇ ಸತಾಯಿಸಿದ್ದನ್ನೂ ರಾಜ್ಯ ಕಂಡಿದೆ. ಇಷ್ಟೆಲ್ಲಾ ಘಟನೆಗಳಿಗೆ ಬಿಜೆಪಿ ಸರ್ಕಾರ ಸಾಕ್ಷಿಯಾದರೂ ಜನಾಭಿಪ್ರಾಯ ಅದೇ ಪಕ್ಷದ ಪರವಾಗಿ ಬರುತ್ತದೆ ಎನ್ನುವುದಾದರೆ ಅದನ್ನು ಅರ್ಥೈಸಿಕೊಳ್ಳಬೇಕಾದ ಬಗೆ ಯಾವುದು?
1970ರ ದಶಕದಲ್ಲಿ ಭಾರತ ಎಂದೂ ಕಂಡರಿಯದ ವಿದ್ಯಮಾನಕ್ಕೆ ಸಾಕ್ಷಿಯಾಗಿತ್ತು.ಚುನಾವಣಾ ಅಕ್ರಮದ ಹಿನ್ನೆಲೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಕೋರ್ಟ್ ಅನರ್ಹಗೊಳಿಸಿತ್ತು. ಇದನ್ನು ದಿಕ್ಕರಿಸಿದ್ದ ಇಂದಿರಾ ತುರ್ತು ಪರಿಸ್ಥಿತಿ ಘೋಷಿಸಿ ದೇಶವನ್ನು ಕತ್ತಲೆಯ ಕೂಪಕ್ಕೆ ನೂಕಿದ್ದರು. ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿರುವ ತುರ್ತು ಪರಿಸ್ಥಿತಿಯ ನಂತರ ನಡೆದ ಹಲವು ರಾಜ್ಯಗಳ ವಿಧಾನಸಭೆ ಹಾಗೂ ಸಂಸತ್ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ನೆಲ ಕಚ್ಚಿತ್ತು. ಆದರೆ, ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಿ ಡಿ. ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಕರ್ನಾಟಕದಲ್ಲಿ ವಿಜಯದುಂದುಭಿ ಹಾರಿಸುವ ಮೂಲಕ ಅಧಿಕಾರ ಹಿಡಿದಿತ್ತು. ತುರ್ತು ಪರಿಸ್ಥಿತಿ ಹೇರಿದ ಸರ್ವಾಧಿಕಾರಿಇಂದಿರಾ ಗಾಂಧಿ ಮನೋಭಾವವನ್ನು ಲೆಕ್ಕಿಸದ ಕರ್ನಾಟಕ ಕಾಂಗ್ರೆಸ್ ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು. ಅರಸು ಆಡಳಿತದಲ್ಲಿ ಜಾರಿಗೊಂಡಿದ್ದ ಹಲವು ಸುಧಾರಣೆಗಳಿಂದ ಪ್ರೇರಿತಗೊಂಡಿದ್ದ ಕರ್ನಾಟಕದ ಜನತೆ ಅವರನ್ನು ನೋಡಿ ಮತನೀಡಿದ್ದರೆ ವಿನಾ ಇಂದಿರಾ ಗಾಂಧಿಯನ್ನಲ್ಲ ಎಂಬುದು ವಾಸ್ತವ. ಆದರೆ, ಯಡಿಯೂಪ್ಪನವರ ಸರ್ಕಾರದ ವಿಚಾರದಲ್ಲಿ ಈ ಮಾತನ್ನು ಹೇಳಲಾಗದು. ಕಾರಣ ಬೇರೆ ಇದ್ದರೂ ಐತಿಹಾಸಿಕವಾಗಿ ಕರ್ನಾಟಕವು ರಾಷ್ಟ್ರ ಮತ್ತು ರಾಜ್ಯದ ರಾಜಕಾರಣದ ವಿಷಯದಲ್ಲಿ ವಿಭಿನ್ನ ನಿಲುವು ತಳೆಯುತ್ತಾ ಬಂದಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿಯೂ ಕರ್ನಾಟಕದ ಜನತೆ ಬಿಜೆಪಿ ಅಥವಾ ಇನ್ಯಾವುದೇ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿರಲಿಲ್ಲ. ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ರಾಷ್ಟ್ರರಾಜಕಾರಣದಲ್ಲಿ ಬದಲಾವಣೆಯಾಗಬಹುದು ಎಂಬುದನ್ನು ಅರಿತು ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಸರ್ಕಾರ ರಚಿಸಿದ್ದವು. ಆದರೆ, ಹಲವು ವಿಚಾರಗಳಲ್ಲಿ ವಿಭಿನ್ನ ನಿಲುವು ಹೊಂದಿರುವ ಕಾಂಗ್ರೆಸ್-ಜೆಡಿಎಸ್ ತಮ್ಮ ಪಕ್ಷಗಳ ಶಾಸಕರ ಅಧಿಕಾರ ದಾಹ ತೀರಿಸುವಲ್ಲಿ ವಿಫಲವಾಗಿದ್ದವು. ಇದರ ನಿರೀಕ್ಷೆಯಲ್ಲಿದ್ದ ಬಿಜೆಪಿಯು ಸರ್ಕಾರ ಪತನಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಕೇಂದ್ರ ನಾಯಕತ್ವದ ಮೂಲಕ ಮಾಡಿಸಿ ಕುಮಾರಸ್ಚಾಮಿ ಸರ್ಕಾರ ಕೆಡವಿತ್ತು. ಈಗ ಬಲವಂತವಾಗಿ ಜಾರಿಗೊಳಿಸಲಾದ ಉಪಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯಾಗಿ ಪರಿಗಣಿಸಿ, ಗೆದ್ದು ಬೀಗಿದೆ. ಇದಕ್ಕಾಗಿ ನೂರಾರು ಕೋಟಿ ರುಪಾಯಿಗಳನ್ನು ವೆಚ್ಚ ಮಾಡಿರುವುದು ಗುಟ್ಟಿನ ವಿಚಾರವೇನಲ್ಲ. ಬಿಜೆಪಿಯ ವರ್ಚಸ್ಸನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಎದುರಾಗಬಹುದಾದ ಮುಜುಗರವನ್ನು ತಪ್ಪಿಸಿಕೊಳ್ಳಲು ಬಿಜೆಪಿ ಉಪ ಸಮರದ ಹೋರಾಟದಲ್ಲಿ ಗೆಲ್ಲಬೇಕಾಗಿದ್ದು ಅನಿವಾರ್ಯವಾಗಿತ್ತು. ಇಲ್ಲವಾದಲ್ಲಿ ರಾಜ್ಯ ಸರ್ಕಾರ ಪತನದ ಜೊತೆಗೆ ಮೋದಿ-ಶಾ ಜೋಡಿಗೆ ಮತ್ತೊಮ್ಮೆ ತೀವ್ರ ಮುಖಭಂಗವಾಗಿತ್ತು. ಇಷ್ಟು ಮಾತ್ರಕ್ಕೆ ಬಿಜೆಪಿಯ ಪೀಕಲಾಟ ನಿಲ್ಲುವುದಿಲ್ಲ. ಇಷ್ಟು ದಿನ ಕಾಂಗ್ರೆಸ್ ಅನ್ನು ಕಾಡುತ್ತಿದ್ದ ಮೂಲ ಮತ್ತು ವಲಸೆ ಬಂದವರು ಎನ್ನುವ ಸಂಕಥನ ಬಿಜೆಪಿಯ ಬೆನ್ನು ಬೀಳಬಹುದು. ಆಂತರಿಕ ಭಿನ್ನಮತ ತಾರಕಕ್ಕೇರಿದರೆ ಸಹಜವಾಗಿ ಯಡಿಯೂರಪ್ಪ ಸರ್ಕಾರ ಉಳಿಯುವುದು ದುರ್ಲಭವಾಗಲಿದೆ.