“ಒಂದೇ ಪಕ್ಷದ ಸರ್ಕಾರಗಳು ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಶರವೇಗದಲ್ಲಿ ಆಗುತ್ತದೆ” ಎಂದು ಸಾರಿ ಹೇಳುತ್ತಿದ್ದ ಬಿಜೆಪಿ ನಾಯಕರು ತಮ್ಮ ಅಸಲಿ ಮುಖಗಳನ್ನು ಜಾಹೀರುಪಡಿಸಲಾರಂಭಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದರೆ ಅಧಿಕಾರದ ವ್ಯಾಪಕ ದುರ್ಬಳಕೆ ಸಾಧ್ಯ ಎಂಬುದನ್ನು ತಮ್ಮ ನೀತಿ-ನಿರ್ಧಾರದ ಮೂಲಕ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಬೀತುಪಡಿಸುತ್ತಿವೆ. ಇತ್ತೀಚಿನ ಎರಡು ಘಟನೆಗಳಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಡೆದುಕೊಂಡ ಆಧಾರದಲ್ಲಿ ಅದರ ದುರುಳ ನೀತಿಯನ್ನು ಗುರುತಿಸಬಹುದಾಗಿದೆ. ಎರಡು ತಿಂಗಳ ಹಿಂದೆ ಭಾರಿ ಪ್ರವಾಹಕ್ಕೆ ರಾಜ್ಯದ ಬಹುತೇಕ ಜಿಲ್ಲೆಗಳ ಜನರ ಬದುಕು, ವಿಶೇಷವಾಗಿ ಉತ್ತರ ಕರ್ನಾಟಕದ ಜನರ ಜೀವನ ದುಸ್ತರವಾಗಿತ್ತು. ಸಂತ್ರಸ್ತರಿಗೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರದ ಬಳಿ ಹೆಚ್ಚಿನ ಅನುದಾನ ಕೇಳಲು ಬಿಜೆಪಿಯ ನಾಯಕರು ಮುಂದಾಗಲಿಲ್ಲ. ಇದೇ ಮೊದಲ ಬಾರಿಗೆ ರಾಜ್ಯದಿಂದ 25 ಸಂಸದರು ಆಯ್ಕೆಯಾದರೂ ರಾಜ್ಯದ ಕಷ್ಟಕ್ಕೆ ಕೇಂದ್ರ ಮಿಡಿಯಬೇಕು ಎಂದು ಅವರಾರು ಆಗ್ರಹಿಸಲಿಲ್ಲ. ಆದರೆ, ಈಗ ಬಿಜೆಪಿಯ ಚುನಾವಣಾ ಗಿಮಿಕ್ ಗಳಲ್ಲಿ ಒಂದಾದ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತವಾಗುತ್ತಿರುವುದನ್ನು ಹತ್ತಿಕ್ಕಲು ಹಾಗೂ ಇಡೀ ರಾಷ್ಟ್ರದಲ್ಲಿ ಮೊದಲಿಗೆ ರಾಜ್ಯದಲ್ಲಿಯೇ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನದ ಮೂಲಕ ದೇಶಕ್ಕೆ ಮೇಲ್ಪಂಕ್ತಿ ಹಾಕಲು ಯಡಿಯೂರಪ್ಪ ಸರ್ಕಾರ ಸಿದ್ಧವಾಗಿದೆ. ಇದು ರಾಜ್ಯದ ಅಭಿವೃದ್ಧಿಯನ್ನು ಶರವೇಗದಲ್ಲಿ ಕೊಂಡೊಯ್ಯುವ ವಿಧಾನವೇ? ಯಡಿಯೂರಪ್ಪ ಸರ್ಕಾರ ರಾಜ್ಯದ ವಿವಿಧ ಕಡೆ ನಿಷೇಧಾಜ್ಞೆ ಜಾರಿಗೊಳಿಸಲು ಶಾಂತಿ, ಭದ್ರತೆಯ ನೆಪ ನೀಡಿದರೂ ಇದು ಮೋದಿ-ಶಾ ಜೋಡಿಗೆ ಉತ್ತರದಾಯಿಯಾದ ‘ಹೌದಪ್ಪ’ ಸರ್ಕಾರ ಎಂದು ಅರಿಯದಷ್ಟು ಜನರು ಮೂರ್ಖರಲ್ಲ.
ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ನಂತರ ರಾಷ್ಟ್ರದ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಭಾರಿ ಪ್ರತಿಭಟನೆ ನಡೆಸುವ ಮೂಲಕ ವಿವಿಧ ಕ್ಷೇತ್ರಗಳ ಪ್ರಮುಖರು ಹೋರಾಟದ ಸಾಗರಕ್ಕೆ ಬೆಂಬಲ ವ್ಯಕ್ತಪಡಿಸುವಂತೆ ಮಾಡಿದ್ದಾರೆ. ಈ ನಡುವೆ, ಪೌರತ್ವ ಕಾಯ್ದೆಯ ವಿರುದ್ಧ ಜನಾಭಿಪ್ರಾಯ ವ್ಯಾಪಕವಾಗುತ್ತಿದೆ ಎಂಬುದನ್ನು ಅರಿತ ಮೋದಿ ಸರ್ಕಾರವು ತನ್ನ ಪಕ್ಷದ ರಾಜ್ಯ ಸರ್ಕಾರಗಳು ಇರುವ ಕಡೆ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಸಂವಿಧಾನಾತ್ಮಕವಾಗಿ ದೊರೆತಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಮುಂದಾಗಿದೆ.
ಪೌರತ್ವ ಕಾಯ್ದೆ ವಿರೋಧಿಸಿ ಅಸ್ಸಾಂನಲ್ಲಿ ಎದ್ದ ಪ್ರತಿಭಟನೆಯ ಬಿರುಗಾಳಿಗೆ ಅಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ದೆಹಲಿಯಾ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಟ್ಟಹಾಸ ಮೆರೆಯುವ ಮೂಲಕ ಹಲವು ವಿದ್ಯಾರ್ಥಿಗಳ ಜೀವನವನ್ನೇ ಮಣ್ಣು ಪಾಲು ಮಾಡಿದ್ದಾರೆ. ಪೊಲೀಸರ ದೌರ್ಜನ್ಯದಿಂದಾಗಿ ಹಲವಾರು ವಿದ್ಯಾರ್ಥಿಗಳು ದೃಷ್ಟಿ, ಕೈ-ಕಾಲು ಕಳೆದುಕೊಂಡು ಆಸ್ಪತ್ರೆ ಸೇರಿದ್ದಾರೆ. ಇದರ ಬೆನ್ನಲ್ಲೇ ದೆಹಲಿಯ ಸೀಲಾಂಪುರ ಭಾಗದಲ್ಲಿ ಪೊಲೀಸರ ಮೇಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದೂ ಆಗಿದೆ. ಅಸ್ಸಾಂ ಹಾಗೂ ದೆಹಲಿಯಲ್ಲಿ ಹಿಂಸಾಚಾರಗಳು ಪೊಲೀಸರ ಕ್ರಿಯೆಗೆ ವ್ಯಕ್ತವಾದ ಪ್ರತಿಕ್ರಿಯೆ ಎಂಬುದು ಮೇಲ್ನೋಟಕ್ಕೆ ಬಹಿರಂಗವಾಗಿರುವ ವಿಚಾರ.
ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಬೃಹತ್ ರ‌್ಯಾಲಿಗಳು ಶಾಂತಿಯುತವಾಗಿ ನಡೆದಿವೆ. ಅಲ್ಲೆಲ್ಲೂ ಅಹಿತಕರ ಘಟನೆಗಳು ವರದಿಯಾಗಿಲ್ಲ. ಆದರೆ, ಬಿಜೆಪಿ ಆಡಳಿತದಲ್ಲಿರುವ ಕರ್ನಾಟಕ, ಗುಜರಾತ್, ಉತ್ತರ ಪ್ರದೇಶದಲ್ಲಿ ಮುಂಚಿತವಾಗಿ ನಿಷೇಧಾಜ್ಞೆ ಘೋಷಿಸುವ ಮೂಲಕ ಬಿಜೆಪಿಯು ತಪ್ಪುಗಳ ಸರಣಿಯನ್ನು ಮುಂದುವರಿಸುತ್ತಿರುವಂತಿದೆ. ಮೊದಲಿಗೆ ನಿಷೇಧಾಜ್ಞೆಯ ಮೂಲಕ ಮೂಲಭೂತ ಹಕ್ಕುಗಳನ್ನು ಕಸಿಯುವ ಸರ್ಕಾರವು ಆನಂತರ ಶಾಂತಿಗೆ ಭಂಗ ಉಂಟಾಗುತ್ತದೆ ಎಂದು ಇಂಟರ್ನೆಟ್ ಸೇವೆಗೂ ನಿರ್ಬಂಧ ವಿಧಿಸಬಹುದು. ಈಗಾಗಲೇ ಈ ನಿರ್ಧಾರವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಯಶಸ್ವಿಯಾಗಿ ಮಾಡಿರುವ ಬಿಜೆಪಿ ಸರ್ಕಾರವು ಅದೇ ಮಾದರಿಯನ್ನು ದೇಶಾದ್ಯಂತ ವಿಸ್ತರಿಸುವ ಕೆಲಸಕ್ಕೆ ಮುಂದಾಗಿದೆ. ಅಸ್ಸಾಂ ಹಾಗೂ ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಇಂಟರ್ನೆಟ್ ನಿರ್ಬಂಧಿಸಿರುವುದು ಇತ್ತೀಚಿನ ವಿದ್ಯಮಾನ. ಬಹುಮತ ಪಡೆದ ಸರ್ಕಾರವೊಂದು ತೆಗೆದುಕೊಳ್ಳುವ ನಿರ್ಧಾರಕ್ಕೆ ಭಿನ್ನಾಭಿಪ್ರಾಯ ದಾಖಲಿಸಲು ಜನರಿಗೆ ಉಳಿಯುವ ಕೊನೆಯ ಅವಕಾಶ ಶಾಂತಿಯುತ ಪ್ರತಿಭಟನೆ. ಇದಕ್ಕೂ ಅವಕಾಶ ನೀಡದೇ ಶಾಂತಿಭಂಗದ ಹೆಸರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಸರ್ಕಾರದ ನಿರ್ಧಾರವು ಹೇಡಿತನದ್ದಲ್ಲದೆ ಮತ್ತೇನು? ಅನಗತ್ಯವಾಗಿ ಪೊಲೀಸರಿಗೆ ಹೆಚ್ಚಿನ ಮನ್ನಣೆ ನೀಡುವ ಮೂಲಕ ಬಿಜೆಪಿ ಆಡಳಿತದ ಸರ್ಕಾರಗಳು ಪೊಲೀಸ್ ರಾಜ್ಯ ನಿರ್ಮಾಣಕ್ಕೆ ಮುಂದಾಗುತ್ತಿವೆಯೇ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ.
ಐತಿಹಾಸಿಕವಾಗಿ ಜನರ ಧ್ವನಿಗಳನ್ನು ಅಡಗಿಸುವ ಪ್ರಯತ್ನಗಳು ಮಣ್ಣು ಮುಕ್ಕಿರುವುದೇ ಹೆಚ್ಚು. ಈ ನಿಟ್ಟಿನಲ್ಲಿ ತನ್ನ ದೋಷಪೂರಿತ ಹಾಗೂ ರಾಷ್ಟ್ರವನ್ನು ಕಗ್ಗತ್ತಲಿಗೆ ತಳ್ಳಬಹುದಾದ ನಿರ್ಧಾರವನ್ನು ಇಮ್ಮೆಟ್ಟಿಸಲು ಜನರಿಗೆ ಸ್ವತಂತ್ರವಾಗಿ ಅಭಿಪ್ರಾಯ ದಾಖಲಿಸುವ ಅವಕಾಶ ಪ್ರಜಾಪ್ರಭುತ್ವದಲ್ಲಿ ಇರುತ್ತದೆ. ಇದಕ್ಕೆ ನಿರ್ಬಂಧ ಹೇರುವ ಸರ್ಕಾರದ ನಿಲುವು ಸಮಾಜದಲ್ಲಿ ಅಸಹನೆ ವ್ಯಾಪಕವಾಗುವಂತೆ ಮಾಡುತ್ತದೆಯೆ ವಿನಾ ಅಂತ್ಯಗೊಳ್ಳುವುದಿಲ್ಲ. ಇದಕ್ಕೆ ಬಿಜೆಪಿಯ ಸರ್ಕಾರವೇ ಆಸ್ಪದ ನೀಡುವ ಮೂಲಕ ತನ್ನ ಘೋರಿ ತೋಡಿಕೊಳ್ಳಲು ಮುಂದಾಗುತ್ತಿರುವಂತಿದೆ. “Two wrongs don’t make a right” ಎಂಬುದನ್ನು ಬಿಜೆಪಿ ಅರಿಯಬೇಕಿದೆ. ಬಹುಮತದ ಅಮಲಿನಲ್ಲಿ ತೇಲುತ್ತಿರುವ ಬಿಜೆಪಿಗೆ ತನ್ನ ತಪ್ಪುಗಳು ಅರಿವಿಗೆ ಬರುತ್ತಿಲ್ಲ. ಸಹ್ಯದ ಎಲ್ಲೆಗಳನ್ನೆಲ್ಲಾ ಮೀರಿರುವ ಮೋದಿ-ಶಾ ಜೋಡಿಗೆ ವಾಸ್ತವ ಪರಿಚಯಿಸುವ ಕೆಲಸ ಜನಾಭಿಪ್ರಾಯದ ಮೂಲಕವೇ ಆಗಬೇಕಿದೆ.