ಅಂತರಾಜ್ಯ ಯಾತ್ರಿಕರಿಗೆ ಪ್ರಯಾಣ ಮಾಡಲು ಅವಕಾಶ ನೀಡಿದ್ದಂದಿನಿಂದ ಕರ್ನಾಟಕದಲ್ಲಿ ಪತ್ತೆಯಾಗುತ್ತಿರುವ ಕರೋನಾ ಪೀಡಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಾಗಿದ್ದು, ಇಂದು 204 ಹೊಸ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು 768 ಪ್ರಕರಣಗಳು ಪತ್ತೆಯಾಗಿವೆ.
ಜೂನ್ 05 ರ ಸಂಜೆ ಕರ್ನಾಟಕದ ಆರೋಗ್ಯ ಇಲಾಖೆ ಹೊರಡಿಸಿರುವ ಮಾಧ್ಯಮ ಪ್ರಕಟಣೆಯ ಪ್ರಕಾರ ರಾಜ್ಯದಲ್ಲಿ ಇಂದು 515 ಕರೋನಾ ಪಾಸಿಟಿವ್ ಪತ್ತೆಯಾಗಿದೆ. ರಾಜ್ಯದಲ್ಲಿ ಒಂದೇ ದಿನದೊಳಗೆ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಕರಣ ದಾಖಲಾಗುವುದು ಇದೇ ಮೊದಲು. 3,088 ಸಕ್ರಿಯ ಪ್ರಕರಣಗಳಿರುವ ರಾಜ್ಯದಲ್ಲಿ ಇದುವರೆಗೂ 4,835 ಕರೋನಾ ಪಾಸಿಟಿವ್ ಕಂಡುಬಂದಿದೆ.
ಕರ್ನಾಟಕದಲ್ಲಿ 1,688 ಮಂದಿ ಕರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದು ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ. ಇದುವರೆಗೂ ರಾಜ್ಯದಲ್ಲಿ 57 ಮಂದಿ ಕರೋನಾದಿಂದಾಗಿ ಮೃತಪಟ್ಟಿದ್ದಾರೆಂದು ಆರೋಗ್ಯ ಇಲಾಖೆ ತಿಳಿಸಿದೆ. ಇಂದು ಕಂಡು ಬಂದ ಪ್ರಕರಣಗಳಲ್ಲಿ 482 ಮಂದಿ ಹೊರ ರಾಜ್ಯದಿಂದ ರಾಜ್ಯಕ್ಕೆ ಆಗಮಿಸಿದವರು ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಇನ್ನು ಭಾರತದಲ್ಲಿ 9,304 ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟು ಕರೋನಾ ಸೋಂಕಿತರ ಸಂಖ್ಯೆ 2 ಲಕ್ಷದ 27 ಸಾವಿರ ದಾಟಿದೆ. ಇದುವರೆಗೂ 1 ಲಕ್ಷದ 9 ಸಾವಿರ ಮಂದಿ ಕರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಭಾರತದಲ್ಲಿ ಕರೋನಾದಿಂದಾಗಿ ಇಂದು 260 ಮಂದಿ ಮೃತಪಟ್ಟಿದ್ದು, ಒಟ್ಟು 6348 ಮಂದಿ ಕರೋನಾದಿಂದಾಗಿಯೇ ಸಾವನ್ನಪ್ಪಿದ್ದಾರೆ.
2019 ರ ಅಂತ್ಯಕ್ಕೆ ಕಾಣಿಸಿಕೊಂಡ ಕರೋನಾ ಸೋಂಕಿಗೆ ವಿಸ್ವಾದ್ಯಂತ ಸುಮಾರು 64 ಲಕ್ಷ ಮಂದಿ ತುತ್ತಾಗಿದ್ದಾರೆ. ಸುಮಾರು 3 ಲಕ್ಷದ 83 ಸಾವಿರಕ್ಕಿಂತಲೂ ಅಧಿಕ ಮಂದಿ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದಾರೆ.