ಬರು ಬರುತ್ತಾ ರಾಯರ ಕುದುರೆ ಕತ್ತೆಯಾಯಿತು ಎನ್ನುವಂತಾಗಿದೆ ರಾಜ್ಯ ಸರ್ಕಾರದ ಪರಿಸ್ಥಿತಿ. ವಿದೇಶಗಳಿಂದ ಭಾರತಕ್ಕೆ ಬಂದವರಲ್ಲಿ ಕರೋನಾ ಸೋಂಕು ದೃಢವಾಗುತ್ತಿದ್ದಂತೆ ಹಲವು ನಿರ್ಬಂಧಗಳನ್ನು ವಿಧಿಸುವ ಮೂಲಕ ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿದ್ದಲ್ಲದೆ, ಕೇಂದ್ರ ಸರ್ಕಾರದಿಂದಲೂ ಬೇಷ್ ಎನಿಸಿಕೊಂಡಿತ್ತು ಕರ್ನಾಟಕ. ಆದರೆ, ಇದೀಗ ಕರೋನಾ ವೈರಸ್ ಸೋಂಕಿತರ ಪ್ರಮಾಣ, ಸೋಂಕು ಶಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದೆ. ಸಾಮ, ದಾನಕ್ಕೆ ಬಗ್ಗದವರ ವಿರುದ್ಧ ಭೇದ ಮತ್ತು ದಂಡದ ಅಸ್ತ್ರ ಪ್ರಯೋಗಿಸಲು ಹಿಂದೇಟು ಹಾಕುತ್ತಿದೆ. ಕಠಿಣ ನಿರ್ಧಾರಗಳನ್ನು ಕೈಗೊಳ್ಳುವಂತೆ ಪ್ರತಿಪಕ್ಷಗಳು ಒತ್ತಾಯಿಸಿ ಬೆಂಬಲ ಸೂಚಿಸಿದರೂ ಆಡಳಿತ ಪಕ್ಷ ಮಾತ್ರ ಅಂಥಾದ್ದೇನೂ ಆಗುವುದಿಲ್ಲ ಎಂಬ ಉಡಾಫೆ ಧೋರಣೆಯೊಂದಿಗೆ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.
ಹೌದು, ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಕರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ ಒಂದು ಜಿಲ್ಲೆಯಲ್ಲಿ ಕರೋನಾ ಸೋಂಕು ತಗುಲಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸುಮಾರು 27 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ನೂರಕ್ಕೂ ಹೆಚ್ಚು ಮಂದಿ ಶಂಕಿತರಿದ್ದಾರೆ. ಹೀಗಿರುವಾಗ ಕರೋನಾ ಸೋಂಕು ವಿಶ್ವದ ಇತರೆ ರಾಷ್ಟ್ರಗಳಲ್ಲಿ ಹಬ್ಬಿದ ವೇಗ ಮತ್ತು ಮಾದರಿಯನ್ನು ಗಮನದಲ್ಲಿಟ್ಟುಕೊಂಡಾದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಕಠಿಣ ನಿರ್ಭಂಧ ವಿಧಿಸುವಲ್ಲಿ ವಿಫಲವಾಗಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಒಂಬತ್ತು ಜಿಲ್ಲೆಗಳಿಗೆ ಸೀಮಿತವಾಗಿ ಮಾತ್ರ ಘೋಷಿಸಿರುವ ಲಾಕ್ ಡೌನ್.
ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಕರ್ನಾಟಕದಲ್ಲಿ ಆ ರಾಜ್ಯಗಳಷ್ಟು ವ್ಯಾಪಕವಾಗಿ ಇಲ್ಲದೇ ಇದ್ದರೂ ಸೋಂಕು ಪೀಡಿತರ ಸಂಖ್ಯೆ ದಿನಕಳೆದಂತೆ ಏರುಮುಖದಲ್ಲೇ ಸಾಗುತ್ತಿದೆ. ನೆರೆಯ ರಾಜ್ಯಗಳಲ್ಲದೆ ದೇಶದ ಬಹುತೇಕ ರಾಜ್ಯಗಳಲ್ಲಿ ಕರೋನಾ ಸೋಂಕು ಹಬ್ಬಿದ್ದು, ನೆರೆಯ ಮಹಾರಾಷ್ಟ್ರ, ಕೇರಳ ಸೇರಿದಂತೆ 14 ರಾಜ್ಯಗಳಲ್ಲಿ ಸಂಪೂರ್ಣ ಲೌಕ್ ಡೌನ್ ಘೋಷಿಸಲಾಗಿದೆ. ಕರ್ನಾಟಕಕ್ಕಿಂತ ಕಡಿಮೆ ಅಪಾಯಕಾರಿಯಾಗಿರವವ ರಾಜ್ಯಗಳಲ್ಲೂ ಸಂಪೂರ್ಣ ಲೌಕ್ ಡೌನ್ ಘೋಷಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಕರೋನಾ ಸೋಂಕು ಕಾಣಿಸಿಕೊಂಡಿರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಡಗು, ಚಿಕ್ಕಬಳ್ಳಾಪುರ, ಕಲಬುರ್ಗಿ, ಧಾರವಾಡ, ಮಂಗಳೂರು, ಬೆಳಗಾವಿ ಜಿಲ್ಲೆಗಳಲ್ಲಿ ಮಾತ್ರ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.

ಲಾಕ್ ಡೌನ್ ಘೋಷಿಸಲು ಇತರೆ ಜಿಲ್ಲೆಗಳಲ್ಲೂ ಸೋಂಕು ಕಾಣಿಸಿಕೊಳ್ಳಬೇಕೇ?
ಕರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ವಿಧಾನಸಭೆ ಅಧಿವೇಶನವನ್ನು ಸೋಮವಾರವೇ ಅಂತ್ಯಗೊಳಿಸಿ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದರೂ ಸರ್ಕಾರ ಮಾತ್ರ ಕೇಳುತ್ತಿಲ್ಲ. ಚೀನಾ, ಇಟಲಿ, ಸ್ಪೇನ್, ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕರೋನಾ ಯಾವ ರೀತಿ ಹಾವಳಿ ಮಾಡಿದೆ ಎಂದು ಗೊತ್ತಿದ್ದರೂ ಸರ್ಕಾರ ಲಾಕ್ ಡೌನ್ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮನಸ್ಸು ಮಾಡುತ್ತಿಲ್ಲ. ಹಾಗಿದ್ದರೆ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಬೇಕಾದರೆ ಆ ಜಿಲ್ಲೆಗಳಿಗೂ ಕರೋನಾ ಹಬ್ಬಿ ರಾಜ್ಯದಲ್ಲೂ ಮರಣ ಮೃದಂಗ ಬಾರಿಸಬೇಕೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಅಷ್ಟೇ ಅಲ್ಲ, ಕರೋನಾ ಸೋಂಕು ಕಾಣಿಸಿಕೊಂಡಿರುವ ಜಿಲ್ಲೆಗಳಲ್ಲಿ ಘೋಷಿಸಿರುವ ಲಾಕ್ ಡೌನ್ ಆದೇಶವೂ ಅಷ್ಟೊಂದು ಕಠಿಣವಾಗಿಲ್ಲ. ಕರ್ಫ್ಯೂ ಮಾದರಿ ಲಾಕ್ ಡೌನ್ ಎಂದು ಹೇಳಲಾಗುತ್ತಿದೆಯಾದರೂ ನಿಷೇದಾಜ್ಞೆ ಹೊರತುಪಡಿಸಿ ಜನರ ಓಡಾಟಕ್ಕೆ ಕಠಿಣ ನಿರ್ಬಂಧ ಹೇರಿಲ್ಲ. ಹೀಗಾಗಿ ಈ ಆದೇಶಕ್ಕೆ ಯಾವ ರೀತಿ ಜನ ಸ್ಪಂದಿಸುತ್ತಾರೆ ಎಂದು ಕಾದು ನೋಡಬೇಕು. ಏಕೆಂದರೆ, ಕರೋನಾ ಸೋಂಕು ಗಾಳಿಯಲ್ಲಿದ್ದರೆ ಅದರ ಆಯಸ್ಸು ಆರರಿಂದ ಎಂಟು ಗಂಟೆ ಮಾತ್ರ ಎಂಬ ಕಾರಣಕ್ಕೆ ಸೋಂಕು ಹರಡದಂತೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂಗೆ ಮನವಿ ಮಾಡಿದರೆ ಅದರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಜನರ ಆರೋಗ್ಯಕ್ಕಿಂತ ಅವರ ಮಾತು ತಾವೇಕೆ ಕೇಳಬೇಕು ಎಂಬ ರೀತಿಯಲ್ಲಿ ಕೆಲವರು ವರ್ತಿಸಿದರು. ಇನ್ನು ಕೆಲವರು ಪ್ರಧಾನಿಯವರು ಚಪ್ಪಾಳೆ, ಗಂಟೆ ಬಾರಿಸುವ ಮೂಲಕ ಕರೋನಾ ಭೀತಿಯ ನಡುವೆಯೂ ಜನರ ಸೇವೆಗೆ ನಿಂತವರನ್ನು ಪ್ರೋತ್ಸಾಹಿಸಿ ಎಂದು ಕರೆ ನೀಡಿದರೆ ಗುಪು ಗುಂಪಾಗಿ ಸಂಭ್ರಮಾಚರಣೆ ರೀತಿಯಲ್ಲಿ ಆ ಕೆಲಸ ಮಾಡಿ ಪ್ರಧಾನಿ ಆದೇಶ ಉಲ್ಲಂಘಿಸಿದರು. ಹೀಗಾಗಿ ಕಾನೂನು ಇರುವುದೇ ಉಲ್ಲಂಘಿಸಲು ಎಂಬಂತಿರುವ ಈ ಜನರ ಮಧ್ಯೆ ಕಠಿಣ ನಿಯಮಗಳು ಮತ್ತು ಅವುಗಳನ್ನು ಅಷ್ಟೇ ಕಠಿಣವಾಗಿ ಜಾರಿಗೊಳಿಸದಿದ್ದರೆ ಪ್ರಯೋಜನವಾದರೂ ಏನು?

ಸಂಪೂರ್ಣ ಲಾಕ್ ಡೌನ್ ಇದ್ದಾಗ ಜನ ಹೇಗಿರಬೇಕು?
ಸಂಪೂರ್ಣ ಲಾಕ್ ಡೌನ್ ಘೋಷಿಸಿರುವ ಜಿಲ್ಲೆಗಳಲ್ಲಿ ನಿಷೇದಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಕರೋನಾ ಜಾಗೃತಿ ಮತ್ತಿತರೆ ಆರೋಗ್ಯ ಸಂಬಂಧಿ ಕಾರ್ಯಕ್ರಮ ಹೊರತುಪಡಿಸಿ ಬೇರೆ ಎಲ್ಲೂ 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಆಹಾರ, ಪಡಿತರ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣುಗಳ ಅಂಗಡಿ ಹೊರತುಪಡಿಸಿ ಬೇರೆ ಯಾವುದೇ ಅಂಗಡಿಗಳು, ವಾಣಿಜ್ಯ ಮಳಿಗೆಗಳು, ಕಚೇರಿಗಳು, ವರ್ಕ್ ಶಾಪ್ ಗಳು, ಗೋದಾಮುಗಳು ಇರುವುದಿಲ್ಲ. ಔಷಧ, ವೈದ್ಯಕೀಯ ಸಲಕರಣೆಗಳು, ಇಂಧನ, ಕೃಷಿ ಪರಿಕರಗಳ ಕೈಗಾರಿಕೆಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಕೈಗಾರಿಕೆ, ಕಾರ್ಖಾನೆಗಳು ಬಂದ್ ಆಗಲಿವೆ. ದೇವಸ್ಥಾನ, ಮಸೀದಿ, ಚರ್ಚ್ ಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ, ಪೂಜೆ, ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಹಬ್ಬಗಳು ಸೇರಿದಂತೆ ಯಾವುದೇ ರೀತಿಯ ಧಾರ್ಮಿಕ ಚಟುವಟಿಕೆಗಳಿಗೆ ಜನ ಗುಂಪಾಗಿ ಸೇರುವಂತಿಲ್ಲ. ಐಟಿ, ಬಿಟಿ ಕ್ಷೇತ್ರಗಳಲ್ಲಿ ತುರ್ತು ಮತ್ತು ಅಗತ್ಯ ಸೇವೆಗಳ ವಿಭಾಗ ಹೊರತುಪಡಿಸಿ ಇತರೆ ಎಲ್ಲಾ ವಿಭಾಗಗಳಲ್ಲೂ ವರ್ಕ್ ಫ್ರಂ ಹೋಮ್ ಕಡ್ಡಾಯ. ಅಂತಾರಾಜ್ಯ, ಅಂತರ್ ಜಿಲ್ಲಾ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತ. ಅಗತ್ಯ ವಸ್ತುಗಳ ಸಾಗಣೆ ಹೊರತುಪಡಿಸಿ ಬೇರೆ ಯಾವುದಕ್ಕೂ ಖಾಸಗಿ ಸಾರಿಗೆ ವ್ಯವಸ್ಥೆಯನ್ನೂ ಬಳಸುವಂತಿಲ್ಲ. ಓಲಾ, ಉಬರ್, ಟ್ಯಾಕ್ಸಿಗಳು, ಆಟೋರಿಕ್ಷಾಗಳು ಸೇರಿದಂತೆ ಯಾವುದೇ ಬಾಡಿಗೆ ವಾಹನಗಳ ಸೇವೆ ಇರುವುದಿಲ್ಲ. ಸರ್ಕಾರ ಅಧಿಸೂಚಿತ ಆಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸರ್ಕಾರಿ ಸೇವೆಗಳಲ್ಲಿ ತೊಡಗಿರುವ ಕಚೇರಿಗಳು ಬಂದ್ ಆಗಿರುತ್ತವೆ.
ಹಾಗೆಂದು ಜನರ ಓಡಾಟಕ್ಕೆ ಅವಕಾಶವಿದೆ ಎಂದು ದ್ವಿಚಕ್ರ ವಾಹನವನ್ನೋ, ಕಾರು ಮತ್ತಿತರೆ ಎಲ್ಎಂವಿಗಳನ್ನು ತೆಗೆದುಕೊಂಡು ಒಂದು ಸುತ್ತು ಓಡಾಡಿಕೊಂಡು ಬರೋಣ ಎಂದರೆ ಪೊಲೀಸರು ನಿಮ್ಮ ವಿರುದ್ಧ ಕ್ರಮ ಜರುಗಿಸುವುದು ಖಂಡಿತ. ಇನ್ನು ಕರೋನಾ ಸೋಂಕು ಕಾಣಿಸಿಕೊಂಡ ಮೇಲೆ ವಿದೇಶದಿಂದ ಬಂದಿರುವ ಎಲ್ಲರೂ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕು. ಈ ಆದೇಶ ಉಲ್ಲಂಘಿಸಿ ಯಾರಾದರೂ ಹೊರಬಂದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಸರ್ಕಾರಿ ಕ್ವಾರಂಟೈನ್ ನಲ್ಲಿ ಇಡಲಾಗುತ್ತದೆ.
ಲಾಕ್ ಡೌನ್ ಆದರೆ ಏನೇನು ಸಿಗುತ್ತದೆ?
ಆಹಾರ, ಪಡಿತರ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣುಗಳ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳು, ಪೆಟ್ರೋಲ್ ಬಂಕ್, ಗ್ಯಾಸ್, ಅಡುಗೆ ಅನಿಲ, ತೈಲ ಏಜನ್ಸಿಗಳು ಸೇರಿದಂತೆ ಪೂರಕ ಗೋದಾಮುಗಳು, ಎಲ್ಲಾ ರೀತಿಯ ಸರಕು ಸಾಗಣೆ ವಾಹನಗಳು, ಆಸ್ಪತ್ರೆ, ಕ್ಲಿನಿಕ್, ಔಷಧ ಅಂಗಡಿ, ಕನ್ನಡಕದ ಅಂಗಡಿ, ಡಯಾಗ್ನಾಸ್ಟಿಕ್ ಸೆಂಟರ್ ಮತ್ತಿತರ ಆರೋಗ್ಯ ಮತ್ತು ವೈದ್ಯಕೀಯ ಸಂಬಂಧಿ ಮಳಿಗೆ, ಗೋದಾಮು, ಕಾರ್ಖಾನೆಗಳು, ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳು, ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯತ್ ರಾಜ್ ಸಂಸ್ಥೆಗಳು, ಅಂಚೆ ಸೇವೆಗಳು, ಅಗತ್ಯ ಸರ್ಕಾರಿ ಸೇವೆಗಳು, ವಿದ್ಯುತ್, ನೀರು, ಪೌರಾಡಳಿತ ಸೇವೆಗಳು, ಬ್ಯಾಂಕ್ ಟೆಲ್ಲರ್ ಸರ್ವೀಸಸ್, ಎಟಿಎಂ, ಟೆಲಿಕಾಂ, ಇಂಟರ್ ನೆಟ್ ಮತ್ತು ಕೇಬಲ್ ಸೇವೆಗಳು, ಇ-ವಾಣಿಜ್ಯ ಸರಕು ಮತ್ತು ಸೇವೆಗಳ ಹೋಮ್ ಡೆಲಿವರ್ ವ್ಯವಸ್ಥೆ, ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಸೇವೆ, ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯುತ್ತಿರುವ ಕ್ಯಾಂಟೀನ್ ಗಳು, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು, ಖಾಸಗಿ ಸೆಕ್ಯೂರಿಟಿ ಸೇವೆ ಸೇರಿದಂತೆ ಎಲ್ಲಾ ರೀತಿಯ ಸೆಕ್ಯೂರಿಟಿ ವ್ಯವಸ್ಥೆ, ಕಂಟೈನರ್ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಮತ್ತಿತರ ಪೂರಕ ವ್ಯವಸ್ಥೆಗಳು, ಆಸ್ಪತ್ರೆಯಿಂದ ಮನೆಗೆ ಮತ್ತು ಮನೆಯಿಂದ ಆಸ್ಪತ್ರೆಗೆ ಜನರ ಓಡಾಟ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಿಂದ ಮನೆಗೆ ತೆರಳಲು ವಾಹನ ವ್ಯವಸ್ಥೆ, ಔಷಧ, ಮಾಸ್ಕ್ ಮತ್ತಿತರೆ ಕರೋನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದ ಪರಿಕರಗಳನ್ನು ಉತ್ಪಾದಿಸುವ ಖಾಸಗಿ ಕ್ಷೇತ್ರಗಳು, ನಿರಂತರವಾಗಿ ನಡೆಯುವ ಉತ್ಪಾದನಾ ಘಟಕಗಳು ಇರುತ್ತವೆ.