ಕೊರೋನಾ ವೈರಸ್ ಎಂಬ ಹೆಮ್ಮಾರಿ ವಿಶ್ವವ್ಯಾಪಿ ತನ್ನ ಅಟ್ಟಹಾಸ ಮುಂದುವರಿಸಿಕೊಂಡು ಮುನ್ನುಗ್ಗುತ್ತಲೇ ಇದೆ. ಸದ್ಯಕ್ಕೆ ಪ್ರಪಂಚದಾದ್ಯಂತ ಸಾವಿನ ಸಂಖ್ಯೆ 5984 ಆಗಿದೆ. ಅಮೆರಿಕದಲ್ಲಿ ಕರೋನಾ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಬರೋಬ್ಬರಿ 3046 ಮಂದಿ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಕರೋನಾ ದಾಳಿಗೆ ಗಢಗಢನೆ ನಡುಗುವಂತಾಗಿದೆ. 60 ಮಂದಿ ಪ್ರಾಣವನ್ನೇ ಬಿಟ್ಟಿದ್ದಾರೆ. ಭಾನುವಾರ ಒಂದೇ ದಿನದಲ್ಲಿ 103ಕ್ಕೂ ಹೆಚ್ಚು ಕೇಸ್‌ಗಳು ಬೆಳಕಿಗೆ ಬಂದಿವೆ. ಅಷ್ಟೇ ವೇಗವಾಗಿ ಕೆಲಸ ಮಾಡಲು ಶುರು ಮಾಡಿರುವ ಅಮೆರಿಕ ಬರೋಬ್ಬರಿ 5 ಸಾವಿರ ಕೋಟಿ ರೂಪಾಯಿ ಫಂಡ್ ಒಗಿಸಿದೆ. ತನ್ನ ದೇಶದ ಜನರ ಜೀವ ಉಳಿಸುವ ಉದ್ದೇಶದಿಂದ ಪ್ರತಿಯೊಂದು ಆಸ್ಪತ್ರೆಗಳಲ್ಲೂ ತಪಾಸಣಾ ಕಿಟ್ ಹೊಂದಿರಬೇಕು ಎಂದು ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗಿಯಾಗಿದ್ದ ಸಭೆಯಲ್ಲಿ ನಾಲ್ವರ ಪೈಕಿ ಮೂವರಿಗೆ ಕರೋನಾ ಸೋಂಕು ಪತ್ತೆಯಾಗಿದ್ದು, ವೈಟ್‌ಹೌಸ್ ಸೇರಿದಂತೆ ಇಡೀ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಕರೆ ಕೊಟ್ಟಿರುವ ಡೊನಾಲ್ಡ್ ಟ್ರಂಪ್, ಎಷ್ಟು ಜನರಿಗೆ ಸಾಧ್ಯವೋ ಅಷ್ಟು ಜನರನ್ನು ತಪಾಸಣೆ ಮಾಡಿ, ಕರೋನಾ ವೈರಸ್ ಹರಡದಂತೆ ಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ಕರೆ ಕೊಟ್ಟಿದ್ದಾರೆ.
ಭಾರತ ಸರ್ಕಾರ ಕೂಡ ಕರೋನಾ ವೈರಸ್ ತಡೆಯಲು ಕ್ರಮ ಕೈಗೊಂಡಿದೆ. ಎಲ್ಲಾ ರಾಜ್ಯಗಳಿಗೂ ಸೂಚನೆ ಕೊಟ್ಟಿರುವ ಕೇಂದ್ರ ಸರ್ಕಾರ, ಆಯಾ ರಾಜ್ಯ ಸರ್ಕಾರವೇ ಕರೋನಾ ನಿಯಂತ್ರಣಕ್ಕೆ ನಿರ್ಧಾರ ತೆಗೆದುಕೊಳ್ಳಲು ನಿರ್ದೇಶನ ನೀಡಿದೆ. ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ಕಳುಹಿಸಿರುವ ಕೇಂದ್ರ ಗೃಹ ಸಚಿವಾಲಯದ ವಿಕೋಪ ನಿರ್ವಹಣಾ ವಿಭಾಗ, ಕೋವಿಡ್-19 ಸಾಂಕ್ರಾಮಿಕ ಪಿಡುಗು, ವಿಶ್ವವ್ಯಾಪಿ ಹಬ್ಬಿದೆ. ಭಾರತದಲ್ಲಿ ನಿಯಂತ್ರಿಸಲು ಹಣ ಸದ್ಬಳಕೆಗೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ರಾಜ್ಯ ವಿಕೋಪ ನಿರ್ವಹಣಾ ನಿಧಿ (SDRF) ಹಣವನ್ನು ಬಳಸಲು ಸೂಚನೆ ಕಳುಹಿಸಿದೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೊಟ್ಟಿರುವ ಮಾರ್ಗಸೂಚಿ ಇದಾಗಿದೆ.
- ಕರೋನಾ ವೈರಸ್‌ನಿಂದ ಮೃತಪಟ್ಟ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ಪರಿಹಾರ
- ಕರೋನಾ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು
- ರಕ್ತ ಮಾದರಿ ಸಂಗ್ರಹ, ಮನೆಯಲ್ಲಿ ನಿಗಾ ವಹಿಸುವುದು, ಸ್ಕ್ರೀನಿಂಗ್ ಬಗ್ಗೆ ರಾಜ್ಯ ಕಾರ್ಯಕಾರಿ ಸಮಿತಿ ನಿರ್ಧಾರ
- ಸೋಂಕಿತರ ನಿಗಾ ಕೇಂದ್ರಗಳನ್ನ 30 ದಿನದಲ್ಲಿ ಮಾಡಬೇಕು
- ನಿಗಾ ಕೇಂದ್ರದಲ್ಲಿ ಎಷ್ಟು ಸೋಂಕಿತರು ಇರಬೇಕೆಂದು ರಾಜ್ಯ ಕಾರ್ಯಕಾರಿ ಸಮಿತಿ ನಿರ್ಧರಿಸಲಿ
- ಈ ವರ್ಷದ SDRF ನಿಧಿಯಿಂದ ಶೇಕಡ 10 ರಷ್ಟು ಬಳಕೆ ಮಾಡಿ ತಪಾಸಣೆ ಮತ್ತು ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕ ಪತ್ತೆಗೆ ರಾಷ್ಟೀಯ ಆರೋಗ್ಯ ಮಿಷನ್ ನಿಧಿ ಬಳಸಿ
- ಹೆಚ್ಚುವರಿ ಲ್ಯಾಬ್ ತೆರೆಯಲು, ಸ್ವಯಂ ರಕ್ಷಣಾ ಕವಚ ಖರೀದಿಗೆ ರಾಜ್ಯ ಸರ್ಕಾರದ ನಿಧಿ ಹಾಗೂ SDRF ನಿಧಿ ಬಳಸಿ ವೈದ್ಯರು, ಪೊಲೀಸರು, ಕಾರ್ಪೊರೇಷನ್ ಅಧಿಕಾರಿಗಳು, ಅಗ್ನಿ ಶಾಮಕ ಸಿಬ್ಬಂದಿಗೆ ಪಿಪಿ ಕಿಟ್ ವಿತರಿಸಿ
- ಥರ್ಮಲ್ ಸ್ಕ್ಯಾನರ್, ವೆಂಟಿಲೇಟರ್, ಗಾಳಿ ಶುದ್ಧೀಕರಣ ಯಂತ್ರ ಖರೀದಿಸಿ.

ಕರೋನಾ ಮೊದಲಿಗೆ ಕಾಣಿಸಿಕೊಂಡಿದ್ದು ಕಮ್ಯುನಿಸ್ಟ್ ದೇಶ ಚೀನಾದಲ್ಲಿ. ಇಲ್ಲೀವರೆಗೂ ಚೀನಾದಲ್ಲಿ 80,849 ಮಂದಿಗೆ ಕರೋನಾ ವೈರಸ್ ಸೋಂಕು ಕಾಣಿಸಿಕೊಂಡರೂ ಇದೀಗ ಸಂಪೂರ್ಣ ನಿಯಂತ್ರಣಕ್ಕೆ ತರುವಲ್ಲಿ ಚೀನಾ ಸರ್ಕಾರ ಸಫಲವಾಗಿದೆ. ಕರೋನಾ ವೈರಸ್ ದಾಳಿಗೆ ಇಡೀ ವಿಶ್ವದಲ್ಲೇ ಹೆಚ್ಚು ಅಂದರೆ ಬರೋಬ್ಬರಿ 3,199 ಮಂದಿ ಪ್ರಣ ಕಳೆದುಕೊಂಡಿದ್ದಾರೆ. ಆದ್ರೆ ಇಂದು ಹೊಸದಾಗಿ ಪತ್ತೆಯಾಗಿರುವ ಕರೋನಾ ವೈರಸ್ ಸೋಂಕಿತರು ಕೇವಲ 25 ಮಂದಿ ಮಾತ್ರ. ಅಂದರೆ ಚೀನಾ ಸರ್ಕಾರ ಕರೋನಾ ತಡೆಗೆ ಯುದ್ಧದ ರೀತಿಯಲ್ಲಿ ಕೆಲಸ ಮಾಡಿದೆ ಎನ್ನುವುದನ್ನು ಇಡೀ ವಿಶ್ವವೇ ಒಪ್ಪಿಕೊಳ್ಳುತ್ತಿದೆ. ಯಾವುದಕ್ಕೂ ಕೊರತೆ ಬಾರದಂತೆ ಕೆಲಸ ಮಾಡಿದ ಚೀನಾ ಸರ್ಕಾರ, ಇದೀ ಕರೋನಾ ಪೀಡಿತ ಪ್ರದೇಶವನ್ನು ಸಾರ್ವಜನಿಕರಿಂದ ಮುಕ್ತಿ ಪಡೆಯುವಂತೆ ಸಂಪರ್ಕವನ್ನೇ ಸ್ಥಗಿತಿ ಮಾಡಿತ್ತು. ರಾಷ್ಟ್ರೀಯ ಹೆದ್ದಾರಿಗಳನ್ನೇ ಬಂದ್ ಮಾಡುವ ಮೂಲಕ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನರು ಸಂಚಾರ ಮಾಡದಂತೆ ನಿರ್ಬಂಧ ವಿಧಿಸಿತ್ತು. ಕೇವಲ 10 ದಿನಗಳಲ್ಲಿ 1 ಸಾವಿರ ಹಾಸಿಗೆವುಳ್ಳ 2 ಹೈಟೆಕ್ ಆಸ್ಪತ್ರೆಯನ್ನೇ ನಿರ್ಮಾಣ ಮಾಡಿತ್ತು.
ಕರೋನಾ ಹುಟ್ಟಿದ ನಾಡು ಚೀನಾದಲ್ಲಿ ಕರೋನಾ ವೈಸ್ ನಶಿಸುತ್ತಾ ಸಾಗಿದೆ. ಆದರೆ ವಿಶ್ವದಲ್ಲಿ ವೈರಸ್ ದಾಳಿ ಶರವೇಗದಲ್ಲಿ ಸಾಗಿದೆ. ಆಕ್ರಮಣಕಾರಿ ನೀತಿ ಅನುರಿಸಿದ ಚೀನಾದಿಂದ ವೈರಸ್ ಮಂಗಮಾಯವಾಗುತ್ತಿದೆ. ಈಗಾಗಲೇ ಸೋಂಕು ತಗುಲಿದ ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಡುವ ಮೂಲಕ ವಿಶ್ವವೇ ನಿಬ್ಬೆರಗಾಗುವಂತೆ ಮಾಡುತ್ತಿದೆ. ಯಾವ ಪ್ರದೇಶದಲ್ಲಿ ಸೋಂಕು ಹರಡಿದೆಯೋ ಆ ಪ್ರದೇಶದಿಂದ ಮತ್ತೊಂದು ಭಾಗಕ್ಕೆ ಸೋಂಕು ಹರಡದಂತೆ ತಡೆಯಲು ಚೀನಾ ಕೈಗೊಂಡ ಕಾರ್ಯ ವಿಶ್ವಕ್ಕೆ ಮಾದರಿಯಾಗಿದೆ. ಪೀಡಿತ ಪ್ರದೇಶದ ಜನ ಹೊರಕ್ಕೆ ಹೋಗುವಂತಿಲ್ಲ, ಪೀಡಿತ ಪ್ರದೇಶಕ್ಕೂ ಯಾರು ಬರುವಂತಿಲ್ಲ ಎನ್ನುವ ನೀತಿ ರೂಪಿಸಿದ ಸರ್ಕಾರ ಅದರಲ್ಲಿ ಯಶಸ್ಸು ಸಾಧಿಸಿದೆ. ವುಹಾನ್ ಪ್ರಾಂತ್ಯದಲ್ಲಿ ಸೋಂಕಿತರಿಗೆ ಒಂದು ಕಡೆ ಚಿಕಿತ್ಸೆ ಕೊಡುತ್ತಿದ್ದರೆ, ಮತ್ತೊಂದು ಕಡೆ ಎಲ್ಲರನ್ನೂ ತಪಾಸಣೆ ಒಳಪಡಿಸಲಾಯ್ತು. ಜನರಿಗೆ ಕಡ್ಡಾಯ ಗೃಹ ಬಂಧನ, ಶಂಕಿತರಿಗೆ ಪ್ರತ್ಯೇಕ ಸ್ಥಳಗಳಲ್ಲಿ ದಿಗ್ಬಂಧನ ಹಾಕಲಾಯ್ತು. ತಪ್ಪಿಸಿಕೊಳ್ಳಲು ಪ್ರಯತ್ನಿಸುವವರ ನಿಯಂತ್ರಿಸಲು ಸೇನೆಯನ್ನೇ ನಿಯೋಜಿಸಿತ್ತು. ಅಂದಾಜು 5 ಕೋಟಿ ಜನರಿಗೆ ಗೃಹ ಬಂಧನ ವಿಧಿಸಿತ್ತು. ಸೋಂಕಿತರು ಎನ್ನುವುದು ಗೊತ್ತಾಗುತ್ತಿದ್ದಂತೆ ಸಾಮಾನ್ಯ ಜನರ ಸಂಪರ್ಕವನ್ನು ನಿಷೇಧಿಸಿತು. ತಪಾಸಣೆ ಹಾಗು ಚಿಕಿತ್ಸೆಗಾಗಿ 1800 ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿತ್ತು, ಅದರಲ್ಲಿ ಯಶಸ್ಸನ್ನೂ ಸಾಧಿಸಿತು.

ಕರೋನಾ ವೈರಸ್ ತಡೆಗೆ ಚೀನಾ ತೆಗೆದುಕೊಂಡು ಕ್ರಮಗಳು ವಿಶ್ವದ ಎದುರು ಸಾಕ್ಷಿಯಾಗಿ ನಿಂತಿದ್ದರೂ ನಮ್ಮ ಭಾರತ ಸರ್ಕಾರ, ಕರೋನಾ ಬಗ್ಗೆ ಬೇರೆ ದೇಶಗಳಷ್ಟು ಕಟಿಬದ್ಧವಾಗಿ ನಿಂತಿದೆಯಾ ಎನ್ನುವ ಅನುಮಾನ ಮೂಡುವಂತೆ ನಡೆದುಕೊಳ್ಳುತ್ತಿದೆ. ಅಮೆರಿಕ 5 ಸಾವಿರ ಕೋಟಿ ಹಣವನ್ನು ಕರೋನಾ ಮಟ್ಟ ಹಾಕಲು ಬಳಸುತ್ತಿದೆ. ಚೀನಾ ಹಣ ಬಳಕೆ ಹಾಗು ಕಠಿಣ ನಿರ್ಧಾರಗಳನ್ನು ಬಳಸಿ ಕರೋನಾ ಎಂಬ ಮಹಾಮಾರಿಯನ್ನು ತನ್ನ ದೇಶದಿಂದ ಹೊರಗೆ ಹಾಕುವಲ್ಲಿ ಯಶಸ್ಸು ಸಾಧಿಸಿದೆ. ನಮ್ಮ ಭಾರತ ಸರ್ಕಾರ, ಈಗಾಗಲೇ ರಾಜ್ಯಗಳ ಬಳಿ ಇರುವ ರಾಜ್ಯ ಪ್ರಕೃತಿ ವಿಕೋಪ ನಿಧಿಯಿಂದ ಅದೂ ಕೂಡ ಶೇಕಡ 10 ರಷ್ಟು ಮೀರದಂತೆ ವೆಚ್ಚ ಮಾಡಲು ಅನುಮತಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನಾನು ಹೋಳಿ ಮಾಡಲ್ಲ ಕರೋನಾ ಬರುತ್ತೆ ಅಂತ ದೂರ ಉಳಿದ್ರು. ಆದರೆ ರಾಷ್ಟ್ರರಾಜಧಾನಿ ನವದೆಹಲಿ ಸೇರಿದಂತೆ ದೇಶಾದ್ಯಂತ ಜನ ಬಣ್ಣದೋಕುಳಿ ನಡೆಸಿದ್ರು.
ಇನ್ನು ಕೂಡ ರಾಜ್ಯದಿಂದ ರಾಜ್ಯಕ್ಕೆ ದೇಶದಿಂದ ವಿದೇಶಕ್ಕೆ ಸಂಚಾರ ನಡೆಯುತ್ತಲೇ ಇದೆ. ಕೇಂದ್ರ ಸರ್ಕಾರ ಇಲ್ಲೀವರೆಗೂ ತೆಗೆದುಕೊಂಡಿರುವ ಪ್ರಮುಖ ನಿರ್ಧಾರ ಎಂದರೆ ವಿದೇಶಿ ಪ್ರವಾಸಿಗರ ವೀಸ ರದ್ದು ಮಾಡಿರುವುದು. ಅದನ್ನೂ ಬಿಟ್ಟರೆ ಬೇರೆ ಯಾವುದೇ ಕ್ರಮಗಳು ಕಣ್ಣಿಗೆ ಕಾಣಿಸುವಂತಿಲ್ಲ. ರಾಜ್ಯ ಸರ್ಕಾರಗಳು ಸಹ, ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ನಿಲುವು ತೆಗೆದುಕೊಳ್ಳುವ ಅಗತ್ಯ ಎದ್ದು ಕಾಣುತ್ತಿದೆ. 1 ವಾರ ಕಾಲ ಸಾರ್ವಜನಿಕ ವಲಯ ಬಂದ್ ಎಂದು ಕೆಲವೊಂದು ನಿಯಮಗಳನ್ನು ರೂಪಿಸಿದ್ದರೂ ಅಲ್ಲಲ್ಲಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿವೆ. ಹೋಟೆಲ್‌ಗಳು ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿವೆ. ಪ್ರವಾಸಿ ಕೇಂದ್ರಗಳು ಇನ್ನೂ ಕೆಲವು ಬಂದ್ ಆಗಿಲ್ಲ. ಇದೆಲ್ಲವನ್ನೂ ನಿಯಂತ್ರಿಸದೆ ಕರೋನಾ ಮಾರಿ ಓಡಿಸಲು ಸಾಧ್ಯವಿಲ್ಲ ಎನಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಸಾರ್ಕ್ ದೇಶಗಳ ಜೊತೆ ಚರ್ಚೆ ನಡೆಸಿದ್ದಾರೆ. ಇದರಿಂದ ಏನೆಲ್ಲಾ ಅನುಕೂಲ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.