ಕರ್ನಾಟಕ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳು ಕರೋನಾ ನಿಯಂತ್ರಿಸಲು ವಿಫಲವಾಗಿದೆ ಹಾಗೂ ಕರೋನಾ ಹೆಸರಿನಲ್ಲಿ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಕುರಿತಂತೆ ಉಭಯ ಸರ್ಕಾರಗಳಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.
ಕರೋನಾ ಸೋಂಕು ಅನಿಯಂತ್ರಿತವಾಗಿ ಹರಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗೇಡಿತನ ಕಾರಣ. ಪ್ರಧಾನಿ ಅವರು ಮೊದಲು ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ, ಕ್ಯಾಂಡಲ್ ಹಚ್ಚಿ ಎಂದರು. ಮಹಾಭಾರತ ಯುದ್ಧ ಮುಗಿದದ್ದು 18 ದಿನದಲ್ಲಿ, ನಾವು 21 ದಿನದಲ್ಲಿ ಕರೋನಾ ಗೆಲ್ತೇವೆ ಎಂದರು. ಏನಾಯ್ತು? ದೇಶದಲ್ಲಿ ಕರೋನಾ ಇಷ್ಟೊಂದು ವೇಗವಾಗಿ ಹರಡುತ್ತಿದೆಯೆಂದರೆ ಶೀಘ್ರದಲ್ಲಿಯೇ ನಾವು ಅಮೆರಿಕವನ್ನು ಹಿಂದಕ್ಕೆ ಹಾಕಿ ಮೊದಲ ಸ್ಥಾನಕ್ಕೆ ಏರಲಿದ್ದೇವೆ. ದೇಶದಲ್ಲಿ ಈಗಾಗಲೇ ಕರೋನಾ ಸೋಂಕು 55,62,663 ಜನರಿಗೆ ತಗುಲಿದೆ. 89,000 ಜನ ಸಾವಿಗೀಡಾಗಿದ್ದಾರೆ. ಇದಕ್ಕೆ ಯಾರು ಹೊಣೆ? ಫೆಬ್ರವರಿ 24-25 ರಂದು ಲಕ್ಷಾಂತರ ಜನರನ್ನು ಸೇರಿಸಿ ಭಾರತದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಮಾಡಲಾಯಿತು. ನಂತರ ತಬ್ಲಿಗಿ ಸಮಾವೇಶಕ್ಕೂ ಅನುಮತಿ ನೀಡಲಾಯಿತು. ಜನವರಿಯಲ್ಲೇ ದೇಶದಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದ್ದರೂ ಕೇಂದ್ರ ಈ ಮಟ್ಟಿನ ಬೇಜವಾಬ್ದಾರಿ ನಡವಳಿಕೆ ಪ್ರದರ್ಶಿಸಿದ್ದು ಏಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರೋನಾ ಸೋಂಕಿನಿಂದಾಗಿ ಅತಿ ಹೆಚ್ಚು ಸರಾಸರಿ ಮರಣ ಪ್ರಮಾಣ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯ 7ನೇ ಸ್ಥಾನದಲ್ಲಿದೆ. ದೊಡ್ಡ ರಾಜ್ಯಗಳಲ್ಲಿ ಮಹಾರಾಷ್ಟ್ರದ ನಂತರ ಎರಡನೇ ಸ್ಥಾನದಲ್ಲಿದೆ. ಹತ್ತು ಲಕ್ಷ ಜನರಲ್ಲಿ ಮಹಾರಾಷ್ಟ್ರದಲ್ಲಿ 286 ಜನ, ರಾಜ್ಯದಲ್ಲಿ 129 ಜನ ಸತ್ತಿದ್ದಾರೆ. ಸರಾಸರಿ ಮರಣದಲ್ಲಿ ಕರ್ನಾಟಕದ ಸ್ಥಿತಿ ಆತಂಕಕಾರಿಯಾಗಿದೆ. ಹತ್ತು ಲಕ್ಷ ಜನರಲ್ಲಿ ತೆಲಂಗಾಣದಲ್ಲಿ 29, ತಮಿಳುನಾಡುನಲ್ಲಿ 121, ಪಂಜಾಬ್ನಲ್ಲಿ 99, ಆಂಧ್ರದಲ್ಲಿ 107, ಕೇರಳದಲ್ಲಿ 15 ಜನ ಸತ್ತಿದ್ದರೆ ರಾಜ್ಯದಲ್ಲಿ 129 ಜನ ಸತ್ತಿದ್ದಾರೆ. ಇದನ್ನು ನಾವು ಸಾಧನೆ ಅನ್ನಬೇಕಾ? ಎಂದು ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ, ಕೋವಿಡ್ ಟೆಸ್ಟ್ ನಲ್ಲಿ ಕರ್ನಾಟಕ 7ನೇ ಸ್ಥಾನದಲ್ಲಿದೆ. ದೆಹಲಿ, ಜಮ್ಮು ಕಾಶ್ಮೀರ, ತಮಿಳುನಾಡು, ತೆಲಂಗಾಣ ರಾಜ್ಯಗಳು ನಮಗಿಂತ ಮೇಲಿವೆ. ದೆಹಲಿಯಲ್ಲಿ 10 ಲಕ್ಷ ಜನರಲ್ಲಿ 1,48,783 ಜನರಿಗೆ ಮತ್ತು ಆಂಧ್ರದಲ್ಲಿ 1,01,532 ಜನರ ಪರೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿ ಕೇವಲ 67,328 ಜನರ ಪರೀಕ್ಷೆ ಮಾಡಲಾಗಿದೆ. ಮೊದಲು ಲಾಕ್ ಡೌನ್ ಘೋಷಿಸಿದಾಗ ರಾಜ್ಯದಲ್ಲಿ 37 ಕರೋನಾ ಸೋಂಕಿನ ಪ್ರಕರಣಗಳಿತ್ತು, ಒಂದು ಸಾವು ಸಂಭವಿಸಿತ್ತು. ಈಗ 5,26,876 ಸೋಂಕಿನ ಪ್ರಕರಣಗಳು ಮತ್ತು 8,145 ಸಾವು ಸಂಭವಿಸಿವೆ. ಇದಕ್ಕೆ ಪೂರ್ವಸಿದ್ದತೆ ಇಲ್ಲದ ರಾಜ್ಯ ಸರ್ಕಾರದ ವೈಫಲ್ಯ ಕಾರಣ ಎಂದಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ತ್ವರಿತಗತಿಯಲ್ಲಿ ವೈದ್ಯರ ನೇಮಕ, ಆಕ್ಸಿಜನ್ ವ್ಯವಸ್ಥೆ ಇರುವ ಬೆಡ್ ಗಳು, ವೆಂಟಿಲೇಟರ್ ಗಳು, ಸಾಕಷ್ಟು ಟೆಸ್ಟ್ ಗಳು, ಔಷಧಗಳು, ಆಂಬುಲೆನ್ಸ್ಗಳು, ಲ್ಯಾಬ್ ಗಳ ಸ್ಥಾಪನೆ ಆಗಬೇಕಾಗಿತ್ತು. ಸರ್ಕಾರ ಏನನ್ನೂ ಮಾಡದೆ ಕೈಚೆಲ್ಲಿ ಕೂತುಬಿಟ್ಟಿತ್ತು. ಕರೋನಾದಂತಹ ಸಂಕಟದ ಕಾಲವನ್ನು ಭ್ರಷ್ಟಾಚಾರ ಎಸಗಲು ದುರ್ಬಳಕೆ ಮಾಡಿಕೊಂಡಿರಿ. ಕೃಷಿ ಉತ್ಪನ್ನಗಳ ತಯಾರಿಕೆ ಕಂಪೆನಿಯಿಂದ ಪಿಪಿಇ ಕಿಟ್, ಸ್ಟೀಲ್ ಫರ್ನಿಚರ್ಸ್ ಕಂಪೆನಿಯಿಂದ ಪಲ್ಸ್ ಆಕ್ಸಿಮೀಟರ್, ಸಾಫ್ಟ್ವೇರ್ ಕಂಪೆನಿಯಿಂದ ವೈದ್ಯಕೀಯ ಉಪಕರಣಗಳ ಖರೀದಿ. ಎಲ್ 1 ಕಂಪೆನಿ ಬಿಟ್ಟು ಗುಜರಾತಿನ ಕಂಪೆನಿಗಳಿಗೆ ಗ್ಲುಕೋಸ್ ಸರಬರಾಜು ಮಾಡುವ ಆದೇಶ ನೀಡಿದ್ದೀರಿ. 2200 ರೂ ನೀಡಿ ಪಲ್ಸ್ ಆಕ್ಸಿಮೀಟರ್ ಅನ್ನು ಮಾರ್ಚ್ನಲ್ಲಿ ಖರೀದಿಸಿದ್ದೀರಿ. ಜುಲೈನಲ್ಲಿ 1100 ರೂ ನೀಡಿದ್ದೀರಿ. ಪ್ರತಿಯೊಂದರಲ್ಲೂ ನಿರ್ಲಜ್ಜ ಭ್ರಷ್ಟಾಚಾರ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳಪೆ ಸ್ಯಾನಿಟೈಸರ್, ಕಳಪೆ ಪಿಪಿಈ ಕಿಟ್ ಸರಬರಾಜು ಮಾಡಿದ್ದೀರಿ. ವೈದ್ಯರು ಪ್ರತಿಭಟನೆ ಮಾಡಿದ ಮೇಲೆ ವಾಪಸ್ ಪಡೆದಿರಿ. ಕೊರೋನ ವಾರಿಯರ್ಸ್ ಎಂದು ಹೂ ಮಳೆಗರೆದು ಅವರಿಗೆ ಕಳಪೆ ಆರೋಗ್ಯ ರಕ್ಷಕ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದೀರಿ ಎಂದರೆ ನಿಮ್ಮನ್ನು ಏನೆಂದು ಕರೆಯಬೇಕು? ನಾನು ಮಾಹಿತಿ ಕೋರಿ ಸುಮಾರು 20 ಪತ್ರಗಳನ್ನು ಮುಖ್ಯಮಂತ್ರಿಯವರಿಗೆ ಬರೆದಿದ್ದೆ, ಒಂದಕ್ಕೂ ಉತ್ತರ ನೀಡಿಲ್ಲ. ಎಲ್ಲ ಕಡತಗಳನ್ನು ಮುಖ್ಯಮಂತ್ರಿಗಳು ಇಟ್ಟುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮುಖ್ಯಮಂತ್ರಿಗಳೇ, ನೀವು ಪ್ರಾಮಾಣಿಕರಾಗಿದ್ದರೆ ಮಾಹಿತಿ ನೀಡಲು ನಿಮಗ್ಯಾಕೆ ಭಯ ಸ್ವಾಮಿ? ಎಂದು ತಮ್ಮ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆ ಮೂಲಕ ಪ್ರಶ್ನಿಸಿದ್ದಾರೆ.
ಬೇರೆ ಬೇರೆ ಇಲಾಖೆಗಳು ಎಷ್ಟು ಖರ್ಚು ಮಾಡಿವೆ? ಎಷ್ಟು ಸಾಮಗ್ರಿಗಳಿಗೆ ಹಣ ಬಿಡುಗಡೆಯಾಗಿದೆ? ಎಷ್ಟು ಬಾಕಿ ಇದೆ? ಎಷ್ಟು ಮೊತ್ತದ ಸಾಮಗ್ರಿಗಳ ಸರಬರಾಜಿಗೆ ಒಪ್ಪಂದ ಮಾಡಿಕೊಂಡಿದ್ದೀರಿ? ಯಾವಾಗ ಸರಬರಾಜು ಮಾಡಿದರು? ಹಣವನ್ನು ಯಾವಾಗ ಬಿಡುಗಡೆ ಮಾಡಿದ್ದೀರಿ? ಯಾವ ಪ್ರಶ್ನೆಗಳಿಗೂ ಸರ್ಕಾರದ ಬಳಿ ಉತ್ತರ ಇಲ್ಲ. ಮುಖ್ಯ ಕಾರ್ಯದರ್ಶಿಗಳು ನಡೆಸಿದ್ದ ಏಪ್ರಿಲ್ ಮೇ ತಿಂಗಳ ಪರಿಶೀಲನೆಯಲ್ಲಿ ಆರೋಗ್ಯ ಇಲಾಖೆ ರೂ.3328 ಕೋಟಿ ಖರ್ಚಾಗಿದೆ ಎಂದು ತಿಳಿಸಿದ್ದಾರೆ. ಆದರೆ ಜುಲೈ ತಿಂಗಳ ವರೆಗಿನ ಪ್ರಗತಿ ಪರಿಶೀಲನೆಯನ್ನು ಆಗಸ್ಟ್ 20 ರಂದು ಮಾಡಿದ್ದಾರೆ. ಅದರಲ್ಲಿ 1708.42 ಕೋಟಿ ಖರ್ಚು ಎಂದು ಹೇಳಲಾಗಿದೆ. ಏನಿದರ ಮರ್ಮ?
ನಾವು ಪ್ರಶ್ನಿಸದಿದ್ದರೆ ಲೆಕ್ಕ ಬೆಳೆಯುತ್ತಾ ಹೋಗಿ ಹಣ ಬಿಡುಗಡೆಯಾಗುತ್ತಿತ್ತು. ಪ್ರಶ್ನಿಸಿದ ಕೂಡಲೆ ಲೆಕ್ಕ ಕಡಿಮೆಯಾಯಿತು. ಏನಿದರ ಒಳ ಮರ್ಮ? ಒಪ್ಪಂದ ಮಾಡಿಕೊಂಡಂತೆ ಒಂದು ದಿನ ಹಣ ಬಿಡುಗಡೆಯಾಗಲೇ ಬೇಕು, ಇಲ್ಲಾ ನೀವು ಖರೀದಿ ಆದೇಶಗಳನ್ನು ರದ್ದು ಮಾಡಬೇಕು. ಈ ಲೆಕ್ಕದಲ್ಲಿ ಜಿಲ್ಲಾಡಳಿತಗಳು ಮಾಡಿರುವ ಖರ್ಚಿನ ಲೆಕ್ಕ ಇಲ್ಲ. ಬಿಬಿಎಂಪಿಯ ಖರೀದಿ, ಸರಬರಾಜು ಕಮಿಟ್ಮೆಂಟ್ ಗಳ ಮಾಹಿತಿ ಇಲ್ಲ. ಇದೆಲ್ಲ ಲೆಕ್ಕ ಹಾಕಿದರೆ ಜುಲೈನಲ್ಲಿ ನಾವು ಆರೋಪಿಸಿದ್ದ 2000 ಕೋಟಿ ರೂಪಾಯಿ ಮೀರಿದ ಹಗರಣವಾಗುತ್ತದೆ.
ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಲಾಕ್ಡೌನ್ ನಷ್ಟ ಪರಿಹಾರದ ಪ್ಯಾಕೇಜ್ಗಳು ಈ ವರೆಗೂ ಅರ್ಹರನ್ನು ತಲುಪಿಲ್ಲ. ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಘೋಷಿಸಿದ್ದ ರೂ.137 ಕೋಟಿ ಹಣದಲ್ಲಿ 69,670 ಬೆಳಗಾರರಿಗೆ ರೂ.57 ಕೋಟಿ ಹಣ ಮಾತ್ರ ಖರ್ಚು ಮಾಡಲಾಗಿದೆ. ಉಳಿದ ರೈತರಿಗೆ ಪರಿಹಾರ ಯಾವಾಗ?
ಹೂ ಬೆಳೆಗಾರರಿಗೆ ಹೆಕ್ಟೇರ್ಗೆ ತಲಾ ರೂ.25,000 ದಂತೆ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು. ಈ ವರೆಗೆ ಕೇವಲ 22,728 ರೈತರಿಗೆ ಮಾತ್ರ ಈ ಹಣ ತಲುಪಿದೆ. ಸವಿತಾ ಸಮಾಜದ 2.30 ಲಕ್ಷ ಜನರಿಗೆ ಪರಿಹಾರದ ಘೋಷಣೆ ಮಾಡಿ 52,966 ಮಂದಿಗೆ ಮಾತ್ರ ಪರಿಹಾರ ನೀಡಲಾಗಿದೆ. 7.75 ಲಕ್ಷ ಮಂದಿ ಆಟೋ, ಟ್ಯಾಕ್ಸಿ ಚಾಲಕರಿಗೆ ತಲಾ ರೂ.5,000 ದಂತೆ ಪರಿಹಾರದ ಭರವಸೆ ನೀಡಿದ್ದ ಸರ್ಕಾರ ಈ ವರೆಗೆ ಕೇವಲ 2,14,119 ಜನರಿಗೆ ಮಾತ್ರ ಪರಿಹಾರದ ಹಣ ನೀಡಿದೆ. ಹೀಗೆ ಕಟ್ಟಡ ಕಾರ್ಮಿಕರು, ಮೆಕ್ಕೆಜೋಳ ಬೆಳೆಗಾರರಿಗೆ, ಆಶಾ ಕಾರ್ಯಕರ್ತೆಯರಿಗೆ ಘೋಷಿಸಲಾಗಿದ್ದ ಪರಿಹಾರದ ಹಣವಿನ್ನು ಗಗನ ಕುಸುಮವಾಗಿಯೇ ಇದೆ.
ಕರೋನಾ ಪರಿಸ್ಥಿತಿ ನಿರ್ವಹಣೆ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಿ, ಸರ್ಕಾರ ತಪ್ಪಿತಸ್ಥರನ್ನು ಪತ್ತೆಗಚ್ಚುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ. ಭ್ರಷ್ಟಾಚಾರ ನಡೆದಿಲ್ಲ ಅಂತಾದರೆ ಸರ್ಕಾರಕ್ಕೆ ತನಿಖೆ ಎದುರಿಸಲು ಏಕೆ ಭಯ? ಎಂದು ಸರ್ಕಾರವನ್ನು ಜಾಡಿಸಿದ್ದಾರೆ.