ಕರೋನಾ ವೈರಸ್ ಇಂದು ಇಡೀ ವಿಶ್ವಕ್ಕೆ ಮಾರಕವಾಗಿ ಕಾಡುತ್ತಿದೆ ನಿಜ. ಚೀನಾದಲ್ಲಿ ಆರಂಭವಾದ ಈ ವೈರಸ್ ಭೂಮಿಯ ಈ ತುದಿಯಿಂದ ಆ ತುದಿಯವರೆಗೂ ವ್ಯಾಪಿಸಿದೆ. ಸುಮಾರು 40,000 ಜನರನ್ನು ಬಲಿ ಪಡೆದಿದೆ. ಇನ್ನೂ ಬಲಿ ಪಡೆಯುವುದಿದೆ. ಭಾರತದಲ್ಲೂ ಕರೋನಾ ಪ್ರಹಾರಕ್ಕೆ ಮೃತಪಟ್ಟವರ ಸಂಖ್ಯೆ 50 ದಾಟಿದ್ದು ಸುಮಾರು 2,000ಕ್ಕೂ ಅಧಿಕ ಜನರಿಗೆ ಈ ಸೋಂಕು ತಗುಲಿದೆ.
ಚೀನಾ, ಅಮೆರಿಕಾ, ಇಟಲಿ, ಸ್ಪೇನ್ ನಂತಹ ಮುಂದುವರೆದ ರಾಷ್ಟ್ರಗಳೇ ಇದೀಗ ಕರೋನಾ ವೈರಸ್ ಹಾವಳಿಗೆ ಬೆಚ್ಚಿ ಬಿದ್ದಿವೆ, ಸಾವಿರಾರು ಸಂಖ್ಯೆಯಲ್ಲಿ ಮುನುಷ್ಯರ ಪ್ರಾಣ ಬಲಿ ನೀಡಿವೆ ಎಂದರೆ ಭಾರತದಂತಹ ತೃತೀಯ ಜಗತ್ತಿನ ರಾಷ್ಟ್ರ ಕರೋನಾ ಪ್ರಹಾರವನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ 21 ದಿನಗಳ ಲಾಕ್‌ಡೌನ್ ಅತ್ಯಂತ ಅವಶ್ಯಕ ಮತ್ತು ಅಗತ್ಯ ಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ.
ಈ 21 ದಿನಗಳ ಲಾಕ್‌ಡೌನ್‌ನಲ್ಲೂ ಸರ್ಕಾರ ಅಗತ್ಯ ದಿನಬಳಕೆ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಜನ ಲಾಕ್‌ಡೌನ್ ನಡುವೆಯೂ ತರಕಾರಿ, ಹಾಲು, ಔಷಧ ಸೇರಿದಂತೆ ಅವಶ್ಯಕ ವಸ್ತುಗಳ ಖರೀದಿಗೆ ನಿರ್ದಿಷ್ಟ ಸಮಯದಲ್ಲಿ ಮುಕ್ತವಾಗಿ ಮನೆಯಿಂದ ಹೊರಬರಲು ಅವಕಾಶ ನೀಡಿದೆ. ಆದರೆ, ಮದ್ಯಪಾನಕ್ಕೆ ಏಕಿಲ್ಲ ಈ ಮುಕ್ತತೆ? ಮದ್ಯಪಾನ ಅಗತ್ಯ ವಸ್ತು ಅಲ್ಲವೇ? ಎಂಬುದು ಇದೀಗ ಎಲ್ಲರನ್ನೂ ಕಾಡುತ್ತಿರುವ ಪ್ರಮುಖ ಪ್ರಶ್ನೆ.
ಈ ಮೂಲಕ ನಾವು ಮದ್ಯಪಾನವನ್ನು ಬೆಂಬಲಿಸುತ್ತಿಲ್ಲ, ಬದಲಾಗಿ ಏಕಾಏಕಿ ಮದ್ಯಪಾನ ಸರಬರಾಜನ್ನು ನಿಲ್ಲಿಸಿದರೆ ಮದ್ಯ ವ್ಯಸನಿಗಳ ಮಾನಸಿಕ ಸ್ಥಿಮಿತತೆ ಮೇಲೆ ಎಂತಹಾ ಪರಿಣಾಮ ಉಂಟಾಗಬಹುದು? ಎಂಬು ಸತ್ಯಾಂಶವನ್ನು ದಾಟಿಸುವುದಷ್ಟೇ ಈ ಲೇಖನದ ಆಶಯ.
ಮದ್ಯಪಾನ ಅಗತ್ಯ ವಸ್ತುವೇ?
ಅಬಕಾರಿ ಇಲಾಖೆಯೇ ನೀಡುವ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಕನಿಷ್ಟ ಶೇ. 65ರಷ್ಟು ಜನ ಪ್ರತಿನಿತ್ಯ ಮದ್ಯಪಾನ ಸೇವನೆ ಮಾಡುತ್ತಿದ್ದಾರೆ. ಈ ಪೈಕಿ ಶೇ. 12ಕ್ಕಿಂತ ಅಧಿಕ ಜನ ಮದ್ಯ ವ್ಯಸನಿಗಳಾಗಿ ಬದಲಾಗಿದ್ದಾರೆ. ರಾಜ್ಯ ಸರ್ಕಾರ ಒಂದು ವರ್ಷಕ್ಕೆ ಅಬಕಾರಿ ಇಲಾಖೆಯಿಂದಲೇ ಅಂದಾಜು 56,000 ಕೋಟಿಗೂ ಅಧಿಕ ಲಾಭ ಗಳಿಸುತ್ತಿದೆ ಎಂದರೆ ರಾಜ್ಯದಲ್ಲಿ ಮದ್ಯ ವ್ಯಸನಿಗಳ ಸಂಖ್ಯೆ ಎಷ್ಟಿರಬಹುದು ಎಂದು ನೀವು ಊಹಿಸಬಹುದು.
“ಒಮ್ಮೆ ಮದ್ಯಪಾನಕ್ಕೆ ವ್ಯಸನಿಯಾದರೆ ಆತ ಈ ವ್ಯಸನದಿಂದ ಹಂತ ಹಂತವಾಗಿಯೇ ಹೊರಬರಬೇಕೆ ವಿನಃ ಒಮ್ಮೆಲೆ ಹೊರ ಬರಲು ಸಾಧ್ಯವಿಲ್ಲ. ಹೀಗಾಗಿ ಲಾಕ್‌ಡೌನ್ ಹೆಸರಿನಲ್ಲಿ ಒಮ್ಮೆಲೆ ಎಲ್ಲಾ ಮದ್ಯದ ಅಂಗಡಿಗಳನ್ನು ಬಂದ್ ಮಾಡಿದರೆ ಮದ್ಯ ವ್ಯಸನಿಗಳ ಮಾನಸಿಕ ಮತ್ತು ದೈಹಿಕ ಸ್ಥಿಮಿತತೆ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತದೆ. ಇದು ಅವರ ಸಾವಿಗೂ ಕಾರಣವಾಗಬಹುದು ಅಥವಾ ಅವರನ್ನು ಆತ್ಮಹತ್ಯೆಗೆ ಪ್ರಚೋಧಿಸಬಹುದು” ಎಂದು ವಿಶ್ಲೇಷಿಸುತ್ತಾರೆ ನಾಡಿನ ಪ್ರಸಿದ್ಧ ಮನೋ ಶಾಸ್ತ್ರಜ್ಞೆ ಸಂಧ್ಯಾ ಕಾವೇರಿ.
ಇವರ ವಿಶ್ಲೇಷಣೆಗೆ ಪೂರಕವಾಗಿದೆ ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾದವರ ಸಂಖ್ಯೆ.

ಕರೋನಾ ಸಾವಿಗಿಂತ ಕುಡುಕರ ಆತ್ಮಹತ್ಯೆ ದುಪ್ಪಟ್ಟು!
ಲಾಕ್‌ಡೌನ್‌ನಿಂದಾಗಿ ಕಳೆದ ಒಂದು ವಾರದಿಂದ ಎಲ್ಲಿಯೂ ಮದ್ಯಪಾನ ಲಭ್ಯವಾಗುತ್ತಿಲ್ಲ. ಪರಿಣಾಮ ಎಣ್ಣೆ ಸಿಗದ ಹಿನ್ನೆಲೆ, ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತರುವ ಕುಡುಕರ ಸಂಖ್ಯೆ ಇಂದು ಕರೋನಾ ಸಾವಿನ ಸಂಖ್ಯೆಯನ್ನೂ ಮೀರಿಸಿದೆ. ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಕರೋನಾ ಸೋಂಕಿಗೆ 3 ಜನ ಬಲಿಯಾಗಿದ್ದರೆ, ಮದ್ಯ ಸಿಗದ ಕಾರಣ 6 ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮದ್ಯಕ್ಕಾಗಿ ಆತ್ಮಹತ್ಯೆ ಮಾಡಿಕೊಂಡವರ ಪಟ್ಟಿ ಮತ್ತು ಹಿನ್ನೆಲೆ ಇಲ್ಲಿದೆ:
1. ರಾಮನಗರ ಜಿಲ್ಲೆಯ ಹುಲಿಕಲ್ ನಲ್ಲಿ ರಮೇಶ್ ಎಂಬಾತ ಕುಡಿಯಲು ಎಣ್ಣೆ ಸಿಗದ ಹಿನ್ನಲೆ ಮಂಗಳವಾರ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಕೂಲಿ ಕೆಲಸ ಮಾಡಿಕೊಂಡಿದ್ದು, ಕಳೆದ ಕೆಲ ದಿನಗಳಿಂದ ಮದ್ಯ ಸಿಗದೆ ಖಿನ್ನತೆಗೂ ಒಳಗಾಗಿದ್ದ ಎನ್ನಲಾಗಿದೆ.
2.ಕೋಲಾರದ ಕೆಜಿಎಫ್ ತಾಲೂಕಿನ ಕೆ.ಡಿ.ಹಳ್ಳಿಯಲ್ಲಿ ಆನಂದ್ ಎಂಬಾತ ಮದ್ಯ ಸಿಗದ ಹಿನ್ನೆಲೆ, ಸೋಮವಾರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ತಪ್ಪದೇ ಮದ್ಯ ಕುಡಿಯುತ್ತಿದ್ದ ಎಂದು ತಿಳಿದು ಬಂದಿದೆ.
3. ಹುಬ್ಬಳ್ಳಿಯಲ್ಲಿ ಮದ್ಯವ್ಯಸನಿಯಾಗಿದ್ದ ಉಮೇಶ್ ಹಡಪದ ಎಂಬಾತ ಕುಡಿಯಲು ಎಣ್ಣೆ ಸಿಗದ ಹಿನ್ನೆಲೆ, ಬೇಸರಗೊಂಡು ನೇಣಿಗೆ ಶರಣಾಗಿದ್ದಾನೆ. ಈತ ವಾಚ್
ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕುಡಿತದ ಚಟ ಅಂಟಿಸಿಕೊಂಡಿದ್ದ ಈತ ಕಳೆದ ಮೂರು ವರ್ಷಗಳಿಂದ ತನ್ನ ಕುಟುಂಬಸ್ಥರಿಂದ ದೂರ ಉಳಿದಿದ್ದ.
3. ಹುಬ್ಬಳ್ಳಿಯಲ್ಲಿ ಮದ್ಯವ್ಯಸನಿಯಾಗಿದ್ದ ಉಮೇಶ್ ಹಡಪದ ಎಂಬಾತ ಕುಡಿಯಲು ಎಣ್ಣೆ ಸಿಗದ ಹಿನ್ನೆಲೆ, ಬೇಸರಗೊಂಡು ನೇಣಿಗೆ ಶರಣಾಗಿದ್ದಾನೆ. ಈತ ವಾಚ್
ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕುಡಿತದ ಚಟ ಅಂಟಿಸಿಕೊಂಡಿದ್ದ ಈತ ಕಳೆದ ಮೂರು ವರ್ಷಗಳಿಂದ ತನ್ನ ಕುಟುಂಬಸ್ಥರಿಂದ ದೂರ ಉಳಿದಿದ್ದ.
5. ಹಾಸನದಲ್ಲಿ ಮೊಗಣ್ಣ ಎಂಬ ವ್ಯಕ್ತಿ ಕುಡಿಯಲು ಮದ್ಯ ಸಿಗದ ಹಿನ್ನೆಲೆ, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಸನ ಹೊರವಲಯದ ಕಸ್ತೂರವಳ್ಳಿ ಗೇಟ್
ಬಳಿ ಈ ಘಟನೆ ನಡೆದಿದೆ.
ಲಾಕ್ ಡೌನ್ ಆದೇಶ ಜಾರಿಯಾದ ಬಳಿಕ ತೆಲಂಗಾಣದಲ್ಲಿ ಮದ್ಯ ಸಿಗದಿದ್ದಕ್ಕೆ 10 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ದೇಶದಾದ್ಯಂತ ಈ ಸಂಖ್ಯೆ ಅಂದಾಜು 100 ನ್ನು ದಾಟಿದೆ ಎನ್ನಲಾಗುತ್ತಿದೆ.
ಆಲ್ಕೋಹಾಲ್ ನಲ್ಲಿರುವ ರಾಸಾಯನಿಕಗಳು ಮಾನವನ ನರ ಮಂಡಲಕ್ಕೆ ನೇರವಾಗಿ ಪರಿಣಾಮ ಬೀರುವುದರಿಂದ ವ್ಯಸನಿಗಳಾಗುತ್ತಾರೆ. ಈ ರಾಸಾಯನಿಕಗಳನ್ನು ಮೆದುಳು ಸ್ವೀಕರಿಸುವುದನ್ನು ನಿಲ್ಲಿಸಿದರೆ, ನರಮಂಡಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆಗ ಮದ್ಯ ವ್ಯಸನಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಎನ್ನುತ್ತಾರೆ ವೈದ್ಯರು.
ಹೀಗಾಗಿ ಮದ್ಯಪಾನ ವ್ಯಸನಿಗಳ ದೃಷ್ಟಿಕೋನದಲ್ಲಿ ಮದ್ಯಪಾನ ಎಂಬುದು ದಿನನಿತ್ಯದ ಅಗತ್ಯ ವಸ್ತು. ಮದ್ಯ ಸೇವಿಸುವುದು ತಪ್ಪು ಎಂದಾದರೆ ಸರ್ಕಾರ 70 ವರ್ಷಗಳ ಹಿಂದೆಯೇ ಅದನ್ನು ಶಾಶ್ವತವಾಗಿ ನಿಷೇಧಿಸಬೇಕಿತ್ತು. ಅದನ್ನು ಬಿಟ್ಟು ಇಷ್ಟು ವರ್ಷ ತನ್ನದೇ ಜನರಿಗೆ ಎಣ್ಣೆಯ ರುಚಿ ತೋರಿಸಿ ಈಗ ಒಮ್ಮಿಂದೊಮ್ಮೆಲೆ ಮದ್ಯವನ್ನು ಬ್ಯಾನ್ ಮಾಡುವುದು ಎಷ್ಟು ಸರಿ? ಎಂಬುದು ಹಲವರ ಪ್ರಶ್ನೆ
ಇಂತಹ ತರ್ಕಗಳು ಅದೇನೆ ಇರಲಿ ಮದ್ಯ ಎಂಬುದು ಇಂದು ಅಗತ್ಯ ವಸ್ತಗಳ ಸಾಲಿನಲ್ಲಿದೆ ಎಂಬುದರಲ್ಲಿ ಮಾತ್ರ ಎರಡು ಮಾತಿಲ್ಲ. ಕರೋನಾ ಸಾವಿಗಿಂತ ಅಧಿಕವಾಗುತ್ತಿರುವ ಕುಡುಕರ ಆತ್ಮಹತ್ಯೆ ಪ್ರಕರಣಗಳು ಅದನ್ನು ಸಾರಿ ಸಾರಿ ಹೇಳುತ್ತಿವೆ. ಹೀಗಾಗಿ ಸರ್ಕಾರ ಶೀಘ್ರದಲ್ಲೇ ಕೇರಳ ಮಾದರಿಯಲ್ಲಿ ಮದ್ಯ ಮಾರಾಟ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಕುಡುಕರ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವುದರಲ್ಲಿ ಯಾವುದೇ ಸಂಶಯ ಇಲ್ಲ.