ರಾಜ್ಯದಲ್ಲಿ ಲಾಕ್ ಡೌನ್ ಸೀಲ್ ಡೌನ್ ನಡೆದಾಗ ಇತ್ತ ನರಗುಂದದಲ್ಲಿ ಆಪರೇಷನ್ ಜೇಡ ನಡೆದಿತ್ತು. ಜೀವ ವೈವಿಧ್ಯ ವಿಜ್ಞಾನಿ ಮಂಜುನಾಥ ನಾಯಕ ಅವರು ಒಂದು ಸಂಶೋಧನೆ ಹಾಗೂ ಸಂರಕ್ಷಣೆ ಬಗ್ಗೆ ತಿಳಿಸಿದಾಗ ಆಶ್ಚರ್ಯ ಹಾಗೂ ಖುಷಿ ಒಟ್ಟಿಗೆ ಅಯಿತು.
ಅತ್ತ ದೇಶದಲ್ಲಿ ಕೊರೊನಾ ಪ್ರಕರಣ ಜಾಸ್ತಿಯಾಗುತ್ತಲೇ ಇತ್ತು. ಇತ್ತ ಜೇಡ ರಕ್ಷಣೆಯ ಕಾರ್ಯ ನಡೆಯುತ್ತಿತ್ತು.
ದಿನಾಂಕ 08.06.2020ರಂದು ಗದಗ ಜಿಲ್ಲೆಯ ನರಗುಂದ ಪಟ್ಟಣದ ಹಳೆ ಎ.ಪಿ.ಎಂ.ಸಿ ಆವರಣದಲ್ಲಿರುವ ಜ್ಞಾನ ಮುದ್ರಾ ಶಾಲೆಯ ಶೌಚಾಲಯದಲ್ಲಿ ಕಪ್ಪು ವಿಧವೆ ಜೇಡ ಇರುವಿಕೆಯನ್ನು ಮೊಟ್ಟೆಯೊಂದಿಗೆ ದಾಖಲಿಸಲಾಗಿತ್ತು. (ಉತ್ತರ ಕರ್ನಾಟಕದಲ್ಲಿ ಈ ಪ್ರಭೇದ ಜೇಡದ ಮೊದಲ ದಾಖಲೆ). ಸಾಮಾನ್ಯವಾಗಿ ಈ ಪ್ರಭೇದದ ಜೇಡಗಳು ಮೊಟ್ಟೆ ಇಟ್ಟನಂತರ ಸರಾಸರಿ 28 ದಿನಗಳ ನಂತರ ಮರಿಗಳು ಹೊರಬರುತ್ತವೆ. ಇದೆ ಸಮಯಕ್ಕೆ ಗದಗ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿ ಸುಮಾರು ದಿನಗಳವರೆಗೆ ಬಿಸಿಲು ಬಿಳದೆ ಜಿಲ್ಲೆಯ ಉಷ್ಣತೆ 24-26 ಡಿಗ್ರಿ ಸೆಲ್ಸಿಯಸ್ಗೆ ಬದಲಾಯಿತು. ಮಳೆ ಶುರುವಾಗಿದ್ದರಿಂದ ಕಪ್ಪು ವಿಧವೆ ಜೇಡಕ್ಕೆ ಶೀಲಿಂದ್ರ ದಾಳಿಯಾಗಿ 2-3 ದಿನಗಳಲ್ಲಿ ಅದು ಅಸುನಿಗಿತು.
ಈ ಶೀಲಿಂದ್ರಕ್ಕೆ ಜೇಡ-ಶೀಲಿಂದ್ರ ಎನ್ನುತ್ತಾರೆ, ಇದು ಈ ಪ್ರಭೇದ ಜೇಡಗಳಿಗೆ ಮಳೆಗಾಲದಲ್ಲಿ ಮಾರಣಾಂತಿಕವಾಗಿದ್ದು ಮೊಟ್ಟೆ ಚೀಲಗಳಿಗೂ ಹಬ್ಬಲಾರಂಭಿಸಿ 11 ಮೊಟ್ಟೆಗಳಲ್ಲಿ ಒಂದು ಮೊಟ್ಟೆಚೀಲ ಶೀಲಿಂದ್ರ ದಾಳಿಯಿಂದ ನಾಶವಾಯಿತು. ಇನ್ನುಳಿದ 10 ಮೊಟ್ಟೆಚೀಲಗಳನ್ನು ಸಂರಕ್ಷಿಸಿ (ನಿಸರ್ಗದಲ್ಲಿ ಮಾನವ ಹಸ್ತ ಕ್ಷೇಪ ಮಾಡಕೂಡದು ಆದರೆ ಈ ಪ್ರಭೇದ ಉತ್ತರ ಕರ್ನಾಟಕ ಭಾಗದಲ್ಲಿ ವಿರಳ ಮತ್ತು ಪ್ರಥಮ ದಾಖಲೆಯಾಗಿದ್ದರಿಂದ ಪ್ರಭೇದ ಸಂರಕ್ಷಣೆ ಹಿತದೃಷ್ಟಿಯಿಂದ ಉಳಿದ ಆರೋಗ್ಯವಂತ ಮೊಟ್ಟೆಚೀಲಗಳನ್ನು ಆ ಕೊಠಡಿಯಿಂದ ಸ್ಥಳಾಂತರಿಸಲಾಯಿತು) ಕೃತಕವಾಗಿ ಅವುಗಳ ಬೆಳವಣಿಗೆಗೆ ವೈಜ್ಞಾನಿಕವಾಗಿ ಪೂರಕವಾಗುವ ಉಷ್ಣತೆಯನ್ನು ಕಲ್ಪಿಸಿದಾಗ 24 ತಾಸು ಕಳೆದ ನಂತರ 2 ಮೊಟ್ಟೆ ಚೀಲದಿಂದ ಯಶಸ್ವಿಯಾಗಿ ಜೇಡದ ಮರಿಗಳು ಹೊರಬಂದವು.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಮರಿಗಳನ್ನು ಪುನಃ ಅವುಗಳ ನೈಸರ್ಗಿಕ ಆವಸಕ್ಕೆ ಬಿಡಲಾಯಿತು (24 ತಾಸು- 60ವ್ಯಾಟ್ನ ಟಂಗಸ್ಟನ್ ಬಲ್ಬನ್ನು ನಿರಂತರವಾಗಿ ಉರಿಸಬೇಕು, ಹಾಗೆ 24 ತಾಸು ಅದನ್ನು ಗಮನಿಸಬೇಕು. ಇಂತಹ ಕೃತಕ ಪ್ರಯತ್ನ ಮಾಡಿದಾಗ 100% ಯಶಸ್ಸು ದೊರಕುವುದಿಲ್ಲ. ನನ್ನ ಪ್ರಯತ್ನದಲ್ಲಿ 20% ಯಶಸ್ಸು ದೊರಕಿದ್ದು ಸಂತತಿಯನ್ನು ಸಂರಕ್ಷಿಸಿದ ತೃಪ್ತಿ ಇದೆ. ಇನ್ನುಳಿದ 8-ಮೊಟ್ಟೆ ಚೀಲಗಳಲ್ಲಿ ಕೆಲವು ಮೊಟ್ಟೆ ಚೀಲಗಳಿಂದ ಮರಿಗಳಾಗುವ ನಿರೀಕ್ಷೆಯಿದೆ)
ಈ ಪ್ರಭೇದ ಜೇಡಗಳು ಸಾಮಾನ್ಯವಾಗಿ ಬೇಸಿಗೆಯಲ್ಲಿ ಮೊಟ್ಟೆ ಇಡುವುದರಿಂದ ಸಂತಾನಭಿವೃದ್ಧಿಗೆ ನೈಸರ್ಗಿಕವಾಗಿ ಯಾವುದೆ ಅಡತಡೆಯಾಗುವುದಿಲ್ಲ ಆದರೆ ಮಳೆಗಾಲದಲ್ಲಿ ಜೇಡ ಶೀಲಿಂದ್ರವು ಇವುಗಳಿಗೆ ಮಾರಕ ಮತ್ತು ಈ ಪ್ರಭೇದ ಜೇಡಗಳ ಮೊಟ್ಟೆಗಳಿಗೆ 28-30 ಡಿಗ್ರಿ ಸೆಲ್ಸಿಯಸ್ ಉಷ್ಟಾಂಶ ಅವಶ್ಯವಿರುತ್ತದೆ. ಕೊಠಡಿ ತಾಪಮಾನ ಮತ್ತು ವಾತವರಣದ ತಾಪಮಾನ ಎರಡು ಪ್ರಮುಖ ಆಂಶಗಳಾಗಿವೆ.ಹೆಣ್ಣಮರಿಗಳು ಮೊಟ್ಟೆಯಿಂದ ಹೊರಹೊಮ್ಮಿದ (ಮರಿಗಳು ಗಾತ್ರ 3ಮಿಮಿ)120 ದಿನಗಳ ನಂತರ ಲೈಂಗಿಕ ಪ್ರಬುದ್ಧತೆಯನ್ನು (ಗಾತ್ರ 3.81 ಸೆ.ಮಿ)ತಲುಪಿದರೆ ಗಂಡು ಮರಿಗಳು 90ದಿನಗಳ ನಂತರ ಲೈಂಗಿಕ ಪ್ರಬುದ್ಧತೆಯನ್ನು ತಲುಪುತ್ತವೆ.(ಗಾತ್ರ 1.9 ಸೆ.ಮಿ)