ಜಗದೀಶ ಶೆಟ್ಟರ್ ಹಾಗೂ ಮುಖ್ಯಮಂತ್ರಿಗಳ ಕೆಲವು ಸಭೆಗಳು ಪರಿಸರ ಪ್ರಿಯರ ನಿದ್ದೆಗೆಡಿಸಿದ್ದಂತೂ ದಿಟ. ಅದಕ್ಕೆ ಪೂರಕವೆಂಬಂತೆ ಮುಂಡರಗಿ ಹತ್ತಿರ ಅತ್ತಿಕಟ್ಟೆ ಎಂಬ ಪ್ರದೇಶಕ್ಕೆ ಮೂರು ದಿನಗಳ ಹಿಂದೆ ಕೆಲವು ಗಣಿ ಕಂಪೆನಿ ಅಧಿಕಾರಿಗಳು ಭೇಟಿ ನೀಡಿದ್ದು ಇದಕ್ಕೆ ಪುಷ್ಟಿ ನೀಡುವಂತಿದೆ. ಇವೆಲ್ಲದರ ಗಮನ ಬಂದ ತಕ್ಷಣವೇ ಸಮಾಜ ಪರಿವರ್ತನ ಸಂಸ್ಥೆಯ ಎಸ್. ಆರ್. ಹಿರೇಮಠ ಅವರು ಗದಗ್ ನ ತೋಂಟದಾರ್ಯ ಸ್ವಾಮೀಜಿ ಜೊತೆಗೆ ಒಂದು ಪತ್ರಿಕಾಗೋಷ್ಟಿ ಕರೆದು ಹೋರಾಟಗಾರರು ಒಂದಾಗಿ ಎಂಬ ಕರೆ ಕೂಡ ಕೊಟ್ಟಿದ್ದಾರೆ.
2017ರಲ್ಲಿ ಕಪ್ಪತಗುಡ್ಡಕ್ಕಾಗಿ ಬಹು ದೊಡ್ಡ ಹೋರಾಟವೇ ನಡೆಯಿತು. ಅಂದು ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಹೋರಾಟಕ್ಕೆ ಬೆಂಬಲವೂ ನೀಡಿತ್ತು. ಆದರೆ ಅದೇ ಪಕ್ಷ ಈಗ ಅಧಿಕಾರಕ್ಕೆ ಬಂದ ಕೂಡಲೇ ಗಣಿ ಧಣಿಗಳ ಜೊತೆಗೆ ಕೈ ಜೋಡಿಸಿದರೆ! ಅದು ಸರಿ ಗಣಿ ಮಂತ್ರಿಗಳು ಆನಂದ್ ಸಿಂಗ್ ಅವರೇ ಇದ್ದಾಗ ಈ ಪ್ರಶ್ನೆ ಕೇಳಲೂ ಬಾರದು.
Also Read: ಕೊನೆಗೂ ಬಂತು ಅಧಿಕೃತ ಆದೇಶ, ಕಪ್ಪತಗುಡ್ಡ ಈಗ ವನ್ಯಜೀವಿ ಧಾಮ
ಮುಖ್ಯಮಂತ್ರಿಗಳ ಇತ್ತ ಸಭೆ ನಡೆಸುವುದಕ್ಕಿಂತ ಮೊದಲೇ ಕಪ್ಪತಗುಡ್ಡದಲ್ಲಿ ಗಣಿ ಉದ್ಯಮಿಗಳು ಬಂದು ಜಾಗವನ್ನು ನೋಡಿದ್ದು ಮತ್ತು ಗುರುತುಗಳನ್ನು ಮಾಡಿದ್ದು ನೋಡಿದರೆ, ಅವರಿಗೆ ಗುಡ್ಡದಲ್ಲಿ ಗಣಿಗಾರಿಕೆ ಪರವಾನಿಗೆ ಸಿಕ್ಕಿದೆ ಎಂದರ್ಥ ಅಲ್ಲವೇ? ಈ ಪ್ರಶ್ನೆ ಸುತ್ತಮುತ್ತಲಿನ ಗ್ರಾಮಸ್ಥರನ್ನು ಕಾಡುತ್ತಿದೆ. ಅರಣ್ಯ ಅಧಿಕಾರಿಗಳನ್ನು ಕೇಳಿದರೆ ಅಲ್ಲಿ ಕೆಲವು ಖಾಸಗಿ ಭೂಮಿಯು ಇದ್ದು ಅದನ್ನು ಚೆಕ್ ಮಾಡಿರಬಹುದು, ಗಣಿಗಾರಿಕೆಗೆ ಮಾತ್ರ ಅವಕಾಶ ಕೊಟ್ಟಿಲ್ಲ ಎಂದು ಉತ್ತರಿಸಿದರು.
Also Read: ಇಷ್ಟೆಲ್ಲ ಆದ ಮೇಲೂ ಗಣಿ ಕಂಪನಿಗಳ ದಾಳದಿಂದ ದೂರ ಉಳಿದಿಲ್ಲ ಕಪ್ಪತಗುಡ್ಡ!

ಎಸ್. ಆರ್. ಹಿರೇಮಠ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು, “ಎಷ್ಟೇ ಕಷ್ಟ ಬಂದರೂ ಗಣಿ ಉದ್ಯಮಿಗಳ ಹುನ್ನಾರ ಫಲಿಸಲು ಬಿಡಲ್ಲ. ಈ ಅಮೂಲ್ಯ ಗುಡ್ಡವನ್ನು ಕಾಪಾಡುವ ಹೊಣೆ ನಮ್ಮೆಲ್ಲರದು. ಜೈವಿಕ ಸಂಪನ್ಮೂಲ ರಕ್ಷಣೆಯ ಕಾರ್ಯ ದೊಡ್ಡಮಟ್ಟದಲ್ಲಾಗಬೇಕಿದೆ. ಈಗ ಕಪ್ಪತಗುಡ್ಡಕ್ಕೆ ಮತ್ತೆ ಆಪತ್ತು ಎದುರಾಗಿದ್ದು ತಾತ್ವಿಕ ಹಂತದೆಡೆಗೆ ತಲುಪಲು ಸ್ಥಳೀಯರ ಸಹಕಾರ ಅಗತ್ಯ. ಪ್ರಕೃತಿ ಮಾತೆಯ ಸ್ವಾತಂತ್ರ್ಯ ಕಾಪಾಡಲು ನಾವೆಲ್ಲ ಜಾಗೃತರಾಗಬೇಕಾಗಿದೆ”.
ಕಪ್ಪತಗುಡ್ಡದ ಹೋರಾಟಗಾರರರಾದ ಚಂದ್ರ ಚವ್ಹಾಣ ಅವರ ಪ್ರಕಾರ, “ನಾವೆಲ್ಲ ಹೋರಾಟಗಾರರು ಈಗ ಸಜ್ಜಾಗಿದ್ದೇವೆ. ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳು ಗುಡ್ಡಕ್ಕೆ ಹಾನಿಯಾಗುವ ಯಾವುದೇ ನಿರ್ಧಾರ ತೆಗೆದುಕೊಂಡರೂ ನಮ್ಮ ಹೋರಾಟ ಶುರು. ಗದಗ್ ನ ಎಲ್ಲ ಸ್ವಾಮೀಜಿಗಳ, ಪರಿಸರ ಪ್ರಿಯರ ಹಾಗೂ ಹಿರಿಯರ ಅಭಿಪ್ರಾಯ ಸಲಹೆ ಸೂಚನೆ ಪಡೆದುಕೊಂಡು ಹೋರಾಟ ಮಾಡುವುದೆಂದು ನಿರ್ಧರಿಸಿದ್ದೇವೆ”.
Also Read: ಕಪ್ಪತಗುಡ್ಡ ವನ್ಯಜೀವಿ ಧಾಮಕ್ಕೆ ಬಂದಿದೆಯಾ ಆಪತ್ತು?
ಕಪ್ಪತಗುಡ್ಡದ ಮೇಲೆ ಕಣ್ಣೇಕೆ?
ಗದುಗಿನ ಬಿಂಕದಕಟ್ಟಿ ಗ್ರಾಮದಂಚಿನಿಂದ ಆರಂಭವಾಗುವ ಕಪ್ಪತಗುಡ್ಡವು ಮುಂಡರಗಿ ತಾಲೂಕಿನ ಶಿಂಗಟಾಲೂರಿನ ವರೆಗೆ ಚಾಚಿಕೊಂಡಿದೆ. ಈ ಗುಡ್ಡವು ಒಟ್ಟು 63 ಕಿಮಿಗಳಷ್ಟು ಉದ್ದವಿದ್ದು, 32,346.524 ಹೆಕ್ಟರ್ ನಷ್ಟು ವಿಸ್ತಾರವಾಗಿದೆ. ಕೆಂಪು ಮಿಶ್ರಿತ ಮಣ್ಣಿನಿಂದ ಕೂಡಿರುವ ಈ ಗುಡ್ಡದ ಒಡಲಲ್ಲಿ ಹೆಮಟೈಟ್, ಲಿಮೋನೈಟ್, ತಾಮ್ರ, ಕ್ಯಾಲ್ಸಿಯಂ, ಮ್ಯಾಂಗನಿಸ್ ಮತ್ತು ಚಿನ್ನ ಸೇರಿದಂತೆ ಹಲವು ಖನಿಜಗಳಿವೆ. ಇಲ್ಲಿ 300 ಕ್ಕೂ ಅಧಿಕ ಜಾತಿಯ ಔಷಧೀಯ ಸಸ್ಯಗಳಿದ್ದು ಚಿರತೆ, ಕರಡಿ, ತೋಳ, ನರಿ, ಪುನುಗ ಬೆಕ್ಕು, ಕಾಡು ಕುರಿ, ಚುಕ್ಕೆ ಜಿಂಕೆ, ಮುಳ್ಳು ಹಂದಿ, ಸಾರಂಗ ಹಾಗೂ 13 ಸಾವಿರಕ್ಕೂ ಹೆಚ್ಚು ನವಿಲುಗಳಿವೆ.
ಮುಂದೆ ಏನು?
ಕಾದು ನೋಡುವುದು ಒಂದೇ ಬಾಕಿ. ಸದ್ಯಕ್ಕಂತೂ ಏನೂ ಘೋಷಣೆಯಾಗಿಲ್ಲ. ಆದರೆ ಹೋರಾಡಲು ಜನರು ಈಗಾಗಲೇ ಸಜ್ಜಾಗಿದ್ದಾರೆ. ಮುಖ್ಯಮಂತ್ರಿಗಳು ಏನು ಹೇಳುತ್ತಾರೆ ಎಂದು ಕಾದು ನೋಡಬೇಕಿದೆ.