ಕನ್ನಡ ಸಿನಿಮಾಗೊಬ್ಬರೇ ‘ವಜ್ರಮುನಿ’  

ವಜ್ರಮುನಿ ಮತ್ತು ನಾನು ಬೆಂಗಳೂರಿನ ಎಸ್‍ಜೆ ಪಾಲಿಟೆಕ್ನಿಕ್‍ನಲ್ಲಿ ಸಿನಿಮಾಟೋಗ್ರಫಿ ವಿಭಾಗದಲ್ಲಿ ಕ್ಲಾಸ್‍ಮೇಟ್ಸ್ ಆಗಿದ್ದವರು. ಅಲ್ಲಿ ಶುರುವಾದ ನಮ್ಮ ಸ್ನೇಹ ನಾಲ್ಕು ದಶಕದವರೆಗೂ ಮುಂದುವರೆಯಿತು. ಇಬ್ಬರಿಗೂ ರಂಗಭೂಮಿ ನಂಟು ಇತ್ತು. ಆದರೆ ನನಗೆ ವಜ್ರಮುನಿ ನಾಟಕಗಳಲ್ಲಿ ನಟಿಸುವುದು ತಿಳಿದಿರಲಿಲ್ಲ. ಅದೊಂದು ಸಂಜೆ ಏಕಾಏಕಿ ಸಭಾಂಗಣವೊಂದರಲ್ಲಿ ತನ್ನ ಕಾರ್ಯಕ್ರಮವಿದೆ ಎಂದು ಹೇಳಿ ನನಗೆ ಅಚ್ಚರಿ ಮೂಡಿಸಿದ. ಏನೆಂದು ಮಾತ್ರ ಹೇಳಲಿಲ್ಲ. ನಾನು ಅಲ್ಲಿಗೆ ಹೋಗಿ ಕುಳಿತಿದ್ದರೆ, ಇವನು ರಾವಣನ ವೇಷದಲ್ಲಿ ವೇದಿಕೆ ಮೇಲೆ ಪ್ರತ್ಯಕ್ಷವಾದ! ಸ್ಟೇಜ್ ಮೇಲೆ ವಜ್ರಮುನಿ ನಟನೆ ನೋಡಿದಾಗಲೇ ಅವನೊಬ್ಬ ದೊಡ್ಡ ನಟನಾಗುತ್ತಾನೆ ಎಂದು ಊಹಿಸಿದ್ದೆ. ನನ್ನ ಊಹೆ ಸುಳ್ಳಾಗಲಿಲ್ಲ.

ಕಣಗಾಲ್ ಪ್ರಭಾರ್ ಶಾಸ್ತ್ರಿ ರಚಿಸಿದ್ದ `ಪ್ರಚಂಡ ರಾವಣ’ ನಾಟಕದ ಶೀರ್ಷಿಕೆ ಪಾತ್ರ ವಜ್ರಮುನಿ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತ್ತು. ದಿಟ್ಟ ನಿಲುವು, ಚೂಪು ನೋಟ, ಗಟ್ಟಿ ದನಿಯಿಂದ ವಜ್ರಮುನಿ ಪಾತ್ರದ ಘನತೆ ಹೆಚ್ಚಿಸಿದ್ದ. ನಾಟಕ ನೋಡಿ ಪ್ರಭಾವಿತರಾದ ಪ್ರಭಾಕರ್ ಶಾಸ್ತ್ರಿಯವರು, `ಸಾವಿರ ಮೆಟ್ಟಿಲು’ ಚಿತ್ರಕ್ಕೆ ವಜ್ರಮುನಿ ಹೆಸರನ್ನು ಶಿಫಾರಸು ಮಾಡಿದರು. ಕಾರಣಾಂತರಗಳಿಂದ ಈ ಚಿತ್ರ ಸ್ಥಗಿತಗೊಂಡಿತು. ಇದಾಗಿ ಕೆಲವು ದಿನಗಳಿಗೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ “ಮಲ್ಲಮ್ಮನ ಪವಾಡ’ ಸಿನಿಮಾ ಆರಂಭಿಸಿದರು. ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟ ಉದಯಕುಮಾರ್ ನಟಿಸಬೇಕಿತ್ತು. “ಪ್ರಚಂಡ ರಾವಣ’ ನಾಟಕ ನೋಡಿದ್ದ ಪುಟ್ಟಣ್ಣನವರು ತಮ್ಮ ಸಿನಿಮಾಗೆ ವಜ್ರಮುನಿಯೇ ಸೂಕ್ತ ಎಂದು ಅವನನ್ನೇ ಆಯ್ಕೆ ಮಾಡಿದರು.

ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಚಿತ್ರವೊಂದರ ಶೂಟಿಂಗ್‍ನ ಬಿಡುವಿನ ವೇಳೆಯಲ್ಲಿ ವಜ್ರಮುನಿ, ದಿನೇಶ್, ಶ್ರೀನಾಥ್.                                                                                                                                      ಫೋಟೋ ಕೃಪೆ: ಪ್ರಗತಿ ಅಶ್ವತ್ಥನಾರಾಯಣ

ಹಾಗೆ “ಮಲ್ಲಮ್ಮನ ಪವಾಡ’ ವಜ್ರಮುನಿಯ ಮೊದಲ ಚಿತ್ರವಾಯ್ತು. ಅಷ್ಟೇ ಅಲ್ಲ, ಪ್ರೇಕ್ಷಕರು ಕೂಡ ಪಾತ್ರವನ್ನು ಮೆಚ್ಚಿಕೊಂಡರು. ನಿರ್ದೇಶಕ ಪುಟ್ಟಣ್ಣನವರ ನಿರೀಕ್ಷೆಯನ್ನು ವಜ್ರಮುನಿ ಹುಸಿ ಮಾಡಲಿಲ್ಲ. ಮುಂದೆ ಅವನು ಸಾಲು ಸಾಲು ಸಿನಿಮಾಗಳಲ್ಲಿ ಖಳನಟನಾಗಿ ಅಭಿನಯಿಸಿ ಚಿತ್ರಪ್ರೇಮಿಗಳ ಮನಗೆದ್ದ. ಅದರಲ್ಲೂ ಡಾ.ರಾಜ್ ಚಿತ್ರಗಳಲ್ಲಿ ವಜ್ರಮುನಿ ಪಾತ್ರಕ್ಕೆ ವಿಶೇಷ ಮಹತ್ವವಿರುತ್ತಿತ್ತು. ಸಿನಿಮಾಟೋಗ್ರಫಿ ಪದವಿ ಪಡೆದ ವಜ್ರಮುನಿಗೆ ರಂಗಭೂಮಿ ಉತ್ತಮ ಅಡಿಪಾಯ ಹಾಕಿಕೊಟ್ಟಿತ್ತು. ಮುಂದೆ ಅವನು ಕನ್ನಡ ಚಿತ್ರರಂಗದ ದೊಡ್ಡ ನಟನಾಗಿ ವಿಜೃಂಭಿಸಿದ.

ಸಂಕಟ ಆಗುತ್ತೆ…

ಸಿದ್ದಲಿಂಗಯ್ಯ ನಿರ್ದೇಶನದ `ಬಂಗಾರದ ಮನುಷ್ಯ’ ಚಿತ್ರೀಕರಣದ ಸಂದರ್ಭ. ಚಿತ್ರದಲ್ಲಿ ನಾನು ಮತ್ತು ವಜ್ರಮುನಿ ಸಹೋದರರು. ರಾಜಕುಮಾರ್ (ರಾಜೀವ) ಅವರ ಸೋದರಳಿಯಂದಿರ ಪಾತ್ರಗಳು. ವಜ್ರಮುನಿ ದರ್ಪದಿಂದ ರಾಜ್‍ರನ್ನು ಬಯ್ಯುವ ಸನ್ನಿವೇಶವೊಂದನ್ನು ಚಿತ್ರಿಸಲಾಯ್ತು. ಈ ಸೀನ್ ಮುಗಿಯುತ್ತಿದ್ದಂತೆ ನನ್ನ ಪಕ್ಕ ಬಂದು ಕುಳಿತ ಅವನು ಸಂಕಟದಿಂದ ಮುಖ ಸಣ್ಣಗೆ ಮಾಡಿಕೊಂಡ. `ಯಾಕೋ, ಡೈಲಾಗ್ ಚೆನ್ನಾಗಿ ಹೇಳಿದ್ಯಲ್ಲಪ್ಪಾ?’ ಎಂದು ಕೇಳಿದೆ. `ಅದು ಸರಿ… ಆದ್ರೆ ಸೌಮ್ಯ ಮುಖದ ದೊಡ್ಡೋರನ್ನು (ರಾಜ್) ನೋಡಿಕೊಂಡು ಹೀಗೆಲ್ಲಾ ಡೈಲಾಗ್ ಹೇಳಬೇಕಲ್ಲ…’ ಎಂದು ರಾಗ ಎಳೆದ. `ಹಾಗಾದ್ರೆ ಪಾರ್ಟ್ ಮಾಡ್ಬೇಡ ಬಿಡೋ…’ ಎಂದು ಕಿಚಾಯಿಸಿದೆ. `ವಿಲನ್ ಪಾತ್ರ ಮಾತ್ರ ಬಿಡೋಕೆ ಆಗೋಲ್ಲ. ಆದ್ರೂ ಯಾಕೋ ಸಂಕಟ ಆಗುತ್ತೆ..’ ಎಂದು ಮರುಗಿದ. ಹೀಗೆ, ಹಿರಿಯ ಕಲಾವಿದರೆದುರು ದರ್ಪ, ದಾಷ್ಟ್ರ್ಯದಿಂದ ಅಭಿನಯಿಸುವಾಗ ಕೆಲವು ಬಾರಿ ಅವನು ಸಂಕಟ ಪಡುತ್ತಿದ್ದುದನ್ನು ನಾನು ನೋಡಿz್ದÉೀನೆ.

ನಿಂದೇ ಬುದ್ಧಿ!

ವಜ್ರಮುನಿ ನಿರ್ಮಾಣದ `ಗಂಢಬೇರುಂಡ’ ಆಗಿನ ಕಾಲಕ್ಕೆ ಬಹುದೊಡ್ಡ ಬಜೆಟ್ ಸಿನಿಮಾ. `ಇಷ್ಟು ದೊಡ್ಡ ಸಿನಿಮಾ ಹೇಗೋ ಮಾಡ್ತಿಯಾ?’ ಎಂದಾಗ, `ಮಾಡಿ ತೋರಿಸ್ತೀನಿ ನೋಡು..’ ಎಂದಿದ್ದ ವಜ್ರಮುನಿ. ಅದರಂತೆ ಯಾವುದೇ ಹಂತದಲ್ಲೂ ರಾಜಿಯಾಗದೆ ಬಹುತಾರಾಗಣದ ಈ ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತಂದ. ಚಿತ್ರದ ಸನ್ನಿವೇಶವೊಂದರಲ್ಲಿ ನಾನು ಮತ್ತು ಅಂಬರೀಶ್ ಹುಲಿ ಜೊತೆ ಫೈಟ್ ಮಾಡಬೇಕಿತ್ತು. ರಫ್ ಅಂಡ್ ಟಫ್ ಸ್ವಭಾವದ ಅಂಬರೀಶ್‍ಗೆ ಯಾವುದೇ ಅಳುಕು ಇರಲಿಲ್ಲ. ಆದರೆ ನಾನು ಎದೆಗುಂದಿದ್ದೆ. `ಎಷ್ಟು ದೊಡ್ಡ ಹುಲಿ.. ಇದರ ಮುಂದೆ ನಿನ್ನ ಆತ್ಮೀಯ ಸ್ನೇಹಿತನಾದ ನನ್ನನ್ನು ಬಿಡ್ತೀಯಲ್ಲೋ..?’ ಎಂದು ಆತನ ಮನಸ್ಸಿಗೆ ತಾಕುವಂತೆ ಹೇಳಿದ್ದೆ. ಆಗ ವಜ್ರಮುನಿ, `ಅದೂ ನಿನ್ನ ಹಾಗೇ ಕಣೋ.. ನೋಡೋಕೆ ಹಿಂಗಿದೆ. ಆದ್ರೆ ನಿಂದೇ ಬುದ್ಧಿ.. ತುಂಬಾ ಸಾಫ್ಟು… ಹೋಗೋ ಆಕ್ಟ್ ಮಾಡು..’ ಎಂದು ಉಪಾಯದಿಂದ ನನ್ನಲ್ಲಿ ಧೈರ್ಯ ತುಂಬಿ ಫೈಟ್ ಮಾಡಿಸಿದ.

ಡೆಲ್ಲಿ ಪೂರಾ ಸುತ್ನಾ..!

ವಜ್ರಮುನಿ `ಶಂಕರ್ ಗುರು’ ಚಿತ್ರೀಕರಣಕ್ಕೆಂದು ಕಾಶ್ಮೀರಕ್ಕೆ ಹೋಗಬೇಕಿತ್ತು. ಬೆಂಗಳೂರಿನಿಂದ ದಿಲ್ಲಿಗೆ ಹೋಗಿ, ಅಲ್ಲಿಂದ ಕಾಶ್ಮೀರಕ್ಕೆ ಮತ್ತೊಂದು ವಿಮಾನ ಹಿಡಿಯಬೇಕು. ವಜ್ರಮುನಿ ಜೊತೆ ಚಿತ್ರದ ಇತರೆ ನಟರಾದ ತೂಗುದೀಪ ಶ್ರೀನಿವಾಸ್ ಮತ್ತು ಪ್ರಭಾಕರ್ ಕೂಡ ದಿಲ್ಲಿಗೆ ಹೋಗಿ ಇಳಿದಿದ್ದಾರೆ. ಕಾಶ್ಮೀರಕ್ಕೆ ವಿಮಾನ ಹತ್ತಬೇಕಿದ್ದುದು ಮರುದಿನ ಮುಂಜಾನೆ. ಹಾಗಾಗಿ ಅಂದು ದಿನವಿಡೀ ದಿಲ್ಲಿ ನೋಡುವುದೆಂದು ನಿರ್ಧಾರವಾಗಿದೆ. ಹೋಟೆಲ್‍ನಲ್ಲಿ ಲಗೇಜ್ ಇಟ್ಟು ಫ್ರೆಶ್ ಆಗಿ ಮೂವರೂ ರಸ್ತೆಗಿಳಿದಿದ್ದಾರೆ. `ಆಟೋದವನ ಹತ್ರ ನಾನು ಮಾತನಾಡ್ತೀನಿ. ನೀವ್ಯಾರೂ ಮಾತನಾಡಬೇಡಿ’ ಎಂದು ವಜ್ರಮುನಿ ಇವರಿಬ್ಬರಿಗೆ ತಾಕೀತು ಮಾಡಿದ್ದಾನೆ. (ವಜ್ರಮುನಿಗೆ ತಮಿಳು, ತೆಲುಗು ಮತ್ತು ಸುಮಾರಾಗಿ ಹಿಂದಿ ಭಾಷೆ ಬರ್ತಿತ್ತು). ರಸ್ತೆಯಲ್ಲಿ ಕೈ ಅಡ್ಡ ಹಾಕಿ ಒಂದು ಆಟೋ ನಿಲ್ಲಿಸಿದ್ದಾರೆ.

ವರನಟ ಡಾ. ರಾಜ್‌ ಕುಮಾರ್ ಜೊತೆ ವಜ್ರಮುನಿ ಸಮಾರಂಭವೊಂದರಲ್ಲಿ.

`ಕ್ಯಾಬಾ ಆತಿ?’ (ಏನಪ್ಪಾ ಬರ್ತೀಯಾ?) ಎಂದು ವಜ್ರಮುನಿ ಆಟೋದವನನ್ನು ಕೇಳಿದ್ದಾನೆ. `ಕಹಾ ಕೋ?’ (ಎಲ್ಲಿಗೆ?) ಎಂದು ಆಟೋದವನು ಪ್ರಶ್ನೆ ಮಾಡಿದನಂತೆ. ಆಗ ವಜ್ರಮುನಿ ಆಕಾಶದತ್ತ ಕೈ ತೋರಿಸಿ ಆ್ಯಕ್ಷನ್ ಮಾಡುತ್ತಾ, `ಡೆಲ್ಲಿ ಪೂರಾ ಸುತ್ನಾ! ಕ್ಯಾ ದೇನಾ?’ ಎಂದು ಕೇಳಿದ್ದಾನೆ. ಹಿಂದಿ – ಕನ್ನಡ ಮಿಕ್ಸ್ ಆಗಿದ್ದ ಈ ಭಾಷೆ ಕೇಳಿದ ಆಟೋದವ ನಗುತ್ತಾ, `ಸಾಠ್’ (ಅರವತ್ತು) ಎಂದನಂತೆ. ಆಟೋ ಹತ್ತಿ ಕುಳಿತ ನಂತರ ವಜ್ರಮುನಿ, `ಸಾಠ್ ಅಂದರೆ ಎಷ್ಟೋ?’ ಎಂದು ತನ್ನ ಜತೆಗಿದ್ದವರನ್ನು ಕೇಳಿದ್ದಾನೆ. ಅರವತ್ತು ಎಂದು ಗೊತ್ತಾಗುತ್ತಿದ್ದಂತೆ ಆಟೋ ನಿಲ್ಲಿಸಿ, `ಕ್ಯಾ ಬಾ ಸಾಠ್, ಮೇ ಆದಾ ಸಾಠ್ ದೇತಾ ಹೂ..’ ಎಂದು ಹೇಳಿದ್ದಾನೆ.

ಇದು ಮುಗಿಯದ ಕತೆ ಎಂದು ಜೊತೆಯಲ್ಲಿದ್ದವರು ವಜ್ರಮುನಿಯನ್ನು ಸುಮ್ಮನೆ ಕೂರಿಸಿಕೊಂಡಿದ್ದಾರೆ. ಇವರು ಚಿತ್ರೀಕರಣಕ್ಕೆಂದು ಬಂದ ಸಿನಿಮಾ ಕಲಾವಿದರು ಎಂದು ತಿಳಿಯುತ್ತಿದ್ದಂತೆ ಆಟೋ ಡ್ರೈವರ್‍ಗೆ ಹೆಮ್ಮೆ ಎನಿಸಿದೆ. ಅವನು ಇಡೀ ದಿನ ಖುಷಿಯಿಂದ ದಿಲ್ಲಿ ತೋರಿಸಿದ್ದಾನೆ. ಆಟೋ ಹತ್ತುವಾಗ ತನಗೆ ಗೊತ್ತಿದ್ದ ಭಾಷೆಯಲ್ಲೇ ಎಷ್ಟೊಂದು ಚೌಕಾಸಿ ಮಾಡಿದ್ದ ವಜ್ರಮುನಿ ಸಂಜೆಯ ಹೊತ್ತಿಗೆ ಆಟೋದವನ ಗೆಳೆಯನಾಗಿ ಹೋಗಿದ್ದ. ಸಂಜೆ ಆತನಿಗೆ ಊಟ ಕೊಡಿಸಿ, ಮಾತನಾಡಿದ್ದಕ್ಕಿಂತ ಹೆಚ್ಚಿಗೆ ದುಡ್ಡು ಕೊಟ್ಟು ಅವನನ್ನು ಕಳುಹಿಸಿದ್ದಾನೆ. ಇದು ಆತನೇ ನನ್ನಲ್ಲಿ ಹೇಳಿಕೊಂಡ ಘಟನೆ.

———-

ವಜ್ರಮುನಿ ಅಭಿನಯಿಸಿದ ಪ್ರಮುಖ ಸಿನಿಮಾಗಳು: ಮಲ್ಲಮ್ಮನ ಪವಾಡ, ಸಂಪತ್ತಿಗೆ ಸವಾಲ್, ಗೆಜ್ಜೆಪೂಜೆ, ಬಹದ್ದೂರ್ ಗಂಡು, ಕಿಲಾಡಿ ಕಿಟ್ಟು, ಮಯೂರ, ದಾರಿ ತಪ್ಪಿದ ಮಗ, ಗಿರಿಕನ್ಯೆ, ಶಂಕರ್‍ಗುರು, ಸಿಪಾಯಿ ರಾಮು, ಆಪರೇಷನ್ ಡೈಮಂಡ್ ರಾಕೆಟ್, ಸಾಂಗ್ಲಿಯಾನ, ಸಿ.ಬಿ.ಐ.ಶಂಕರ್, ಒಂದೇ ಗುರಿ, ಅಂತ, ತಾಳಿಯ ಭಾಗ್ಯ, ಊರಿಗೆ ಉಪಕಾರಿ, ಸಾಹಸಸಿಂಹ, ಚಾಣುಕ್ಯ, ರಣಭೇರಿ, ಟೈಗರ್, ಚಕ್ರವ್ಯೂಹ, ಬೆಂಕಿಯ ಬಲೆ, ತಿರುಗು ಬಾಣ, ಅಪೂರ್ವ ಸಂಗಮ, ಬಬ್ರುವಾಹನ, ಬಿಡುಗಡೆ, ಬಂಗಾರದ ಮನುಷ್ಯ…

Please follow and like us:

Related articles

Share article

Stay connected

Latest articles

Please follow and like us: