ಮಾರಣಾಂತಿಕ ಕರೋನಾ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊನ್ನೆ ಎರಡನೇ ಬಾರಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಕೇಂದ್ರ ಸರ್ಕಾರ ಈ ಕಷ್ಟಕಾಲಕ್ಕೆ ನೆರವಾಗುವಂತಹ ವಿಶೇಷ ಪ್ಯಾಕೇಜ್ ಘೋಷಿಸಬಹುದು ಎಂಬ ನಿರೀಕ್ಷೆ ಇತ್ತು. ಮೋದಿ ಲಾಕ್ ಡೌನ್ ಅನ್ನು ಮಾತ್ರ ಪ್ರಕಟಿಸಿ ನಿರಾಸೆ ಮೂಡಿಸಿದ್ದರು. ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜನ ನಿಜಕ್ಕೂ ನಿರೀಕ್ಷೆ ಮಾಡುತ್ತಿದ್ದ ಪ್ಯಾಕೇಜ್ ಅನ್ನು ಘೋಷಿಸಿ ತುಸು ಸಮಾಧಾನ ಮೂಡಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದು ಬರೊಬ್ಬರಿ 1.7 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು.
ದಿಢೀರನೆ ದೇಶದುದ್ದಕ್ಕೂ ಲಾಕ್ ಡೌನ್ ಮಾಡಿಬಿಟ್ಟರೆ ಸಹಜವಾಗಿ ಜನ ಜೀವನ ಅಸ್ತ್ಯವ್ಯಸ್ತಗೊಳ್ಳುತ್ತದೆ. ವಿಶೇಷವಾಗಿ ವಲಸೆ ಕೆಲಸಗಾರರು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರು, ರಸ್ತೆ ಬದಿ ಮಾರಾಟಗಾರರು, ಅಗತ್ಯ ವಸ್ತುಗಳ ವ್ಯಾಪಾರ, ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದುದರಿಂದ ಲಾಕ್ ಡೌನ್ ಅನ್ನು ಪ್ರಕಟಿಸುವ ಸಂದರ್ಭದಲ್ಲೇ ಈ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟುಕೊಂಡು ಆಳುವ ಸರ್ಕಾರ ಏನಾದರೊಂದು ಕ್ರಮ ಕೈಗೊಳ್ಳಬೇಕಿತ್ತು. ಹಾಗೆ ಆಗದೇ ಇದ್ದುದರಿಂದ ಈ ವರ್ಗ ಆತಂಕಕ್ಕೆ ಸಿಲುಕಿತ್ತು. ಈಗ ಸ್ವಲ್ಪ ನಿರಾಳ ಎನ್ನಬಹುದು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೋನಾ ಕಾರಣಕ್ಕೆ ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಸಾಯುವಂತಾಗಬಾರದು. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದೆ. ಈ ದುರ್ದಿನವನ್ನು ದೂರ ತಳ್ಳಲು 20 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಇಡೀ ದೇಶದಲ್ಲೇ ಮಾದರಿ ಮುಖ್ಯಮಂತ್ರಿ ಎನಿಸಿಕೊಂಡಿದ್ದರು. ಬಳಿಕ ಇತ್ತೀಚೆಗಷ್ಟೇ ದೆಹಲಿಯಲ್ಲಿ ಮೂರನೇ ಬಾರಿಗೆ ಗದ್ದುಗೆ ಹಿಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ದೆಹಲಿಯ 72 ಲಕ್ಷ ಬಡ ಜನರಿಗೆ ಏಪ್ರಿಲ್ 14ರವರೆಗೂ ಉಚಿತವಾಗಿ ಊಟ ನೀಡಲು ನಿರ್ಧರಿಸಿದ್ದರು. ಆದರೆ ಪ್ರಧಾನಿ ಮೋದಿ ಇಡೀ ದೇಶಕ್ಕೆ ಕರೋನಾ ವಿರುದ್ಧದ ಹೋರಾಟಕ್ಕೆ ಹಣ ಕೊಟ್ಟಿದ್ದು ಕೇವಲ 15 ಸಾವಿರ ಕೋಟಿ ರೂಪಾಯಿಗಳನ್ನು. ಮೋದಿ ನಡೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈಗ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ತಡವಾಗಿಯಾದರೂ ದೇಶವಾಸಿಗಳ ನೆರವಿಗೆ ಧಾವಿಸಿದಂತಾಗಿದೆ.
ದೆಹಲಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 1.70 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಈ ಕಡುಕಷ್ಟದ ಕಾಲಕ್ಕೆ ಮೀಸಲಿಡಲಾಗಿದೆ. ಈ ಪ್ಯಾಕೇಜ್ ಮೂಲಕ ವಲಸೆ ಕೆಲಸಗಾರರು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರು, ಹಿರಿಯ ನಾಗರಿಕರು, ಅಂಗವಿಕಲರು ಮತ್ತು ರೈತರಿಗೆ ಮೂರು ತಿಂಗಳ ಕಾಲ ಪರಿಹಾರ ನೀಡಲಾಗುವುದು. ಫಲಾನುಭವಿಗಳ ಜನ್ ಧನ್ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುವುದು.
ಕಿಸಾನ್ ಸಮ್ಮಾನ್ ಯೋಜನೆಯಡಿ 8.68 ಕೋಟಿ ರೈತರಿಗೆ ಮೊದಲ ಕಂತಿನ 2 ಸಾವಿರ ರೂಪಾಯಿಯನ್ನು ಏಪ್ರಿಲ್ ಮೊದಲ ವಾರದಲ್ಲೇ ನೀಡಲಾಗುವುದು. ಹಿರಿಯ ನಾಗರಿಕರು, ವಿಧವೆಯರು ಮತ್ತು ವಿಕಲಚೇತನರಿಗೆ ಮಾಸಿಕ 1 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. 3 ತಿಂಗಳ ಪರಿಹಾರವನ್ನು 2 ಕಂತುಗಳಲ್ಲಿ ನೀಡಲಾಗುವುದು. ಇದು 3 ಕೋಟಿ ಜನರಿಗೆ ಅನ್ವಯಲಾಗಲಿದೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 5 ಕೋಟಿ ಕುಟುಂಬಗಳಿಗೆ ಕೂಲಿಯನ್ನು 182ರಿಂದ 202ಕ್ಕೆ ಏರಿಕೆ ಮಾಡಲಾಗಿದೆ. ಒಬ್ಬ ಕಾರ್ಮಿಕನಿಗೆ 2 ಸಾವಿರ ರೂಪಾಯಿ ಮೀಸಲಿಡಲಾಗಿದೆ.
ವಿಶೇಷ ಎಂದರೆ ಲಾಕ್ ಡೌನ್ ಕಾರಣಕ್ಕೆ ಅಗತ್ಯ ವಸ್ತುಗಳು ಸಿಗದೆ ಜನ ತೀವ್ರ ಸಂಕಷ್ಟಕ್ಕೆ ಈಡಾಗಿರುವ ಹಿನ್ನೆಲೆಯಲ್ಲಿ ಮುಂದಿನ 3 ತಿಂಗಳು ದೇಶದ 80 ಕೋಟಿ ಜನರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ಪಡಿತರ ನೀಡಲು ನಿರ್ಧರಿಸಲಾಗಿದೆ. ಕುಟುಂಬವೊಂದಕ್ಕೆ 5 ಕೆ.ಜಿ. ಅಕ್ಕಿ ಅಥವಾ 5 ಕೆ.ಜಿ. ಗೋಧಿ ಹಾಗೂ ಹೆಚ್ಚುವರಿಯಾಗಿ 1 ಕೆ.ಜಿ. ಬೇಳೆ ವಿತರಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದಿರುವ ಬಿಪಿಎಲ್ ಕುಟುಂಬಗಳಿಗೆ 3 ತಿಂಗಳು ಉಚಿತವಾಗಿ ಸಿಲಿಂಡರ್ ವಿತರಿಸಲಾಗುತ್ತದೆ. ಇದರಿಂದ 8.3 ಕೋಟಿ ಜನರಿಗೆ ಅನುಕೂಲವಾಗಲಿದೆ.
1.7 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ನಲ್ಲಿ ಕರೋನಾ ಸೋಂಕು ಹರಡುವಿಕೆ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಸೇರಿದಂತೆ ತುರ್ತು ಸೇವೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರು, ದಾದಿಯರು, ಅರೆವೈದ್ಯರು, ಆಶಾ ಕಾರ್ಯಕರ್ತೆಯರಿಗೆ ಸರ್ಕಾರವು ಪ್ರತಿ ವ್ಯಕ್ತಿಗೆ 50 ಲಕ್ಷ ರೂಪಾಯಿಗಳ ವಿಮೆಯನ್ನು ಘೋಷಿಸಿದೆ. ಪರೋಕ್ಷವಾಗಿ ತೊಡಗಿಸಿಕೊಳ್ಳುವ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಪೌರಕಾರ್ಮಿಕರಿಗೆ ತಲಾ 20 ಲಕ್ಷ ರೂಪಾಯಿ ವಿಮೆ ಅನ್ವಯವಾಗಲಿದೆ.
ಬಡ ಮಹಿಳೆಯರಿಗೆ ನೆರವಾಗುವ ದೃಷ್ಟಿಯಿಂದ 20 ಕೋಟಿ ಮಹಿಳಾ ಜನಧನ್ ಖಾತೆಗಳಿಗೆ ಪ್ರತಿ ತಿಂಗಳಿಗೆ 500 ರೂಪಾಯಿಗಳಂತೆ ಮುಂದಿನ 3 ತಿಂಗಳು ನೀಡಲಾಗುವುದು. ಅಲ್ಲದೆ ದೇಶದ್ಯಾಂತ 63 ಲಕ್ಷ ಸ್ವಸಹಾಯ ಸಂಘಗಳ 7 ಕೋಟಿ ಕುಟುಂಬಗಳಿಗೆ ದೀನ್ ದಯಾಳ್ ಉಪಾಧ್ಯಾಯ ಯೋಜನೆಯ ಭಾಗವಾಗಿ 10 ಲಕ್ಷ ರೂಪಾಯಿ ಸಾಲದ ಬದಲಿಗೆ 20 ಲಕ್ಷ ರೂಪಾಯಿ ಸಾಲ ಮಂಜೂರು ಮಾಡಲು ನಿರ್ಧರಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ಕೆಲಸ ಇಲ್ಲದೆ, ಕೆಲಸ ಇದ್ದರೂ ಸರಿಯಾದ ಸಂದರ್ಭಕ್ಕೆ ಸಂಬಳ ಸಿಗದೆ ಪರಿತಪಿಸುವ ಕಾರ್ಮಿಕರಿಗೆ ನೆರವಾಗಲೆಂದು ಮುಂದಿನ ಮೂರು ತಿಂಗಳ ಕಾಲ ಸರ್ಕಾರವೇ ಉದ್ಯೋಗಿಯ 12% ಮತ್ತು ಸರ್ಕಾರದ 12% ಇಪಿಎಫ್ ಹಣವನ್ನು ಭರಿಸಲು ತೀರ್ಮಾನಿಸಲು ನಿರ್ಧರಿಸಲಾಗಿದೆ.