ಹುದ್ದೆ ಕಡಿತ- ಹೆಚ್ಚಿದ ಒತ್ತಡ, ವೆಬ್‌ಸೈಟ್ ಹಾಗೂ ಪ್ರಿಂಟ್ ಎರಡೂ ವಿಭಾಗಗಳಿಗೂ ಸುದ್ದಿ ನೀಡಲೇಬೇಕಾದ ಅನಿವಾರ್ಯತೆ, ಪುನರ್ ಮನನ ತರಬೇತಿಗಳ ಕೊರತೆ, ವಿಚಾರ ಸಂಕಿರಣಗಳಿಗೂ ಕಳುಹಿಸಲು ಕೆಲಸದ ಒತ್ತಡವಿದೆ ಎಂಬ ಬ್ಯೂರೋ ಹೆಡ್‌ಗಳ ನೆಪ, ಕುಸಿದ ಓದು-ಸುತ್ತಾಟ, ಇವೆಲ್ಲದರ ಪರಿಣಾಮ ವಾಸ್ತವದಿಂದ ದೂರವಾಗುತ್ತಿದ್ದಾರೆ ಪತ್ರಕರ್ತರು. ಪರಿಣಾಮ ಸುಳ್ಳು, ಅರ್ಧ ಸತ್ಯದ ವರದಿಗಳು ಪತ್ರಿಕೆಗಳ ಮುಖ ಪುಟದಲ್ಲಿ ರಾರಾಜಿಸಲಾರಂಭಿಸಿದೆ. ಕಂಬಳ ವೀರರ ಬಗ್ಗೆ ಕನ್ನಡ ಮಾಧ್ಯಮಗಳಲ್ಲಿ ಪುಂಖಾನುಪುಂಖ ವಾಗಿ ಪ್ರಕಟವಾಗುತ್ತಿರುವ ವರದಿಗಳು ಇದಕ್ಕೆ ಸೂಕ್ತ ನಿದರ್ಶನವೆಂದರೆ ತಪ್ಪಾಗಲಾರದು. ಮಾಧ್ಯಮ ಮಂದಿಗೆ ಈ ವರದಿ ಅಪಥ್ಯವಾಗಬಹುದು. ಆದರೆ ಇದು ಒಂದಿಷ್ಟು ಮಾಧ್ಯಮ ಮಂಥನಕ್ಕೆ ಸಕಾಲ.
ಕರಾವಳಿಯ ಮಾಧ್ಯಮ ಕ್ಷೇತ್ರದಲ್ಲಿ ಪಳಗಿದ ಹುಲಿಗಳನ್ನು ಬಲವಂತವಾಗಿ ಹೊರಗಟ್ಟಲಾಗಿದೆ. ಈಗಿರುವ ಬಹುತೇಕರು ಸೆನ್ಸೆಶನಲ್ ವರದಿಗಾರರು. ಇವರಲ್ಲಿ ಹೆಚ್ಚಿನವರು ವಾಟ್ಸಾಪ್ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ಗಳಾಗಿದ್ದಾರೆ. ಕಾಲಕಾಲಕ್ಕೆ ಇವರೆಲ್ಲಾ ಬೆತ್ತಲಾಗುತ್ತಲೇ ಬಂದಿದ್ದಾರೆ. ದಕ್ಷಿಣ ಕನ್ನಡವನ್ನು ಕೋಮುವಾದಿಗಳ (ಎಲ್ಲಾ ಧರ್ಮಗಳಿಗೂ ಅನ್ವಯವಾಗುವಂತೆ) ಪ್ರಯೋಗವನ್ನಾಗಿಸಿದ ಕೀರ್ತಿಯಲ್ಲಿ ಇವರದ್ದೂ ಪಾಲಿದೆ. ಆದರೆ ಕಂಬಳ ವೀರರ ಕುರಿತ ವರದಿಗಳು ಇವರ ಅಲ್ಪಜ್ಞಾನವನ್ನು ದೊಡ್ಡ ಮಟ್ಟದಲ್ಲಿ ಪ್ರದರ್ಶಿಸಿದೆ. ಕಂಬಳದಂತಹ ಜಾನಪದ ಕ್ರೀಡೆ ಬಗ್ಗೆಗೆ ಕೂಡಾ ಇವರಿಗೆ ಹೆಚ್ಚಿನ ಜ್ಞಾನ ಇಲ್ಲದಿರುವುದು ಮತ್ತೆ ಬಯಲಾಗಿದೆ. ಅವರು ಮಾಡಬೇಕಿರುವುದಿಷ್ಟೇ. ಕೋಶ ಓದಬೇಕಿದೆ, ಜಗತ್ತು ಸುತ್ತಬೇಕಿದೆ. ಜಗತ್ತು ಅಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಹಳ್ಳಿಗಳನ್ನು.

ಕಂಬಳವನ್ನು ನೋಡಿರುವ, ಬಹುತೇಕರಿಗೆ ಗೊತ್ತು. ಅಲ್ಲಿ ಕೋಣಗಳ ವೇಗಕ್ಕೆ ಹೆಚ್ಚಿನ ಪ್ರಾದಾನ್ಯತೆ ಸಿಗುವುದೆಂದು. ಇದರ ಅರ್ಥ ಕಂಬಳ ಓಟಗಾರನ ಸಾಧನೆ ನಗಣ್ಯವೆಂದಲ್ಲ. ಕೆಸರಿನಲ್ಲಿ ಕೋಣಗಳನ್ನು ಅತಿ ವೇಗವಾಗಿ ಓಡಿಸುವುದು ಸುಲಭದ ಸಂಗತಿಯಲ್ಲ. ಅದಕ್ಕೊಂದು ಕೌಶಲ್ಯದ ಅಗತ್ಯವಿದೆ. ಈ ಕೌಶಲ್ಯವನ್ನು ಗೌರವಿಸೋಣ. ಆದರೆ ಇದನ್ನು ವರದಿಮಾಡುವಾಗ ಪತ್ರಕರ್ತರೆನಿಸಿಕೊಂಡವರು ಒಂದಿಷ್ಟು ತಮ್ಮ ವಿವೇಚನೆ ಉಪಯೋಗಿಸಬೇಕಿತ್ತು. ಆದರೆ ಅದಾಗಲಿಲ್ಲ. ಪತ್ರಕರ್ತರೆಲ್ಲರೂ ಸಮೂಹಸನ್ನಿಗೆ ಒಳಗಾದರು.
ಬಿಜೆಪಿ ರಾಜ್ಯ ಘಟಕದ ವಕ್ತಾರ ಮಂಜುನಾಥ್ ಕನ್ಯಾಡಿ ಈ ಬಗ್ಗೆ ಹೇಳಿರುವ ಮಾತು ಇಲ್ಲಿ ಮನನೀಯ. ಕರಾವಳಿಯವರೆ ಆದ ಕನ್ಯಾಡಿ, ಮಾಧ್ಯಮ ಅತಿರೇಕದ ಬಗ್ಗೆ ಮೊದಲ ದಿನವೇ ಎಚ್ಚರಿಕೆ ನೀಡಿದ್ದರು. ಕಂಬಳದ ಗದ್ದೆ – ಒಲಿಂಪಿಕ್ಸ್ ಸಿಂಥೆಟಿಕ್ ಟ್ರ‍್ಯಾಕ್ ಒಂದೇ ಅಲ್ಲ. ಮುಂಗಾಲ ಬಲದಿಂದ ಓಡುವ ಓಟಕ್ಕೂ ಹಿಮ್ಮಡಿ ಊರಿ ಓಡುವ ಓಟಕ್ಕೂ ಸಾಮ್ಯ ಇಲ್ಲ. ಒಲಿಂಪಿಕ್ಸ್ ಗಟ್ಟಿ ನೆಲದಲ್ಲಿ ಮುಂಗಾಲ ಬಳಕೆ . ಕಂಬಳದ ಕೆಸರು ಗದ್ದೆಯಲ್ಲಿ ಹಿಮ್ಮಡಿ ಬಳಸಿ ಓಟ. ಒಲಿಂಪಿಕ್ಸ್ ನಲ್ಲಿ ಬೀಸುವ ಗಾಳಿ ಭೇದಿಸಿ ಓಟ, ಕಂಬಳದ ಗದ್ದೆಯಲ್ಲಿ ಗಾಳಿ ಸಂಚಾರ ಕಡಿಮೆ – ಕಾರಣ ಸುತ್ತಮುತ್ತಲಿನ ಜನ ಮತ್ತು ಭೂಮಿ ಮಟ್ಟದಿಂದ ತಗ್ಗಾಗಿರುವ ಕಂಬಳ ಗದ್ದೆಯ ಟ್ರ‍್ಯಾಕ್. ಮನಸ್ಸು ಗಟ್ಟಿ ಮಾಡಿಕೊಳ್ಳೋಣ – ಮುಗ್ದ ಮನಸ್ಸಿನ ಹಳ್ಳಿಯ ಜಾನಪದ ಪ್ರತಿಭೆ ಶ್ರೀನಿವಾಸ ಗೌಡ ಕಂಬಳದ ಹೀರೊ ಆಗೇ ಇರಲಿ. ಉಳಿದದ್ದು Hidden Talent ವಿಷಯ ಲೆಟ್ಸ್ ವೇಟ್. ಸೋಶಿಯಲ್ ಮೀಡಿಯಾ ಅತಿರೇಕದಿಂದ ಕಂಬಳದ ಪ್ರತಿಭೆ ಮಂಕಾದರೆ ಕಷ್ಟ. ಹಳ್ಳಿ ಹುಡುಗ ಪ್ಯಾಟೆ ಲೈಫ್ ನ ರಾಜೇಶ್ ನೆನಪಾದ ಎನ್ನುವ ಮೂಲಕ ಅವರು ಎಲ್ಲರಿಗೂ ಎಚ್ಚರಿಕೆ ನೀಡಿದ್ದರು. ಆದರೆ ಇದನ್ನು ಕೇಳುವ ವ್ಯವಧಾನ ಯಾರಿಗೂ ಇರಲಿಲ್ಲ.
ಮಾಧ್ಯಮ ಧಾವಂತ:
ಇನ್ನು ಈ ವರದಿಯನ್ನು ಮೊದಲಿಗೆ ಪ್ರಕಟಿಸಿದ್ದು ಕನ್ನಡ ಕನ್ನಡದ ಒಂದು ಪ್ರಖ್ಯಾತ ದಿನಪತ್ರಿಕೆ. ಆ ವರದಿಯನ್ನು ಗೌರವಿಸೋಣ. ವರದಿ, ಸುದ್ದಿಯಾಗಿ ಮಹತ್ವದ್ದೇ. ಆದರೆ ತಪ್ಪಾಗಿದ್ದು ತಮಗೆ ಗೊತ್ತಿಲ್ಲದ ವಿಷಯವನ್ನು ಪ್ರಸ್ತಾಪಿಸಲು ಮುಂದಾಗಿ. ವರದಿಗಾರ ಅಥವಾ ಸಂಪಾದಕ ಒಂದಿಷ್ಟು ಯೋಚಿಸಿದ್ದರೆ ಇಲ್ಲಿ ಬೋಲ್ಟ್ ಜತೆಗೆ ಅವರು ಶ್ರೀನಿವಾಸ ಗೌಡನನ್ನು ಹೋಲಿಕೆ ಮಾಡುತ್ತಿರಲಿಲ್ಲ.
“2013ರಲ್ಲೇ ಶ್ರೀನಿವಾಸ ಗೌಡಗಿಂತ ಹೆಚ್ಚಿನ ವೇಗದಲ್ಲಿ ಓಡಿದವರು ಇದ್ದಾರೆ. ಪತ್ರಕರ್ತರು ಏನೇನೋ ಗೀಚುತ್ತಿದ್ದಾರೆ,” ಎಂಬ ಮಾತುಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಲೋಕದಲ್ಲಿ ಗಟ್ಟಿಯಾಗಿ ಈಗ ಕೇಳಿ ಬರಲಾಂಭಿಸಿದೆ. “ಬರೆಯುವ ಮುನ್ನ ಒಂದಿಷ್ಟು ತಲೆ ಓಡಿಸಬೇಕಿತ್ತು. ಕಂಬಳದಲ್ಲಿ ಎಷ್ಟೆಲ್ಲಾ ಸಾಧನೆ ಮಾಡಿದವರಿದ್ದಾರೆ. ಅವರನ್ನೆಲ್ಲಾ ಬಿಟ್ಟು ಯಾರನ್ನೋ ಹೀರೋ ಮಾಡಿದ್ದಾರೆ. ಆತನ ದೆಸೆ ಶುಕ್ರದೆಸೆ ಈಗ. ಅವ ದುಡ್ಡು ಮಾಡಿದ. ಈಗ ಉಳಿದವರಿಗೆ ಪೇಪರ್‌ನವರು ಹಣ ಕೊಡ್ತಾರ,” ಎನ್ನುವ ಪ್ರತಿಕ್ರಿಯೆ ಒಬ್ಬ ಕಂಬಳ ಸಂಘಟಕನದ್ದು.

“ಕಂಬಳದಲ್ಲಿ ಕೋಣ ಸ್ಪೀಡಾಗಿ ಓಡಿಸಲು ಕೊಡುವ ಚಿತ್ರಹಿಂಸೆ ಬಗ್ಗೆ ಪೇಟಾದವರ ಬಳಿ ಕೇಳಿ. ಇದನ್ನೆಲ್ಲಾ ಅಧ್ಯಯನ ಮಾಡಿದ್ದರೆ, ಈ ವೇಗದ ಹಿಂದಿನ ಸತ್ಯದ ಅರಿವಾಗುತ್ತದೆ,” ಎನ್ನುತ್ತಾರೆ ಅವರು.
ಈಗ ಪ್ರಶ್ನೆಗಳಿರುವುದು ಪತ್ರಕರ್ತರಿಗೆ. ಉತ್ತರಿಸುವವರಾರು?
ಇದು ಕಂಬಳದ ವರದಿಗಾರಿಕೆಯ ಕಥೆ ಮಾತ್ರವಲ್ಲ. “ಓಂದು ಹಲ್ಲೆ ಪ್ರಕರಣವನ್ನು ನೆಟ್ಟಗೆ ವರದಿ ಮಾಡಲು ಈಗಿನ ವರದಿಗಾರರಿಗೆ ಗೊತ್ತಿಲ್ಲ,” ಎನ್ನುತ್ತಾರೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಡಿವೈಎಸ್‌ಪಿ ಒಬ್ಬರು. “ಪ್ರಕಟವಾಗಿದ್ದನ್ನು ಎರಡೆರಡು ಬಾರಿ ವಿಮರ್ಶೆ ಮಾಡುವ ಪರಿಸ್ಥಿತಿ ಇದೆ,” ಎನ್ನುತ್ತಾರೆ ಅವರು.
ಸನ್ಮಾನ್ಯ ಪತ್ರಿಕಾ ಸಂಪಾದಕರೆ…
ನಿಮ್ಮ ಎಡಿಟರ್ ಚೇಂಬರ್ ಗಳಿಂದ ಹೊರಬನ್ನಿ. ವಿಚಾರ ಸಂಕಿರಣಗಳಿಗಷ್ಟೇ ಸೀಮಿತಗೊಳ್ಳಬೇಡಿ. ಒಂದಿಷ್ಟು ಜನರ ನಡುವೆ ಬೆರೆಯಿರಿ. ನಿಮ್ಮ ವರದಿಗಾರರಿಗೆ ವಿಶೇಷ ವರದಿಯ ಒತ್ತಡ ನಿಲ್ಲಿಸಿ. ಅವರಿಗೆ ದಯವಿಟ್ಟು ರಜೆ ಕೊಡಿ. ಅವರು ಜನರ ಜತೆ ಬೆರೆಯಲಿ, ಪುಸ್ತಕಗಳನ್ನು ಓದಲಿ, ನಾಲ್ಕು ಕಡೆ ತಿರುಗಲಿ. ಆಗ ಸತ್ಯದ ದಿಗ್ದರ್ಶನವಾಗುತ್ತದೆ. ಇದು ಕನ್ನಡಿಗರೆಲ್ಲರ ಮನವಿ.